ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ಬಾಲ್ಯವಿವಾಹ!

Last Updated 7 ಅಕ್ಟೋಬರ್ 2017, 9:20 IST
ಅಕ್ಷರ ಗಾತ್ರ

ಮಂಡ್ಯ: ಬಾಲ್ಯವಿವಾಹ ಪಿಡುಗು ಜಿಲ್ಲೆಯಲ್ಲಿ ಬಲುದೊಡ್ಡ ಸಮಸ್ಯೆಯಾಗಿದ್ದು, 2016–17ನೇ ಸಾಲಿನಲ್ಲಿ ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ 119 ಕರೆ ಬಂದಿವೆ.
ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಅತೀ ಹೆಚ್ಚು ಬಾಲ್ಯವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿ ಮಕ್ಕಳ ಸಹಾಯವಾಣಿ ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲಾ ಮಟ್ಟದಲ್ಲಿ ನಿರ್ವಹಣೆಯ ಜವಾಬ್ದಾರಿಯನ್ನು ಸೇವಾಸಂಸ್ಥೆಗಳಿಗೆ ವಹಿಸಲಾಗಿದೆ.

ಜಿಲ್ಲೆಯಲ್ಲಿ ‘ವಿಕಸನ ಸಂಸ್ಥೆ’ ಸಹಾಯವಾಣಿ ನಿರ್ವಹಿಸುತ್ತಿದ್ದು ‘ಬರ್ಡ್‌ ಸಂಸ್ಥೆ’ ಮೇಲುಸ್ತುವಾರಿ ನೋಡಿಕೊಳ್ಳುತ್ತಿದೆ. ಬಾಲ್ಯವಿವಾಹ ಮಾತ್ರವಲ್ಲದೆ ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಕುರಿತ ಸಮಸ್ಯೆಗಳನ್ನು ಸಹಾಯವಾಣಿಗೆ ತಿಳಿಸುವ ಅವಕಾಶ ನೀಡಲಾಗಿದೆ.

ಜಿಲ್ಲೆಯ ಮಟ್ಟಿಗೆ ಸಹಾಯವಾಣಿ ಸಿಬ್ಬಂದಿ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಕರೆಗಳನ್ನೇ ಹೆಚ್ಚು ಸ್ವೀಕರಿಸಿದ್ದಾರೆ. 2016–17ನೇ ಸಾಲಿನಲ್ಲಿ ಸೆಪ್ಟೆಂಬರ್‌ವರೆಗೆ 119 ಕರೆಗಳು ಬಂದಿದ್ದು ಅವುಗಳಲ್ಲಿ ಶೇ 50ರಷ್ಟು ಬಾಲ್ಯವಿವಾಹಗಳನ್ನು ಮಾತ್ರ ತಡೆಯಲು ಸಾಧ್ಯವಾಗಿದೆ.

ಉಳಿದವು ಮಕ್ಕಳ ಕಲ್ಯಾಣ ಸಮಿತಿ ಹಾಗೂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿವೆ. ಶ್ರೀರಂಗಪಟ್ಟಣದಲ್ಲಿ 28 ಬಾಲ್ಯವಿವಾಹ ಪ್ರಕರಣಗಳು ಬೆಳಕಿಗೆ ಬಂದಿದ್ದು ಮಂಡ್ಯ ತಾಲ್ಲೂಕಿನಲ್ಲಿ 25 ಪ್ರಕರಣಗಳು ಕಂಡುಬಂದಿವೆ. ಮದ್ದೂರು ತಾಲ್ಲೂಕಿನಲ್ಲಿ ಅತೀ ಕಡಿಮೆ 8 ಪ್ರಕರಣಗಳು ವರದಿಯಾಗಿವೆ.

ಪ್ರೇಮ ಪ್ರಕರಣಗಳಿಂದಾಗಿ ಜಿಲ್ಲೆಯಲ್ಲಿ ಹೆಚ್ಚು ಬಾಲ್ಯವಿವಾಹ ನಡೆಯುತ್ತಿವೆ. ಪ್ರೇಮವಶರಾದ ಹೆಣ್ಣುಮಕ್ಕಳನ್ನು ಪೋಷಕರು ಸಂಬಂಧಿಗಳಲ್ಲೇ ವರನನ್ನು ಹುಡುಕಿ ತರಾತುರಿಯಲ್ಲಿ ಕದ್ದು ಮದುವೆ ಮಾಡಿ ಮುಗಿಸುತ್ತಿದ್ದಾರೆ. ನಾವು ಸ್ವೀಕರಿಸಿರುವ ಬಹುತೇಕ ಕರೆಗಳಲ್ಲಿ ಬಹುತೇಕ ಇಂಥವೇ ಪ್ರಕರಣಗಳಾಗಿವೆ.

‘ಬಾಲಕ–ಬಾಲಕಿಯರಿಗೆ ಹಿತವಚನ ಹೇಳುವ ಅಥವಾ ವಯಸ್ಕರಾದ ನಂತರ ಅವರಿಗೆ ಮದುವೆ ಮಾಡುವ ತಾಳ್ಮೆ ಪೋಷಕರಲ್ಲಿ ಇಲ್ಲವಾಗಿದೆ. ಮರ್ಯಾದೆಗೆ ಅಂಜಿ ಬಾಲ್ಯವಿವಾಹ ಮಾಡುತ್ತಿದ್ದಾರೆ’ ಎಂದು ಬರ್ಡ್‌ ಸಂಸ್ಥೆಯ ನಿರ್ದೇಶಕ ನಿಕ್ಕೆರೆ ವೆಂಕಟೇಶ್‌ ಅಭಿಪ್ರಾಯಪಡುತ್ತಿದ್ದಾರೆ.

32 ಇಲಾಖೆಗೆ ಪ್ರಕರಣ ದಾಖಲಿಸುವ ಅಧಿಕಾರ: ಬಾಲ್ಯ ವಿವಾಹ ಕುರಿತು ಕರೆ ಸ್ವೀಕರಿಸುವ ಸಹಾಯವಾಣಿ ಸಿಬ್ಬಂದಿ ಕೂಡಲೇ ಆಯಾ ತಾಲ್ಲೂಕು ವ್ಯಾಪ್ತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.

ಕರೆ ಮಾಡಿದವರ ಮಾಹಿತಿ ಗೋಪ್ಯವಾಗಿಡಲಾಗುತ್ತದೆ. ಅಧಿಕಾರಿಗಳ ತಂಡ ಪೊಲೀಸ್‌ ಭದ್ರತೆಯೊಂದಿಗೆ ಬಾಲ್ಯ ವಿವಾಹ ಸ್ಥಳಕ್ಕೆ ದಾಳಿ ನಡೆಸುತ್ತದೆ. ವಧು–ವರರ ವಯಸ್ಸಿನ ದಾಖಲಾತಿ ಪರಿಶೀಲಿಸುವ ತಂಡ ಬಾಲ್ಯವಿವಾಹ ಎಂದು ಕಂಡುಬಂದರೆ ಅಂತಹ ವಿವಾಹವನ್ನು ನಿಲ್ಲಿಸುತ್ತಾರೆ. ಮದುವೆ ಕಾರ್ಯ ಮುಗಿದು ಹೋಗಿದ್ದರೆ ಅದಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುತ್ತದೆ. ಪ್ರಕರಣ, ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬರುತ್ತದೆ.

‘ಬಾಲ್ಯವಿವಾಹದ ವಿರುದ್ಧ ಪ್ರಕರಣ ದಾಖಲಿಸಲು 32 ಇಲಾಖೆಗಳ ಅಧಿಕಾರಿಗಳಿಗೆ ಬಾಲ್ಯವಿವಾಹ ತಡೆ ಕಾಯ್ದೆ ಅಧಿಕಾರ ನೀಡಿದೆ. ಸರ್ಕಾರಿ ಶಾಲೆಯ ಮುಖ್ಯಶಿಕ್ಷಕನಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್‌ ಹಾಗೂ ಜಿಲ್ಲಾ ಮಟ್ಟದ ಹಲವು ಅಧಿಕಾರಿಗಳು ಬಾಲ್ಯ ವಿವಾಹ ತಡೆ ಅಧಿಕಾರಿಯಾಗಿ ಪ್ರಕರಣ ದಾಖಲಿಸಬಹುದು’ ಎನ್ನುತ್ತಾರೆ.

‘ಸಾಕ್ಷ್ಯ ಇದ್ದರಷ್ಟೇ ಬಾಲ್ಯವಿವಾಹ ಪ್ರಕರಣಗಳು ಊರ್ಜಿತವಾಗುತ್ತದೆ. ಜಿಲ್ಲೆಯಲ್ಲಿ ಬಹುತೇಕ ಪೋಷಕರು ವಕೀಲರ ನೆರವು ಪಡೆದು, ದಾಖಲಾತಿ ತಿರುಚಿ ಪ್ರಕರಣಗಳು ಬಿದ್ದು ಹೋಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ನಾವು ದಾಳಿ ಮಾಡಿದ ಸಂದರ್ಭದಲ್ಲಿ ಛಾಯಾಚಿತ್ರ ತೆಗೆಯುವ, ವಿಡಿಯೊ ಮಾಡುವ ಪರಿಪಾಠ ಅನುಸರಿಸುತ್ತಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದಿವಾಕರ್‌ ಹೇಳಿದರು.

‘2014ರಲ್ಲಿ ಕರ್ನಾಟಕ ಸರ್ಕಾರ ಬಾಲ್ಯವಿವಾಹ ತಡೆ ಕಾಯ್ದೆಗೆ ತಿದ್ದುಪಡಿ ತಂದಿದ್ದು ಅಪರಾಧಿಗಳಿಗೆ ಕಡ್ಡಾಯವಾಗಿ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ವಿಧಿಸುವ ನಿಯಮ ಸೇರಿಸಿದೆ. ಗರಿಷ್ಠ 6 ವರ್ಷಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ಇದೆ. ಗಂಭೀರ ಸ್ವರೂಪ ಪ್ರಕರಣಗಳಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ವಕೀಲ ಜಿ.ರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT