ಮಕ್ಕಳ ಕಣ್ಣಲ್ಲೂ ನೀರಿತ್ತು!

ಬುಧವಾರ, ಜೂನ್ 19, 2019
28 °C

ಮಕ್ಕಳ ಕಣ್ಣಲ್ಲೂ ನೀರಿತ್ತು!

Published:
Updated:

ಊರಿನ ಬೀದಿಯೊಳಗೆ ಐಸ್‍ಕ್ಯಾಂಡಿಯವನೋ, ಐಸ್‍ಕ್ರೀಮಿನವನೋ ಬಂದರೆ ಬೀದಿಯ ಎಲ್ಲಾ ಮಕ್ಕಳಿಗೆ ಐಸ್ ಕ್ಯಾಂಡಿ ಸಿಗುತ್ತಿತ್ತು. ಹಣ್ಣುಗಳು ಬಂದರೆ ಹಣ್ಣುಗಳು, ಬಾಂಬೆ ಮಿಠಾಯಿ ಬಂದರೆ ಬಾಂಬೆ ಮಿಠಾಯಿ! ಎಲ್ಲಾ ಮಕ್ಕಳನ್ನೂ ಗುಂಪು ಕಟ್ಟಿಕೊಂಡು, ಕೊಂಡು ಹಂಚುತ್ತಿದ್ದರು ಆ ತಾತ! ಮಲ್ಲಜ್ಜ!

ಅಜ್ಜನೇಕೆ ಹೀಗೆ? ಯಾರೂ ಇಲ್ಲವಾ? ಇದ್ದಾರೆ, ಇದ್ದೂ ಇಲ್ಲದಂತೆ! ಅಜ್ಜನಿಗೆ ಒಬ್ಬನೇ ಮಗ. ಮೊದಲಿನಿಂದಲೂ ಇಂಗ್ಲಿಷ್ ಮಾಧ್ಯಮದಲ್ಲೇ ಓದಿಸಿದರು. ನಮ್ಮೂರಿಂದ ನಗರಕ್ಕೆ ಓದಲು ಹೋಗುತ್ತಿದ್ದುದು ಆಗ ಅವನೊಬ್ಬನೇ. ಈಗ ಎಂಜನಿಯರ್ ಆಗಿ, ದೊಡ್ಡ ಖಾಸಗಿ ಕಂಪನಿಯೊಂದರಲ್ಲಿ ಹರಿಯಾಣದಲ್ಲಿ ಕೆಲಸದಲ್ಲಿ ಇದ್ದಾನೆ! ಸಹದ್ಯೋಗಿಯೊಬ್ಬಳನ್ನು ಇಷ್ಟಪಟ್ಟು ಮದುವೆಯಾಗಿದ್ದಾನೆ.

ತಂದೆ ಬೇಸರಿಸಿಕೊಳ್ಳದೇ ಮದುವೆಗೆ ಒಪ್ಪಿಕೊಂಡಿದ್ದರು. ಅವರ ಮಗ ತನ್ನ ಹೆಂಡತಿಯೊಂದಿಗೆ ಒಮ್ಮೆ ಬಂದು ಹೋದ ನೆನಪು. ಆತ ಮತ್ತೆ ಬಂದಿದ್ದು ಮಲ್ಲಜ್ಜನ ಹೆಂಡತಿ, ಅಂದರೆ ಆತನ ಹೆತ್ತ ತಾಯಿ ಸತ್ತು ಹೋದಾಗ!

ಅಜ್ಜ ಒಂಟಿಯಾದರು. ಮಗ ಬಲವಂತ ಮಾಡಿ ಹರಿಯಾಣಕ್ಕೆ ಎಳೆದುಕೊಂಡು ಹೋದ. ಅಜ್ಜ ಎರಡೇ ದಿನಕ್ಕೆ ವಾಪಸ್ಸು ಬಂದಿದ್ದರು. ಬಂಧುಗಳು ಕರೆದರೂ ಒಂಟಿಯಾಗಿ ಉಳಿದರು. ಮನೆಯಲ್ಲೇ ಚೂರು ಪಾರು ಅಡುಗೆ ಮಾಡಿಕೊಂಡು ದಿನ ತಳ್ಳುತ್ತಿದ್ದರು.

ಆದರೆ ಮಲ್ಲಜ್ಜ ಊರಿನ ಎಲ್ಲ ಮಕ್ಕಳಿಗೂ ತಾತನಾಗಿ ಪರಿವರ್ತನೆ ಕಂಡರು. ಕೂರಿಸಿಕೊಂಡು ಕಥೆ ಹೇಳುವುದು, ಅಳುವ ಮಕ್ಕಳನ್ನು ಸಮಾಧಾನಪಡಿಸಿ, ಅಂಗಡಿಯಲ್ಲಿ ಏನಾದರೂ ಕೊಡಿಸಿ ಶಾಲೆಗೆ ಕಳುಹಿಸುವುದು, ಮಕ್ಕಳಿಗೆ ಯಾರಾದರೂ ಹೊಡೆದರೆ ತಂದೆ ತಾಯಿಗಳಿಗೆ ಬುದ್ಧಿ ಹೇಳಿ ಮಗುವಿನ ಪರವಾಗಿ ಮಾತನಾಡಿ ಸಮಾಧಾನ ಮಾಡುತ್ತಿದ್ದರು. ಮಕ್ಕಳಿಗೆ ಕಬ್ಬು, ಕೊಬ್ಬರಿ, ಬೆಲ್ಲ ಹೀಗೆ ತರಹೇವಾರಿ ತಿನಿಸುಗಳನ್ನು ತಂದು ಹಂಚುವುದು... ಇವೆಲ್ಲ ಮಾಡುತ್ತಿದ್ದರು.

ಊರಿನವರಿಗೆ ಮಲ್ಲಜ್ಜನೆಂದರೆ ವಿಶೇಷ ಗೌರವ! ನಮ್ಮ ಊರಿನ ಮಕ್ಕಳು ಮಲ್ಲಜ್ಜನ ಬಳಿ ಬೆಳೆಯುವುದಕ್ಕೆ ಪುಣ್ಯ ಮಾಡಿದ್ದಾರೆ ಅಂದುಕೊಂಡಿದ್ದರು. ಅಂತಹ ಮಲ್ಲಜ್ಜ ಮೊನ್ನೆ ತೀರಿಹೋದರು. ಚೆನ್ನಾಗಿಯೇ ಇದ್ದ ಮಲ್ಲಜ್ಜ ಬೆಳಗ್ಗೆ ಯಾಕೋ ಮೈಕೈ ನೋವು ಅಂದು ಯಾರದೋ ಮನೆಯಲ್ಲಿ ಊಟ ಮಾಡಿಕೊಂಡು, ಜಗುಲಿ ಮೇಲೆ ಮಲಗಿ ಇಲ್ಲವಾದರು. ನೋಡಿಕೊಳ್ಳುವವರು ಯಾರೂ ಇಲ್ಲವೆಂದು ಹಠಾತ್‌ ಸಾವಿಗಾಗಿ ದೇವರಲ್ಲಿ ಬೇಡಿಕೊಂಡಿದ್ದರೆ ಎಂದೆನಿಸಿತು! ಅಂದು ಊರಿಗೆ ಊರೇ ಕಣ್ಣೀರು ಮಿಡಿಯಿತು.

ಏನೂ ಅರ್ಥವಾಗದ ಚಿಕ್ಕ ಮಕ್ಕಳ ಕಣ್ಣಲ್ಲೂ ನೀರಿತ್ತು. ಇರುವ ಒಬ್ಬನೇ ಮಗನನ್ನು ಕರೆಯಲು ಫೋನ್ ಮಾಡಿದರೆ ಕ್ಯಾಲಿಫೋರ್ನಿಯಾಕ್ಕೆ ಹೋಗಿರುವುದಾಗಿಯೂ, ಎಂದಾದರೂ ಬಂದು ಅಂತ್ಯಸಂಸ್ಕಾರದ ಖರ್ಚುಗಳನ್ನು ಕೊಡುವುದಾಗಿಯೂ, ಮಾಡಬೇಕಿರುವುದನ್ನೆಲ್ಲ ಮಾಡಿ ಮುಗಿಸಬೇಕೆಂದೂ ತಿಳಿಸಿದ. ಊರಿನ ಜನ ಎಲ್ಲಾ ಸೇರಿ ಮಣ್ಣು ಕಾಣಿಸಿದರು. ಮಲ್ಲಜ್ಜ ಮಗನಿಲ್ಲದೇ ಅನಾಥರಾದರೂ ಊರು ಅವರನ್ನು ತಂದೆಯಂತೆ ನೋಡಿಕೊಂಡಿತ್ತು.

–ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ

*

ದ್ವಿಗುಣ ಶಿಕ್ಷೆ

ಅತ್ತ ಮಹಾನಗರವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ಒಂದು ಊರಿನಲ್ಲಿ ನನ್ನ ಬಾಲ್ಯ ಕಳೆದೆ. ರಜಾ ದಿನಗಳಲ್ಲಿ ಮನೆಯಿಂದ ಹೊರಕ್ಕೆ ಕಾಲಿಟ್ಟರೆ ನಮಗೆ ಮತ್ತೆ ಮನೆ ನೆನಪಾಗುತ್ತಿದ್ದುದು ಹೊಟ್ಟೆ ತಾಳ ಹಾಕಿದಾಗಲೆ. ಟಿ.ವಿ, ಮೊಬೈಲ್, ಕಂಪ್ಯೂಟರ್ ಯಾವುದೂ ಇರಲಿಲ್ಲ ಆ ಕಾಲದಲ್ಲಿ. ಆಗ ಮಕ್ಕಳ ಕೂಗಾಟ, ಕಿರುಚಾಟವನ್ನು ಯಾರೂ ತೊಂದರೆ ಎಂದು ಭಾವಿಸುತ್ತಿರಲಿಲ್ಲ. ಎಲ್ಲರ ಮನೆಗೂ ನಮಗೆ ‘ಫ್ರೀ ಎಂಟ್ರಿ’ ಇರುತ್ತಿತ್ತು. ಬಚ್ಚಿಟ್ಟುಕೊಳ್ಳುವಾಗ ಎಲ್ಲಿ ಬೇಕಾದರೂ ಹೋಗಬಹುದಾಗಿತ್ತು.

ನಮ್ಮ ಮನೆಯ ಎದುರಿಗೆ ಒಂದು ಸೈಕಲ್ ಶಾಪ್ ಇತ್ತು. ಅದರ ಮಾಲೀಕ ಬಾಬಣ್ಣ. ಅಪ್ಪ ಯಾವಾಗಲೂ ಹೇಳುತ್ತಿದ್ದರು, ‘ಕಾಯಕವೇ ಕೈಲಾಸ ಎಂಬ ವಾಕ್ಯವನ್ನು ಅಕ್ಷರಶಃ ಪಾಲಿಸುತ್ತಿರುವ ವ್ಯಕ್ತಿ ಬಾಬಣ್ಣ ಒಬ್ಬನೇ’. ಅವನ ದಿನಚರಿ ಸೂರ್ಯ ಹುಟ್ಟುವ ಮೊದಲೇ ಶುರುವಾಗುತ್ತಿತ್ತು. ಮನೆಯ ಮುಂದೆ ನಿತ್ಯ ಮಲ್ಲಿಗೆಯ ಬಳ್ಳಿ ಹಬ್ಬಿಸಿದ್ದ. ಅದರ ಮೊಗ್ಗನ್ನು ಕೀಳುತ್ತಿದ್ದ. ಮೊಗ್ಗು ಕೀಳುವ ಹಾಗೂ ಕಟ್ಟುವ ಕಾಯಕ ಹಗಲು, ರಾತ್ರಿ ನಡೆಯುತ್ತಿತ್ತು.

ಅದರ ನಡುವೆ ಹೂವು ಮಾರುವುದು, ಹಾಲು ಮಾರುವುದು, ಸೈಕಲ್ ರಿಪೇರಿ ಮಾಡುವುದು, ಸೈಕಲ್ ಬಾಡಿಗೆ ಕೊಡುವುದು ಇತ್ಯಾದಿಗಳನ್ನು ಮಾಡುತ್ತಿದ್ದ. ನಮಗಿಂತ ಅವನು ಎಷ್ಟೋ ದೊಡ್ಡವನಾಗಿದ್ದರೂ ನಾವೆಲ್ಲಾ ‘ಅವನು’ ಎಂದೇ ಸಂಬೋಧಿಸುತ್ತಿದ್ದೆವು. ಇನ್ನೂ ಮಕ್ಕಳಾಗಿರಲಿಲ್ಲ. ಅವನ ಮನೆ ಆಗಾಗ ನಮ್ಮ ಆಟದ ಒಂದು ಭಾಗವಾಗುತ್ತಿತ್ತು. ನಾವು ಅಡುಗೆ ಮನೆಯನ್ನೂ ಬಿಡುತ್ತಿರಲಿಲ್ಲ. ಮಕ್ಕಳಿಗೆ ಯಾರೂ ಬೈಯುತ್ತಿರಲಿಲ್ಲ.

ನನ್ನಪ್ಪ-ಅಮ್ಮನಿಗೆ ನಾನು, ನನ್ನಕ್ಕ ಇಬ್ಬರೇ ಮಕ್ಕಳು. ಗಂಡು ಮಕ್ಕಳಿಲ್ಲದಿದ್ದುದು ಅಪ್ಪ-ಅಮ್ಮನಿಗಿಂತ ಬಂಧು, ಮಿತ್ರರಿಗೇ ದೊಡ್ಡ ಚಿಂತೆಯಾಗಿತ್ತು. ಅಮ್ಮನೊಳಗೆ ಕುಡಿಯೊಂದು ಮೊಳಕೆಯೊಡೆಯಿತು. ಡಾಕ್ಟರು ವಿಶ್ರಾಂತಿ ಪಡೆಯುವಂತೆ ಹೇಳಿದರು. ಅಮ್ಮನಿಗೆ ಆಸ್ಪತ್ರೆಯೆಂಬ ಜೈಲು. ಅಪ್ಪನಿಗೆ ಮನೆ, ಮಕ್ಕಳು, ಆಸ್ಪತ್ರೆ, ಆಫೀಸು, ಓಡಾಟ ಹೀಗೆ ಸರ್ಕಸ್ ಮಾಡಿಸಿದ ನಂತರ ತಮ್ಮ ಬಂದ.

ಎಲ್ಲರಿಗೂ ಸಂಭ್ರಮ. ಆದರೆ ತಮ್ಮ ಈ ಸಂಭ್ರಮ ಹೆಚ್ಚು ದಿನ ಉಳಿಯದಂತೆ ನೋಡಿಕೊಂಡ. ಐದನೇ ತಿಂಗಳಲ್ಲೇ ವಾಂತಿ, ಬೇಧಿಗೆ ತುತ್ತಾಗಿ, ನಾವೆಲ್ಲ ಜೀವನ ಪರ್ಯಂತ ಅವನ ನೆನಪಿನಲ್ಲೇ ಕೊರಗುವಂತಹ ಶಿಕ್ಷೆಯೊಂದನ್ನು ದಯಪಾಲಿಸಿ ಬಾರದ ಲೋಕಕ್ಕೆ ಹೋದ.

ಸರಿಸುಮಾರು ಆಗಲೇ ಬಾಬಣ್ಣನ ಮಗನೂ ಹುಟ್ಟಿದ್ದ. ಆಗ ತಾನೆ ದುರ್ಗುಣಗಳು ಪ್ರವೇಶ ಪಡೆಯುವ ವಯಸ್ಸಿನಲ್ಲಿದ್ದ ನನ್ನ ಮನಸ್ಸು ಯೋಚಿಸಿತು ‘ನಮ್ಮ ಪಾಪು ಹೋಯಿತು, ಅವರದು ಮಾತ್ರ ಇದೆ’ (ಶಾಂತಂ ಪಾಪಂ). ಅವನನ್ನೇ ನಮ್ಮ ಮನೆಗೆ ಕರೆದುಕೊಂಡು ಬರುತ್ತಿದ್ದೆವು.

ಆ ಮಗುವೂ ನಮಗೆ ಹೊಂದಿಕೊಂಡಿತ್ತು. ನನ್ನಮ್ಮನನ್ನು ಅಮ್ಮ ಎಂದೇ ಕರೆಯುತ್ತಿದ್ದ ಆ ಪಾಪು. ನಮ್ಮೆಲ್ಲರ ಮನಸ್ಸಿನಲ್ಲಿ ಜಾಗ ಸಂಪಾದಿಸಿದ. ದೊಡ್ಡವನಾದ. ನಾವು ಮನೆ ಬದಲಾಯಿಸಿದೆವು. ಆಗಾಗ ಸಿಗುತ್ತಿದ್ದ. ನಂತರ ನಾವು ಬೆಂಗಳೂರಿಗೆ ಬಂದ ಮೇಲೆ ಸಂಪರ್ಕ ತಪ್ಪಿ ಹೋಯಿತು. ಆಗಾಗ ನಮ್ಮ ಮಾತಿನಲ್ಲಿ ಬಂದು ಹೋಗುತ್ತಿದ್ದ.

ಹದಿನೈದು ವರುಷಗಳ ನಂತರ ಒಂದು ಮದುವೆಯ ನಿಮಿತ್ತ ಅಪ್ಪ ಆ ಊರಿಗೆ ಹೋಗಬೇಕಾಯಿತು. ಅಪ್ಪ ಬಾಬಣ್ಣನ ಮನೆಗೂ ಹೋದರು. ಅದೂ ಇದೂ ಮಾತಾದ ಮೇಲೆ ಅಪ್ಪ ‘ಮಗನನ್ನು ಕರೆಯಿರಿ’ ಎಂದರು.

ಬಾಬಣ್ಣನ ಕಣ್ಣಲ್ಲಿ ನೀರಿನ ಕೋಡಿಯೇ ಹರಿಯಿತು. ಎಂಟು ವರುಷಗಳ ಹಿಂದೆಯೇ ಅಪಘಾತಕ್ಕೆ ಸಿಲುಕಿ... ನನ್ನ ಪಾಪಿ ಮನಸ್ಸಿಗೆ ಶಿಕ್ಷೆ ದ್ವಿಗುಣವಾಯಿತು.

–ರಾಜಲಕ್ಷ್ಮಿ ಸಿ.ಜಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry