ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಕ್ಕೆ ಮೊದಲ ಹಂತದ ಜಯ: ಕಾರಂತ

Last Updated 7 ಅಕ್ಟೋಬರ್ 2017, 9:35 IST
ಅಕ್ಷರ ಗಾತ್ರ

ಪುತ್ತೂರು: ‘ದುರುದ್ದೇಶ ಪೂರಿತವಾದ ದಾಖಲಿಸಿಕೊಳ್ಳಲಾದ ಮೊಕದ್ದಮೆಯಲ್ಲಿ ನ್ಯಾಯಕ್ಕೆ ಮೊದಲ ಹಂತದ ಜಯ ಸಿಕ್ಕಿದೆ. ದೊಡ್ಡ ಕ್ರಿಮಿನಲ್‌ಗಳನ್ನು ಬಂಧಿಸುವಂತೆ ನನ್ನನ್ನು ಬಂಧಿಸುವುದರ ಹಿಂದೆ ರಾಜಕೀಯ ದುರುದ್ದೇಶವಿದೆ’ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ತಿಳಿಸಿದರು.

ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನ್ಯಾಯಾಲಯದಲ್ಲಿ ಶನಿವಾರ ಪೂರ್ಣಕಾಲಿಕ ಜಾಮೀನು ಪಡೆದು ಹೊರಬಂದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯ ಐಜಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು, ಸಂಪ್ಯ ಠಾಣಾ ಅಧಿಕಾರಿ ಹಾಗೂ ಹೆಸರಿಸಿದ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ತಕ್ಷಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ನಾಲ್ಕನೇ ಬಾರಿ ನ್ಯಾಯಾಲಯಕ್ಕೆ ಹಾಜರು: ಸೆಪ್ಟೆಂಬರ್‌ 15 ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗದೀಶ ಕಾರಂತ ಅವರು ಶನಿವಾರ ನಾಲ್ಕನೇ ಬಾರಿ ನ್ಯಾಯಾಲಯಕ್ಕೆ ಹಾಜರಾದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.29 ರಂದು ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದ ಜಗದೀಶ್ ಕಾರಂತ ಅವರು, ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.

ಬುಧವಾರ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಿದ್ದರೂ, ವಕೀಲರ ಕಲಾಪ ಬಹಿಷ್ಕಾರದ ಹಿನ್ನೆಲೆಯಲ್ಲಿ ಮತ್ತೆ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು. ಶುಕ್ರವಾರ ಕಾರಂತ ಪರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪರ-ವಿರೋಧ ವಾದಗಳನ್ನು ಆಲಿಸಿ, ಆದೇಶವನ್ನು ಶನಿವಾರಕ್ಕೆ ಕಾಯ್ದಿರಿಸಿತ್ತು. ಜಗದೀಶ್ ಕಾರಂತ ಅವರು ಮತ್ತೆ ಶನಿವಾರ ನ್ಯಾಯಾಲಯಕ್ಕೆ ಹಾಜರಾದರು.

ಜಗದೀಶ್ ಕಾರಂತ ಅವರನ್ನು ಸೆಪ್ಟೆಂಬರ್‌ 29 ಮಧ್ಯಾಹ್ನ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು, ಅಂದು ರಾತ್ರಿ 1.30ಕ್ಕೆ ಪುತ್ತೂರಿನ ಬೈಪಾಸ್ ತೆಂಕಿಲದಲ್ಲಿರುವ ನ್ಯಾಯಾಧೀಶ ಕಿಶನ್ ಬಿ.ಮಡಲಗಿ ಅವರ ನಿವಾಸದಲ್ಲಿ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಅವರಿಗೆ ಷರತ್ತಿನೊಂದಿಗೆ ಮಧ್ಯಂತರ ಜಾಮೀನು ನೀಡಿದ್ದರು.

ಪೂರ್ಣ ಪ್ರಮಾಣದ ಜಾಮೀನು ಸಿಗುವ ತನಕ ಪುತ್ತೂರು ನ್ಯಾಯಾಲಯ ವ್ಯಾಪ್ತಿಯನ್ನು ಬಿಟ್ಟು ತೆರಳಬಾರದು. ಯಾವುದೇ ಸಭೆ ಸಮಾರಂಭಗಳಲ್ಲಿ ಭಾಷಣ ಮಾಡಬಾರದು ಎಂದು ಮಧ್ಯಂತರ ಜಾಮೀನು ಆದೇಶದಲ್ಲಿ ತಿಳಿಸಲಾಗಿತ್ತು. ಇದೀಗ ಪೂರ್ಣ ಪ್ರಮಾಣದ ಜಾಮೀನು ದೊರೆತಿದ್ದು, ಪುತ್ತೂರು ನ್ಯಾಯಾಲಯದ ವ್ಯಾಪ್ತಿಯನ್ನು ಬಿಟ್ಟು ತೆರಳಬಾರದು ಎಂಬ ಷರತ್ತಿಗೆ ವಿನಾಯಿತಿ ನೀಡಿದೆ.

ಬಿಜೆಪಿ ರೈತ ಮೋರ್ಚಾದ ಮುಖಂಡ ಸುರೇಶ್ ಆಳ್ವ ಸಾಂತ್ಯ ಮತ್ತು ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಅಧ್ಯಕ್ಷ ಜನಾರ್ದನ ಬೆಟ್ಟ ಅವರು ಜಗದೀಶ್ ಪರ ಜಾಮೀನುದಾರರಾಗಿದ್ದರು. ವಕೀಲರಾದ ಮಹೇಶ್ ಕಜೆ, ನರಸಿಂಹ ಪ್ರಸಾದ್, ಮುರಳೀಕೃಷ್ಣ ಚಲ್ಲಂಗಾರು, ಶ್ರೀಕಾಂತ್ ಕೊಳತ್ತಾಯ, ಚಿನ್ಮಯ ರೈ ಅವರು ಜಗದೀಶ್ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT