ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿಗಳ ಬೆಸುಗೆ ರಾಮಾಯಣದ ಮರುರೂಪಗಳು

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಾಮಾಯಣ ಮಹಾಕಾವ್ಯವು ದಕ್ಷಿಣ ಭಾರತ ಮತ್ತು ದಕ್ಷಿಣ ಪೂರ್ವ ಏಷ್ಯಾದ ಜನರ ಅಂತರಂಗದ ಭಾಗವಾಗಿದೆ. ವಾಲ್ಮೀಕಿ ರಾಮಾಯಣವನ್ನು ಆದಿಕಾವ್ಯವಾಗಿ ಬಹುಜನರು ಒಪ್ಪಿರುವರಾದರೂ ಈ ಭಾಗದ ಜನರು ಮರು ನಿರೂಪಿಸಿದ ಹಲವು ಸಂಪತ್ಭರಿತ, ವೈವಿಧ್ಯಪೂರ್ಣ, ದೇಸಿ ಸೊಗಡಿನ ಮರುರೂಪಗಳು ಕಾಲ-ದೇಶಗಳ, ಧರ್ಮ- ಸಮಾಜ ಕಟ್ಟುಪಾಡುಗಳ ಹಂಗಿಲ್ಲದೆ ನಿರಂತರವಾಗಿ ಹರಿದುಬಂದಿವೆ.

ದಕ್ಷಿಣ ಭಾರತದಲ್ಲಿ ಮೊದಲ ರಾಮಾಯಣದ ಉಲ್ಲೇಖವಿರುವುದು ಚಾಲುಕ್ಯರ ವಾಸ್ತುಶಿಲ್ಪದಲ್ಲಿ. ಉತ್ತರ ಕರ್ನಾಟಕದ ಪಟ್ಟದಕಲ್ಲಿನ ದೇವಾಲಯಗಳಲ್ಲಿ. ರಾಮ, ಸೀತೆ ಮತ್ತು ಲಕ್ಷ್ಮಣನ ಜತೆಗೆ ಬಂಗಾರದ ಜಿಂಕೆ(ಮಾರೀಚ)ಯನ್ನೂ ಇಲ್ಲಿ ಕಡೆದು ಹೆಸರಿಸಲಾಗಿದೆ(ಸುಮಾರು 692–94). ಇದೇ ಪರಂಪರೆ ರಾಮಾಯಣವನ್ನು ದೇವಾಲಯಗಳ ಗೋಡೆಯ ಮೇಲೆ ಚಿತ್ರಿಸುವ ಸಂಪ್ರದಾಯವಾಗಿ ರೂಪುಗೊಂಡು ಪಲ್ಲವ, ಪಾಂಡ್ಯ, ಚೋಳ, ಹೊಯ್ಸಳ ಮತ್ತು ವಿಜಯನಗರ ಮತ್ತು ವಿಜಯನಗರೋತ್ತರ ಕಾಲದಲ್ಲಿ ಮುಂದುವರೆಯಿತು.

ವಿಜಯನಗರದ ಅರಸರ ಕಾಲದಲ್ಲಿ ಕೋದಂಡರಾಮನ ಪರಿವಾರದ ರಾಮ, ಲಕ್ಷ್ಮಣ, ಹನುಮಂತರ ವಿಗ್ರಹಗಳು ಹೆಚ್ಚಿ ದವು. ಆ ನಂತರ ಹಂಪಿಯ ವಿಜಯವಿಠ್ಠಲ ದೇವಾಲಯ ಮತ್ತು ಹಜಾರರಾಮನ ದೇವಾಲಯಗಳಲ್ಲಿ ರಾಮಾಯಣದ ಭವ್ಯ ಚಿತ್ರ ಗಳನ್ನು ನೋಡಬಹುದಾಗಿದೆ. ಬೇಲೂರು ಮತ್ತು ಹಳೇಬೀಡಿನ ದೇವಾಲಯಗಳಲ್ಲಿ ಮಹಾಭಾರತದ ಘಟನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದರೂ ಮುಂದೆ ಇಷ್ಟೇ ಒತ್ತನ್ನು ನೀಡಿದ ದೇವಾಲಯಗಳನ್ನು ಕಾಣುವೆವು.

ಶಿವಮೊಗ್ಗ ಜಿಲ್ಲೆಯ ಅಮೃತಾಪುರದ ದೇವಾಲಯದ ರಾಮಾಯಣ ಕುರಿತ ಶಿಲ್ಪಗಳು ಮನೋಹರವಾಗಿವೆ. ಇದರ ಜೊತೆ ಜೊತೆಗೆ ಸಮಾಜೋ ಸಾಂಸ್ಕೃತಿಕ ಸಂದರ್ಭಾನುಸಾರ ಜಾನಪದೀಯ ಸಾಹಿತ್ಯ, ಮೌಖಿಕ ಮತ್ತು ದೇಶೀಯ ಕಲಾ ಪರಂಪರೆಗಳಲ್ಲಿಯೂ ರಾಮಾಯಣವು ಅಭಿವ್ಯಕ್ತಿ ಪಡೆದು ಕೊಂಡಿರುವುದು ಗಮನೀಯ. ಶಿಲ್ಪಿಗಳು ಈ ಘಟನೆಗಳನ್ನು ನಿರೂ ಪಿಸುವಲ್ಲಿ ಸ್ವಾತಂತ್ರ್ಯವಹಿಸಿರುವುದು ಉಲ್ಲೇಖನೀಯ.

ಮಹಾಕಾವ್ಯದ ಘಟನೆಗಳನ್ನು ಕಡೆದಿರುವ ವಿನ್ಯಾಸ ಕ್ರಮಗಳನ್ನು ಮೂರು ವಿಧದಲ್ಲಿ ನೋಡಬಹುದು.

1. ಚೌಕಟ್ಟಿನಲ್ಲಿ(ಒಂದು ಪ್ರೇಮಿನಲ್ಲಿ ಒಂದು ಘಟನೆಗೆ ಸಂಬಂಧಿಸಿದ ವ್ಯಕ್ತಿ/ವಸ್ತುಗಳನ್ನು ಚಿತ್ರಿಸಿರುವುದು)

2. ಪಟ್ಟಿಕೆಗಳಲ್ಲಿ ನಿರೂಪಿಸಿರುವ ಶಿಲ್ಪಗಳು (ಸಾಲು ಸಾಲಾಗಿ ಘಟನೆಗಳನ್ನು ನಿರೂಪಿಸಿರುವುದು)

3. ಬಿಡಿ ಬಿಡಿಯಾಗಿ ಮಹಾಕಾವ್ಯದ ವ್ಯಕ್ತಿ/ವಿವರಗಳ ಶಿಲ್ಪಗಳು

ದಕ್ಷಿಣ ಭಾರತದಲ್ಲಿ ಅತಿ ಪುರಾತನ ಕಾಲದ ರಾಮಾಯಣ ಕಥಾನಕಗಳನ್ನು ಕಾಣುವುದು ಪಟ್ಟದಕಲ್ಲಿನಲ್ಲಿ ಎಂದೆನಲ್ಲವೆ. ಇಲ್ಲಿನ ಉಬ್ಬುಶಿಲ್ಪಗಳನ್ನು ಮಾತ್ರ ಬಿಡಿಸಿರುವುದಲ್ಲದೆ ಮಹಾಕಾವ್ಯದ ವ್ಯಕ್ತಿಗಳನ್ನು ಅಕ್ಷರದಲ್ಲಿ ಗುರುತಿಸಲಾಗಿದೆ. ಅಲ್ಲದೆ, ರಾಮಾಯಣದ ಕೆಲವು ಘಟನೆಗಳನ್ನು ಸಂಕ್ಷಿಪ್ತವಾಗಿ ನಿರೂಪಿಸಿರುವುದೂ ಇಲ್ಲಿಯೇ ಮೊದಲು. ಉದಾಹರಣೆಗೆ ರಾಮ, ಲಕ್ಷ್ಮಣರನ್ನು ಉದ್ದೇಶಿಸಿ ಸುವರ್ಣ ಜಿಂಕೆ ಹಿಡಿದು ತರಲು ಸೀತೆಯು ಕೇಳಿಕೊಳ್ಳುವ ದೃಶ್ಯ. ಒಂದೇ ಚೌಕಟ್ಟಿನಲ್ಲಿ ಸೆರೆಹಿಡಿದ ಇಂಥಹ ದೃಶ್ಯಗಳು ಪಲ್ಲವರ ದೇವಾಲಯಗಳಲ್ಲಿ ಕಂಡುಬಂದಿಲ್ಲ. ಅಲ್ಲದೆ ಆ ಮುಂಚಿನ ಕಾಲದ ದಕ್ಷಿಣ ಭಾರತದ ಯಾವುದೇ ದೇವಾಲಯಗಳಲ್ಲೂ ಕಾಣಸಿಗುವುದಿಲ್ಲ.

ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ರಾಮಾಯಣದ ಘಟನೆಗಳನ್ನು ಶಿಲ್ಪದಲ್ಲಿ ನಿರೂಪಿಸಿರುವುದು ಮುಂದುವರೆದರೂ ಇದು ಅವಿಚ್ಛಿನ್ನ ಕಥಾನಕ ನಿರೂಪಣೆಗಳಾಗಿ ಮಾರ್ಪಡುವುದು ಹೊಯ್ಸಳರ ದೇವಾಲಯಗಳ ಹೊರಗೋಡೆಗಳ ಮೇಲೆ. ಹಳೇಬೀಡಿನ ಹುಚ್ಚೇಶ್ವರ ಮತ್ತು ಕೇದಾರೇಶ್ವರ ದೇವಾಲಯದ ಗೋಡೆಗಳ ಮೇಲೆ ಇಂಥ ನಿದರ್ಶನ ಕಾಣುವೆವು. ಬರಬರುತ್ತಾ ಹೊಯ್ಸಳ ದೇವಾಲಯದ ದಕ್ಷಿಣ ಭಾಗದಲ್ಲಿ ಮಹಾಭಾರತ ಮತ್ತು ಭಾಗವತದ ದೃಶ್ಯಗಳನ್ನು ಕೊರೆಯುವುದು ಸಂಪ್ರದಾಯವಾಯಿತು.

ವಿಜಯನಗರದ ಕಾಲ ಮತ್ತು ಆ ನಂತರ ಇದು ಮುಂದುವರೆದರೂ ಹೊಯ್ಸಳರ ಸಮಗ್ರತೆ ಪಡೆದುಕೊಳ್ಳಲಿಲ್ಲ. ಆದರೆ, ಆವರೆವಿಗೂ ಮಹಾಕಾವ್ಯದ ಮಹಾಪುರುಷನಾಗಿದ್ದ ರಾಮನು ವಿಜಯನಗರದ ಕಾಲದಲ್ಲಿ ದೈವತ್ವ ಪಡೆದುಕೊಂಡು ಆರಾಧನೆಗೆ ಅರ್ಹನಾಗತೊಡಗಿದನು. ಇದೇ ಕಾಲದಲ್ಲಿ ಹನುಮನ ಆರಾಧನೆಯು ಲೋಕಪ್ರಿಯವಾಗತೊಡಗಿತು.

ಕಾಲದ ದೃಷ್ಟಿಯಿಂದ ವಿವಾದಾತ್ಮಕವಾಗಿರುವ ತ್ಯಾಗರ್ತಿಯ ಗಂಗಾ ಅವನೀತನ ಕಾಲದ್ದೆಂಬ(ಕ್ರಿ.ಪೂ. 466) ಶಾಸನದಲ್ಲಿ, ರಾಮನ ಹೆಸರಿಟ್ಟುಕೊಂಡ ವ್ಯಕ್ತಿಯ ಉಲ್ಲೇಖದಿಂದ ಪುರಾಣ ಪುರುಷನಾದ ರಾಮಚಂದ್ರನು ಮುಂದಿನ ಎಲ್ಲ ರಾಜರನ್ನು ಧರ್ಮದತ್ತಿಗಳನ್ನು ರಕ್ಷಿಸಲು ಮಾಡಿದ ವಿನಂತಿ ಮೊದಲು
ಕ್ರಿ.ಪೂ. 466ರ ಮಡಿಕೇರಿ ಶಾಸನದಲ್ಲಿ ಬಂದು, ಇದು ರಾಷ್ಟ್ರಕೂಟರ ಕಾಲದಲ್ಲಿ ಹೆಚ್ಚು ಬಳಕೆಯಾಗಿದೆ. ಕ್ರಿ.ಪೂ. 870–995ರ ಸುಮಾರಿನಲ್ಲಿ ರಾಮಚಂದ್ರ, ರಾಮದೇವ ಮತ್ತು ರಾಮ ಎಂದು ಉಲ್ಲೇಖಿಸಲಾಗಿದ್ದು, ಅವನು ಆದರ್ಶ ತತ್ವಗಳ ಪಾಲಕನೂ ಆಗಿದ್ದನೆಂಬುದು ಕಂಡುಬರುತ್ತದೆ.

ರಾಮನು ಮಹಾಕಾವ್ಯದ ವಸ್ತುವಾಗಿ ಕಾವ್ಯದಲ್ಲಿ ಕಾಣಿಸಿಕೊಳ್ಳುವುದು ಒಂಬತ್ತನೆಯ ಶತಮಾನದ ‘ಕವಿರಾಜಮಾರ್ಗ’ದಲ್ಲಿ (ಸುಮಾರು 850 ಕ್ರಿ.ಪೂ.). ಈ ಗ್ರಂಥದ ಒಂಬತ್ತು ಪದ್ಯಗಳಲ್ಲಿ ರಾಮಾಯಣದ ಏಳು ಘಟನೆಗಳನ್ನು ಉದ್ಧರಿಸಲಾಗಿದೆ. ಇಲ್ಲಿ ರಾಮ, ಸೀತೆ ಮತ್ತು ಅಣುವನನ್ನು(ಹನುಮ) ಹೆಸರಿಸಲಾಗಿದೆ. ಇಲ್ಲಿಯ ಪದ್ಯಗಳಲ್ಲಿ ರಾಘವ ಮತ್ತು ಜನಕ ಮಾತೆಯ ವ್ಯಕ್ತಿತ್ವ ಪರಿಚಯಿಸಲಾಗಿರುವುದನ್ನು ಗಮನಿಸಬಹುದಾಗಿದೆ.

ಪರಿದೆಯ್ದಿ ತಾಗಿದಂ ಭಾ
ಸುರತರರಘುಕುಲಲಲಾಮನೊಳ್ ಲಕ್ಷ್ಮಣನೊಳ್
ಪರಿಕೋಪವಶಭ್ರಮಣೋ
ದ್ಧುರರಕ್ತಕಠೋರಲೋಚನಂ ದಶವದನಂ(ಎರಡನೆಯ ಪರಿಚ್ಛೇದ ಪದ್ಯ 96)

–ಮೊದಲ ಬಾರಿ ಅಣುವ ರಾಘವನನ್ನು ಭೇಟಿಯಾದದ್ದು ಈ ಪದ್ಯದಲ್ಲಿ ವ್ಯಕ್ತವಾಗಿದೆ.

ಸಕಲಜನವಿನುತನಂ ಶತ
ಮಖಸದೃಶವಿಶಾಲ ವಿವಿಧವಿಭವೋದಯನಂ
ಪ್ರಗತಗುಣಗಣನನರಿಬಲ

ವಿಘಟನಂ ಕಂಡನಣುವನಾ(ಎರಡನೆಯ ಪರಿಚ್ಛೇದ ಪದ್ಯ38- ಇಲ್ಲಿನ ವರ್ಗ ಪ್ರಾಸವನ್ನೂ ಗಮನಿಸಿ ಕ ಖ ಗ ಘ)
ಎರಡನೆಯ ಬಾರಿ ಜಾನಕಿಯನ್ನು ಅರಣ್ಯದಲ್ಲಿ ಅಣುವ ಭೇಟಿಯಾಗುವ ಸಂದರ್ಭ ಹೀಗಿದೆ:

ಶಶಧರ ಬಿಂಬಾನನೆಯಂ
ಯಷಕೇತನಕೇತನಾಭ್ಹತನುತನುವಂ ತಾಂ
ಬಿಸವಿಶದವರ್ಣೆಯಂ ಕಂಡೊದೆದಂ ಬನದೊಳಗೆ ಜನಕತನಯನುಣುವಂ(ಅದೇ ಪದ್ಯ 40)

ಮೂರನೆಯದರಲ್ಲಿ ಸಮದ್ರದ ದಡದ ಮೇಲೆ ರಾಜ ನರಪತಿಯನ್ನು ಭೇಟಿಯಾದುದ್ದು ಮತ್ತು ಅವನನ್ನು ಕಪಿಸೈನ್ಯ ಆವರಿಸಿದ್ದ ಉಲ್ಲೇಖಗಳಿವೆ.

ಬಾದಾಮಿ ಚಾಲುಕ್ಯರ ಕಾಲಘಟ್ಟದಲ್ಲಿ(ಸುಮಾರು 692–94) ಸಂಧಿ ವಿಗ್ರಹಿ ರಾಮ ಎನ್ನುವವನ ಉಲ್ಲೇಖ ಬಂದಿದೆ. ಮುಂದೆ ರಾಮನನ್ನು ಕುರಿತ ಮಹಾಕಾವ್ಯಗಳು ರಚಿತವಾದದ್ದನ್ನು ನೋಡುವೆವು. ಇವೆಲ್ಲವೂ ಜಾನಪದದಿಂದ ಸ್ಥಳೀಯ ವಿವರಗಳನ್ನು ಅಳವಡಿಸಿಕೊಂಡಿವೆ. ತಮಿಳುನಾಡಿನ ಕಂಬ ರಾಮಾಯಣ ಮತ್ತು ಕರ್ನಾಟಕದಲ್ಲಿ ರಚಿತವಾದ ಪಂಪ ರಾಮಾಯಣಗಳು ಒಂದೇ ಕಾಲಘಟ್ಟದವು(ಸುಮಾರು 12ನೇ ಶತಮಾನ).

ತೊರವೆ ರಾಮಾಯಣದಿಂದ ಪ್ರೇರೇಪಿತವಾಗಿ ಅನೇಕ ಯಕ್ಷಗಾನ ಪ್ರಸಂಗಗಳು, ದಾಸರ ಕೀರ್ತನೆಗಳು ರಚಿತವಾದವು. ಇಪ್ಪತ್ತನೇಯ ಶತಮಾನದಲ್ಲಿ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ‘, ವೀರಪ್ಪ ಮೊಯಿಲಿ ಅವರ ‘ಶ್ರೀರಾಮಾನ್ವೇಷಣಂ’ ಸೇರಿ ಸುಮಾರು 12 ಕಾವ್ಯ ಅಥವಾ ಗದ್ಯಕೃತಿಗಳು ರಚಿತವಾಗಿವೆ.

ಪ್ರಾಚೀನ ಇತಿಹಾಸದ ಸಮಯದಲ್ಲಿ ಈ ಮಹಾಕಾವ್ಯವು ದಕ್ಷಿಣ ಏಷ್ಯಾದ ಭಾಗಗಳಲ್ಲಿ ತನ್ನ ಪರಿಧಿ ವಿಸ್ತರಿಸಿಕೊಂಡಿತು. ಥೈಲ್ಯಾಂಡ್, ಕಾಂಬೋಡಿಯಾ, ಬರ್ಮಾ, ವಿಯೆಟ್ನಾಂ, ಸಿಲೋನ್‌ ದೇಶಗಳಲ್ಲಿಯೂ ರಾಮಾಯಣಗಳ ಆವೃತ್ತಿಗಳು ಪ್ರಕಟಗೊಂಡಿರುವುದು ಇಲ್ಲಿ ಉಲ್ಲೇಖನೀಯ.

ಇವುಗಳ ಜತೆಗೆ ದಕ್ಷಿಣ ಭಾರತ ಮತ್ತು ದಕ್ಷಿಣ ಏಷ್ಯಾದ ಪ್ರದೇಶಗಳಲ್ಲಿ ಈ ಹೊತ್ತಿಗೂ ಸ್ಥಳೀಯ ಕಲಾ ತಂಡಗಳು ಈ ಮಹಾಕಾವ್ಯ ವನ್ನು ತಮ್ಮದೇ ಆದ ರೀತಿಯಲ್ಲಿ ಪ್ರದರ್ಶನ ಕಲೆಗಳಲ್ಲಿ ಪ್ರಸ್ತುತ ಪಡಿಸುತ್ತಾ ಬಂದಿದ್ದಾರೆ. ಜತೆಗೆ, ಈ ಕಾವ್ಯದ ವಿವರಗಳನ್ನು ಧಾರ್ಮಿಕ ಕೇಂದ್ರಗಳ ಗೋಡೆಗಳು ಅಲಂಕರಿಸಿವೆ.

(ಸೆಪ್ಟೆಂಬರ್ 14, 15ರಂದು ಮೈಸೂರಿನ ಇತಿಹಾಸಜ್ಞ ಪ್ರೊ.ಡಿ.ಎಸ್. ಅಚ್ಚುತರಾವ್ ಶತಮಾನೋತ್ಸವ ಸಮಿತಿ ಮತ್ತು ರೇವಾ ವಿಶ್ವವಿದ್ಯಾಲಯದ ಕಲಾ ಮತ್ತು ಮಾನವಿಕಗಳ ವಿಭಾಗದಿಂದ ಜಂಟಿಯಾಗಿ ರಾಮಾಯಣ ಕುರಿತು ಏರ್ಪಡಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧದ ಆಯ್ದ ಭಾಗ)

ರಾಮಾಯಣ ಕುರಿತ ಸಮ್ಮೇಳನ
ದಕ್ಷಿಣ ಭಾರತದ ಮತ್ತು ಪೂರ್ವ ದಕ್ಷಿಣ ಏಷ್ಯಾಗಳಲ್ಲಿನ ರಾಮಾಯಣ ಕುರಿತು ಈವರೆವಿಗೆ ಎಲ್ಲೂ ವಿಸ್ತೃತವಾದ ಚರ್ಚೆ ನಡೆದಿಲ್ಲ. ಈ ಕಾರಣದಿಂದ ಮತ್ತು ರಾಮಾಯಣ ಕಥನಗಳಲ್ಲಿನ ಬಹುಮುಖತೆ, ವೈವಿಧ್ಯ ಗುರುತಿಸುವುದು ಈ ಸಮ್ಮೇಳನದ ಆಶಯವಾಗಿತ್ತು.

ಸಾಹಿತ್ಯ ಮಾತ್ರವಲ್ಲದೆ ಶಿಲ್ಪ, ವರ್ಣ, ಪ್ರಸಂಗಗಳಲ್ಲಿ ರಾಮಾಯಣದ ವಿವರಗಳು ದಾಖಲಾಗಿರುವ ಕುರಿತು ಚರ್ಚಿಸಲಾಯಿತು. ತಮ್ಮ ಜೀವಮಾನವನ್ನು ರಾಮಾಯಣ ಕುರಿತ ಅಧ್ಯಯನಕ್ಕೆ ಮೀಸಲಿಟ್ಟ ಅಂತರರಾಷ್ಟ್ರಿಯ ಖ್ಯಾತಿಯ ವಿದ್ವಾಂಸರಾದ ಪ್ರೊ.ಪೌಲ ರಿಚ್‌ಮನ್ (ಯುಎಸ್‌ಎ), ಪ್ರೊ.ಗುಲಾಮ್ ಸರ್ವಾರ್ ಯೂಸುಫ್(ಕೌಲಾಲಂಪುರ್), ಪ್ರೊ.ಡುಥೂಹ (ವಿಯೆಟ್ನಾಂ), ಡಾ.ಎ.ಜೆ. ಥಾಮಸ್(ನವದೆಹಲಿ), ಪ್ರೊ.ಮಾಲಿನಿ ಸರನ್ (ನವದೆಹಲಿ), ಚಿರಪಟ್ ಪ್ರಪಂಡ್‌ ವಿದ್ಯಾ (ಬ್ಯಾಂಕಾಕ್) ಚೇರಿ ತಿರುಚೆಲ್ವಂ(ಮಲೇಷ್ಯಾ), ಸಿರಾಂಗ್ ಲೆಂಗ್(ಬ್ಯಾಂಕಾಕ್), ಡಾ.ಫಾನ್ ಆಹ್ ಥೂ(ವಿಯೆಟ್ನಾಂ), ವಲೆರಿ ಜಿಲೆಟ್ (ಪ್ಯಾರಿಸ್), ಶಾರದಾ ಶ್ರೀನಿವಾಸನ್(ಬೆಂಗಳೂರು), ಡಾ.ಆರ್.ಕೆ.ಕೆ. ರಾಜನ್ (ನವದೆಹಲಿ), ಡಾ.ಗೌರಿ ಪರಿಮೂ ಕೃಷ್ಣ (ಸಿಂಗಪುರ), ಡಾ.ರೇಚಲ್ ಲೋಜು(ಫ್ರಾನ್ಸ್), ಗೂನ್ ಥಿ ಟಾಮ್ ಆಹ್(ವಿಯೆಟ್ನಾಂ) ಎರಡು ದಿನಗಳ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷ.

ಕರ್ನಾಟಕದಿಂದ ಪುರುಷೋತ್ತಮ ಬಿಳಿಮಲೆ, ಕೃಷ್ಣಮೂರ್ತಿ ಹನೂರು, ವನಮಾಲಾ ವಿಶ್ವನಾಥ್ ಪ್ರಬಂಧ ಮಂಡಿಸಿದರು. ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ ಅವರು ತಮ್ಮ ‘ರಾಮಾನ್ವೇಷಣಂ’ ಕೃತಿ ರಚಿಸಿದ ಹಿನ್ನೆಲೆ ವಿವರಿಸಿದರು. ಕವಿ ಡಾ.ಎಚ್.ಎಸ್. ಶಿವಪ್ರಕಾಶ, ಸಂಸ್ಕೃತ ವಿದ್ವಾಂಸರಾದ ಡಾ.ಜೆ. ಶ್ರೀನಿವಾಸಮೂರ್ತಿ, ಡಾ.ಡಿ.ಎ. ಪ್ರಸನ್ನ, ಎಸ್ತರ್ ಅನಂತಮೂರ್ತಿ, ಕ್ಷಮಾ ಕಾರಂತ, ಮಾಳವಿಕಾ ಕಪೂರ್, ರಜನಿ ಪ್ರಸನ್ನ, ಪ್ರೊ.ಆ. ಸುಂದರ, ಡಾ.ಸದಾನಂದ, ಪ್ರೊ.ಅನಿಂದ್ಯಾ ಸಿನ್ಹ ಮತ್ತು ರೇವಾ ವಿಶ್ವವಿದ್ಯಾನಿಲಯದ ಹಲವು ಅಧ್ಯಾಪಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಖ್ಯಾತ ಇತಿಹಾಸಕಾರ ಷ. ಶೆಟ್ಟರ್ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಡಾ.ಪಾರುಲ್ ಪಾಂಡ್ಯ ಧಾರ್ ಸಮ್ಮೇಳನದ ರೂವಾರಿಗಳಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT