ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಚರಂಡಿ ನೀರು, ತ್ಯಾಜ್ಯ ಸಂಗ್ರಹ

Last Updated 7 ಅಕ್ಟೋಬರ್ 2017, 9:47 IST
ಅಕ್ಷರ ಗಾತ್ರ

ಸಿಂಧನೂರು: ರಸ್ತೆಯಲ್ಲಿ ಹರಿಯುವ ಚರಂಡಿ ನೀರು ಮತ್ತು ಘನತ್ಯಾಜ್ಯ ವಸ್ತುಗಳು ಸಂಗ್ರಹಗೊಂಡು ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಪರದಾಡುವ ಸ್ಥಿತಿ ಬಳಗಾನೂರು ಪಟ್ಟಣದಲ್ಲಿ ನಿರ್ಮಾಣವಾಗಿದೆ.

ಇಲ್ಲಿನ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾಗಿ ಪರಿವರ್ತನೆಗೊಂಡು ಒಂದೂವರೆ ವರ್ಷ ಗತಿಸಿದೆ. ಅಲ್ಲದೆ ಜನಸಂಖ್ಯೆಯೂ ಹೆಚ್ಚಾಗಿದೆ. ಆದರೆ ಮೂಲಸೌಕರ್ಯಗಳು ಮಾತ್ರ ಮೊದಲಿನಂತೆಯೇ ಇವೆ.

ಇದುವರೆಗೆ ಕೆಲ ಓಣಿಗಳಲ್ಲಿ ಚರಂಡಿ, ಸಿಸಿ ರಸ್ತೆ ಮಾಡಿಲ್ಲ. ಕೊಳಚೆ ಪ್ರದೇಶಗಳ ಮಾತಿರಲಿ, ದೊಡ್ಡ ದೊಡ್ಡ ಕಟ್ಟಡಗಳಿರುವ ಓಣಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಹೊಲಸು ನೀರು ರಸ್ತೆಗಳಲ್ಲಿ ಹರಿದು ದುರ್ಗಂಧ ಸೂಸುತ್ತಿದೆ. ರಸ್ತೆ ನಿರ್ಮಾಣ ಮತ್ತು ಚರಂಡಿ ವ್ಯವಸ್ಥೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.

ಅಲ್ಲದೆ ಪಟ್ಟಣದ ಪೋತ್ನಾಳ ಮಾರ್ಗ ಮುಖ್ಯರಸ್ತೆಯ ಮೇಲೆ ಚರಂಡಿ ಮತ್ತು ಮಳೆ ನೀರು ತುಂಬಿ ಹರಿಯುತ್ತಿದ್ದು, ಸಾರ್ವಜನಿಕ ಓಡಾಟ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಮಲೀನ ನೀರು ಒಂದೆಡೆ ನಿಲ್ಲುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದ ಡೆಂಗಿ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ ಎಂದು ಅಲ್ಲಿನ ನಿವಾಸಿಗಳಾದ ಲಕ್ಷ್ಮಮ್ಮ, ಶಾರದಮ್ಮ ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಎಲ್ಲೆಂದೆರಲ್ಲಿ ತ್ಯಾಜ್ಯ ಬೀಸಾಡಲಾಗಿದೆ. ಚರಂಡಿಗಳಲ್ಲಿ ಮನೆಯ ಕಸ, ಪ್ಲಾಸ್ಟಿಕ್, ಒಡೆದ ಗಾಜುಗಳು, ಹಳೆಯ ವಸ್ತುಗಳು, ತರಕಾರಿ ತ್ಯಾಜ್ಯ ಕಣ್ಣಿಗೆ ರಾಚುತ್ತವೆ. ಅಲ್ಲದೆ ಹಂದಿಗಳು ಚರಂಡಿಯಲ್ಲಿ ಹೊರಳಾಡಿ ಹೊಲಸನ್ನು ಮನೆಯ ಗೋಡೆಗೆ ಹುಜ್ಜಿ ಗಲೀಜು ಮಾಡುತ್ತಿವೆ.

ಪಟ್ಟಣದ ಸ್ವಚ್ಛತೆಗಾಗಿ ಪಟ್ಟಣ ಪಂಚಾಯಿತಿ ಸಾಕಷ್ಟು ಅನುದಾನ ವೆಚ್ಚ ಮಾಡುತ್ತಿದೆ. ಆದರೆ ಅನುದಾನ ಸದ್ಬಳಕೆ ಆಗುತ್ತಿಲ್ಲ. ಸಂಬಂಧಪಟ್ಟ ವಾರ್ಡ್‌ ಸದಸ್ಯರು ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಈ ಬಗ್ಗೆ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಸಮಸ್ಯೆಗಳು ಮಾತ್ರ ಪರಿಹಾರವಾಗಿಲ್ಲ.

ಜನರು ಕಷ್ಟದಲ್ಲಿ ಜೀವನ ನಡೆಸಬೇಕಾಗಿದೆ. ಆದ್ದರಿಂದ ಈಗಲಾದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಮೂಲಸೌಕರ್ಯ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳಾದ ವೆಂಕಟೇಶ, ಮಹಿಬೂಬಸಾಬ, ರಾಮಣ್ಣ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT