ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ಜೀವಭಯದಲ್ಲಿ ಪಾಠ ಕೇಳುವ ಸ್ಥಿತಿ

Last Updated 7 ಅಕ್ಟೋಬರ್ 2017, 10:12 IST
ಅಕ್ಷರ ಗಾತ್ರ

ಹುಳಿಯಾರು: ಚಿಕ್ಕನಾಯಕಹಳ್ಳಿ ತಾಲ್ಲೂಕಿನಾದ್ಯಂತ ಕೆಲ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಜೀವಭಯದಲ್ಲಿ ಪಾಠ ಕೇಳುವ ಸ್ಥಿತಿ
ನಿರ್ಮಾಣವಾಗಿದೆ. ಕಳೆದ ಸುಮಾರು 5 ವರ್ಷದಿಂದ ಹೊಸ ಕಟ್ಟಡಗಳು ನಿರ್ಮಾಣವಾಗದೆ ಇರುವ ಶಿಥಿಲಾವಸ್ಥೆಯ ಕೊಠಡಿಗಳಲ್ಲಿಯೇ ವಿದ್ಯಾರ್ಥಿಗಳು ಕುಳಿತು ಪಾಠ ಕೇಳುವಂತಾಗಿದೆ.

ಹುಳಿಯಾರು ಹೋಬಳಿಯ ಗಾಣಧಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳಿವೆ. ಅವುಗಳಲ್ಲಿ ಸುಮಾರು 6 ಕೊಠಡಿಗಳು ಶಿಥಿಲಗೊಂಡು ಉಳಿದ ಕೊಠಡಿಗಳಲ್ಲಿ ಕುಳಿತು ಮಕ್ಕಳು ಪಾಠ ಕೇಳುತ್ತಾರೆ. ಕಳೆದ 4 ದಿವಸಗಳ ಹಿಂದೆ ಕೊಠಡಿಯೊಂದರ ಗೋಡೆ ಹೊರ ಭಾಗಕ್ಕೆ ಕುಸಿದು ಬಿದ್ದಿದೆ.

ಕೆಂಪರಾಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತೀರ್ಥಪುರ ಸರ್ಕಾರಿ ಪ್ರೌಢಶಾಲೆ ಕೇವಲ ಉದಾಹರಣೆಗಳಷ್ಟೆ. ತಾಲ್ಲೂಕಿನ ಬಹುತೇಕ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಜೀವದ ಹಂಗು ತೊರೆದು ಕುಳಿತುಕೊಳ್ಳುತ್ತಿದ್ದಾರೆ.

ಶಿಕ್ಷಕರು ಸಹ ಒಲ್ಲದ ಮನಸ್ಸಿನಿಂದ ವಿಧಿಯಿಲ್ಲದೆ ಮಕ್ಕಳನ್ನು ಅಂತಹ ಕೊಠಡಿಗಳಲ್ಲಿ ಧೈರ್ಯ ಮಾಡುತ್ತಿದ್ದಾರೆ. 2012ರಿಂದ ಹೊಸ ಕಟ್ಟಡ ನಿರ್ಮಾಣ ಇಲ್ಲ. ಕೇಂದ್ರ ಸರ್ಕಾರ 2001ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯನ್ನು ರೂಪಿಸಿತು. ಈ ವೇಳೆ ಮಕ್ಕಳ ಅರ್ಹತೆ ಆಧಾರದ ಮೇಲೆ ಪ್ರತಿಯೊಂದು ಶಾಲೆಗಳಲ್ಲೂ ಹೊಸ ಕಟ್ಟಡಗಳ ನಿರ್ಮಾಣ ಹಾಗೂ ಹಳೆ ಕೊಠಡಿಗಳ ನವೀಕರಣ ನಡೆಯಿತು. 2012ರ ವರೆಗೂ ಈ ಪ್ರಕ್ರಿಯೆ ನಡೆದೆ ಇತ್ತು.

ಆ ನಂತರ ಕೇಂದ್ರ ಸರ್ಕಾರ ಸರ್ವ ಶಿಕ್ಷ ಅಭಿಯಾನದಡಿ ಕೊಠಡಿ ನಿರ್ಮಾಣ ಹಾಗೂ ನವೀಕರಣಕ್ಕೆ ಹಣ ಮಂಜೂರು ಮಾಡುವುದನ್ನು ನಿಲ್ಲಿಸಿದೆ. ಇದರಿಂದ ಈ ಹಿಂದೆ ನಿರ್ಮಾಣ ಮಾಡಿದ್ದ ಕೊಠಡಿಗಳು ಸೇರಿದಂತೆ ಇತ್ತೀಚೆಗೆ ನಿರ್ಮಾಣಗಳು ಸಹ ಶಿಥಿಲಗೊಂಡಿವೆ.

ಸರ್ವ ಶಿಕ್ಷ ಅಭಿಯಾನ ಯೋಜನೆ ಆರಂಭಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವತಿಯಿಂದ ಕೊಠಡಿಗಳ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿತ್ತು. ಸರ್ವ ಶಿಕ್ಷ ಅಭಿಯಾನ ಆರಂಭವಾದ ಮೇಲೆ ಜನಪ್ರತಿನಿಧಿಗಳು ಶಾಲಾ ಕೊಠಡಿಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಿದರು. ಆದರೆ ಸರ್ವ ಶಿಕ್ಷ ಅಭಿಯಾನದಿಂದ ಕೊಠಡಿಗಳ ನಿರ್ಮಾಣ ಸಂಪೂರ್ಣ ನಿಂತು ಹೋಗಿ 5 ವರ್ಷಗಳಾಗಿವೆ. ಜನಪ್ರತಿನಿಧಿಗಳನ್ನು ಕೇಳಿದರೆ ಸರ್ವ ಶಿಕ್ಷ ಅಭಿಯಾನದ ನೆಪವೊಡ್ಡಿ ಅನುದಾನ ಹಾಕಲು ಹಿಂದೇಟು ಹಾಕುತ್ತಿದ್ದಾರೆ.

52 ಶಾಲೆಗಳು ದುರಸ್ತಿ: ತಾಲ್ಲೂಕಿನಲ್ಲಿ ಒಂದು ಅಂಕಿ ಅಂಶದ ಪ್ರಕಾರ ಸುಮಾರು 52 ಶಾಲೆಗಳು ದುರಸ್ತಿಯಾಗಬೇಕಿದೆ. ಹೊಸ ಕಟ್ಟಡಗಳು ಒಟ್ಟು 11 ಶಾಲೆಗೆ 15 ಕೊಠಡಿಗಳು, ಸುಮಾರು 22 ಶೌಚಾಲಯಗಳು ತುರ್ತು ಬೇಕಾಗಿವೆ. ಒಟ್ಟಾರೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳ ಜೀವಕ್ಕೆ ಬೆಲೆಯಿಲ್ಲದಂತಾಗಿದೆ ಎಂದು ಗಾಣಧಾಳು ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಕಂಠ ಹೇಳಿದರು.

ಅಂಕಿ ಅಂಶ
ದುರಸ್ತಿ ಇರುವ ಶಾಲೆಗಳ ಸಂಖ್ಯೆ: 45
ಸಂಪೂರ್ಣ ಶಿಥಿಲ ಕೊಠಡಿಗಳ ಸಂಖ್ಯೆ: 17
ಹೆಚ್ಚುವರಿ ಶೌಚಾಲಯ (ಹೆಣ್ಣು ಮಕ್ಕಳಿಗೆ) ಸಂಖ್ಯೆ: 22
ಗಂಡು ಮಕ್ಕಳಿಗೆ: 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT