ಯೆಲ್ಲೊಸ್ಟೋನ್ ಎಂಬ ವಿಸ್ಮಯ ತಾಣ

7

ಯೆಲ್ಲೊಸ್ಟೋನ್ ಎಂಬ ವಿಸ್ಮಯ ತಾಣ

Published:
Updated:
ಯೆಲ್ಲೊಸ್ಟೋನ್ ಎಂಬ ವಿಸ್ಮಯ ತಾಣ

–ಅಕ್ಷರಿ ಜಿ.ಎ.

ಅಮೆರಿಕ ದೇಶದಲ್ಲಿ ನನಗೆ ಬಹಳ ಇಷ್ಟವಾದ ಸ್ಥಳಗಳಲ್ಲಿ ಮಾರ್ಚ್ 1, 1872ರಲ್ಲಿ ಸ್ಥಾಪನೆಯಾದ ಯೆಲ್ಲೊಸ್ಟೋನ್ ರಾಷ್ಟೀಯ ಉದ್ಯಾನ (Yellowstone National Park) ಅಗ್ರಸ್ಥಾನ ಪಡೆದಿದೆ. ಅಮೆರಿಕ ದೇಶದ ಮೊದಲ ರಾಷ್ಟ್ರೀಯ ಉದ್ಯಾನ ಇದು. ಈ ಉದ್ಯಾನವು ವ್ಯೋಮಿಂಗ್, ಮೊಂಟಾನಾ ಮತ್ತು ಇದಾಹೊ ರಾಜ್ಯಗಳಲ್ಲಿ ನೆಲೆಗೊಂಡಿದೆ.

ಇಲ್ಲಿ ಉಗಿಯನ್ನು ಚಿಮ್ಮಿಸುವ ಗೈಸರ್ (Geyser), ಬಿಸಿನೀರಿನ ಬುಗ್ಗೆಗಳು (hot springs) ಸಹಸ್ರಾರು ಸಂಖ್ಯೆಯಲ್ಲಿ ಇವೆ. ಹಸಿರಿನಿಂದ ತುಂಬಿದ ಕಣಿವೆಗಳಿಗೆ ಈ ಪ್ರದೇಶ ಹೆಸರುವಾಸಿಯಾಗಿದೆ. ಇಲ್ಲಿಗೆ ಹೋಗಬೇಕೆಂಬ ಕನಸು ನನ್ನ ಪತಿ ಮಹೇಶ್ ಹಾಗೂ ನನಗೆ ಬಹುದಿನಗಳಿಂದ ಇತ್ತು. ಕನಸಿಗೆ ಪುಷ್ಟಿ ನೀಡುವಂತೆ ನಮ್ಮ ಸ್ನೇಹಿತರು ಈ ಜಾಗಕ್ಕೆ ಹೋಗೋಣವೇ ಎಂದು ಕೇಳಿದಾಗ ನಾವು ಖುಷಿಯಿಂದ ಒಪ್ಪಿದೆವು.

ಮಾಹಿತಿಯ ಅನುಕೂಲ

ಮೊದಲ ದಿನ ಯೆಲ್ಲೊಸ್ಟೋನ್ ಪ್ರವಾಸಿ ಮಾಹಿತಿ ಕೇಂದ್ರದಲ್ಲಿ ನಮ್ಮ ಪ್ರಯಾಣದ ಕುರಿತು ಅಲ್ಲಿದ್ದ ಅಧಿಕಾರಿಯ ಬಳಿ ವಿವರ ಪಡೆದುಕೊಂಡೆವು. ಅವರು ಉದ್ಯಾನದ ನಕ್ಷೆಯನ್ನು ನೀಡಿ ಯಾವ ಮಾರ್ಗದಲ್ಲಿ ಸಾಗಬೇಕು, ಪ್ರೇಕ್ಷಣೀಯ ಜಾಗ ನೋಡಲು ಎಷ್ಟು ನಡೆಯಬೇಕು ಇತ್ಯಾದಿ ಮಾಹಿತಿ ನೀಡಿದರು.

ಗೊತ್ತಿಲ್ಲದ ಜಾಗಗಳನ್ನು ನಾವು ಹರಸಾಹಸ ‍ಪಡದೆ, ಹುಡುಕಾಟದಲ್ಲಿ ಸಮಯ ವ್ಯರ್ಥಮಾಡದೆ ನೋಡಬೇಕಾದ ಸ್ಥಳಗಳನ್ನು ನೋಡಲು ಇದರಿಂದ ಅನುಕೂಲವಾಯಿತು. ಮೊದಲು, ವಿಶ್ವದ ಅತ್ಯಂತ ಪ್ರಸಿದ್ಧ ಓಲ್ಡ್‌ ಫೇಯ್ತ್‌ಫುಲ್ (Old Faithful) ಗೈಸರ್ ನೋಡಲು ಹೋದೆವು. ಇದು ಸರಿಸುಮಾರು 92 ನಿಮಿಷಗಳಿಗೊಮ್ಮೆ ಒಂದೂವರೆಯಿಂದ ಐದು ನಿಮಿಷಗಳವರೆಗೆ 135 ಅಡಿಗಳಷ್ಟು ಎತ್ತರಕ್ಕೆ ಸ್ಫೋಟಿಸುತ್ತದೆ.

ಹಿಂದೆ ಆದ ಸ್ಫೋಟಗಳ ಅವಧಿ ಮತ್ತು ಎರಡು ಸ್ಫೋಟಗಳ ನಡುವಿನ ಅಂತರದ ಆಧಾರದಲ್ಲಿ ಪುನಃ ಯಾವಾಗ ಗೈಸರ್‌ ಸ್ಫೋಟಿಸುತ್ತದೆ ಎಂಬ ಮಾಹಿತಿಯನ್ನು ಫಲಕಗಳಲ್ಲಿ ತೋರಿಸಲಾಗುತ್ತದೆ. ನಾವು ಇಪ್ಪತ್ತು ನಿಮಿಷ ಕಾದ ನಂತರ ಗೈಸರ್‌ನಿಂದ ನೀರು ಮೇಲೆ ಚಿಮ್ಮಿ ಸ್ಫೋಟಿಸಿತು. ಆಹಾ! ಎಂಥ ಮನಮೋಹಕ ದೃಶ್ಯ ಅದು.

ಪ್ರಕೃತಿಯ ಪವಾಡ ಬೆರಗನ್ನು ಮೂಡಿಸಿತು. ಲೆಕ್ಕವಿಲ್ಲದಷ್ಟು ಗೈಸರ್‌ಗಳು, ಎಲ್ಲಿ ನೋಡಿದರಲ್ಲಿ ಕಾಣುವ ಬಿಸಿ ನೀರಿನ ಬುಗ್ಗೆಗಳು, ಅದರಿಂದ ಹೊಗೆಯಂತೆ ಹೊರಹೊಮ್ಮುವ ಆವಿ ನೋಡುತ್ತಾ ಮರದ ಹಲಗೆಗಳನ್ನು ಹಾಕಿದ ಗೊತ್ತುಪಡಿಸಿದ ಮಾರ್ಗದಲ್ಲಿ (Boardwalk trail) ನಡೆಯುತ್ತಾ, ಮುಂದೆ ಸಾಗಿದೆವು.

ಅಮೆರಿಕದಲ್ಲಿ ತ್ರಿವರ್ಣ ಧ್ವಜ!

ವರ್ಣರಂಜಿತವಾದ ಚಿಕ್ಕ ಮತ್ತು ದೊಡ್ಡ ಬಿಸಿನೀರಿನ ಕೊಳಗಳನ್ನು ನೋಡಿದೆವು. ನೀರಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾದಿಂದ ಕೊಳ ವಿಶಿಷ್ಟ ಬಣ್ಣಗಳಿಂದ ಕೂಡಿದೆ. ಬಣ್ಣದ ಕಡಲ ತೀರದ ಉದ್ದಕ್ಕೂ ನಡೆದುಕೊಂಡು ಹೋದಂತೆ ಭಾಸವಾಯಿತು. ಅವುಗಳಲ್ಲಿ ಮಾರ್ನಿಂಗ್ ಗ್ಲೋರಿ ಪೂಲ್ (Morning glory pool) ನನ್ನನ್ನು ಸೆಳೆಯಿತು.

ಗ್ರ್ಯಾಂಡ್ ಪ್ರಿಸ್ಮಾಟಿಕ್ ಸ್ಪ್ರಿಂಗ್ಸ್ (Grand Prismatic Springs) ಅಮೆರಿಕದ ಮೊದಲ ಹಾಗೂ ಪ್ರಪಂಚದ ಮೂರನೆಯ ಅತಿದೊಡ್ಡ ಬಿಸಿನೀರಿನ ಬುಗ್ಗೆ. ನಮ್ಮ ದೇಶದ ರಾಷ್ಟ್ರಧ್ವಜದಲ್ಲಿನ (ಕೇಸರಿ, ಬಿಳಿ, ಹಸಿರು) ಬಣ್ಣಗಳನ್ನು ವರ್ಲಿಗಿಗ್ ಗೈಸರ್‌ನ (whirligig geyser) ಬಳಿ ನೋಡಿ ಪುಳಕಿತಳಾದೆ. ವಾರಾಂತ್ಯದಲ್ಲಿ ದೀರ್ಘ ರಜೆ ಇದ್ದ ಕಾರಣ ಎಲ್ಲಾ ಕಡೆ ಪ್ರವಾಸಿಗರಿದ್ದರು. ವಾಹನ ನಿಲ್ಲಿಸಲು ವ್ಯವಸ್ಥಿತವಾಗಿ ಸ್ಥಳಗಳನ್ನು ನಿಗದಿ ಮಾಡಲಾಗಿತ್ತು.

ಎರಡನೆಯ ದಿನ ಗ್ರ್ಯಾಂಡ್ ಕ್ಯಾನ್ಯನ್ ಆಫ್ ಯೆಲ್ಲೊಸ್ಟೋನ್‌ನ (Grand Canyon of Yellowstone) ಪ್ರಕೃತಿ ಸೌಂದರ್ಯ ಸವಿಯಲು ಸಜ್ಜಾದೆವು. ಅಲ್ಲಿ ಆರ್ಟಿಸ್ಟ್ ಪಾಯಿಂಟ್‌ನಿಂದ ಕಾಣುವ ಲೋಯರ್ ಫಾಲ್ಸ್ 308 ಅಡಿ ಎತ್ತರದಿಂದ, ಪರ್ವತಗಳ ಎಡೆಯಿಂದ ಧುಮ್ಮಿಕ್ಕಿ ಹರಿಯುವ ರುದ್ರ ರಮಣೀಯ ದೃಶ್ಯ ಮೈನವಿರೇಳಿಸಿತು.

ಮತ್ತೆ ಮತ್ತೆ ಹಿಂದಿರುಗಿ ನೋಡುವಂತೆ ಮಾಡುವ ಹಿಮದಿಂದ ಆವೃತವಾದ ಪರ್ವತಗಳು, ನೇರವಾಗಿ ಕಣ್ಣು ಹಾಯಿಸಿದಷ್ಟೂ ದೂರ ಕಾಣುವ ಆಳವಾದ ಕಣಿವೆಗಳು, ರಸ್ತೆಯ ಒಂದೊಂದು ತಿರುವು ದಾಟುತ್ತಿದ್ದಂತೆಯೂ ಕಾಣಸಿಗುವ ವಿಭಿನ್ನ ರೀತಿಯ ಜಾಗಗಳು, ಇಕ್ಕೆಲಗಳಲ್ಲಿ ಸಾಲು ಮರಗಳ ನಡುವೆ ಕೆತ್ತಿದಂತೆ ಇರುವ ಸುಂದರ ಹಾಗೂ ಅಚ್ಚುಕಟ್ಟಾದ ರಸ್ತೆಗಳು, ಯೆಲ್ಲೊಸ್ಟೋನ್ ನದಿ, ಜಲಪಾತಗಳ ಭೋರ್ಗರೆತ... ಈ ಅನುಭವವನ್ನು ಬಣ್ಣಿಸಲು ನನಗೆ ಪದಗಳ ಕೊರತೆ ಕಾಡುತ್ತಿದೆ! ಅವುಗಳನ್ನು ನೋಡಿಯೇ ಆನಂದಿಸಬೇಕು, ತಣಿಯಬೇಕು.

ಪ್ರವಾಸಿಗರ ಅನುಕೂಲಕ್ಕಾಗಿ...

ಆ ಸೊಬಗನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ, ಕಣ್ಣಲ್ಲಿ ತುಂಬಿಕೊಂಡ ದೃಶ್ಯಗಳು ಎಲ್ಲಿ ಮರೆಯಾಗಿಬಿಡುತ್ತವೆಯೋ ಎಂದು ಕ್ಯಾಮೆರಾ ಕಣ್ಣಲ್ಲಿಯೂ ಸೆರೆ ಹಿಡಿಯುತ್ತಾ ಆ ನೆನಪನ್ನು ಶಾಶ್ವತವಾಗಿಸಿಕೊಳ್ಳುವ ಕಾರ್ಯದಲ್ಲಿ ನಿರತರಾದೆವು. ಮುಂದೆ ಸಿಗುವ ಜಾಗದ ಬಗ್ಗೆ ಮಾರ್ಗಸೂಚಿ ಫಲಕಗಳು, ಕಾಡುಪ್ರಾಣಿಗಳಿರುವ ಜಾಗ ಹಾಗು ಆ ಮಾರ್ಗಗಳಲ್ಲಿ ಅನುಸರಿಸಬೇಕಾದ ವಾಹನದ ವೇಗಮಿತಿ, ನಡೆದುಕೊಂಡು ಹೋಗುವಲ್ಲಿ ನಾವು ಎಲ್ಲಿದ್ದೇವೆ ಎಂಬ ಸ್ಪಷ್ಟ ಮಾಹಿತಿಯನ್ನು ಅಲ್ಲಲ್ಲಿ ನಕಾಶೆಗಳ ವಿವರದೊಂದಿಗೆ ದಾರಿಯುದ್ದಕ್ಕೂ ವ್ಯವಸ್ಥಿತವಾಗಿ ಹಾಕಿರುವುದರಿಂದಾಗಿ ನಮ್ಮಂತಹ ಪ್ರವಾಸಿಗರಿಗೆ ಅನುಕೂಲವಾಯಿತು. ಎಲ್ಲಿಯೂ ದಾರಿ ತಪ್ಪದೆ, ಯಾವ ಭೀತಿಯೂ ಇಲ್ಲದೆ ಯೆಲ್ಲೊಸ್ಟೋನ್ ಎಂಬ ಕನಸಿನ ಲೋಕದ ಪ್ರವಾಸ ಯಶಸ್ವಿಯಾಗಿ ಪೂರೈಸಲು ಸಾಧ್ಯವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry