ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಪಕ ರಸ್ತೆಯಿಲ್ಲದೆ ಗ್ರಾಮಸ್ಥರ ಪರದಾಟ

Last Updated 7 ಅಕ್ಟೋಬರ್ 2017, 10:16 IST
ಅಕ್ಷರ ಗಾತ್ರ

ಪಾವಗಡ: ಪ್ರತಿ ನಿತ್ಯ ಮಕ್ಕಳು ಶಾಲಾ ಕಾಲೇಜಿಗೆ ಹೋಗಿ ಬರುವವರೆಗೆ ಆತಂಕ ಮನೆ ಮಾಡಿರುತ್ತದೆ. ರಾತ್ರಿ ವೇಳೆಯಲ್ಲಿ ತುರ್ತಾಗಿ ಆಸ್ಪತ್ರೆಗೆ ಹೋಗುವವರ ಗೋಳು ಹೇಳಲಾಗದು. ಸೀಮೆ ಜಾಲಿ ಪೊದೆಯಿಂದ ಕಾಡು ಹಂದಿಗಳು ಹಠಾತ್ತನೆ ದಾರಿ ಹೋಕರ ಮೇಲೆ ಎರಗಿ ಗಾಯಗೊಳಿಸಿವೆ.

ಇದು ತಾಲ್ಲೂಕಿನ ರೊಪ್ಪ ಗ್ರಾಮ ಪಂಚಾಯಿತಿಗೆ ಸೇರುವ ಹುಲಿಬೆಟ್ಟ ತಾಂಡ ಗ್ರಾಮಸ್ಥರ ನಿತ್ಯದ ಅಳಲು. ಗ್ರಾಮದಲ್ಲಿ ಸುಮಾರು 100 ಮನೆಗಳಿವೆ. 600 ಜನಸಂಖ್ಯೆ ಇದೆ.
ಗ್ರಾಮಕ್ಕೆ ರೊಪ್ಪದಿಂದ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತದೆ.

ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ರೊಪ್ಪ ಮುಖ್ಯ ರಸ್ತೆ ತಲುಪುವವರೆಗೆ ಎರಡು ಕಾಲುಗಳನ್ನು ಕೆಸರಿನಲ್ಲಿ ಆಸರೆಯಾಗಿಟ್ಟುಕೊಂಡು ಹೋಗಬೇಕು. ಸ್ವಲ್ಪ ಯಾಮಾರಿದರೂ ಬಿದ್ದು ಗಾಯಗಳಾಗುತ್ತವೆ ಎನ್ನುವುದು ಗ್ರಾಮದ ವಾಹನ ಚಾಲಕರ ಆರೋಪ.

ಮಳೆ ಸುರಿದ ಐದಾರು ದಿನಗಳ ಕಾಲ ತುರ್ತು ವಾಹನ ಸೇರಿದಂತೆ ನಾಲ್ಕು ಚಕ್ರಗಳ ವಾಹನ ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿಲ್ಲ. ಗ್ರಾಮಕ್ಕೆ ಹೋಗಿ ಬರುವ ಪಾದಾಚಾರಿಗಳ ಪಾಡು ಹೇಳತೀರದು. ಈ ರಸ್ತೆಯಲ್ಲಿ ಬೀದಿ ದೀಪಗಳಿಲ್ಲ. ಕಗ್ಗತ್ತಲ ರಾತ್ರಿಯಲ್ಲಿ ಸಂಚರಿಸುವವರು ವಿಷ ಜಂತುಗಳ ಕಡಿತಕ್ಕೆ ಗ್ರಾಮದ ಸಾಕಷ್ಟು ಮಂದಿ ಸಿಲುಕಿದ್ದಾರೆ.

ಗ್ರಾಮದಿಂದ ಪಟ್ಟಣದ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ರಸ್ತೆ ಬದಿಯಲ್ಲಿ ಜಾಲಿ ಪೊದೆಗಳಿರುವುದರಿಂದ ಎತ್ತಲಿಂದ ಯಾವ ವನ್ಯ ಪ್ರಾಣಿ ಬರುವುದೋ ಎಂಬ ಆತಂಕದಲ್ಲಿ ಗ್ರಾಮಸ್ಥರು ಸಂಚರಿಸಬೇಕಿದೆ. ಹಲ ಬಾರಿ ಕಾಡು ಹಂದಿ, ಕರಡಿ ದಾಳಿಗೆ ದಾರಿ ಹೋಕರು ತುತ್ತಾಗಿದ್ದಾರೆ.
ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು. ಶೀಘ್ರ ಗ್ರಾಮಕ್ಕೆ ಸಮರ್ಪಕ ರಸ್ತೆ ಹಾಕಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

ಅಂಕಿ ಅಂಶ
800 ಗ್ರಾಮದಲ್ಲಿರುವ ಜನಸಂಖ್ಯೆ
100 ಗ್ರಾಮದಲ್ಲಿರುವ ಮನೆಗಳು
150 ಪಟ್ಟಣಕ್ಕೆ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT