ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸರ್ಗ ಸೃಷ್ಟಿಯ ವಿಸ್ಮಯ ದ್ವಯ

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

1. ಗೋಸುಂಬೆಯ ವರ್ಣ ವಿಸ್ಮಯ
‘ಗೋಸುಂಬೆ’. ಅದೊಂದು ಬಗೆಯ ಹಲ್ಲಿ. ಗೋಸುಂಬೆಗಳಿಗೇ ‘ಊಸರವಳ್ಳಿ’ ಎಂಬ ಹೆಸರು ಕೂಡ. ಆಫ್ರಿಕ ಖಂಡ ಮತ್ತು ಅದರ ಸನಿಹದ ಮಡಗಾಸ್ಕರ್ ದ್ವೀಪ (ಚಿತ್ರ-1 ಭೂಪಟದಲ್ಲಿ ಗಮನಿಸಿ) ಗೋಸುಂಬೆಗಳ ಪ್ರಧಾನ ನೆಲೆ. ಒಂದಂಗುಲಕ್ಕೂ ಕಡಿಮೆ ಉದ್ದದಿಂದ ಎರಡು ಅಡಿ ಉದ್ದದವರೆಗೂ ಅವುಗಳದು ವಿಧ ವಿಧ ಅಳತೆ. ಎಲ್ಲ ಗೋಸುಂಬೆಗಳ 40% ರಷ್ಟು ಪ್ರಭೇದಗಳು ಮಡಗಾಸ್ಕರ್‌ನಲ್ಲೇ ನೆಲೆಸಿವೆ. ಒಂದೇ ಒಂದು ಪ್ರಭೇದ ಏಷ್ಯಾದಲ್ಲಿ-ಭಾರತದಲ್ಲೂ ಕೂಡ - ನೈಸರ್ಗಿಕ ವಾಸ್ತವ್ಯ ಹೊಂದಿದೆ.

ಗೋಸುಂಬೆಯ ವಿಸ್ಮಯಕರ ವೈವಿಧ್ಯಗಳು ಹಲವಾರು: ‘ಅದರದು ಇಡೀ ಶರೀರಕ್ಕಿಂತ ಉದ್ದವಾದ ನಾಲಿಗೆ; ಅಂಟು ತುದಿಯ ಆ ನಾಲಿಗೆಯನ್ನು ಗುರಿಯಿಟ್ಟು ಕ್ಷಣಾರ್ಧದಲ್ಲಿ ಬಲಿಕೀಟಗಳ ಮೇಲೆಸೆದು ಬಾಯಿಗೆ ಸೆಳೆದುಕೊಳ್ಳುವ ಅಚ್ಚರಿಯ ಬೇಟೆ ಸಾಮರ್ಥ್ಯ (ಚಿತ್ರ-3). ಮುಖದಲ್ಲಿ ಫಿರಂಗಿಗಳಂತೆ ಉಬ್ಬಿನಿಂತ ಎರಡೂ ಕಣ್ಣುಗಳನ್ನು ಪ್ರತ್ಯೇಕವಾಗಿ ತಿರುಗಿಸಬಲ್ಲ, ಭಿನ್ನ ಭಿನ್ನ ನೋಟಗಳನ್ನು ಗ್ರಹಿಸಬಲ್ಲ ತೀಕ್ಷ್ಣ ದೃಷ್ಟಿ ಶಕ್ತಿ. ಇಕ್ಕಳದಂತಹ ಕಾಲ್ಬೆರಳುಗಳು; ಹಣೆಯಿಂದ, ಮೂಗಿನಿಂದ ಚಾಚಿ ಬೆಳೆದ ವಿಧ ವಿಧ ವಿಚಿತ್ರ ಅಲಂಕಾರ; ಸುರುಳಿಯಾಗಿ ಸುತ್ತಿಕೊಳ್ಳಬಲ್ಲ ಬಾಲ.... ಇತ್ಯಾದಿ (ಚಿತ್ರ 4, 5, 6 ರಲ್ಲಿ ಗಮನಿಸಿ)'.

ಅವೆಲ್ಲಕ್ಕಿಂತ ಮಿಗಿಲಾದದ್ದು ಗೋಸುಂಬೆಯ ಬಣ್ಣ ಬದಲಿಸುವ ಸಾಮರ್ಥ್ಯ; ಅಗತ್ಯಗಳಿಗನುಗುಣವಾಗಿ, ಕ್ಷಿಪ್ರವಾಗಿ, ಮಾಯಾಮಯವಾಗಿ, ಲೀಲಾಜಾಲವಾಗಿ ಬದಲಾಗುವ ಇಡೀ ಶರೀರದ ವರ್ಣ ಚಿತ್ತಾರ; ಕೆಂಪು, ಹಸಿರು, ಹಳದಿ, ನೀಲಿ ಇತ್ಯಾದಿ ನಾನಾ ಬಣ್ಣಗಳ ಪಟ್ಟೆ- ಚುಕ್ಕಿ-ತೇಪೆಗಳ ಅಲಂಕಾರ (ಚಿತ್ರಗಳಲ್ಲಿ ಗಮನಿಸಿ). ಈ ಗುಣದಿಂದಲೇ ಗೋಸುಂಬೆ ಅತ್ಯಂತ ವಿಶಿಷ್ಟ. ಎಷ್ಟೆಂದರೆ ಸಂದರ್ಭಕ್ಕೆ ಸರಿಯಾಗಿ ನಿಲುವುಗಳನ್ನೇ ಬದಲಿಸುವ ಕೆಲ ಮನುಷ್ಯರ ಸಮಯ ಸಾಧಕತನಕ್ಕೆ ಗೋಸುಂಬೆ ಸಮಾನಾರ್ಥಕ; ಬಹು ವ್ಯಾಪಕ ಸಾರ್ವತ್ರಿಕ ರೂಪಕ ಕೂಡ.

ಇಲ್ಲೊಂದು ಅತ್ಯಂತ ಕುತೂಹಲದ ಪ್ರಶ್ನೆ: ‘ಗೋಸುಂಬೆಗಳು ಹೀಗೆ ಬಣ್ಣ ಬದಲಿಸಿಕೊಳ್ಳುವುದು ಏಕೆ? ಹೇಗೆ?
ಬಣ್ಣ ಬದಲಿಸಿಕೊಳ್ಳುವುದರಿಂದ ಗೋಸುಂಬೆಗಳಿಗೆ ದ್ವಿವಿಧ ಪ್ರಯೋಜನಗಳಿವೆ. ಈ ಅದ್ಭುತ ಸಾಮರ್ಥ್ಯ ಬಳಸಿ ಗೋಸುಂಬೆಗಳು ತಾವಿರುವ ಪರಿಸರದೊಡನೆ ಎಷ್ಟು ಬೆರೆತುಬಿಡುತ್ತವೆಂದರೆ (ಚಿತ್ರ-2) ಕಣ್ಣೆದುರಿಗೇ ಇರುವ ಶತ್ರುಗಳಿಗೂ, ಸನಿಹಕ್ಕೇ ಬಂದ ಬಲಿ ಕೀಟಗಳಿಗೂ ಅವು ಗೋಚರಿಸುವುದೇ ಇಲ್ಲ. ಹಾಗಾಗಿ ಆತ್ಮರಕ್ಷಣೆಗೆ ಮತ್ತು ಆಹಾರ ಗಳಿಕೆಗೆ ಈ ಸಾಮರ್ಥ್ಯ ಅತ್ಯಂತ ಉಪಯುಕ್ತ.

ಎರಡನೆಯದಾಗಿ, ತಾವು ಎದುರಿಸುವ ಬಲಾಢ್ಯರಾದ, ಪ್ರತಿಸ್ಫರ್ಧಿಗಳಾದ ಅಥವಾ ಪ್ರಣಯಾಸಕ್ತರಾದ ಇತರ ಗೋಸುಂಬೆಗಳಿಗೆ ತಮ್ಮ ಭಾವನೆಗಳನ್ನು- ಎಂದರೆ ಕೋಪ, ಆತಂಕ, ಅನುನಯ, ಅಸಹನೆ, ಯುದ್ಧ ಸನ್ನದ್ಧತೆ, ಉತ್ಸುಕತೆ, ಪ್ರಣಯಾಸಕ್ತಿ, ಶರಣಾಗತಿ ಇತ್ಯಾದಿಗಳನ್ನು - ಶರೀರದ ವರ್ಣ ಬದಲಾವಣೆಗಳ ಮೂಲಕ ಗೋಸುಂಬೆಗಳು ಅಭಿವ್ಯಕ್ತಿಸುತ್ತವೆ. ಉದಾಹರಣೆಗೆ ಸೋಲನ್ನು ಒಪ್ಪಿಕೊಂಡಾಗ ಕಪ್ಪು ವರ್ಣ ತಾಳುವ ಅದೇ ಗೋಸುಂಬೆ ನಿರಾಸಕ್ತ-ನಿದ್ರಾಸಕ್ತವಾದಾಗ ಗಿಡ-ಮರಗಳ ನಡುವೆ ಹಸಿರು-ಕಂದು ಬಣ್ಣಗಳನ್ನು ತಾಳಿ ಅಗೋಚರವಾಗುತ್ತದೆ. ಕೋಪ,ರೋಷ, ಯುದ್ಧೋತ್ಸಾಹಗಳನ್ನು ಪ್ರಕಟಿಸಲು ಗಾಢ ಕೆಂಪು, ಹಳದಿ, ಕಿತ್ತಳೆ ಚಿತ್ತಾರಗಳನ್ನು ಧರಿಸುತ್ತದೆ!

ಇದೆಲ್ಲ ಗೋಸುಂಬೆಗಳಿಗೆ ಸಾಧ್ಯ ಹೇಗೆ?
ವಿಸ್ಮಯ ಏನೆಂದರೆ, ಗೋಸುಂಬೆಗಳ ಚರ್ಮದ ಕೆಳಗೆ ‘ಕ್ರೊಮೆಟೋಫೋರ್’ಗಳೆಂಬ ತ್ರಿವಿಧ ವಿಶೇಷ ವರ್ಣಭರಿತ ಜೀವಕೋಶಗಳು ಹರಡಿ ನಿಂತಿವೆ. ಕಪ್ಪು ಬಣ್ಣದ ‘ಮೆಲನಿನ್’ನಿಂದ ಕೂಡಿದ ‘ಮೆಲನೊಫೋರ್’ಗಳು, ಹಳದಿ ವರ್ಣ ದ್ರವ್ಯದ ‘ಕ್ಸಾಂತೋಫೋರ್’ಗಳು ಮತ್ತು ಕೆಂಪು ವರ್ಣ ತುಂಬಿದ ’ಎರಿಥ್ರೋಫೋರ್’ಗಳೆಂಬ ಈ ಜೀವಕೋಶಗಳ ವೈಶಿಷ್ಟ್ಯ ಏನೆಂದರೆ ಅವಕ್ಕೆ ಹಿಗ್ಗುವ-ಕುಗ್ಗುವ, ಅರಳುವ-ಮುದುಡುವ ಸಾಮರ್ಥ್ಯ ಇದೆ. ಅವು ಹಿಗ್ಗಿದಾಗ ಅವುಗಳಲ್ಲಿನ ವರ್ಣಗಳು ಮತ್ತು ಅವುಗಳ ಸಂಯೋಜಿತ ವರ್ಣಗಳು - ಕಂದು, ಕೆಂಪು, ಕಪ್ಪು, ಹಸಿರು, ಹಳದಿ, ಕಿತ್ತಳೆ, ನೇರಿಳೆ ಇತ್ಯಾದಿ- ಗೋಚರವಾಗುತ್ತವೆ. ಅದೇ ಜೀವಕೋಶಗಳು ಕುಗ್ಗಿದಾಗ ಅವು ನಿರ್ವರ್ಣವಾಗಿ ಬೆಳ್ಳಗೆ ಕಾಣುತ್ತವೆ. ಗೋಸುಂಬೆಯ ಚರ್ಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕಿಕ್ಕಿರಿದು ಹರಡಿರುವ ಈ ಜೀವಕೋಶಗಳ ಪ್ರಚೋದನೆಯಿಂದ ವಿಧ ವಿಧ ಬಣ್ಣಗಳ ಚುಕ್ಕಿ-ಗೆರೆ -ಪಟ್ಟೆ-ತೇಪೆ ಇತ್ಯಾದಿ ಹೇರಳ ಚಿತ್ತಾರಗಳು ಮೂಡಬಲ್ಲವೆಂಬುದು ಸ್ಪಷ್ಟ ತಾನೇ?

ಕ್ರೋಮೇಟೋಫೋರ್‌ಗಳನ್ನು ಪ್ರಚೋದಿಸುವ ಕೆಲಸವನ್ನು ಗೋಸುಂಬೆಯ ಶರೀರದಲ್ಲಿ ಸ್ರವಿಸುವ ಹಾರ್ಮೋನುಗಳು ನರಮಂಡಲದ ಮೂಲಕನಿರ್ವಹಿಸುತ್ತವೆ. ಗೋಸುಂಬೆಯ ಮಾನಸಿಕ ಸ್ಥಿತಿ, ಭಾವನೆಗಳು ಮತ್ತು ಪಾರಿಸರಿಕ ಪರಿಸ್ಥಿತಿಗಳನ್ನಾಧರಿಸಿ ಅದರ ದೇಹದಲ್ಲಿ ವಿಧ ವಿಧ ನಿರ್ದಿಷ್ಟ ಹಾರ್ಮೋನುಗಳು ಉತ್ಪಾದನೆಗೊಂಡು ನಿರ್ದಿಷ್ಟ ಪ್ರಮಾಣಗಳಲ್ಲಿ ರಕ್ತಕ್ಕೆ ಬೆರೆಯುತ್ತವೆ. ಪರಿಣಾಮವಾಗಿ ಗೋಸುಂಬೆಯ ಇಡೀ ಶರೀರದ ವರ್ಣ ವಿನ್ಯಾಸ ಅಗತ್ಯಕ್ಕೆ ತಕ್ಕಂತೆ ತಂತಾನೇ ಬದಲಾಗುತ್ತದೆ. ಎಂಥ ವಿಸ್ಮಯದ ವಿದ್ಯಮಾನ! ಅಲ್ಲವೆ?

* * *

2. ಜೆಲ್ಲಿ ಮೀನಿನ ದೇಹ ವಿಸ್ಮಯ
‘ಜೆಲ್ಲಿ ಮೀನು’ - ಅದೊಂದು ಸಾಗರ ಪ್ರಾಣಿ. ವಿಚಿತ್ರದ, ವಿಸ್ಮಯದ, ತುಂಬ ವೈವಿಧ್ಯದ, ತೀವ್ರ ಅಪಾಯಕಾರಿಯೂ ಆದ, ಜೊತೆಗೆ ಸಾಗರ ಜೀವ ಜಾಲದಲ್ಲಿ ಭಾರೀ ಮಹತ್ವವನ್ನೂ ಪಡೆದಿರುವ ಪ್ರಾಣಿ ಅದು!

ವಿಚಿತ್ರ ಏಕೆಂದರೆ, ಮೊದಲಿಗೆ ಜೆಲ್ಲಿ ಮೀನು ಕೇವಲ ಹೆಸರಿನಲ್ಲಷ್ಟೇ ಮೀನು. ವಾಸ್ತವವಾಗಿ ಶರೀರ ರಚನೆಯಲ್ಲಿ, ರೂಪದಲ್ಲಿ, ಆಕಾರದಲ್ಲಿ, ಈಜುವ ಕ್ರಮದಲ್ಲಿ, ಜೈವಿಕ ಸ್ವರೂಪದಲ್ಲಿ ಇತ್ಯಾದಿ ಯಾವುದೇ ಗುಣದಲ್ಲಾಗಲೀ, ಲಕ್ಷಣದಲ್ಲಾಗಲೀ ಮೀನುಗಳಿಗೂ ಜೆಲ್ಲಿ ಮೀನುಗಳಿಗೂ ಯಾವ ಸಾಮ್ಯವೂ ಇಲ್ಲ; ಯಾವುದೇ ಸಂಬಂಧವೂ ಇಲ್ಲ! ಜೆಲ್ಲಿ ಮೀನುಗಳದು ಒಂದು ‘ಗಂಟೆ’ಯಂತಹ ಅಥವಾ ತೆರೆದ ಪ್ಯಾರಾಶೂಟ್ ನಂತಹ ಆಕಾರ; ಅದರ ತಳದಲ್ಲೊಂದು ರಂಧ್ರ - ಅದೇ ಜೆಲ್ಲಿ ಮೀನಿನ ಬಾಯಿ. ಆ ಬಾಯನ್ನು ಪರಿವರಿಸಿ ಬೆಳೆದ ದಾರ ದಾರದಂತಹ ಅಥವಾ ತೆಳ್ಳನ್ನ ಹಗ್ಗದಂತಹ ಉದ್ದುದ್ದವಾದ ಹೇರಳ ಚಾಚು ಕೈಗಳು (ಟೆಂಟಕಲ್ಸ್); ಪ್ರತಿಯೊಂದರಲ್ಲೂ ಉದ್ದಕ್ಕೂ ಅಸಂಖ್ಯ ಕುಟುಕು ಕೋಶಗಳು.

ಬಾಯೊಳಕ್ಕೆ ನೀರನ್ನೆಳೆದು, ಅದನ್ನೇ ರಭಸವಾಗಿ ಉಗಿಯುತ್ತ ನೀರಲ್ಲಿ ಜೆಲ್ಲಿ ಮೀನಿನ ಈಜಾಟ-ಓಡಾಟ. ಜೆಲ್ಲಿ ಮೀನಿನ ಶರೀರದ್ದು ನೀರಿನದೇ ಬಣ್ಣ; ಬಹು ಪಾಲು ನಿರ್ವರ್ಣ. ಏಕೆಂದರೆ ಅದರ ಶರೀರದ ಮೇಲ್ಮೈ ಎರಡು ಪದರಗಳಿಂದ ರಚನೆಗೊಂಡಿದೆ. ‘ಎಕ್ಟೋಡರ್ಮ್ ಮತ್ತು ಎಂಡೋಡರ್ಮ್’ (ಹೊರ ಚರ್ಮ ಮತ್ತು ಒಳ ಚರ್ಮ) ಗಳೆಂಬ ಈ ಪದರಗಳ ನಡುವೆ ಇರುವ ‘ಮೀಸೋಗ್ಲೋಯಿಯಾ’ ಎಂಬೊಂದು ಪದರ ಪಾರದರ್ಶಕವಾದ, ಸಾಂದ್ರ ದ್ರವ ರೂಪದ ‘ಜೆಲ್ಲಿ’ಯನ್ನು ಉತ್ಪಾದಿಸುತ್ತದೆ.

ಚರ್ಮದ ಎರಡೂ ಪದರಗಳ ನಡುವೆ ತುಂಬಿ ನಿಲ್ಲುವ ಈ ದ್ರವ್ಯದಿಂದಾಗಿ ಜೆಲ್ಲಿ ಮೀನಿನ ಇಡೀ ಶರೀರವೇ ಬಹುಪಾಲು ಪಾರಕ; ಹಾಗಾಗಿ ನೀರಿನಲ್ಲಂತೂ ಅದು ಅಗೋಚರ. ವಾಸ್ತವವಾಗಿ ಈ ಜೀವಿಗಳ ಶರೀರದ 95% ರಿಂದ 98% ರಷ್ಟು ಅಂಶ ಬರೀ ನೀರು ! ಜೆಲ್ಲಿ ಮೀನಿನ ವೈಚಿತ್ರ್ಯಗಳು ಅಷ್ಟೇ ಅಲ್ಲ. ಈ ಪ್ರಾಣಿಗಳ ದೇಹದಲ್ಲಿ ಪ್ರತ್ಯೇಕ ಜೀರ್ಣಾಂಗ ವ್ಯೂಹ ಇಲ್ಲ; ಶ್ವಾಸಾಂಗ ವ್ಯೂಹ ಇಲ್ಲ; ಕೇಂದ್ರೀಯ ನರ ಮಂಡಲ ಇಲ್ಲ. ಬಹು ಪ್ರಭೇದಗಳಿಗೆ ಚಕ್ಷುಗಳೂ ಇಲ್ಲ, ಶ್ರವಣಾಂಗವೂ ಇಲ್ಲ. ಹಾಗೆಲ್ಲ ಇದ್ದೂ ಜೆಲ್ಲಿ ಮೀನುಗಳು ಕಡಲಿನಾವಾರದ ಬಹು ಯಶಸ್ವೀ ಪ್ರಾಣಿಗಳಾಗಿವೆ!

ಇಷ್ಟೆಲ್ಲ ವಿಚಿತ್ರ ಜೀವಿಗಳಾಗಿರುವ ಜೆಲ್ಲಿ ಮೀನುಗಳ ವಿಸ್ಮಯ ಏನೆಂದರೆ, ಅವು ಧರೆಯ ಕಡಲಿನಾವಾರದಲ್ಲಿ ಈಗ್ಗೆ ಏಳು ನೂರು ದಶಲಕ್ಷ ವರ್ಷ ಹಿಂದಿನಿಂದ ಅಸ್ತಿತ್ವದಲ್ಲಿವೆ; ಯಶಸ್ವೀ ಜೀವಿಗಳಾಗಿವೆ ಕೂಡ. ಹಾಗಾಗಿ ಜೆಲ್ಲಿ ಮೀನುಗಳು ‘ಬಹು ಅಂಗಗಳ ಶರೀರದ ಅತ್ಯಂತ ಪ್ರಾಚೀನ ಪ್ರಾಣಿ’ ಎಂಬ ಅದ್ಭುತದ ದಾಖಲೆಯನ್ನೂ ಸ್ಥಾಪಿಸಿವೆ! ಜೆಲ್ಲಿ ಮೀನುಗಳು ‘ಅಕಶೇರುಕ’ ಪ್ರಾಣಿವರ್ಗಕ್ಕೆ- ಎಂದರೆ ಬೆನ್ನೆಲುಬಿಲ್ಲದ ಪ್ರಾಣಿಗಳ ವರ್ಗಕ್ಕೆ - ಸೇರಿವೆ. ಹೈಡ್ರಾಗಳು, ಹವಳದ ಜೀವಿಗಳು ಇತ್ಯಾದಿಗಳ ‘ಸ್ನೈಡೇರಿಯನ್’ ಗುಂಪಿಗೇ ಸೇರಿರುವ ಜೆಲ್ಲಿ ಮೀನುಗಳಲ್ಲಿ ಸಮೀಪ 1800 ಪ್ರಭೇದಗಳಿವೆ (ಜೆಲ್ಲಿ ಮೀನುಗಳ ಕೆಲ ಪ್ರಭೇದಗಳನ್ನು ಚಿತ್ರ 7 ರಿಂದ 13ರಲ್ಲಿ ಗಮನಿಸಿ).

ಸಹಜವಾಗಿಯೇ ಅವುಗಳದು ಹೇರಳ ಗಾತ್ರಾಂತರ. ಅತ್ಯಂತ ಪುಟ್ಟ ಜೆಲ್ಲಿ ಮೀನುಗಳ ಗಂಟೆ ಕೇವಲ ಅರ್ಧ ಮಿಲಿಮೀಟರ್ ವ್ಯಾಸ ಇದ್ದರೆ, ಅತ್ಯಂತ ದೈತ್ಯ ಗಾತ್ರದ ಜೆಲ್ಲಿ ಮೀನುಗಳು ಏಳು ಅಡಿ ವ್ಯಾಸ ಇದ್ದು, 120 ಅಡಿ ಉದ್ದದ ದಾರ ರೂಪದ ಚಾಚು ಕೈಗಳನ್ನು ಹೊಂದಿರುತ್ತವೆ! ಜೆಲ್ಲಿ ಮೀನುಗಳ ಆಹಾರ ಕಡಲ ನೀರಲ್ಲಿ ಬಾಳುವ ಸೂಕ್ಷ್ಮ ರೂಪದ ’ಫೈಟೋ ಪ್ಲಾಂಕ್ಟನ್’ಗಳು, ಮೀನುಗಳ ಮೊಟ್ಟೆಗಳು ಮತ್ತು ಇತರ ಚಿಕ್ಕ ಜೆಲ್ಲಿ ಮೀನುಗಳು ಕೂಡ.

ನೀರಿನಲ್ಲಿ ತೇಲುತ್ತ ಅಥವಾ ಈಜುತ್ತ ಸಮೀಪ ಬರುವ ಬಲಿಯನ್ನು ಚಾಚು ಕೈಗಳಿಂದ ಹಿಡಿದು, ಕುಟುಕಿ, ವಿಷ ಚುಚ್ಚಿ ಬಾಯಿಗೆಳೆದು ಹೀರಿಹಾಕುವುದು ಅವುಗಳ ಆಹಾರ ಸೇವನಾ ಕ್ರಮ. ಜೆಲ್ಲಿ ಮೀನುಗಳ ಆಯುಷ್ಯ ಕೆಲವೇ ತಾಸುಗಳಿಂದ ಕೆಲವೇ ದಿನಗಳವರೆಗೆ; ಕೆಲವೇ ತಿಂಗಳುಗಳಿಂದ ಗರಿಷ್ಠ ಎರಡು-ಮೂರು ವರ್ಷಗಳವರೆಗೆ, ಅಷ್ಟೆ !

ವೈಚಿತ್ರ್ಯ, ವಿಸ್ಮಯಗಳ ಜೊತೆಗೆ ಜೆಲ್ಲಿ ಮೀನುಗಳು ಅಪಾಯಕಾರಿಗಳಾಗಿವೆ ಕೂಡ. ಚಾಚು ಕೈಗಳ ಸ್ಪರ್ಶಕ್ಕೆ ಸಿಗುವ ಯಾವುದೇ ಜೀವಿಯನ್ನು ಒಟ್ಟಾಗಿ ನೂರಾರು ಕಡೆ ಕುಟುಕಿ ವಿಷ ಚುಚ್ಚುವುದು ಜೆಲ್ಲಿ ಮೀನುಗಳ ಬೇಟೆಯಾಡುವ ಅಥವಾ ಸ್ವರಕ್ಷಣೆಯ ಕ್ರಮ. ’ಬಾಕ್ಸ್ ಜೆಲ್ಲಿ ಮೀನು’ಗಳಂತೂ ಎಷ್ಟು ತೀಕ್ಷ್ಣ ವಿಷವನ್ನು ಹೊಂದಿವೆಯೆಂದರೆ ಆಕಸ್ಮಿಕವಾಗಿಯೇ ಆದರೂ ಅವುಗಳಿಂದ ಕುಟುಕಲ್ಪಟ್ಟ ಆರೋಗ್ಯವಂತ ವಯಸ್ಕ ಮನುಷ್ಯರೂ ಕೆಲವೇ ನಿಮಿಷಗಳಲ್ಲಿ ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ.

ಸಾಗರ ಜೀವಜಾಲದ ಸ್ವಾಸ್ಥ್ಯದಲ್ಲಿ ಜೆಲ್ಲಿ ಮೀನುಗಳದು ಬಹಳ ಮಹತ್ವದ ಪಾತ್ರ. ಪ್ರಮುಖವಾಗಿ ಕಡಲ ಆನಿಮೋನಿಗಳಿಗೆ, ಹೇರಳ ಕಡಲ ಹಕ್ಕಿಗಳಿಗೆ, ಲೆದರ್ ಬ್ಯಾಕ್ ಕಡಲಾಮೆಗಳಿಗೆ, ಮೋಲಾ ಮತ್ತು ಟ್ಯೂನಾಗಳಂತಹ ಮತ್ಸ್ಯಗಳಿಗೆ ಜೆಲ್ಲಿ ಮೀನುಗಳೇ ಪ್ರಧಾನ ಆಹಾರ. ಅಷ್ಟೇ ಅಲ್ಲದೆ, ಕಡಲ ಜಲದಲ್ಲಿ ಕಿಕ್ಕಿರಿದು ಹರಡಿ ಬಾಳುತ್ತಿರುವ ಸೂಕ್ಷ್ಮ ಪ್ರಾಣಿಗಳು ಮತ್ತು ಸಸ್ಯಗಳಾದ ಜ಼ೂ ಪ್ಲಾಂಕ್ಟನ್ ಮತ್ತು ಫೈಟೋ ಪ್ಲಾಂಕ್ಟನ್ ಗಳ ಹಾಗೂ ತಮ್ಮ ಇತರ ಆಹಾರ ಪ್ರಾಣಿಗಳ ಸಂಖ್ಯಾ ನಿಯಂತ್ರಣದಲ್ಲೂ ಜೆಲ್ಲಿ ಮೀನುಗಳ ಪಾತ್ರ ಅನನ್ಯ. ಎಂಥ ಸೋಜಿಗದ ಸೃಷ್ಟಿ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT