ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ರೈತರಿಗೆ ಸಮಗ್ರ ಕೃಷಿ ಪ್ರಶಸ್ತಿ

ಡಾ.ಜಿ.ಕೆ.ವೀರೇಶ್ ದತ್ತಿ ನಿಧಿ
Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿರುವ ರೈತರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಚ್.ಸದಾನಂದ, ರಾಯಚೂರು ಜಿಲ್ಲೆಯ ರಾಮಕೃಷ್ಣ ಶವಟ್ಟಿ, ಶಿವಮೊಗ್ಗದ ದುರ್ಗಪ್ಪ ಅಂಗಡಿ ಹಾಗೂ ಉಡುಪಿ ಜಿಲ್ಲೆಯ ಶಬರೀಶ್ ಸುವರ್ಣ ಅವರಿಗೆ ‘ಡಾ.ಜಿ.ಕೆ.ವೀರೇಶ್ ದತ್ತಿ ನಿಧಿ’ಯ ರಾಜ್ಯಮಟ್ಟದ ‘ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ’ಯನ್ನು ಶನಿವಾರ ಇಲ್ಲಿ ಪ್ರದಾನ ಮಾಡಲಾಯಿತು.

ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘ ಆಯೋಜಿಸಿದ್ದ ಸಮಾರಂಭದಲ್ಲಿ ನಾಲ್ವರು ರೈತರಿಗೆ ತಲಾ ₹25,000 ನಗದು ಒಳಗೊಂಡ ಪ್ರಶಸ್ತಿಯನ್ನು ಸಂಸದ ಎಸ್‌.ಮುದ್ದಹನುಮೇಗೌಡ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಅವರು, ‘ದೇಶದ ಉದ್ದಗಲಕ್ಕೂ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಭಾರಿ ಪ್ರಮಾಣದಲ್ಲಿ
ಪರಿವರ್ತಿಸಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಗಿ, ಭತ್ತವನ್ನು ಕಾರ್ಖಾನೆಯೊಳಗೆ ಉತ್ಪಾದಿಸಲು ಸಾಧ್ಯವಿಲ್ಲ. ರೈತ ಭೂಮಿ ಉತ್ತಿ, ಬಿತ್ತಿ ಬೆಳೆ ಬೆಳೆಯಬೇಕು. ಕೃಷಿಗೆ ಉತ್ತೇಜನ ನೀಡದಿದ್ದರೆ ದೇಶದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ಕೃಷಿಕರ ಜೀವನ ಉತ್ತಮಪಡಿಸಲು ಬೆಳೆಗಳಿಗೆ ವೈಜ್ಞಾನಿಕ ಬೆಲೆ‌ ದೊರಕಿಸಿಕೊಡಲು ಸರ್ಕಾರ ಶ್ರಮಿಸಬೇಕು’ ಎಂದು ಒತ್ತಾಯಿಸಿದರು.

‘ನಾಲ್ಕೂವರೆ ಎಕರೆ ಭೂಮಿ ಇದ್ದರೂ ಬೆಳೆ ಕೈ ಹಿಡಿಯದೆ, ₹ 9 ಲಕ್ಷ ಸಾಲ ಹೆಗಲೇರಿತ್ತು. ಸಾಲಕ್ಕೆ ಅಂಜಿ ಆತ್ಮಹತ್ಯೆಗೆ ಯೋಚಿಸಿದ್ದೆ. ಕೋಲಾರದ ರೈತ ಎರಡೂವರೆ ಎಕರೆಯಲ್ಲಿ ಸಮಗ್ರ ಕೃಷಿ ಮಾಡಿ ₹ 9 ಲಕ್ಷ ಆದಾಯ ಸಂಪಾದಿಸಿದ್ದ ಯಶೋಗಾಥೆಯನ್ನು  ಚಂದನ ವಾಹಿನಿಯಲ್ಲಿ ನೋಡಿ, ಆತ್ಮಹತ್ಯೆ ಯೋಚನೆ ಕೈಬಿಟ್ಟೆ. ಸಮಗ್ರ ಕೃಷಿ ಅಳವಡಿಸಿಕೊಂಡು, ಯಶಸ್ಸು ಸಾಧಿಸಿದೆ. ಈಗ ರೈತರಿಗೆ ಆತ್ಮಸ್ಥೈರ್ಯ ತುಂಬಲು ನನ್ನನ್ನು ಕೃಷಿ ವಿ.ವಿಗಳು, ಕೃಷಿ ಇಲಾಖೆ ಅಧಿಕಾರಿಗಳು ಆಹ್ವಾನಿಸುತ್ತಾರೆ’ ಎಂದು ಶಿವಮೊಗ್ಗ ಜಿಲ್ಲೆಯ ರೈತ ದುರ್ಗಪ್ಪ ಅಂಗಡಿ ಬದುಕಿನ ಯಶೋಗಾಥೆ ಬಿಚ್ಚಿಟ್ಟರು.

* ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ ನಂತರ ಸಾಲ ತೀರಿಸಿದ್ದೇನೆ. ಬದುಕಿನಲ್ಲಿ ನೆಮ್ಮದಿಯೂ ಸಿಕ್ಕಿದೆ. ನನ್ನ ಸಾಧನೆಗೆ ಈವರೆಗೆ 8 ಪ್ರಶಸ್ತಿಗಳು ಸಿಕ್ಕಿವೆ.

– ದುರ್ಗಪ್ಪ ಅಂಗಡಿ, ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ ಪುರಸ್ಕೃತ

ಕೃಷಿಯಿಂದ ವಿಮುಖರಾಗಿ ನಗರ ಸೇರುತ್ತಿರುವ ಯುವಜನರು, ಕೃಷಿ ಕ್ಷೇತ್ರಕ್ಕೆ ಮರಳಿ ಬರಲು ಈ ಪ್ರಶಸ್ತಿ ಸ್ಫೂರ್ತಿ ನೀಡಲಿ.

– ಶಬರೀಶ ಸುವರ್ಣ, ಉಡುಪಿ ಜಿಲ್ಲೆ, ಪ್ರಶಸ್ತಿ ಪುರಸ್ಕೃತ ಯುವ ರೈತ

* ಕೃಷಿಯನ್ನು ಲಾಭವಾಗಿ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಹೈನುಗಾರಿಕೆ, ಕುರಿ, ಕೋಳಿ, ಸಾಕಣೆಯಿಂದಲೂ ಸಂಪಾದಿಸಬಹುದು.

–ಎಚ್‌.ಸದಾನಂದ, ಪ್ರಶಸ್ತಿ ಪುರಸ್ಕೃತ ರೈತ, ಬೆಂಗಳೂರು ಗ್ರಾಮಾಂತರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT