ಮಂಗಳವಾರ, ಜೂನ್ 28, 2022
21 °C

ಇಷಿಗುರೊ: ವಿರಾಮ– ಉದ್ವೇಗಗಳ ಕಥನಕಾರ

ನಟರಾಜ ಹುಳಿಯಾರ್ Updated:

ಅಕ್ಷರ ಗಾತ್ರ : | |

ಇಷಿಗುರೊ: ವಿರಾಮ– ಉದ್ವೇಗಗಳ ಕಥನಕಾರ

ಕಜುವೊ ಇಷಿಗುರೊ ಅವರ ‘ದ ರಿಮೈನ್ಸ್‌ ಆಫ್ ದ ಡೇ’ ಪುಸ್ತಕದ ಸರಳ ಕಥನ ಶೈಲಿಗೆ ಮಾರುಹೋಗಿದ್ದ ಪಿ. ಲಂಕೇಶ್, ಈ ಪುಸ್ತಕವನ್ನು ಓದಬೇಕೆಂದು ಮಿತ್ರರಿಗೆಲ್ಲ ಹೇಳುತ್ತಿದ್ದರು. ಇಷಿಗುರೊಗೆ ನೊಬೆಲ್ ಬರಲಿದೆಯೆಂದು ಲಂಕೇಶರು ತೊಂಬತ್ತರ ದಶಕದಲ್ಲೇ ಊಹಿಸಿದಂತಿತ್ತು. ನಾನು ಆಗಿನ್ನೂ ಆ ಪುಸ್ತಕವನ್ನು ಓದದಿದ್ದರೂ, ಅದರ ಶೀರ್ಷಿಕೆಯಲ್ಲಿದ್ದ ‘ಒಂದು ದಿನದ ಕೊನೆಗೆ ಉಳಿದದ್ದಿಷ್ಟು’ ಅಥವಾ ‘ಒಂದು ಬದುಕಿನ ಕೊನೆಗೆ ಉಳಿದದ್ದಿಷ್ಟು’ ಎಂಬ ಧ್ವನಿ ವಿಸ್ಮಯವನ್ನುಂಟು ಮಾಡುತ್ತಲೇ ಇತ್ತು. ಈ ಸಲ ಇಷಿಗುರೊ 2017ರ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ದಿನ ಎಡೆಬಿಡದೆ ಈ ಪುಸ್ತಕ ಓದಿದಾಗ ನಿಜಕ್ಕೂ ದೊಡ್ಡ ಲೇಖಕನೊಬ್ಬನಿಗೆ ನೊಬೆಲ್ ಸಿಕ್ಕಿದೆಯೆಂಬುದು ಖಾತ್ರಿಯಾಯಿತು.

‘ದ ರಿಮೈನ್ಸ್‌ ಆಫ್ ದ ಡೇ’ ಕಾದಂಬರಿಯ ಕೊನೆಗೆ ಕಥಾನಿರೂಪಕ ಸ್ಟೀವನ್ಸ್ ಇಂಗ್ಲೆಂಡಿನ ಗ್ರಾಮೀಣ ಪ್ರದೇಶದ ಬಸ್ ನಿಲ್ದಾಣವೊಂದರಲ್ಲಿ ಕೂತಿದ್ದಾನೆ. ಸಂಜೆ ಇನ್ನೂ ಕತ್ತಲಾಗುವ ಮೊದಲೇ ಕಮಾನುಗಳ ಬೀದಿದೀಪಗಳು ಹತ್ತಿಕೊಂಡ ತಕ್ಷಣ, ‘ಹೋ!’ ಎನ್ನುತ್ತಾ ಹಾದಿಹೋಕರು ಕಣ್ಣರಳಿಸಿ ಖುಷಿಯಿಂದ ಕೂಗುತ್ತಾರೆ. ಕೆಲವು ಗಳಿಗೆಗಳ ಕೆಳಗೆ ನಿಲ್ದಾಣದಲ್ಲಿ ತನ್ನ ಪಕ್ಕ ಕೂತಿದ್ದವನೊಬ್ಬ, ‘ಬಹುತೇಕರಿಗೆ ದಿನದ ಅತ್ಯುತ್ತಮ ಅವಧಿಯೆಂದರೆ ಸಂಜೆಯೇ. ಜನ ಸಂಜೆಯಾಗಲಿ ಅಂತ ಕಾಯುತ್ತಿರುತ್ತಾರೆ’ ಎಂದಿದ್ದು ಸ್ಟೀವನ್ಸ್‌ಗೆ ನೆನಪಾಗುತ್ತದೆ. ಸಂಜೆಯಾದದ್ದನ್ನು ಕಂಡು, ಜನ ಆನಂದಪಟ್ಟಿದ್ದನ್ನು ಕಂಡು ಅವನು ಈ ಮಾತು ಹೇಳಿದಂತೆ ಕಂಡರೂ, ಅದನ್ನು ಅವನು ವಿಶಾಲ ಅರ್ಥದ ರೂಪಕವನ್ನಾಗಿ ಬಳಸುತ್ತಿದ್ದಾನೆಂಬುದು ಸ್ಟೀವನ್ಸ್‌ಗೆ ಗೊತ್ತಿತ್ತು. ‘ನನ್ನ ನೋಡು! ರಿಟೈರ್ ಆದ ದಿನದಿಂದ ಬಾನಾಡಿ ಥರಾ ಖುಷಿಯಾಗಿದ್ದೀನಿ’ ಅನ್ನುತ್ತಾ, ಆತ ಹೇಳಿದ್ದ: ‘ಖುಷಿಯಾಗಿರಬೇಕು; ದಿನವೆಲ್ಲಾ ಕೆಲಸ ಮಾಡಿರ್ತೀವಿ; ಈಗ ಸಂಜೆ ಕಾಲು ಚಾಚಿ ಆರಾಮಾಗಿ ಖುಷಿಯಾಗಿರಬೇಕು. ಯಾರನ್ನಾದ್ರೂ ಕೇಳು- ಸಂಜೆಯೇ ದಿನದ ಅತ್ಯುತ್ತಮ ಅವಧಿ ಅಂತಾರೆ’.

ಎರಡು ಮೂರು ದಶಕಗಳಿಂದ ಒಬ್ಬ ದಕ್ಷ ಬಟ್ಲರ್ ಆಗಿ ಆತ್ಮಗೌರವದಿಂದ ಬದುಕುತ್ತಿರುವ ಸ್ಟೀವನ್ಸ್‌ಗೆ ಒಂದು ದಿನ ಅವನ ಹೊಸ ಮಾಲೀಕ ಫೋರ್ಡ್ ಕಾರು ಕೊಟ್ಟು, ಕೆಲ ಕಾಲ ಇಂಗ್ಲೆಂಡಿನ ಹಳ್ಳಿಗಳ ಸುಂದರ ತಾಣಗಳನ್ನು ನೋಡಿಕೊಂಡು ಬರಲು ರಜಾ ಕೊಡುತ್ತಾನೆ. ಕಾರು ಮುಂದೆಮುಂದೆ ಚಲಿಸಿದಂತೆ, ಹೊಸ ಹೊಸ ಊರುಗಳ ಮೌನದಲ್ಲಿ ಸ್ಟೀವನ್ಸ್ ತನ್ನ ಬದುಕನ್ನು ಹಿಂದಿರುಗಿ ನೋಡತೊಡಗುತ್ತಾನೆ: ತನ್ನ ಬದುಕಿನ ಅರ್ಥಪೂರ್ಣತೆ, ವಿಷಾದಗಳನ್ನು ನೆನಪಿಸುವ ಸಣ್ಣಪುಟ್ಟ ವಿವರಗಳಿಂದ ಹಿಡಿದು, ಇಂಗ್ಲೆಂಡಿನ ಪ್ರಧಾನಿ ಚರ್ಚಿಲ್, ಇಂಗ್ಲೆಂಡಿನ ಬಿಕ್ಕಟ್ಟು, ಹಿಟ್ಲರ್, ಜರ್ಮನಿ ಎಲ್ಲವೂ ಅವನ ಕಣ್ಣೆದುರು ಸುಳಿಯುತ್ತವೆ. ಸ್ಟೀವನ್ಸ್ ಹೇಳುತ್ತಿರುವ ಈ ಘಟನೆಗಳ ಕಾಲದಲ್ಲಿ ಇಂಗ್ಲೆಂಡ್ ಇಂಡಿಯಾವನ್ನು ಆಳುತ್ತಿತ್ತು; ಆ ಕಾಲದ ವಿವರಗಳು ಇಲ್ಲೆಲ್ಲೂ ಕಾಣುವುದಿಲ್ಲವಲ್ಲ ಎಂದು ಇಂಡಿಯಾದ ಓದುಗರಲ್ಲಿ ಆಕ್ಷೇಪಣೆಯೊಂದು ಏಳಬಹುದು; ಆದರೆ ಒಬ್ಬ ಬಟ್ಲರನ ಕಣ್ಣಿಗೆ ಕಂಡ, ಕಿವಿಗೆ ಬಿದ್ದ ವಿದ್ಯಮಾನಗಳನ್ನು ಪ್ರಾಮಾಣಿಕವಾಗಿ ಹೇಳುವ ಆತ್ಮಚರಿತ್ರಾತ್ಮಕ ನಿರೂಪಣಾ ತಂತ್ರವನ್ನು ಇಷಿಗುರೊ ಬಳಸುತ್ತಿದ್ದಾನೆ ಎಂಬುದು ನೆನಪಾದ ತಕ್ಷಣ ಆ ಅಕ್ಷೇಪಣೆ ಹಾರಿ ಹೋಗುತ್ತದೆ!

ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ, ಹೊಸ ರಾಜಕಾರಣದ ಸಾಧ್ಯತೆಯ ನಡುವೆಯೂ ಸಾವಧಾನವಾಗಿ ಚಲಿಸುತ್ತಿರುವ ಇಂಗ್ಲೆಂಡಿನ ವಿವರಗಳು, ಇಷಿಗುರೊನ ತನ್ಮಯ ವರ್ಣನೆಗಳು ನಮ್ಮನ್ನು ಆ ವಿರಾಮಲೋಕದೊಳಗೆ ಅಡ್ಡಾಡಿಸುತ್ತಲೇ ನಮ್ಮೊಳಗೂ ಅದ್ಭುತವಾದ ವ್ಯವಧಾನವನ್ನು ಸೃಷ್ಟಿಸತೊಡಗುತ್ತವೆ. ಸ್ಟೀವನ್ಸ್ ಅಡುಗೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶ್ರೀಮಂತನ ಮನೆಯ ಡೈನಿಂಗ್ ಹಾಲಿನಲ್ಲಿ ನಡೆಯುತ್ತಿರುವ ‘ಜಗತ್ತಿನ ದಿಕ್ಕನ್ನೇ ಬದಲಿಸುವ ಗಂಭೀರ ವಿದ್ಯಮಾನಗಳ’ ಚರ್ಚೆಯ ಜೊತೆಜೊತೆಗೇ ಸಣ್ಣಸಣ್ಣ ವಿವರಗಳೂ ಕಾದಂಬರಿಯನ್ನು ಮುನ್ನಡೆಸುತ್ತವೆ. ಪ್ರತಿಯೊಂದು ಮಾತಿನ ಕೊನೆಗೆ ಮಿಸ್ ಕೆಂಟನ್ನಳ ಮುಖದಲ್ಲಿ ಮೂಡುವ ಮುಗುಳ್ನಗೆ, ಅವಳ ವ್ಯಂಗ್ಯ ದನಿಯ ಏರಿಳಿತ, ಅವಳ ಭುಜ, ಕೈಗಳ ಚಲನೆಗಳನ್ನು ಇಷಿಗುರೊ ವರ್ಣಿಸುವ ರೀತಿ ನೋಡಿದರೆ, ಐದು ವರ್ಷದ ಬಾಲಕನಾಗಿದ್ದಾಗ ಜಪಾನ್ ಬಿಟ್ಟು ತಂದೆಯ ಜೊತೆ ಇಂಗ್ಲೆಂಡಿಗೆ ಬಂದು ನೆಲೆಸಿದ ಅವನಲ್ಲಿ ಇನ್ನೂ ಉಳಿದಿರುವ ಸಾಂಪ್ರದಾಯಿಕ ಜಪಾನಿನ ಕೋಮಲತೆಯ ಅರಿವಾಗತೊಡಗುತ್ತದೆ. ಕಾದಂಬರಿಯಲ್ಲಿ ಮೂಡಿ ಮರೆಯಾಗುವ ಪ್ರೀತಿ; ಪ್ರೀತಿಯ ಅನಿವಾರ್ಯ ಸಂಗಾತಿಯಾದ ಅಸೂಯೆ ಇವೆಲ್ಲದರ ಮೋಹಕ ಪಿಸುದನಿಗಳು ಆತ್ಮೀಯವಾಗಿ ನಮ್ಮೊಳಗಿಳಿಯತೊಡಗುತ್ತವೆ. ಈಚೀಚೆಗೆ, ವಯಸ್ಸಾದಂತೆ ತನ್ನ ಕೆಲಸದಲ್ಲಿ ಆಗುತ್ತಿದ್ದ ಸಣ್ಣಪುಟ್ಟ ತಪ್ಪುಗಳಿಂದಾಗಿ ತನ್ನ ವೃತ್ತಿಯ ಘನತೆ ಕುಂದುತ್ತಿದೆ ಎಂದು ಕೊರಗುವ ಸ್ಟೀವನ್ಸ್‌ಗೆ ಆ ಹಳ್ಳಿಯಲ್ಲಿ ಸಂಜೆಯ ಅರ್ಥಪೂರ್ಣತೆ ಕುರಿತು ಹೇಳುತ್ತಿದ್ದ ವ್ಯಕ್ತಿಯ ಕಿವಿಮಾತು ಇದು: ‘ಯಾವಾಗ್ಲೂ ಹಿಂದೆ ನಡೆದಿದ್ದನ್ನೇ ನೋಡ್ತಾ ಕೂತ್ಕೋಬೇಡ. ಅದರಿಂದ ಭಾಳಾ ಬೇಜಾರಾಗುತ್ತೆ. ಸರಿಯಪ್ಪ, ಮೊದಲಿನಂತೆ ಕೆಲಸ ಮಾಡೋಕಾಗದಿದ್ದರೆ ಬೇಡ, ಬಿಡು. ನಮ್ಮೆಲ್ಲರದೂ ಅದೇ ಕತೆ ತಾನೇ?’

1989ರಲ್ಲಿ ಬುಕರ್ ಪ್ರಶಸ್ತಿ ಪಡೆದ ‘ದಿ ರಿಮೈನ್ಸ್‌ ಆಫ್ ದಿ ಡೇ’ ಕಾದಂಬರಿಗೆ ಜಗತ್ತಿನ ಎಲ್ಲೆಡೆ ಸಿಕ್ಕಷ್ಟು ವ್ಯಾಪಕ ಸ್ವೀಕಾರ ಆನಂತರ ಇಷಿಗುರೊ ಬರೆದ ಕಾದಂಬರಿಗಳಿಗೆ ಸಿಕ್ಕಂತಿಲ್ಲ. ಆದರೂ 2005ರಲ್ಲಿ ಬಂದ ಅವನ ‘ನೆವರ್ ಲೆಟ್ ಮಿ ಗೋ’ ಕಾದಂಬರಿ ಏಕಕಾಲಕ್ಕೆ ಬುಕರ್ ಪ್ರೈಜ್ ಹಾಗೂ ವಿಜ್ಞಾನ ಕಾದಂಬರಿಗೆ ಕೊಡುವ ಆರ್ಥರ್ ಕ್ಲಾರ್ಕ್ ಪ್ರಶಸ್ತಿಗಳೆರಡರ ಅಂತಿಮಪಟ್ಟಿಯಲ್ಲೂ ಇದ್ದದ್ದು ಅವನ ಕಾದಂಬರಿ ಬರವಣಿಗೆಯ ಹೊಸಜಿಗಿತವನ್ನೂ ಹೇಳುತ್ತದೆ! ಈ ಕಾಲದ ಬದುಕಿನ ಅನಿವಾರ್ಯ ಭಾಗವಾಗಿರುವ ತಂತ್ರಜ್ಞಾನದ ಜೊತೆಗಿನ ಮಾನವಾನುಭವವನ್ನು ಮಂಡಿಸುವ ಈ ಕಾದಂಬರಿಯಲ್ಲಿ ಕ್ಲೋನ್‌ಗಳು (ತಂತ್ರಜ್ಞಾನದ ಮೂಲಕ ತಯಾರಾದ ಮಾನವ ತದ್ರೂಪುಗಳು) ಪಾತ್ರಗಳಾಗಿವೆ. ಅತಿತಂತ್ರಜ್ಞಾನದ ಬಗ್ಗೆ ಆಳವಾಗಿ ಚಿಂತಿಸಿರುವ ಮುಖ್ಯ ಕಾದಂಬರಿಗಳ ಸಾಲಿನಲ್ಲಿರುವ ‘ನೆವರ್ ಲೆಟ್ ಮಿ ಗೋ’ ಈ ಯುಗದ ಜ್ಞಾನ ಕೆಲಬಗೆಯ ದೈಹಿಕ ಕಾಯಿಲೆಗಳನ್ನು ಹಿಮ್ಮೆಟ್ಟಿಸಿರುವುದರ ಬಗ್ಗೆ ಆಶಾವಾದವನ್ನೇನೋ ಸೂಚಿಸುತ್ತದೆ; ಆದರೆ ಅದು ತರಲಿರುವ ಘೋರ ವಿಪತ್ತುಗಳ ಬಗ್ಗೆ ಹೆಚ್ಚಿನ ದಿಗ್ಭ್ರಮೆಯನ್ನು ವ್ಯಕ್ತಪಡಿಸುತ್ತದೆ. ‘ದಿ ರಿಮೈನ್ಸ್‌ ಆಫ್ ದಿ ಡೇ’ ಕಾದಂಬರಿಯ ನಿರೂಪಣೆಯ ಹಿನ್ನೋಟದ ಜೊತೆಗೇ ಹರಿಯುತ್ತಿದ್ದ ಆರೋಗ್ಯಕರ ಪ್ರಶಾಂತತೆ ಅತಿತಂತ್ರಜ್ಞಾನಯುಗದ ಕತೆಯನ್ನು ಹೇಳುತ್ತಿರುವ ‘ನೆವರ್ ಲೆಟ್ ಮಿ ಗೋ’ ಕಾದಂಬರಿಯಲ್ಲಿಲ್ಲ. ಇದಕ್ಕೆ ಈ ಕಾದಂಬರಿ ಹುಟ್ಟಿರುವ ಕಾಲವೂ ಕಾರಣವಿರಬಹುದು.

ಟೆಲಿನಾಟಕ, ಚಿತ್ರಕತೆ, ಭಾವಗೀತೆ, ಸಂಗೀತ ಮುಂತಾಗಿ ಹಲವು ಪ್ರಕಾರಗಳಲ್ಲಿ ಪ್ರಯೋಗ ಮಾಡುತ್ತಿರುವ ಇಷಿಗುರೊ ಕಳೆದ ವರ್ಷ ನೊಬೆಲ್ ಪ್ರಶಸ್ತಿ ಪಡೆದ ಭಾವಗೀತಕಾರ-ಗಾಯಕ ಬಾಬ್ ಡಿಲಾನ್‌ನಿಂದಲೂ ತನ್ನ ಭಾವಗೀತೆಗಳಿಗೆ ಸ್ಫೂರ್ತಿ ಪಡೆದವನು. ಒಂದು ಕಾಲಕ್ಕೆ ‘ಕ್ರಿಯೇಟೀವ್ ರೈಟಿಂಗ್’ನಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದ ಇಷಿಗುರೊ ಇವತ್ತು ಜಗತ್ತಿನಲ್ಲಿ ಸೃಜನಶೀಲ ಬರವಣಿಗೆಯಲ್ಲಿ ತೊಡಗಿರುವವರಿಗೆ ಹೊಸ ಮಾರ್ಗಗಳನ್ನು ತೋರಿಸಬಲ್ಲಷ್ಟು ದೊಡ್ಡ ಲೇಖಕನಾಗಿ ಬೆಳೆದಿದ್ದಾನೆ. ಇಷಿಗುರೊ ಈ ಕಾಲದಲ್ಲಿ ಬರೆಯುತ್ತಿರುವ, ನೊಬೆಲ್ ಪಡೆದ ಓರಾನ್ ಪಾಮುಕ್, ಕೆಲವು ಸಲ ನೊಬೆಲ್ ಪಟ್ಟಿಯಲ್ಲಿದ್ದ ಝೆಕೋಸ್ಲೊವಾಕಿಯಾದ ಮಿಲನ್ ಕುಂದೇರ, ಸಲ್ಮಾನ್ ರಶ್ದಿ ಥರದ ದೊಡ್ಡ ಲೇಖಕರ ಸಾಲಿನಲ್ಲಿದ್ದಾನೆ. ಪಶ್ಚಿಮ ರೂಪಿಸಿಕೊಂಡ ವಿಮರ್ಶಾ ಮಾನದಂಡಗಳು, ಸೌಂದರ್ಯ ಪ್ರಜ್ಞೆಯ ಇಕ್ಕಟ್ಟುಗಳಲ್ಲಿ ಸಿಕ್ಕಿ ಹಾಕಿಕೊಳ್ಳುವ ನೊಬೆಲ್ ಸಾಹಿತ್ಯ ಪ್ರಶಸ್ತಿಯ ಆಯ್ಕೆ ಸಮಿತಿ ಈ ಸಲ ಎಡವದೆ, ಅತಿಯಾದ ರಾಜಕೀಯ ಲೆಕ್ಕಾಚಾರ ಹಾಕದೆ ಇಷಿಗುರೊವನ್ನು ಆರಿಸಿದೆ. ಜಗತ್ತಿನ ವಿವಿಧ ಭಾಷೆಗಳ ಇಂಗ್ಲಿಷ್ ಭಾಷಾಂತರದ ರಾಜಕಾರಣ ಹಾಗೂ ಭಾಷಾಂತರಗಳ ಸಮಸ್ಯೆಗಳಿಂದಲೂ ಕೆಲವೊಮ್ಮೆ ಜಗತ್ತಿನ ಶ್ರೇಷ್ಠ ಕೃತಿಗಳನ್ನು ಆರಿಸುವಲ್ಲಿ ಸೋಲುವ ನೊಬೆಲ್ ಆಯ್ಕೆ ಸಮಿತಿಗೆ ಈ ಸಲ ಇಂಗ್ಲಿಷ್ ಭಾಷೆಯಲ್ಲೇ ಬರೆದ ಲೇಖಕ ಎದುರಿಗಿದ್ದುದರಿಂದ ಆಯ್ಕೆ ಸುಗಮವಾಗಿರಬಹುದು. ಕನ್ನಡದಲ್ಲಿ ಕುವೆಂಪು, ಬೇಂದ್ರೆ, ಕಾರಂತರಿಂದ ಹಿಡಿದು ಶ್ರೇಷ್ಠ ಲೇಖಕ, ಲೇಖಕಿಯರ ಕೃತಿಗಳನ್ನು ಆಯಾ ಕಾಲಘಟ್ಟಗಳಲ್ಲಿ ಸಮರ್ಥವಾಗಿ ಇಂಗ್ಲಿಷ್‌ಗೆ ಭಾಷಾಂತರಿಸಿದ್ದರೆ, ಕೆಲವೆಡೆ ಕನ್ನಡ ಲೇಖಕರಂತೆಯೇ ಬರೆಯುವ ಇಷಿಗುರೊಗಿಂತ ಮೊದಲೇ ಕನ್ನಡ ಲೇಖಕರೂ ನೊಬೆಲ್ ಪುರಸ್ಕೃತರ ಸಾಲಿನಲ್ಲಿರುತ್ತಿದ್ದರೇನೋ ಅನ್ನಿಸದಿರದು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.