ಎಲ್ಲ ಪಕ್ಷಗಳ ಕಣ್ಣು ಲಿಂಗಾಯತ ಮತಗಳತ್ತ!

ಬುಧವಾರ, ಜೂನ್ 26, 2019
25 °C

ಎಲ್ಲ ಪಕ್ಷಗಳ ಕಣ್ಣು ಲಿಂಗಾಯತ ಮತಗಳತ್ತ!

Published:
Updated:
ಎಲ್ಲ ಪಕ್ಷಗಳ ಕಣ್ಣು ಲಿಂಗಾಯತ ಮತಗಳತ್ತ!

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳಷ್ಟೇ ಉಳಿದಿವೆ. ಮೈಕೊಡವಿ ಎದ್ದಿರುವ ರಾಜಕೀಯ ಪಕ್ಷಗಳು ಜಾತಿ, ಸಮುದಾಯಗಳನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗಿವೆ. ಕಾಕತಾಳೀಯವೆಂಬಂತೆ ಇದೇ ಸಮಯದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಚರ್ಚೆಯೂ ಜೋರಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾಣ್ಮೆಯಿಂದ ಈ ವಿಷಯವನ್ನು ಕೆದಕಿ, ಕೈಬಿಟ್ಟಿದ್ದಾರೆ. ಇದನ್ನೇ ’ರಾಜಕೀಯ ಅಸ್ತ್ರ’ವಾಗಿ ಬಳಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಜೂನ್‌ 14ರಂದು ನಡೆದ ವೀರಶೈವ ಮಹಾಸಭಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಭರವಸೆ ಕೊಟ್ಟಿದ್ದಾರೆ. ಅದಕ್ಕೆ ವೀರಶೈವ ಮತ್ತು ಲಿಂಗಾಯತ ಎರಡೂ ಬಣಗಳು ಒಟ್ಟಾಗಿ ಬರಬೇಕೆಂದು ಷರತ್ತು ಹಾಕಿದ್ದಾರೆ. ಆದರೆ, ಪ್ರತ್ಯೇಕ ಧರ್ಮದ ವಿಷಯದಲ್ಲಿ ಸಚಿವ ಸಂಪುಟದ ಸಹೊದ್ಯೋಗಿಗಳಲ್ಲೇ ಒಡಕಿದೆ. ‘ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು’ ಎಂಬ ಗಾದೆ ಮಾತಿನಂತೆ ಸಚಿವರೇ ಇನ್ನೂ ಒಂದೇ ವೇದಿಕೆಗೆ ಬರುವ ಮನಸ್ಸು ಮಾಡಿಲ್ಲ.

ಪ್ರತ್ಯೇಕ ಧರ್ಮ ಹೋರಾಟದಿಂದ ಯಾವ ಪಕ್ಷಕ್ಕೆ ಲಾಭ ಅಥವಾ ನಷ್ಟವಾಗಲಿದೆ ಎನ್ನುವುದು ಬೇರೆ ಮಾತು. ಈ ಬೆಳವಣಿಗೆಯಿಂದ ಬಿಜೆಪಿ ನಾಯಕರಿಗೆ ನಡುಕವಂತೂ ಶುರುವಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬಹುತೇಕ ಜತೆಗಿರುವ ಲಿಂಗಾಯತರು 2018ರ ಚುನಾವಣೆಯಲ್ಲಿ ದೂರ ಸರಿಯುವರೇ ಎನ್ನುವ ಸಣ್ಣ ಅನುಮಾನವೊಂದು  ಆ ಪಕ್ಷದಲ್ಲಿ ಆರಂಭವಾಗಿದೆ.

ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ 96 ಉತ್ತರ ಕರ್ನಾಟಕದಲ್ಲಿವೆ. ಲಿಂಗಾಯತರೇ ನಿರ್ಣಾಯಕವಾಗಿರುವ ಇಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದವರು ಸುಲಭವಾಗಿ ಅಧಿಕಾರ ಹಿಡಿಯುತ್ತಾರೆ. ಈ ಕಾರಣಕ್ಕೆ ಉತ್ತರ ಕರ್ನಾಟಕದ ಮೇಲೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರ ಕಣ್ಣು ಬಿದ್ದಿದೆ.

ಜೆಡಿಎಸ್‌ ರಾಜ್ಯ ಘಟಕ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿ ವರ್ಷ ಕಳೆದಿದೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಮುಂಬೈ– ಕರ್ನಾಟಕದಲ್ಲಿ ಈ ಪಕ್ಷಕ್ಕೆ ಹೇಳಿಕೊಳ್ಳುವಂಥ ಬೆಂಬಲವಿಲ್ಲ.ನವಲಗುಂದ ಶಾಸಕ ಎನ್‌.ಎಚ್‌. ಕೋನರೆಡ್ಡಿ ಅವರನ್ನು ಬಿಟ್ಟರೆ ಮತ್ತೊಬ್ಬ ಶಾಸಕನಿಲ್ಲ. ಹೈದರಾಬಾದ್‌– ಕರ್ನಾಟಕದಲ್ಲಿ ನಾಲ್ವರು ಶಾಸಕರಿದ್ದಾರೆ. ಜನತಾದಳ ಇಬ್ಭಾಗವಾದ ಬಳಿಕ ಜೆಡಿಎಸ್‌ ಹಳೇ ಮೈಸೂರು ಭಾಗದ ಪಕ್ಷ ಎಂಬ ಅಭಿಪ್ರಾಯವಿದೆ. ಈಗ ಆ ಭಾಗದ ಕಡೆ ಗಮನಹರಿಸಿರುವ ಕುಮಾರಸ್ವಾಮಿ ಅವರ ಪ್ರಯತ್ನ ಫಲಿಸುವುದೇ ಕಾದು ನೋಡಬೇಕು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಒಲವು ತೋರಿದ್ದರು. ಬಹುತೇಕ ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದರೀಗ ತಮ್ಮ ನಿಲುವು ಬದಲಿಸಿದ್ದಾರೆ. ಶಿಕಾರಿಪುರ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

‘ಉತ್ತರ ಕರ್ನಾಟಕದಿಂದ ಕಣಕ್ಕಿಳಿಯುವಂತೆ ಯಡಿಯೂರಪ್ಪ ಅವರಿಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಸೂಚಿಸಿದ್ದಾರೆ’ ಎಂದು ಅವರ ಬೆಂಬಲಿಗರು ಬಿಂಬಿಸಿದ್ದರು. ‘ಈಚೆಗೆ ಬೆಂಗಳೂರಿನಲ್ಲಿ ಪಕ್ಷದ ಪ್ರಮುಖರ ಸಭೆ ನಡೆಯುತ್ತಿದ್ದಾಗಲೇ  ಷಾ, ಯಡಿಯೂರಪ್ಪ ಅವರಿಗೆ ಕರೆ ಮಾಡಿ ಉತ್ತರ ಕರ್ನಾಟಕದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸೂಚಿಸಿದರು’ ಎಂಬ ಮಾಹಿತಿ ಅವರ ಆಪ್ತರಿಂದ ಮಾಧ್ಯಮ ಕಚೇರಿಗಳಿಗೂ ತಲುಪಿತ್ತು. ಆದರೆ, ‘ಅಂಥ ಯಾವುದೇ ಕರೆ ಬಂದಿಲ್ಲ’ ಎಂದು ಬಿಜೆಪಿ ಕೆಲವು ಪ್ರಮುಖ ನಾಯಕರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

‘ಯಡಿಯೂರಪ್ಪ ಶಿಕಾರಿಪುರ ಬಿಟ್ಟು ಉತ್ತರ ಕರ್ನಾಟಕದ ಕಡೆ ಮುಖ ಮಾಡಿದ್ದು ಏಕೆ. ಪಕ್ಷದ ಯಾರೊಂದಿಗೂ ಚರ್ಚಿಸದೆ ದಿಢೀರನೆ ಇಂಥ ವಿಚಾರವನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದೇಕೆ’ ಎಂಬ ಪ್ರಶ್ನೆ ಬಿಜೆಪಿಯೊಳಗೂ ಚರ್ಚೆಯಾಗುತ್ತಿದೆ. ಅದೇನೇ ಇರಲಿ, ‘ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಸಿದ್ದರೆ ಪಕ್ಷಕ್ಕೆ ಹೆಚ್ಚು ಲಾಭ ಆಗುತಿತ್ತು’ ಎಂಬ ಅಭಿಪ್ರಾಯವನ್ನು ಪಕ್ಷದ ನಾಯಕರು ಹೊಂದಿದ್ದಾರೆ.

‘2013ರಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆಯನ್ನು ಬೆಂಬಲಿಸಿದ್ದ ಯಡಿಯೂರಪ್ಪ ಈಗ ಮೌನವಾಗಿದ್ದಾರೆ’ ಎಂದೂ ಕಾಂಗ್ರೆಸ್‌ ಪ್ರಚಾರ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ, ‘ಕಾಂಗ್ರೆಸ್‌, ಲಿಂಗಾಯತ ಸಮಾಜವನ್ನು ಒಡೆಯುತ್ತಿದೆ. ಜಾತಿ– ಜಾತಿಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಕಿ ಹಚ್ಚುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಆರೋಪಗಳಿಗೆ ಲಿಂಗಾಯತರು ಕಿವಿಗೊಡುವರೇ ಅಥವಾ ಧರ್ಮ ಬೇರೆ, ರಾಜಕಾರಣ ಬೇರೆ ಎಂದು ಭಾವಿಸಿ ಬಿಜೆಪಿ ಜತೆಗಿರುವರೇ ಎಂಬುದು ಮಿಲಿಯನ್‌ ಡಾಲರ್‌ ‍ಪ‍್ರಶ್ನೆ.

ಉತ್ತರ ಕರ್ನಾಟಕ ಲಿಂಗಾಯತರು ಮೂಲತಃ ಬಿಜೆಪಿ ಬೆಂಬಲಿಗರಲ್ಲ. ಕಾಂಗ್ರೆಸ್‌ ಜತೆಗಿದ್ದವರು. ಕಾಂಗ್ರೆಸ್‌ ಹೋಳಾದಾಗ ನಿಜಲಿಂಗಪ್ಪ ಅವರ ಕಾಂಗ್ರೆಸ್‌ (ಒ) ಪಕ್ಷಕ್ಕೆ ಬೆಂಬಲವಾಗಿ ನಿಂತವರು. ಆನಂತರ ಅವಿಭಜಿತ ಜನತಾದಳಕ್ಕೆ ನಿಷ್ಠೆ ಬದಲಾಯಿಸಿದವರು. ಜನತಾದಳ ಇಬ್ಭಾಗವಾದ ಮೇಲೆ ರಾಮಕೃಷ್ಣ ಹೆಗಡೆ ಅವರನ್ನು ಹಿಂಬಾಲಿಸಿದವರು. ಹೆಗಡೆ, ಬ್ರಾಹ್ಮಣರಾದರೂ ಲಿಂಗಾಯತರ ನಾಯಕರಾಗಿದ್ದರು. ಅವರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಾಗಲೂ ಲಿಂಗಾಯತ ಸಮುದಾಯ ಅವರ ಜೊತೆಗೇ ಇತ್ತು. ಅವರ ನಿಧನದ ಬಳಿಕ ಕಮಲದ ಪಾಳಯಕ್ಕೆ ವಲಸೆ ಹೋಯಿತು.

ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಯಡಿಯೂರಪ್ಪ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಕಟ್ಟಿದ್ದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಆಯಿತು. ಮತಗಳು ವಿಭಜನೆ ಆಗಿದ್ದರಿಂದ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಗೆಲ್ಲಲು ಆಗಲಿಲ್ಲ. ಕಾಂಗ್ರೆಸ್‌ಗೆ 50+ಸ್ಥಾನಗಳು ಬಂದವು. ಕೆಜೆಪಿಗೆ ಹೆಚ್ಚು ಸ್ಥಾನ ಸಿಗದಿದ್ದರೂ ಬಿಜೆಪಿ ಗೆಲುವಿಗೆ ಬ್ರೇಕ್‌ ಹಾಕುವಲ್ಲಿ ಯಶಸ್ವಿಯಾಯಿತು. 2008ರ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಬಾಗಲಕೋಟೆಯಲ್ಲಿ ಸೋತಿದ್ದ ಹೆಗಡೆ!

ಹಿಂದೆಯೂ ಕೆಲವು ದೊಡ್ಡ ನಾಯಕರು ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕಕ್ಕೆ ವಲಸೆ ಬಂದು, ಚುನಾವಣೆಗೆ ಸ್ಪರ್ಧಿಸಿದ್ದರು. 1991ರ ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಾಮಕೃಷ್ಣ ಹೆಗಡೆ ಸೋಲು ಕಂಡಿದ್ದರು. ಆಗ ಸಿದ್ದು ನ್ಯಾಮಗೌಡ ಆರಿಸಿ ಬಂದಿದ್ದರು.

1978ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ವಿರುದ್ಧ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋತಿದ್ದ ವೀರೇಂದ್ರ ಪಾಟೀಲ್‌, 1980ರಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಚುನಾಯಿತರಾಗಿ, ಇಂದಿರಾ ಸಂಪುಟದಲ್ಲಿ ಪೆಟ್ರೋಲಿಯಂ ಖಾತೆ ಸಚಿವರಾಗಿದ್ದರು. ಇದಕ್ಕೂ ಮೊದಲು 1962ರಲ್ಲಿ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದ ಎಸ್‌. ನಿಜಲಿಂಗಪ್ಪ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ 1991ರಲ್ಲಿ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1980ರ ಲೋಕಸಭೆ ಚುನಾವಣೆಯಲ್ಲಿ ಸಿ.ಎಂ. ಸ್ಟೀಫನ್‌ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry