ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೇನಾಮಿ ವ್ಯವಹಾರಕ್ಕೆ ಮುಖ್ಯಮಂತ್ರಿ ಕುಮ್ಮಕ್ಕು’

ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಪುಟ್ಟಸ್ವಾಮಿ
Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ಮಗ ಡಾ. ಯತೀಂದ್ರ ಪಾಲುದಾರರಾಗಿರುವ ಶಾಂತ ಇಂಡಸ್ಟ್ರೀಸ್‌ಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿಕೊಡುವ ಮೂಲಕ ಬೇನಾಮಿ ವ್ಯವಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮ್ಮಕ್ಕು ನೀಡಿದ್ದಾರೆ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.

ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಅವರು, ‘ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಏನಿದು ಆರೋಪ?
ಮೆ. ಶಾಂತ ಇಂಡಸ್ಟ್ರಿಯಲ್ ಎಂಟರ್‍ಪ್ರೈಸಸ್‌ಗೆ ಸೇರಿದ ಜಮೀನನ್ನು 1977ರಲ್ಲಿ ಬಿಡಿಎ, ಮಹಾಲಕ್ಷ್ಮಿ ಲೇಔಟ್‍ನ ಮುಂದುವರಿದ ಬಡಾವಣೆಗಾಗಿ ಸ್ವಾಧೀನ ಮಾಡಿಕೊಂಡಿತ್ತು. ಸಂಸ್ಥೆಗೆ ಸೇರಿದ 1.23 ಲಕ್ಷ ಚದರ ಅಡಿ ಜಮೀನಿಗೆ ಪರಿಹಾರವಾಗಿ 1987ರಲ್ಲಿ ಸಂಸ್ಥೆಗೆ ಸುಮಾರು ₹ 29 ಲಕ್ಷ ಹಣ ನೀಡಿದೆ.

ರಾಜೇಶ್‌ಗೌಡ ಎಂಬುವರು 2010ರಲ್ಲಿ ಶಾಂತ ಇಂಡಸ್ಟ್ರಿಸ್‌ ಪಾಲುದಾರಾದಾಗ ಕಂಪೆನಿಯಿಂದ ವಶಪಡಿಸಿಕೊಂಡ ಭೂಮಿಗೆ ಬದಲಿ ಜಮೀನು ನೀಡುವಂತೆ 2011ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಆಗ ಬಿಡಿಎ, ಪರ್ಯಾಯ ಜಮೀನು ನೀಡಲು ಅವಕಾಶವಿಲ್ಲ ಎಂದು ಅಭಿಪ್ರಾಯ ನೀಡಿತ್ತು.

‘ರಾಜೇಶ್ ಗೌಡ 2009ರಲ್ಲಿ ಸ್ಥಾಪಿಸಿದ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಇಂಡಿಯಾ ಕಂಪೆನಿಗೆ ಮುಖ್ಯಮಂತ್ರಿ ಮಗ ಯತೀಂದ್ರ 2014ರಲ್ಲಿ ನಿರ್ದೇಶಕರಾದರು. ಆ ಬಳಿಕ ಜಮೀನು ಮರು ಮಂಜೂರಾತಿ ವಿಚಾರ ಮತ್ತೆ ಬಿಡಿಎ ಸಭೆ ಮುಂದೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಿವೃತ್ತ ನ್ಯಾಯಾಧೀಶ ಎ.ಆರ್. ಲಕ್ಷ್ಮಣ್ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಯಿತು. ಅವರು ಪರ್ಯಾಯ ಜಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದರಿಂದ ಬಿಡಿಎ ಮಾರ್ಚ್ 2014ರಲ್ಲಿ ಬದಲಿ ಜಮೀನು ನೀಡಲು ಕ್ರಮ ವಹಿಸುವಂತೆ ಆದೇಶ ಹೊರಡಿಸಿತು.

ಬೆಲೆ ಬಾಳುವ ಬದಲಿ ಜಮೀನು ನೀಡಿದ ಆರೋಪ:
2016ರಂದು ಹೆಬ್ಬಾಳ ಮೇಲುಸೇತುವೆಗೆ ಹೊಂದಿಕೊಂಡಂತೆ ಅರ್ಕಾವತಿ ಬಡಾವಣೆಗೆ ಭೂ ಸ್ವಾಧೀನವಾಗಿದ್ದ ಹೆಬ್ಬಾಳ ಸರ್ವೆ ನಂ. 109-114ರವರೆಗಿನ ಸುಮಾರು 2.19 ಎಕರೆ ಜಮೀನನ್ನು ಉಚಿತವಾಗಿ ಶಾಂತ ಇಂಡಸ್ಟ್ರಿಯಲ್ ಎಂಟರ್‍ಪ್ರೈಸಸ್‍ಗೆ ಬಿಡಿಎ ಮಂಜೂರು ಮಾಡಿದೆ. ನೋಂದಣಿ ಶುಲ್ಕವಾಗಿ ನೆಪ ಮಾತ್ರಕ್ಕೆ ₹ 5 ಲಕ್ಷ ಪಡೆದುಕೊಂಡು, ಮಾರುಕಟ್ಟೆ ಬೆಲೆ ಪ್ರಕಾರ ಸುಮಾರು ₹ 200 ಕೋಟಿ ಮೌಲ್ಯದ ಜಮೀನನ್ನು ಬದಲಿಯಾಗಿ ನೀಡಲಾಗಿದೆ. ಇದರ ಹಿಂದೆ ಮುಖ್ಯಮಂತ್ರಿ ಕೈವಾಡವಿದೆ’ ಎಂದು ಅವರು ಆರೋಪಿಸಿದರು.

‘ಬೇನಾಮಿ ಆಸ್ತಿ ವ್ಯವಹಾರದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ. ನಿಮಗೆ ಬೇಕಾದ ಹಾಗೆ ಮಾಡುವುದಾದರೆ, ಬಿಡಿಎ, ಕಾನೂನು ಇಲಾಖೆ, ಮಂಡಳಿ ಎಲ್ಲವನ್ನೂ ಮುಚ್ಚಿಬಿಡಿ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹಳೆ ದಾಖಲೆ!

ಪುಟ್ಟಸ್ವಾಮಿ ಬಿಡುಗಡೆ ಮಾಡಿದ ದಾಖಲೆಗಳು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಒಂದೂವರೆ ವರ್ಷ ಹಿಂದೆ ಬಿಡುಗಡೆ ಮಾಡಿದ ಹಳೆ ದಾಖಲೆಗಳು ಎಂದು ಮಾಧ್ಯಮ ಪ್ರತಿನಿಧಿಗಳು ಗಮನಕ್ಕೆ ತರುತ್ತಿದ್ದಂತೆ ಪುಟ್ಟಸ್ವಾಮಿ ಪೇಚಿಗೆ ಸಿಲುಕಿದರು.

ಆರೋಪದಲ್ಲಿ ಹುರುಳಿಲ್ಲ: ಯತೀಂದ್ರ

‘ಬಿಜೆಪಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಶಾಂತಾ ಇಂಡಸ್ಟ್ರಿಸ್‌ಗೂ ನನಗೂ ಸಂಬಂಧ ಇಲ್ಲ’ ಎಂದು ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT