ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಮತ್ತೆ ಭಾರಿ ಮಳೆ; ರಸ್ತೆಗಳು ಜಲಾವೃತ

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶನಿವಾರ ಮತ್ತೆ ಜೋರಾಗಿ ಮಳೆ ಸುರಿದಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡವು.

ಯಶವಂತಪುರ, ಹೆಬ್ಬಾಳ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಯಲಹಂಕ, ಜಕ್ಕೂರು ಸುತ್ತಮುತ್ತ ಭಾರಿ ಮಳೆಯಾಯಿತು. ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಬಸವೇಶ್ವರನಗರ, ಬಸವನಗುಡಿ, ಚಾಮರಾಜಪೇಟೆ, ಎಂ.ಜಿ.ರಸ್ತೆ, ಶಿವಾಜಿನಗರ, ಅಶೋಕನಗರದಲ್ಲಿ ಸಾಧಾರಣ ಮಳೆಯಾಯಿತು.

ಶಿವಾನಂದ ವೃತ್ತದ ರೈಲ್ವೆ ಕೆಳ ಸೇತುವೆ ಬಳಿಯ ಬೈಕ್‌ ಶೋರೂಮ್‌ಗೆ ನೀರು ನುಗ್ಗಿತ್ತು. 10ಕ್ಕೂ ಹೆಚ್ಚು ಬೈಕ್‌ಗಳು ನೀರಿನಲ್ಲಿ ಮುುಳುಗಿದವು.  ಹೆಬ್ಬಾಳ, ಕೆ.ಆರ್‌.ಪುರ, ಅಶೋಕನಗರ, ಜಯಮಹಲ್‌ ರಸ್ತೆ, ಉಪ್ಪಾರಪೇಟೆಯ ಎಲೈಟ್‌ ಜಂಕ್ಷನ್‌, ಹೊಸೂರು ರಸ್ತೆಯ ಆನೆಪಾಳ್ಯ ಹಾಗೂ ಚಾಲುಕ್ಯ ವೃತ್ತದಲ್ಲಿ ರಸ್ತೆ ಮೇಲೆ 2 ಅಡಿಗಳಷ್ಟು ನೀರು ಹರಿಯಿತು.

ಮೂರು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕೋರಮಂಗಲ ರಸ್ತೆ, ಬಿ.ಟಿ.ಎಂ ಲೇಔಟ್‌ಗಳಲ್ಲಿ ನಿಂತ ನೀರು ಕಡಿಮೆ ಆಗಿಲ್ಲ. ಶನಿವಾರ ಬೆಳಿಗ್ಗೆ ನೀರಿನ ಮಟ್ಟ ಸ್ವಲ್ಪ ಕಡಿಮೆ ಆಗಿತ್ತು. ಆದರೆ,  ಮಧ್ಯಾಹ್ನದ ಹೊತ್ತಿಗೆ ಮತ್ತೆ ಮಳೆ ಬಂದಿದ್ದರಿಂದ ನೀರಉ ಪುನಃ ಹೆಚ್ಚಾಯಿತು. ಸ್ಥಳೀಯ ನಿವಾಸಿಗಳು, ನೀರಿನಲ್ಲೇ ಓಡಾಡಬೇಕಾದ ಸ್ಥಿತಿ ಇಲ್ಲಿದೆ. ವೃದ್ಧರು ಹಾಗೂ ಮಕ್ಕಳು, ಮನೆಯಿಂದ ಹೊರಬರಲಾರದ ಸ್ಥಿತಿ ನಿರ್ಮಾಣವಾಗಿದೆ.

ದೊಡ್ಡಬೊಮ್ಮಸಂದ್ರದಲ್ಲಿ ರಾಜಕಾಲುವೆಯಲ್ಲಿ ನೀರು ತುಂಬಿ ಹರಿದು, ಅಕ್ಕ–ಪಕ್ಕದ ಅಂಗಡಿಗಳಿಗೆ ನುಗ್ಗಿತ್ತು. ಇತ್ತೀಚೆಗಷ್ಟೇ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿತ್ತು. ಅದೇ ಜಾಗದಲ್ಲಿ ‍ಪುನಃ ಅಂಗಡಿಗಳು ತಲೆ ಎತ್ತಿದ್ದವು.

ಸರಾಸರಿ 6.5 ಮಿ.ಮೀ ಮಳೆ: ‘ನಗರದಲ್ಲಿ ಶನಿವಾರ ಸರಾಸರಿ 6.5 ಮಿ.ಮೀ ಮಳೆಯಾಗಿದೆ. ದೊಡ್ಡಬೊಮ್ಮಸಂದ್ರ ಸುತ್ತಮುತ್ತ 91.50 ಮಿ.ಮೀ, ವಡ್ಡರಹಳ್ಳಿ 71.5 ಮಿ.ಮೀ, ವಿದ್ಯಾರಣ್ಯಪುರ 40.5 ಮಿ.ಮೀ, ಜಕ್ಕೂರು 31.5 ಮಿ.ಮೀ, ಯಶವಂತಪುರ 42.5 ಮಿ.ಮೀ. ಬಾಗಲಗುಂಟೆ 41.5 ಮಿ.ಮೀ ಹಾಗೂ ಎಚ್‌.ಎಸ್‌.ಆರ್‌ ಲೇಔಟ್‌ನಲ್ಲಿ 12 ಮಿ.ಮೀ ಮಳೆ ಸುರಿದಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT