ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಟೋನ್ಮೆಂಟ್‌ನಲ್ಲೇ ಮೆಟ್ರೊ ನಿಲ್ದಾಣ ನಿರ್ಮಿಸಿ

ನಾಗರಿಕ ದುಂಡು ಮೇಜಿನ ಚರ್ಚೆಯಲ್ಲಿ ನಗರ ಯೋಜನಾ ತಜ್ಞರು, ನಾಗರಿಕರ ಒತ್ತಾಯ
Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿನ ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣ ಸ್ಥಳಾಂತರಿಸಬಾರದು. ಮೂಲ ಯೋಜನೆಯಂತೆಯೇ ಮಾರ್ಗ ನಿರ್ಮಿಸಬೇಕು. ಯಾವುದೇ ಯೋಜನೆಯನ್ನು ಸಾರ್ವಜನಿಕರ ಹಿತಕ್ಕೆ ತಕ್ಕಂತೆ ಜಾರಿಗೊಳಿಸಬೇಕೆ ಹೊರತು, ಅಧಿಕಾರಿಗಳು ತಮಗೆ ಇಷ್ಟಬಂದಂತೆ ಬದಲಿಸಬಾರದು’.

–ಇದು ನಗರದಲ್ಲಿ ಶನಿವಾರ ಪ್ರಜಾ ರಾಗ್‌, ಬಸ್‌ ಪ್ರಯಾಣಿಕರ ವೇದಿಕೆ, ಸಿಟಿಜನ್‌ ಫಾರ್‌ ಬೆಂಗಳೂರು ಹಾಗೂ ಸಿಟಿಜನ್‌ ಆಕ್ಷನ್‌ ಫೋರಂ ಆಯೋಜಿಸಿದ್ದ ‘ನಮ್ಮ ಮೆಟ್ರೊ ಹಾಗೂ ಸಾರ್ವಜನಿಕ ಸಾರಿಗೆ ಸಂಯೋಜನೆ’ ಕುರಿತ ನಾಗರಿಕ ದುಂಡು ಮೇಜಿನ ಚರ್ಚೆಯಲ್ಲಿ ನಗರ ಯೋಜನಾ ತಜ್ಞರು, ಜನಪ್ರತಿನಿಧಿಗಳು ಹಾಗೂ ನಾಗರಿಕರು ವ್ಯಕ್ತಪಡಿಸಿದ ಅಭಿಮತ.

‘ಸಾರ್ವಜನಿಕ ಹಿತದೃಷ್ಟಿಯಿಂದ ಕಂಟೋನ್ಮೆಂಟ್‌ನಲ್ಲೇ ಮೆಟ್ರೊ ನಿಲ್ದಾಣ ನಿರ್ಮಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದರೂ ಅವರಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ.ಮೋಹನ್‌ ಅಸಮಾಧಾನ ವ್ಯಕ್ತಪಡಿಸಿದರು.

‘ನಿಲ್ದಾಣ ಸ್ಥಳಾಂತರಿಸಲು ಬಿಎಂಆರ್‌ಸಿಎಲ್‌ ನೀಡುತ್ತಿರುವ ಕಾರಣಗಳು ಒಪ್ಪುವಂತಿಲ್ಲ. ಕಂಟೋನ್ಮೆಂಟ್‌ನಲ್ಲೇ ಮೆಟ್ರೊ ನಿಲ್ದಾಣ ಬೇಕೆಂದು ಜನರು ದನಿ ಎತ್ತುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಅವರು ಮೌನ ಮುರಿಯದಿರುವುದು ವಿಪರ್ಯಾಸ’ ಎಂದರು.

‘ನಮ್ಮ ಮೆಟ್ರೊ’ದಲ್ಲಿರುವ ಲೋಪಗಳ ಬಗ್ಗೆ ವಿವರಿಸಿದ ‘ಪ್ರಜಾ ರಾಗ್‌’ ವೇದಿಕೆ ಸದಸ್ಯ ಸಂಜೀವ್‌ ದ್ಯಾಮಣ್ಣನವರ್‌, ‘ಕೆಲವು ಮೆಟ್ರೊ ನಿಲ್ದಾಣಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಸರಿಯಾಗಿ ಸಂಯೋಜನೆಗೊಂಡಿಲ್ಲ. ಮೆಟ್ರೊ ಇಳಿದ ತಕ್ಷಣ ಇನ್ನೊಂದು ಬದಿಯ ರಸ್ತೆಗೆ ಇಳಿಯಲು ಮತ್ತು ಪಾದಚಾರಿ ಮಾರ್ಗಗಳಿಗೆ ತಲುಪಲು ಸ್ಕೈವಾಕ್‌ ಇಲ್ಲ. ಯಶವಂತಪುರ, ದಾಸರಹಳ್ಳಿ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಇಂತಹ ಸಮಸ್ಯೆಯನ್ನು ಪ್ರಯಾಣಿಕರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳು ಮೆಟ್ರೊ ಬಗ್ಗೆ ಪ್ರಯಾಣಿಕರಿಗೆ ನಕರಾತ್ಮಕ ಭಾವನೆ ಮೂಡಿಸುತ್ತವೆ’ ಎಂದರು.

ಟ್ರಾನ್ಸ್‌ಪೋರ್ಟರ್‌ ರಿಸರ್ಚ್‌ ಗ್ರೂಫ್‌ ಆಫ್‌ ಇಂಡಿಯಾ (ಟಿಜಿಆರ್‌) ಸಂಸ್ಥೆ ಅಧ್ಯಕ್ಷ ಆಶಿಶ್‌ ವರ್ಮಾ ಮಾತನಾಡಿ, ‘ಒಂದೇ ಸ್ಮಾರ್ಟ್‌ ಕಾರ್ಡ್‌ ಬಳಸಿ ಮೆಟ್ರೊ, ಬಸ್‌ಗಳಲ್ಲಿ ಪ್ರಯಾಣಿಸುವಂತಿರಬೇಕು. ಅಲ್ಲದೆ, ಬಸ್‌ ಮತ್ತು ಮೆಟ್ರೊ ಸೌಲಭ್ಯವನ್ನು  ಒಂದೇ ಸಂಸ್ಥೆ ನಿರ್ವಹಿಸುವಂತಿರಬೇಕು. ಆಗ ಮಾತ್ರ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನು ಪ್ರಯಾಣಿಕರಿಗೆ ಸಮರ್ಪಕವಾಗಿ ಒದಗಿಸಲು ಸಾಧ್ಯ’ ಎಂದರು.

ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ ಯಾದವ್‌ ಮಾತನಾಡಿ, ‘ಮೆಟ್ರೊ ರೈಲು ನಿಲ್ದಾಣಗಳಿಗೆ ಪೂರಕ ಸಂಪರ್ಕ ಸೇವೆ ಒದಗಿಸಲು 180 ಅತ್ಯಾಧುನಿಕ ಬಸ್‌ಗಳನ್ನು ನೀಡಲಾಗಿದೆ. ಆದರೆ, ಈ ಫೀಡರ್‌ ಸೇವೆಯಿಂದ ನಿರೀಕ್ಷಿತ ಆದಾಯ ಸಿಗದೆ, ಪ್ರತಿ ತಿಂಗಳು ನಷ್ಟ ಉಂಟಾಗುತ್ತಿದೆ. ಮೆಟ್ರೊ ಪ್ರಯಾಣಿಕರು ಈ ಬಸ್‌ಗಳ ಸೇವೆ ಬಳಸಿಕೊಳ್ಳಬೇಕು’ ಎಂದರು.

ಮಲ್ಲೇಶ್ವರದ ನಿವಾಸಿ ರೇಖಾ ಆಚಾರ್ಯ ಅವರು, ‘ಮಲ್ಲೇಶ್ವರದಿಂದ ಮೆಟ್ರೊ ನಿಲ್ದಾಣಗಳು ಎರಡೂವರೆ ಕಿ.ಮೀ. ದೂರದಲ್ಲಿವೆ. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಬಿಎಂಟಿಸಿಯಿಂದ ಫೀಡರ್‌ ಬಸ್‌ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

**

ಬಿಎಂಆರ್‌ಸಿಎಲ್‌ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರ ಕೈಬಿಡದಿದ್ದರೆ, ಸ್ಟೀಲ್‌ ಬ್ರಿಡ್ಜ್‌ ವಿರುದ್ಧ ನಡೆದ ಆಂದೋಲನದಂತೆ ಮತ್ತೊಂದು ಹೋರಾಟಕ್ಕೆ ನಾಂದಿಯಾಗಬಹುದು.
–ಅಶ್ವಿನ್‌ ಮಹೇಶ್‌, ನಗರ ಯೋಜನಾ ತಜ್ಞ

**

‘ನಮ್ಮ ಮೆಟ್ರೊ’ ಮೂಲ ಉದ್ದೇಶವೇ ವಾಹನ ದಟ್ಟಣೆ ಮತ್ತು ಪರಿಸರ ಮಾಲಿನ್ಯ ತಗ್ಗಿಸುವುದಾಗಿದೆ. ಆದರೆ, ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣ ಬದಲಿಸುವುದು ಮೂಲ ಉದ್ದೇಶಕ್ಕೆ ವಿರುದ್ಧವಾದುದು.
–ರಾಜಕುಮಾರ್‌ ದುಗ್ಗರ್‌, ರೈಲ್ವೆ ಹೋರಾಟ ವೇದಿಕೆ ಸದಸ್ಯ

**

ಕಡಿಮೆ ಖರ್ಚಿನ ಸಬ್ಅರ್ಬನ್‌ ರೈಲುಗಳಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಿದೆ. ಕೇಂದ್ರ ಸರ್ಕಾರ ಸಬ್ಅರ್ಬನ್‌ ರೈಲು ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಕೊಡಬೇಕು.
–ಆನಂದ್‌, ರೈಲ್ವೆ ನಿವೃತ್ತ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT