ಸಿಂಗಪುರ, ಹಾಲೆಂಡ್‌ ರಸ್ತೆಗಳಲ್ಲಿ ಗುಂಡಿ ಏಕಿಲ್ಲ

ಭಾನುವಾರ, ಜೂನ್ 16, 2019
30 °C

ಸಿಂಗಪುರ, ಹಾಲೆಂಡ್‌ ರಸ್ತೆಗಳಲ್ಲಿ ಗುಂಡಿ ಏಕಿಲ್ಲ

Published:
Updated:
ಸಿಂಗಪುರ, ಹಾಲೆಂಡ್‌ ರಸ್ತೆಗಳಲ್ಲಿ ಗುಂಡಿ ಏಕಿಲ್ಲ

ಬೆಂಗಳೂರು: ‘ಸಿಂಗಪುರ, ಹಾಲೆಂಡ್‌, ಥಾಯ್ಲೆಂಡ್‌, ಶ್ರೀಲಂಕಾದಲ್ಲಿ ಭಾರಿ ಮಳೆ ಬೀಳುತ್ತದೆ. ಆಗಾಗ್ಗೆ ಪ್ರವಾಹಗಳೂ ಉಂಟಾಗುತ್ತವೆ. ಹೀಗಿದ್ದರೂ ಅಲ್ಲಿನ ರಸ್ತೆಗಳು ಬೇಗ ಹಾಳಾಗುವುದಿಲ್ಲ, ಗುಂಡಿಗಳು ಬೀಳುವುದಿಲ್ಲ. ಆದರೆ, ಬೆಂಗಳೂರಿನ ರಸ್ತೆಗಳಲ್ಲಿ ಮಾತ್ರ ಗುಂಡಿಗಳು ಏಕೆ ಬೀಳುತ್ತವೆ.’

ನಗರ ಸಾರಿಗೆ ತಜ್ಞರ ಪ್ರಶ್ನೆ ಇದು. ರಸ್ತೆಗಳ ಈ ದುಸ್ಥಿತಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೇ (ಬಿಬಿಎಂಪಿ) ಕಾರಣ ಎಂಬ ಉತ್ತರವನ್ನೂ ಅವರು ನೀಡುತ್ತಾರೆ.

‘ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ಪ್ರವಾಹ ಉಂಟಾಗುವುದು, ಚಂಡಮಾರುತ ಬೀಸುವುದು, ಹಿಮಪಾತ ಬಿಳುವುದು ಸಾಮಾನ್ಯ. ಇದರಿಂದ ಅಲ್ಲಿನ ರಸ್ತೆಗಳಿಗೆ ಹೆಚ್ಚಿನ ಹಾನಿ ಉಂಟಾಗುವುದಿಲ್ಲ. ಅಲ್ಲೆಲ್ಲಾ ವೈಜ್ಞಾನಿಕ ಹಾಗೂ ಗುಣಮಟ್ಟದಿಂದ ಕೂಡಿದ ರಸ್ತೆಗಳನ್ನು ನಿರ್ಮಿಸುತ್ತಾರೆ. ಗುಂಡಿ ಬೀಳದಂತೆ ಎಚ್ಚರಿಕೆ ವಹಿಸುತ್ತಾರೆ. ಹೀಗಾಗಿ ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪಗಳು ಸಂಭವಿಸಿದರೂ ರಸ್ತೆ ಸಾರಿಗೆ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದು ತೀರಾ ಕಡಿಮೆ’ ಎಂದು ನಗರ ಸಾರಿಗೆ ತಜ್ಞ ಎಂ.ಎನ್‌.ಶ್ರೀಹರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮಲ್ಲಿ ಮಾರ್ಗಸೂಚಿ ಪ್ರಕಾರ ರಸ್ತೆಗಳನ್ನು ನಿರ್ಮಿಸುತ್ತಿಲ್ಲ. ಒಳಚರಂಡಿ ವ್ಯವಸ್ಥೆಯೂ ಸರಿಯಿಲ್ಲ. ರಸ್ತೆಯ ಮೇಲೆ ಬಿದ್ದ ನೀರು ಸರಾಗವಾಗಿ ಹರಿದು ಮೋರಿಗೆ ಹೋಗಬೇಕು. ಆದರೆ, ನಗರದ ಬಹುತೇಕ ರಸ್ತೆಗಳಲ್ಲಿ ನೀರು ನಿಲ್ಲುತ್ತದೆ. ಇದರಿಂದ ಬಿಟಮಿನ್‌ ಜಲ್ಲಿಕಲ್ಲುಗಳಿಂದ ಬೇರ್ಪಡುತ್ತದೆ. ಆಗ ರಸ್ತೆ ಗುಂಡಿ ಬೀಳುತ್ತದೆ’ ಎಂದರು.

‘ಮರಳು, ಜಲ್ಲಿಕಲ್ಲು ಹಾಗೂ ಬಿಟಮಿನ್‌ ಸೇರಿಸಿ 140 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಮಿಶ್ರಣ ಮಾಡಬೇಕು. ಇದರಲ್ಲಿ ಶೇ 5.5ರಷ್ಟು ಬಿಟಮಿನ್‌ ಇರಬೇಕು. ಡಾಂಬರು ಮಿಶ್ರಣವನ್ನು ರಸ್ತೆ ನಿರ್ಮಾಣದ ಸ್ಥಳಕ್ಕೆ ತಂದಾಗ 120 ಡಿಗ್ರಿ ಸೆಂಟಿಗ್ರೇಡ್‌ ಇರಬೇಕು. ಆದರೆ, ಬಹುತೇಕ ರಸ್ತೆಗಳಿಗೆ ಹಾಕುವ ಡಾಂಬರು ಮಿಶ್ರಣದಲ್ಲಿ ಶೇ 3.3ರಷ್ಟು ಬಿಟಮಿನ್‌ ಇರುತ್ತದೆ. ಮರಳಿಗೆ ಬದಲಾಗಿ ಮಣ್ಣು, ನಿಗದಿತ ಜಲ್ಲಿಗಿಂತ ದಪ್ಪ ಅಥವಾ ಸಣ್ಣ ಜಲ್ಲಿ ಹಾಕುತ್ತಾರೆ. ಜತೆಗೆ, 120 ಡಿಗ್ರಿ ಸೆಂಟಿಗ್ರೇಡ್‌ ಶಾಖವೂ ಇರುವುದಿಲ್ಲ. ಇದರಿಂದ ರಸ್ತೆಗೆ ಡಾಂಬರು ಸರಿಯಾಗಿ ಕಚ್ಚಿಕೊಳ್ಳುವುದಿಲ್ಲ. ಗುಂಡಿಗಳು ಬೇಗ ಬೀಳುತ್ತವೆ’ ಎಂದರು.

‘ನಿಯಮದ ಪ್ರಕಾರ ರಸ್ತೆಗಳನ್ನು ನಿರ್ಮಿಸಿದರೆ ಕನಿಷ್ಠ 5 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ಇಷ್ಟು ವರ್ಷಗಳವರೆಗೆ ರಸ್ತೆಯಲ್ಲಿ ಗುಂಡಿ ಬೀಳದಿದ್ದರೆ ತರಹೇವಾರಿ ಬಿಲ್‌ ಮಾಡುವುದಾದರೂ ಹೇಗೆ. ಅನೇಕ ಯೋಜನೆಗಳನ್ನು ಘೋಷಿಸಿ, ಹಣ ಕೊಳ್ಳೆ ಹೊಡೆಯಬೇಕಾದರೆ ರಸ್ತೆಗಳು ಬೇಗ ಹಾಳಾಗಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ವೈಟ್‌ ಟಾಪಿಂಗ್‌ ರಸ್ತೆ ನಿರ್ಮಿಸಿ’:

‘ಡಾಂಬರು ರಸ್ತೆಗಳ ನಿರ್ಮಾಣಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿಗಳನ್ನು ಸರ್ಕಾರ ಖರ್ಚು ಮಾಡುತ್ತಿದೆ. ಆದರೆ, ಕೆಲ ರಸ್ತೆಗಳು ಒಂದು ವರ್ಷಕ್ಕೆಲ್ಲಾ ಹಾಳಾಗುತ್ತಿವೆ ಹಾಗೂ ಗುಂಡಿಗಳು ಬೀಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಾದರೆ, ನಗರದ ಎಲ್ಲ ರಸ್ತೆಗಳನ್ನು ವೈಟ್‌ ಟಾಪಿಂಗ್‌ ಮಾಡುವುದು ಉತ್ತಮ’ ಎಂದು ವರ್ಲ್ಡ್‌ ಬ್ಯಾಂಕ್‌ (ಮೂಲಸೌಕರ್ಯ ಮತ್ತು ರಸ್ತೆ ಸುರಕ್ಷತೆ) ಸಲಹೆಗಾರ ಲೋಕೇಶ್‌ ಹೆಬ್ಬಾನಿ ತಿಳಿಸಿದರು.

‘ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ರಸ್ತೆಗಳು ಹೆಚ್ಚು ದಿನ ಬಾಳಿಕೆ ಬರುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ವಾಹನ ದಟ್ಟಣೆಗೆ ಅನುಸಾರವಾಗಿ ರಸ್ತೆಗಳ ಸಾಮರ್ಥ್ಯವನ್ನೂ ಹೆಚ್ಚಿಸಬೇಕು. ರಸ್ತೆಗಳ ಸಮರ್ಪಕ ನಿರ್ವಹಣೆ ಮಾಡಬೇಕು. ಗುಂಡಿ ಬಿದ್ದ ತಕ್ಷಣ ಅದನ್ನು ಮುಚ್ಚಬೇಕು’ ಎಂದು ಸಲಹೆ ನೀಡಿದರು.

**

‘ಓಬಿರಾಯನ ಕಾಲದ ತಂತ್ರಜ್ಞಾನ ಬಳಕೆ’

‘1820ರ ಸಂದರ್ಭದಲ್ಲಿ ಚಾಲ್ತಿಯಲ್ಲಿದ್ದ ವಾಟರ್‌ ಬೌಂಡ್‌ ಮಕಾಡಮ್ ತಂತ್ರಜ್ಞಾನದ ಪ್ರಕಾರವೇ ಈಗಲೂ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ನೆಲವನ್ನು ಸಮತಟ್ಟು ಮಾಡಿ, ಜಲ್ಲಿಕಲ್ಲು ಹಾಕಿ, ಅದರ ಮೇಲೆ ಡಾಂಬರು ಮಿಶ್ರಣ ಮಾಡುವ ಪದ್ಧತಿ ವಾಟರ್‌ ಬೌಂಡ್‌ ಮಕಾಡಮ್. ಆದರೆ, ವಿದೇಶಗಳಲ್ಲಿ ನಿರ್ಮಿಸುವ ರಸ್ತೆಗಳ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೆ, ಆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಲ್ಲಿ ನಾವು ಹಿಂದೆ ಉಳಿದಿದ್ದೇವೆ’ ಎಂದು ನಗರ ಯೋಜನಾ ತಜ್ಞ ನರೇಶ್‌ ನರಸಿಂಹನ್‌ ತಿಳಿಸಿದರು.

‘ಕಸವಿರಲಿ, ರಸ್ತೆಗಳಿರಲಿ ಯಾವುದೂ ಬಗೆಹರಿಸಲಾಗದಂತಹ ಸಮಸ್ಯೆಗಳೇನೂ ಅಲ್ಲ. ಆದರೆ, ಕಸದ ಸಮಸ್ಯೆ ಜೀವಂತವಾಗಿರಲು ಮಾಫಿಯಾವೊಂದು ಕೆಲಸ ಮಾಡುತ್ತಿದೆ. ಅದೇ ಮಾದರಿಯಲ್ಲೇ ರಸ್ತೆ ಗುಂಡಿಗಳು ಜೀವಂತವಾಗಿರುವಂತೆ ಕೆಲವರು ನೋಡಿಕೊಳ್ಳುತ್ತಿದ್ದಾರೆ. ಈ ಮಾಫಿಯಾದವರ ಜತೆ ಬಿಬಿಎಂಪಿಯ ಕೆಲ ಅಧಿಕಾರಿಗಳೂ ಶಾಮೀಲಾಗಿದ್ದಾರೆ’ ಎಂದು ದೂರಿದರು.

‘ನಗರದಲ್ಲಿ ಒಳಚರಂಡಿ ಸಂಪೂರ್ಣವಾಗಿ ಹದಗೆಟ್ಟಿದೆ. ರಸ್ತೆಗಳಲ್ಲಿ ಶೋಲ್ಡರ್‌ ಡ್ರೈನ್‌ ನಿರ್ಮಿಸಿದ್ದಾರೆ. ಇದನ್ನು ಕಿತ್ತು, ಪೈಪ್‌ ಡ್ರೈನ್‌ ನಿರ್ಮಿಸಬೇಕು. ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ನಗರದ ಎಲ್ಲ ಕಡೆಗಳಲ್ಲಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry