ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಲಯ ನಿಯಂತ್ರಣ ಪರಿಣಾಮಕಾರಿ ಜಾರಿ ಅಗತ್ಯ’

Last Updated 7 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಜನರು ನೆಮ್ಮದಿಯಾಗಿ ನಿದ್ದೆ ಮಾಡುವುದಕ್ಕಾದರೂ ವಲಯ ನಿಯಂತ್ರಣ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ ಎಂದು ಐ ಚೇಂಜ್‌ ಇಂದಿರಾನಗರ ಬಳಗದ ಸ್ಥಾಪಕಿ ಸ್ನೇಹಾ ನಂದಿಹಾಳ್‌ ಪ್ರತಿಪಾದಿಸಿದರು.

ನಮ್ಮ ಬೆಂಗಳೂರು ಪ್ರತಿಷ್ಠಾನ ಐಐಎಂಬಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಿಟಿ ಸ್ಕೇಪ್ಸ್’ ಕಾರ್ಯಕ್ರಮದಲ್ಲಿ ‘ನಗರದಲ್ಲಿ ವಲಯ ಯೋಜನೆಗಳು ಮತ್ತು ಅನುಷ್ಠಾನ’ ವಿಷಯದ ಕುರಿತು ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

‘40 ಅಡಿ ಹಾಗೂ ಅದಕ್ಕಿಂತಲೂ ಕಡಿಮೆ ಅಗಲವಿರುವ ರಸ್ತೆಗಳು ಮತ್ತು ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ 2014ರಲ್ಲಿ ಆದೇಶ ನೀಡಿದೆ. ಅದನ್ನು ಬಿಬಿಎಂಪಿ ಆಯುಕ್ತರು, ಅಧಿಕಾರಿ­ಗಳು ಸರಿಯಾಗಿ ಜಾರಿಗೆ ತರುತ್ತಿಲ್ಲ. ಇದರಿಂದ ನಿವಾಸಿಗಳು ಹಲವಾರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ವಾಣಿಜ್ಯ ಚಟುವಟಿಕೆಗಳಿಂದಾಗಿ ವಸತಿ ಪ್ರದೇಶದಲ್ಲಿ ಭದ್ರತೆ ಸಮಸ್ಯೆ ಉಂಟಾಗಿದೆ. ಈ ಚಟುವಟಿಕೆ ನಡೆಸುವ ಶೇ 90 ರಷ್ಟು ಜನ ಸರ್ಕಾರದಿಂದ ಪರವಾನಗಿ ಪಡೆದಿಲ್ಲ. ಪಾಲಿಕೆ ಸದಸ್ಯರು ಉದ್ಯಮಿಗಳ ಪರವಾಗಿದ್ದು, ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಿದರೆ ಅವರ ಜೀವನೋಪಾಯಕ್ಕೆ ತೊಂದರೆ ಆಗುತ್ತದೆ ಎಂಬ ದೋರಣೆ ಹೊಂದಿದ್ದಾರೆ’ ಎಂದರು.

ನಾಗರಿಕ ಕಾವಲು ಸಮಿತಿಯ ವಿಜಯನ್‌ ಮೆನನ್, ‘ವಲಯ ನಿಗದಿ ಪಡಿಸುವಿಕೆ ನಗರದ ಅಡಿಪಾಯ. ವಸತಿ ಪ್ರದೇಶಗಳು ವಸತಿಗೆ ಯೋಗ್ಯವಾಗಿರುವಂತೆ ಕಾಪಾಡಿಕೊಳ್ಳಲು ವಲಯ ನಿಯಂತ್ರಣ ಅಗತ್ಯ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಸಿದ್ಧಪಡಿಸಿರುವ ವಲಯ ನಿಯಂತ್ರಣ ನಿಯಮಗಳಲ್ಲಿ, 30 ಅಡಿ ಅಗಲದ ಕಿರಿದಾದ ರಸ್ತೆಗಳ ಪಕ್ಕದಲ್ಲೂ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.’

‘ಈ ಕರಡು ನಿಯಮಗಳು ನಿಯಮಗಳು ಜಾರಿಯಾದರೆ ಶಾಂತವಾಗಿರುವ ಪ್ರದೇಶಗಳು ನರಕದಂತಾಗಲಿವೆ. ಸರ್ಕಾರ ಇಂತಹ ನಿಯಮಗಳನ್ನು ಸದ್ದಿಲ್ಲದೇ ಜಾರಿಮಾಡುತ್ತದೆ’ ಎಂದು ಅವರು ದೂರಿದರು.

ಸಿಟಿಜನ್‌ ಆ್ಯಕ್ಷನ್‌ ಫೋರಂನ ಸಂಸ್ಥಾಪಕ ಅಧ್ಯಕ್ಷ ಎನ್‌.ಎಸ್‌.ಮುಕುಂದ, ‘ಏನೇ ಆದರೂ ಜನರು ಮಾತನಾಡುವುದಿಲ್ಲ ಎನ್ನುವ ವಾತಾವರಣವನ್ನು ನಾವೇ ಸೃಷ್ಟಿಸಿದ್ದೇವೆ. ಹಾಗಾಗಿ ರಾಜಕಾರಣಿಗಳು, ಅಧಿಕಾರಿಗಳು ರಾಜಾರೋಷವಾಗಿ ಕೊಳ್ಳೆ ಹೊಡೆಯುತ್ತಾರೆ. ಇನ್ನಾದರೂ ಜನರು ಸುತ್ತಮುತ್ತಲು ಏನಾಗುತ್ತಿದೆ ಎಂಬ ಬಗ್ಗೆ ಗಮನಹರಿಸಿ, ಸಕ್ರಿಯ ನಾಗರೀಕರಾಗಬೇಕು’ ಎಂದು ಒತ್ತಾಯಿಸಿದರು.

‘ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದಿರುವುದೇ ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ. ಅವರು ಸರಿಯಾಗಿದ್ದಾರೆ, ಸಾಕಷ್ಟು ಸಮಸ್ಯೆಗಳು ಪರಿಹಾರ ಆಗುತ್ತವೆ’ ಎಂದರು.

ನಗರದಲ್ಲಿ ನೀರಿನ ಸುಸ್ಥೀರತೆ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ವಿಜ್ಞಾನಿ ಟಿ.ವಿ. ರಾಮಚಂದ್ರ, ‘ಸ್ವಲ್ಪ ಜೋರು ಮಳೆ ಬಂದರೆ ಸಾಕು ಬೆಂಗಳೂರು ಕೆರೆಯಾಗುತ್ತದೆ. ಶೇ 78ರಷ್ಟು ಭೂ ಭಾಗ ಕಾಂಕ್ರೀಟ್‌ನಿಂದ ಮುಚ್ಚಿಹೋಗಿರುವುದೇ ಇದಕ್ಕೆ ಪ್ರಮುಖ ಕಾರಣ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭೂ ಒತ್ತುವರಿ, ಕೆರೆಗಳ ಒತ್ತುವರಿ, ಒಳಚರಂಡಿ ವ್ಯವಸ್ಥೆಯ ಪೈಪ್‌ಗಳು, ಮ್ಯಾನ್ ಹೋಲ್‌ಗಳು ಹಾಗೂ ಕೆರೆ ಆಸುಪಾಸಿನಲ್ಲಿ ಕಟ್ಟಡ ತ್ಯಾಜ್ಯ ಸುರಿಯುವ ಅಭ್ಯಾಸದಿಂದ ಮಳೆ ನೀರು ಹರಿದು ಹೋಗುವ ದಾರಿಯನ್ನು ಸಂಪೂರ್ಣ ಮುಚ್ಚಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT