ಹಜ್‌ ಸಬ್ಸಿಡಿ ರದ್ದು

ಮಂಗಳವಾರ, ಮೇ 21, 2019
23 °C
ಕರಡು ನೀತಿ ಸಿದ್ಧ: 2018ರಿಂದಲೇ ಜಾರಿ ಸಾಧ್ಯತೆ

ಹಜ್‌ ಸಬ್ಸಿಡಿ ರದ್ದು

Published:
Updated:
ಹಜ್‌ ಸಬ್ಸಿಡಿ ರದ್ದು

ಮುಂಬೈ: ಹಜ್‌ ಯಾತ್ರೆಗೆ ಸಂಬಂಧಿಸಿದ ಕರಡು ನೀತಿ ಸಿದ್ಧವಾಗಿದ್ದು, ಯಾತ್ರಿಕರಿಗೆ ನೀಡುವ ಸಹಾಯಧವನ್ನು ರದ್ದುಪಡಿಸುವ ಪ್ರಸ್ತಾವವನ್ನು ಇದು ಹೊಂದಿದೆ. ಜತೆಗೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು ಪುರುಷರ ಜತೆ ಇಲ್ಲದೆ ಕನಿಷ್ಠ ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್‌ ಅಮಾನುಲ್ಲಾ ಅವರ ನೇತೃತ್ವದ ಸಮಿತಿಯು 2018–2022ರ ಅವಧಿಯ ಹಜ್‌ ನೀತಿಯ ಕರಡನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಸೌದಿ ಅರೇಬಿಯಾದ ಮೆಕ್ಕಾಕ್ಕೆ ಹಜ್‌ಗಾಗಿ ವಿಮಾನ ಏರುವ ನಿಲ್ದಾಣಗಳ ಸಂಖ್ಯೆಯನ್ನು ಈಗಿನ 21ರಿಂದ ಒಂಬತ್ತಕ್ಕೆ ಇಳಿಸುವಂತೆಯೂ ಕರಡು ನೀತಿಯಲ್ಲಿ ಸೂಚಿಸಲಾಗಿದೆ.

‘2018ರ ಹಜ್‌ ಯಾತ್ರೆಯು ಹೊಸ ನೀತಿಗೆ ಅನುಗುಣವಾಗಿ ಇರುತ್ತದೆ. ಕರಡು ನೀತಿಯಲ್ಲಿ ಪ್ರಸ್ತಾಪಿಸಲಾಗಿರುವ ಸೌಲಭ್ಯಗಳನ್ನು ನೋಡಿದರೆ ಇದು ಉತ್ತಮ ನೀತಿ ಅನಿಸುತ್ತದೆ. ಇದು ಪಾರದರ್ಶಕ ಮತ್ತು ಜನಸ್ನೇಹಿಯಾಗಿದೆ. ಜತೆಗೆ ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ’ ಎಂದು ಕರಡು ನೀತಿಯನ್ನು ಪಡೆದುಕೊಂಡ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ.

ಹಜ್‌ ಸಹಾಯಧನವನ್ನು 2022ರ ಹೊತ್ತಿಗೆ ರದ್ದುಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಅದರ ಪ್ರಕಾರ ಈ ನೀತಿ ಸಿದ್ಧಪಡಿಸಲಾಗಿದೆ. ಸಚಿವಾಲಯವು ಕರಡು ನೀತಿಯ ಪರಿಶೀಲನೆ ನಡೆಸಿದ ಬಳಿಕ ಸಂಬಂಧಪಟ್ಟ ಎಲ್ಲರ ಜತೆಯೂ ಚರ್ಚಿಸಲಾಗುವುದು ಎಂದು ಸಚಿವಾಲಯದ ಮೂಲಗಳು ಹೇಳಿವೆ.

ಜತೆಗೆ ಪುರುಷ ಬೇಕಿಲ್ಲ:

ಪುರುಷನೊಬ್ಬನ ಜತೆ ಇಲ್ಲದೆ ಮಹಿಳೆಯರು ಹಜ್‌ ಯಾತ್ರೆ ಕೈಗೊಳ್ಳುವುದಕ್ಕೆ ಈವರೆಗಿನ ನೀತಿಯಲ್ಲಿ ಅವಕಾಶ ಇರಲಿಲ್ಲ. ಮಹಿಳೆಗೆ ವಿವಾಹ ನಿಷಿದ್ಧವಾಗಿರುವ ಪುರುಷನೇ ಜತೆಗೆ ಇರಬೇಕಿತ್ತು (ಉದಾಹರಣೆಗೆ ತಂದೆ, ಸಹೋದರ, ಮಗ). 45 ವರ್ಷ ದಾಟಿದ ಮಹಿಳೆಯರಿಗೆ ಸಂಬಂಧಿಸಿ ಈ ನಿಯಮವನ್ನು ಬದಲಾಯಿಸಲಾಗಿದೆ. ಆದರೆ 45ರೊಳಗಿನ ಮಹಿಳೆಯರು ಯಾತ್ರೆ ಕೈಗೊಳ್ಳಲು ಪುರುಷನೊಬ್ಬನ ಜತೆ ಇರಲೇಬೇಕು. ಇಂತಹ ಪುರುಷರಿಗೆ ಮೀಸಲಿರುವ ಅವಕಾಶವನ್ನು ಈಗಿನ 200ರಿಂದ 500ಕ್ಕೆ ಏರಿಸಲಾಗಿದೆ.

ಭಾರತೀಯ ಹಜ್‌ ಸಮಿತಿ ಮತ್ತು ಖಾಸಗಿ ಪ್ರವಾಸ ಸಂಯೋಜಕರ ನಡುವೆ ಹಜ್‌ ಯಾತ್ರಿಕರ ಹಂಚಿಕೆ ಪ್ರಮಾಣವನ್ನು ಹೆಚ್ಚು ತಾರ್ಕಿಕವಾಗಿ ರೂಪಿಸಲಾಗುವುದು. ಮುಂದಿನ ಐದು ವರ್ಷ ಇದು 70:30 ಅನುಪಾತದಲ್ಲಿ ಇರಲಿದೆ. ಹರಾಜು ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಿ ಗುತ್ತಿಗೆದಾರರ ಕೂಟದ ನಿಯಂತ್ರಣವನ್ನು ತಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಹಡಗು ಯಾತ್ರೆಗೆ ಅವಕಾಶ:

ಹಡಗಿನ ಮೂಲಕ ಯಾತ್ರೆ ಕೈಗೊಳ್ಳುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕರಡು ನೀತಿ ಹೇಳಿದೆ. ವಿಮಾನಕ್ಕೆ ಹೋಲಿಸಿದರೆ ಹಡಗಿನ ಪ್ರಯಾಣ ಅಗ್ಗ. ಈ ಬಗ್ಗೆ ಸೌದಿ ಅರೇಬಿಯಾ ಸರ್ಕಾರದ ಜತೆ ಮಾತುಕತೆ ನಡೆಸಲಾಗುವುದು. ಬಳಿಕ ಇದರ ಕಾರ್ಯಸಾಧುತ್ವದ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಹೇಳಲಾಗಿದೆ.

ಹಡಗು ಯಾತ್ರೆಯ ಪ್ರಸ್ತಾವ ಇರುವುದರಿಂದ ಹಜ್‌ ಯಾತ್ರೆಯ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. 4,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯದ ಹಡಗುಗಳನ್ನು ಬಳಸಿಕೊಳ್ಳಲಾಗುವುದು. ಇಂತಹ 10 ಹಡಗುಗಳನ್ನು ಬಳಸಿಕೊಂಡರೆ 40ರಿಂದ 50 ಸಾವಿರ ಯಾತ್ರಿಕರನ್ನು ಒಯ್ಯಬಹುದು ಎಂದು ಮೂಲಗಳು ಹೇಳಿವೆ.

9 ಕೇಂದ್ರಗಳು ಮಾತ್ರ:

ಯಾತ್ರೆ ಕೈಗೊಳ್ಳಲು ಅವಕಾಶ ನೀಡಲಾಗುವ ವಿಮಾನ ನಿಲ್ದಾಣಗಳು: ದೆಹಲಿ, ಲಖನೌ, ಕೋಲ್ಕತ್ತ, ಅಹಮದಾಬಾದ್‌, ಮುಂಬೈ, ಚೆನ್ನೈ, ಹೈದರಾಬಾದ್‌, ಬೆಂಗಳೂರು ಮತ್ತು ಕೊಚ್ಚಿ. ಈ ಕೇಂದ್ರಗಳಲ್ಲಿ ಹಜ್ ಭವನಗಳನ್ನು ನಿರ್ಮಿಸಲಾಗುವುದು.

=======

* ಹಜ್‌ ಸಹಾಯಧನ ರದ್ದತಿಯಿಂದ ಉಳಿಯುವ ಹಣ ಮುಸ್ಲಿಮರ ಶಿಕ್ಷಣಕ್ಕೆ ಬಳಕೆ

* ಭಾರತದಿಂದ ಪ್ರತಿ ವರ್ಷ ಹಜ್‌ ಯಾತ್ರೆ ಕೈಗೊಳ್ಳಬಹುದಾದ ಜನರ ಗರಿಷ್ಠ ಸಂಖ್ಯೆ: 1.70 ಲಕ್ಷ

* ಎಲ್ಲ ಯಾತ್ರಿಕರಿಗೆ ಸೌದಿ ಅರೇಬಿಯಾದ ಮಿನಾದಲ್ಲಿಯೇ ವಾಸ್ತವ್ಯ ಕಲ್ಪಿಸಲು ಯೋಜನೆ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry