ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಮನೆಗೆ ನುಗ್ಗಿ ದಾಂದಲೆ: 21 ಮಂದಿ ಬಂಧನ

Last Updated 7 ಅಕ್ಟೋಬರ್ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರ ಮನೆಗೆ ನುಗ್ಗಿ ದಾಂದಲೆ ಮಾಡಿದ ಆರೋಪದಡಿ ‘ಕರವೇ ಯುವಸೇನಾ’ ಸಂಘಟನೆಯ 21 ಕಾರ್ಯಕರ್ತರನ್ನು  ಹೈಗ್ರೌಂಡ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿದ್ದು, ಇಂಥ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಾರ್ಯಕರ್ತರು, ಸ್ಯಾಂಕಿ ರಸ್ತೆಯ ಸಚಿವರ ಮನೆಯ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಕೆಲ ನಿಮಿಷ ಮನೆ ಎದುರು ಕುಳಿತುಕೊಂಡು ಘೋಷಣೆ ಕೂಗಿದ ಕಾರ್ಯಕರ್ತರು, ನಂತರ ಏಕಾಏಕಿ ಮನೆಯೊಳಗೆ ನುಗ್ಗಿದರು.

ಅದನ್ನು ತಡೆಯಲು ಮುಂದಾದ ಪೊಲೀಸ್‌ ಕಾನ್‌ಸ್ಟೆಬಲ್‌ ಗೋವಿಂದಪ್ಪ ಹಾಗೂ ಸಚಿವರ ಗನ್‌ಮ್ಯಾನ್‌ ಅವರನ್ನು ತಳ್ಳಿ ಮುಂದೆ ಸಾಗಿದರು. ಹಲ್ಲೆಗೆ ಯತ್ನಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಬಳಿಕ ಮನೆಯ ಆವರಣದಲ್ಲಿದ್ದ ಹೂ ಕುಂಡಗಳು ಹಾಗೂ ಬಂಗಲೆಯ ವಿದ್ಯುತ್‌ ದೀಪಗಳನ್ನು ಒಡೆದರು. ಕಿಟಕಿ ಗಾಜುಗಳನ್ನು ಧ್ವಂಸ ಮಾಡಿದರು. ‌

ದಾಂದಲೆಗೆ ಹೊರಬಂದ ಸಚಿವರು: ಪ್ರತಿಭಟನಾಕಾರರು ದಾಂದಲೆ ಮಾಡುತ್ತಿದ್ದ ವೇಳೆ ಸಚಿವರು ಮನೆಯೊಳಗೆ ಇದ್ದರು. ಶಬ್ದ ಕೇಳಿ ಹೊರಬಂದ ಅವರು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಅವರ ಮನವಿ ಸ್ವೀಕರಿಸಿದರು. ಅದಾದ ಕೆಲ ನಿಮಿಷಗಳ ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಎಲ್ಲರನ್ನೂ ಬಂಧಿಸಿ ಕರೆದೊಯ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು. ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ಕನ್ನಡಕ್ಕೆ ಮಾನ್ಯತೆ ಸಿಗಬೇಕು ಎಂದು ಮನವಿ ನೀಡಿದ್ದಾರೆ. ಪರಿಶೀಲಿಸುತ್ತೇನೆ’ ಎಂದು ಹೇಳಿ ವಿಧಾನಸೌಧದಲ್ಲಿ ನಡೆಯಬೇಕಿದ್ದ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಟು ಹೋದರು.

ಬಳಿಕ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಹೈಗ್ರೌಂಡ್ ಠಾಣೆಯ ಪೊಲೀಸರು, ಸಂಘಟನೆಯ ನಗರ ಘಟಕದ ಅಧ್ಯಕ್ಷ ಹರೀಶ್‌ ಸೇರಿ 21 ಮಂದಿಯನ್ನು ಬಂಧಿಸಿ  ಕರೆದೊಯ್ದರು.

ಪರವಾನಗಿ ಪಡೆಯದೆ ಪ್ರತಿಭಟನೆ: ‘ಬಂಧಿತರನ್ನು ಶನಿವಾರ ಸಂಜೆ ನ್ಯಾಯಾಧೀಶರ ಎದುರು ಹಾಜರುಪಡಿಸಿದೆವು. ಅವರನ್ನು ಸದ್ಯ ನ್ಯಾಯಾಂಗ ಕಸ್ಟಡಿಗೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಸಚಿವರ ಮನೆಯ ಎದುರು ಪ್ರತಿಭಟನೆ ನಡೆಸಲು ಸಂಘಟನೆಯವರು ಯಾವುದೇ ಪರವಾನಗಿ ಪಡೆದಿರಲಿಲ್ಲ. ಮನೆಯ ಬಳಿಯಿದ್ದ ಕಾನ್‌ಸ್ಟೆಬಲ್‌ ಅದನ್ನು ಪ್ರಶ್ನಿಸಿದಾಗ, ಸಚಿವರಿಗೆ ಮನವಿ ನೀಡಿ ವಾಪಸ್‌ ಹೋಗುತ್ತೇವೆ ಎಂದು ಉತ್ತರಿಸಿದ್ದರು.

ಅದಾದ ಕೆಲವೇ ನಿಮಿಷದಲ್ಲಿ ಪ್ರತಿಭಟನಾಕಾರರು ಮನೆಯೊಳಗೆ ನುಗ್ಗಿ ಈ ಕೃತ್ಯ ಎಸಗಿದರು’ ಎಂದು ವಿವರಿಸಿದರು.

**

ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳ ಹಾವಳಿ ಹೆಚ್ಚಾಗಿದ್ದು, ಅದಕ್ಕೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ಇದರ ಹೊಣೆ ಹೊತ್ತು ಸಚಿವ ತನ್ವೀರ್ ಸೇಠ್‌ ರಾಜೀನಾಮೆ ನೀಡಬೇಕು.
ಹರೀಶ್‌, ಕರವೇ ಯುವಸೇನಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT