ಜಗದೀಶ್ ಕಾರಂತಗೆ ಷರತ್ತುಬದ್ಧ ಜಾಮೀನು

ಭಾನುವಾರ, ಮೇ 26, 2019
26 °C

ಜಗದೀಶ್ ಕಾರಂತಗೆ ಷರತ್ತುಬದ್ಧ ಜಾಮೀನು

Published:
Updated:
ಜಗದೀಶ್ ಕಾರಂತಗೆ ಷರತ್ತುಬದ್ಧ ಜಾಮೀನು

ಪುತ್ತೂರು: ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣಾ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಅವರಿಗೆ ಶನಿವಾರ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ತನಕ ಕಾರಂತ ಅವರು ಪುತ್ತೂರು ನ್ಯಾಯಾಲಯ ವ್ಯಾಪ್ತಿಯಲ್ಲಿ ಯಾವುದೇ ರ‍್ಯಾಲಿ ಮಾಡಬಾರದು ಮತ್ತು ಉದ್ರೇಕಕಾರಿ ಭಾಷಣ ಮಾಡಬಾರದು. ಸಾಕ್ಷಿದಾರರಿಗೆ ಯಾವುದೇ ರೀತಿಯ ಬೆದರಿಕೆಯೊಡ್ಡಬಾರದು. ಪ್ರತಿ ಭಾನುವಾರ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿದೆ. ಪುತ್ತೂರು ನ್ಯಾಯಾಲಯ ವ್ಯಾಪ್ತಿಯನ್ನು ಬಿಟ್ಟು ತೆರಳಬಾರದು ಎಂಬ ಆದೇಶಕ್ಕೆ ರಿಯಾಯಿತಿ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆಯಲು ಜಗದೀಶ್ ಕಾರಂತ, ಶನಿವಾರ ನಾಲ್ಕನೇ ಬಾರಿಗೆ ಪುತ್ತೂರು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಧೀಶ ಸಿ.ಕೆ. ಬಸವರಾಜ್ ಈ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದರು.

ಜಗದೀಶ್‌ ಕಾರಂತ ಅವರು ಸೆ.15ರಂದು ಪುತ್ತೂರಿನಲ್ಲಿ ಮಾಡಿದ ಭಾಷಣ ವಿವಾದದ ಕೇಂದ್ರವಾಗಿತ್ತು. ಸೆ.29ರಂದು ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಅದೇ ದಿನ ರಾತ್ರಿ ಅವರಿಗೆ ಮಧ್ಯಂತರ ಜಾಮೀನು ಲಭಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry