ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುವಾಂಡದಲ್ಲಿ ಹಕ್ಕಿಪಿಕ್ಕಿ ಜನರ ಬಂಧನ?

ಬಿಡುಗಡೆಗೆ ಸಹಕರಿಸಲು ಜಿಲ್ಲಾಧಿಕಾರಿ ಮೂಲಕ ರಾಯಭಾರ ಕಚೇರಿಗೆ ಪತ್ರ
Last Updated 7 ಅಕ್ಟೋಬರ್ 2017, 19:45 IST
ಅಕ್ಷರ ಗಾತ್ರ

ಶಿವಮೊಗ್ಗ: ದಕ್ಷಿಣ ಆಫ್ರಿಕಾದ ಪುಟ್ಟದೇಶ ರುವಾಂಡದಲ್ಲಿ ಗಿಡಮೂಲಿಕೆ ಔಷಧ ಮಾರಾಟಕ್ಕೆ ಹೋಗಿ ಅಲ್ಲಿನ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ತಾಲ್ಲೂಕಿನ ಸದಾಶಿವಪುರದ ಹಕ್ಕಿಪಿಕ್ಕಿ ಜನಾಂಗದ 11 ಜನರ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್ ಅವರು ರಾಯಭಾರ ಕಚೇರಿಗೆ ಪತ್ರ ಬರೆದಿದ್ದಾರೆ.

ಸಂದೀಪ, ಸುನಂದಾ, ಸಂದೇಶ್, ಜಗನ್ನಾಥ, ಲತಿ, ರಾಜ, ಬಾಬು, ಕಾಜೋಲ್, ಲಚ್ಚಾ, ಮೇಘನಾ, ರಂಜನ್ ಕಳೆದ ತಿಂಗಳು 12ರಂದು ವ್ಯಾಪಾರಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದರು. ಎಲ್ಲರೂ ವೀಸಾ, ಪಾಸ್‌ಪೋರ್ಟ್‌ ಸೇರಿದಂತೆ ಅಗತ್ಯ ದಾಖಲೆ ಹೊಂದಿದ್ದಾರೆ. ಬಂಧನಕ್ಕೆ ಖಚಿತ ಕಾರಣ ತಿಳಿದುಬಂದಿಲ್ಲ. ವಾರದ ಹಿಂದೆ ತಂಡದ ಸದಸ್ಯ ರಂಜನ್ ಕಳುಹಿಸಿದ ವಾಟ್ಸ್ ಆ್ಯಪ್ ಸಂದೇಶದಿಂದ ಅವರ ಬಂಧನದ ಮಾಹಿತಿ ಸಿಕ್ಕಿದೆ ಎಂದು ಜನಾಂಗದ ಮುಖಂಡರು ತಿಳಿಸಿದ್ದಾರೆ.

ಬಂಧನವಾಗಿರುವುದು ಖಚಿತವಾದರೆ ಅವರ ಬಿಡುಗಡೆಗೆ, ಅವರ ಕ್ಷೇಮಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಪರವಾನಗಿ ಇಲ್ಲದೇ ಮಾರಾಟ: ಹಕ್ಕಿಪಿಕ್ಕಿ ಜನಾಂಗದ ಬಹುತೇಕರು ಈಚೆಗೆ ಒಂದೆಡೆ ನೆಲೆ ನಿಲ್ಲುತ್ತಿದ್ದಾರೆ. ಕೆಲವರು ಕೃಷಿ ಅವಲಂಬಿಸಿದರೆ ಉಳಿದವರು ಅಲಂಕಾರಿಕ ಹೂವು, ವಸ್ತುಗಳ ಮಾರಾಟ, ಗಿಡಮೂಲಿಕೆ, ಪ್ರಾಣಿ–ಪಕ್ಷಿಗಳ ಅವಯವಗಳಿಂದ ತಯಾರಿಸಿದ ಔಷಧ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಕೆಲವು ಕುಟುಂಬಗಳು ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾ ಮತ್ತು ನೆರೆಹೊರೆಯ ದೇಶಗಳಿಗೆ ಹೋಗಿ ಔಷಧ ಮಾರಾಟ ಮಾಡುತ್ತಿವೆ. ಪರವಾನಗಿ ಇಲ್ಲದೇ ಮಾರಾಟ ಮಾಡಿರುವ ಕಾರಣ ರುವಾಂಡದ ಪೊಲೀಸರು ಬಂಧಿಸಿರಬಹುದು ಎಂದು ಸ್ಥಳೀಯರು ವಿವರ ನೀಡಿದರು.

4 ತಿಂಗಳ ಹಿಂದೆಯೂ ಬಂಧನ: ನಾಲ್ಕು ತಿಂಗಳ ಹಿಂದೆಯೂ ಒಂದು ತಂಡ ಇದೇ ರೀತಿ ದಕ್ಷಿಣ ಆಫ್ರಿಕಾದಲ್ಲಿ ಬಂಧನಕ್ಕೆ ಒಳಗಾಗಿ ವಾರದ ನಂತರ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT