ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌ ಗೆಲುವಿನ ಆರಂಭ

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌
Last Updated 7 ಅಕ್ಟೋಬರ್ 2017, 19:49 IST
ಅಕ್ಷರ ಗಾತ್ರ

ಕೊಚ್ಚಿ : ಈ ಬಾರಿಯ ಫಿಫಾ 17 ವರ್ಷದೊಳಗಿನವರ ವಿಶ್ವ ಕಪ್‌ ಫುಟ್‌ಬಾಲ್‌ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ನೆಚ್ಚಿನ ತಂಡ ಎನಿಸಿರುವ ಬ್ರೆಜಿಲ್‌ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಡಿ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಬ್ರೆಜಿಲ್‌ 2–1 ಗೋಲುಗಳಿಂದ ಬಲಿಷ್ಠ ಸ್ಪೇನ್‌ ತಂಡದ ಸವಾಲು ಮೀರಿ ನಿಂತಿತು.

(ಕೊಚ್ಚಿಯ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫಿಫಾ 17ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ ಪಂದ್ಯದಲ್ಲಿ ಸ್ಪೇನ್ ತಂಡದ ಮಹಮ್ಮದ್‌ ಮೌಕ್ಲಿಸ್‌ (ಕೆಂಪು ಪೋಷಾಕು) ಅವರ ಗೋಲುಗಳಿಕೆಯ ಪ್ರಯತ್ನವನ್ನು ಬ್ರೆಜಿಲ್‌ ತಂಡದ ಗೋಲ್‌ಕೀಪರ್‌ (ಹಸಿರು ಪೋಷಾಕು) ತಡೆಯಲು ಯತ್ನಿಸಿದರು –ಪಿಟಿಐ ಚಿತ್ರ)

ತುಂಬು ವಿಶ್ವಾಸದಿಂದ ಕಣಕ್ಕಿಳಿದಿದ್ದ ಸಾಂಬಾ ನಾಡಿನ ತಂಡಕ್ಕೆ ಆರಂಭದಲ್ಲೇ ಹಿನ್ನಡೆ ಎದುರಾಯಿತು. ಐದನೇ ನಿಮಿಷದಲ್ಲೇ ಬ್ರೆಜಿಲ್‌ ತಂಡದ ರಕ್ಷಣಾ ವಿಭಾಗದ ಆಟಗಾರ ವೆಸ್ಲಿ ಎದುರಾಳಿಗಳಿಗೆ ‘ಉಡುಗೊರೆ’ ಗೋಲು ನೀಡಿದರು. ಸ್ಪೇನ್‌ನ ಆಟಗಾರನ ಗೋಲು ಗಳಿಕೆಯ ಪ್ರಯತ್ನವನ್ನು ವಿಫಲ ಗೊಳಿಸುವ ಭರದಲ್ಲಿ ಅವರು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಬಾರಿಸಿದರು.

ಇದರಿಂದ ಮೂರು ಬಾರಿಯ ಚಾಂಪಿಯನ್‌ ಬ್ರೆಜಿಲ್‌ ಎದೆಗುಂದಲಿಲ್ಲ. ಆ ನಂತರದ 15 ನಿಮಿಷ ಎದುರಾ ಳಿಗಳಿಂದ ಅಲ್ಪಮಟ್ಟಿನ ಪ್ರತಿರೋಧ ಎದುರಿಸಿದ ಈ ತಂಡದ ಆಟಗಾರರು ಆ ನಂತರ ಆಟದ ವೇಗ ಹೆಚ್ಚಿಸಿಕೊಂಡರು.

25ನೇ ನಿಮಿಷದಲ್ಲಿ ತಂಡಕ್ಕೆ ಇದರ ಪ್ರತಿಫಲ ಸಿಕ್ಕಿತು. ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ತಂಡದ ರಕ್ಷಣಾವ್ಯೂಹವನ್ನು ಭೇದಿಸಿದ ಮುಂಚೂಣಿ ವಿಭಾಗದ ಆಟಗಾರ ಲಿಂಕನ್‌ ಅದನ್ನು ಸೊಗಸಾದ ರೀತಿಯಲ್ಲಿ ಗುರಿ ಮುಟ್ಟಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಮೇಳೈಸುವಂತೆ ಮಾಡಿದರು.ಹೀಗಾಗಿ 1–1ರಲ್ಲಿ ಸಮಬಲ ಕಂಡುಬಂತು.

ಬಳಿಕ ಎರಡೂ ತಂಡದವರು ಮುನ್ನಡೆ ಗೋಲಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಆದ್ದರಿಂದ 43ನೇ ನಿಮಿಷದವರೆಗೂ ಆಟ ರೋಚ ಕತೆ ಕಾಯ್ದುಕೊಂಡಿತ್ತು. 45+1ನೇ ನಿಮಿಷದಲ್ಲಿ ಬ್ರೆಜಿಲ್‌ ತಂಡದ ಪೌಲಿನ್ಹೊ ಕಾಲ್ಚಳಕ ತೋರಿದರು. ಹೀಗಾಗಿ ಬ್ರೆಜಿಲ್‌ 2–1ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಅಣಿ ಯಾದವು.

ಸ್ಪೇನ್‌ ತಂಡದ ಆಟಗಾರರು ಸಮಬಲದ ಗೋಲು ದಾಖಲಿಸಲು ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ ಬ್ರೆಜಿಲ್‌ ತಂಡದ ರಕ್ಷಣಾ ಕೋಟೆ ಭೇದಿಸಲು ಈ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

ಜರ್ಮನಿಗೆ ಜಯ: ಗೋವಾದ ಜವಾಹರ ಲಾಲ್ ಕ್ರೀಡಾಂಗಣದಲ್ಲಿ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಜರ್ಮನಿ ತಂಡ ಜಯದ ಸಿಹಿ ಸವಿಯಿತು.

ಜರ್ಮನಿ 2–1 ಗೋಲುಗಳಿಂದ ಕೋಸ್ಟರಿಕಾವನ್ನು ಮಣಿಸಿತು.

ವಿಜಯಿ ತಂಡದ ಎಆರ್‌ಪಿ ಮತ್ತು ಅವುಕು, ಕ್ರಮವಾಗಿ 21 ಮತ್ತು 89ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು. ಕೋಸ್ಟರಿಕಾ ಪರ ಗೊಮೆಜ್‌ 64ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗಮನ ಸೆಳೆದರು. 

ಇರಾನ್‌ಗೆ ಜಯ

ರಾತ್ರಿ ನಡೆದ ಪಂದ್ಯದಲ್ಲಿ ಇರಾನ್ ತಂಡ ಗಿನಿ ಎದುರು 3–1ರಿಂದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಕೊರಿಯಾ ತಂಡವನ್ನು ನೈಗರ್‌ ಏಕಪಕ್ಷೀಯವಾದ ಒಂದು ಗೋಲಿನಿಂದ ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT