ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ, ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ

Last Updated 7 ಅಕ್ಟೋಬರ್ 2017, 19:51 IST
ಅಕ್ಷರ ಗಾತ್ರ

ಹಿರ್ಸಾರ್ (ಗುಜರಾತ್): ‘ನಾವು ಅಭಿವೃದ್ಧಿಯ ವ್ಯಾಖ್ಯಾನವನ್ನು ಬದಲಿಸಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಹಿರ್ಸಾರ್‌ನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ‘ಇಲ್ಲಿ ವಿಮಾನ ನಿಲ್ದಾಣ ಬರುತ್ತದೆ ಎಂದು ಎಂದಾದರೂ ನೀವು ಕಲ್ಪಿಸಿಕೊಂಡಿದ್ದಿರಾ? ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದು, ವಿಮಾನಗಳು ಹಾರಾಡುವುದು ನಿಮಗೆ ಇಷ್ಟವಿಲ್ಲವೇ? ಇದು ಅಭಿವೃದ್ಧಿಯಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಈಚೆಗೆ ಗುಜರಾತ್ ಪ್ರವಾಸದಲ್ಲಿದ್ದಾಗ ರಾಜ್ಯದಲ್ಲಿನ ಅಭಿವೃದ್ಧಿ ಮಾದರಿಯನ್ನು ಟೀಕಿಸಿದ್ದರು. ರಾಹುಲ್ ಟೀಕೆಗೆ ಮೋದಿ ಈ ಮೂಲಕ ತಿರುಗೇಟು ನೀಡಿದ್ದಾರೆ.

‘ಎಲ್ಲರೂ ಅಭಿವೃದ್ಧಿ ಆಗಬೇಕು ಎಂದು ಬಯಸುತ್ತಾರೆ. ಮನೆ ಬೇಡವೇ ಎಂದು ಒಬ್ಬ ಬಡವನನ್ನು ಕೇಳಿ. ಆತ ಮನೆ ಬೇಕು ಎಂದು ಹೇಳುತ್ತಾನೆ. ಅಭಿವೃದ್ಧಿ ಸಾಧ್ಯವಾಗದೆ ಆತನಿಗೆ ಮನೆ ಒದಗಿಸಲು ಸಾಧ್ಯವಿಲ್ಲ. ಹಿಂದಿನ ಸರ್ಕಾರಗಳು ಏನನ್ನೂ ಮಾಡದೆ ಜನರ ಬಳಿಗೆ ಹೋಗುತ್ತಿದ್ದವು. ನಾವು ಅದನ್ನು ಬದಲಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಅಹಮದಾಬಾದ್–ರಾಜಕೋಟ್‌ ನಡುವಣ 201 ಕಿ.ಮೀ ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿಯನ್ನು (ರಾಷ್ಟ್ರೀಯ ಹೆದ್ದಾರಿ 47ರ ಭಾಗ) ನಾಲ್ಕು ಪಥದಿಂದ ಆರು ಪಥಗಳಿಗೆ ವಿಸ್ತರಿಸುವ ಕಾಮಗಾರಿಗೆ ಮೋದಿ ಚಾಲನೆ ನೀಡಿದರು.

ದ್ವಾರಕಾದಲ್ಲಿ ನಾಲ್ಕು ಪಥದ ಸೇತುವೆ: ‘ಗುಜರಾತ್‌ನ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿತ್ತು. ಆದರೆ ಗುಜರಾತ್‌ನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಎಂಬ ಒಂದೇ ಕಾರಣಕ್ಕೆ ಯುಪಿಎ ಸರ್ಕಾರ ರಾಜ್ಯವನ್ನು ಕಡೆಗಣಿಸಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ದ್ವಾರಕಾ ಪಟ್ಟಣ ಮತ್ತು ದ್ವಾರಕಾ ದ್ವೀಪದ ನಡುವೆ ನಾಲ್ಕು ಪಥದ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಈ ಸೇತುವೆ ದ್ವಾರಕಾ ಪಟ್ಟಣ ಮತ್ತು ದ್ವಾರಕಾ ದ್ವೀಪದ ಮಧ್ಯೆ ಸಂಪರ್ಕವನ್ನು ಸುಲಭವಾಗಿಸಲಿದೆ. ಈಗ ಜನರು ಬೆಳಗಿನ ಹೊತ್ತು ದೋಣಿಯ ಮೂಲಕ ಮಾತ್ರ ದ್ವಾರಕಾ ದ್ವೀಪಕ್ಕೆ ತೆರಳಬಹುದು. ಸೇತುವೆ ನಿರ್ಮಾಣವಾದ ನಂತರ ದಿನದ ಯಾವುದೇ ಸಮಯದಲ್ಲಿ ಸಂಚಾರ ಸಾಧ್ಯ ಎಂದು ಅವರು ಹೇಳಿದ್ದಾರೆ.

**

ಈ ಹಿಂದಿನ ರಾಜಕಾರಣಿಗಳು ಕೈಪಂಪುಗಳನ್ನು ಅಳವಡಿ<br/>ಸುತ್ತಿದ್ದರು. ನಂತರ ಮತ ನೀಡಿ ಎಂದು ಜನರ ಬಳಿ ಹೋಗುತ್ತಿದ್ದರು. ಇದು ಅಭಿವೃದ್ಧಿಯೇ?

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT