ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಲೆಟ್‌ ಬದಲು ಪ್ಲಾಸ್ಟಿಕ್‌ ಗುಂಡು

ಕಾಶ್ಮೀರದಲ್ಲಿ ಕಲ್ಲು ತೂರಾಟ ನಿಯಂತ್ರಿಸಲು ಸಿಆರ್‌ಪಿಎಫ್‌ಗೆ ಹೊಸ ಸಾಧನ
Last Updated 7 ಅಕ್ಟೋಬರ್ 2017, 19:55 IST
ಅಕ್ಷರ ಗಾತ್ರ

ಮೀರಠ್‌: ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸುವುದಕ್ಕಾಗಿ ಬಳಸುತ್ತಿದ್ದ ಪೆಲೆಟ್‌ ಬಂದೂಕು ಬದಲಿಗೆ ಪ್ಲಾಸ್ಟಿಕ್‌ನ ಗುಂಡುಗಳನ್ನು ರವಾನೆ ಮಾಡಲಾಗಿದೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯು (ಸಿಆರ್‌ಪಿಎಫ್‌) 21 ಸಾವಿರ ಸುತ್ತು ಗುಂಡುಗಳನ್ನು ಕಳುಹಿಸಿದೆ. ಇದನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಕಡಿಮೆ ಅಪಾಯಕಾರಿ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯು (ಡಿಆರ್‌ಡಿಒ) ಪುಣೆಯ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಈ ಗುಂಡನ್ನು ಅಭಿವೃದ್ಧಿಪಡಿಸಿದೆ.

ಎ.ಕೆ. ಸರಣಿಯ ಯಾವುದೇ ಬಂದೂಕುಗಳಲ್ಲಿ ಇದನ್ನು ಬಳಸುವುದಕ್ಕೆ ಸಾಧ್ಯವಿದೆ. ಕಾಶ್ಮೀರದಲ್ಲಿ ಪೆಲೆಟ್‌ ಬಂದೂಕಿನ ಗುಂಡಿಗೆ ತುತ್ತಾದವರು ಗಂಭೀರವಾಗಿ ಗಾಯಗೊಳ್ಳುವುದು ಹೆಚ್ಚಾದ ಬಳಿಕ ಈ ಗುಂಡುಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹಾಗಾಗಿ ಪೆಲೆಟ್‌ ಗುಂಡಿಗೆ ಪರ್ಯಾಯವೊಂದನ್ನು ಶೋಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಉದ್ರಿಕ್ತ ಗುಂಪುಗಳು ಮತ್ತು ಕಾಶ್ಮೀರದಲ್ಲಿ ಪೊಲೀಸರತ್ತ ಕಲ್ಲು ತೂರಾಟ ನಡೆಸುವವರನ್ನು ನಿಯಂತ್ರಿಸಲು ಪ್ಲಾಸ್ಟಿಕ್‌ ಗುಂಡುಗಳನ್ನು ಪರಿಣಾಮಕಾರಿಯಾಗಿ ಬಳಸಬಹುದು. ಈ ಗುಂಡು ತಗಲಿದವರಿಗೆ ಹೆಚ್ಚಿನ ಅಪಾಯ ಆಗುವುದಿಲ್ಲ ಎಂದು ಸಿಆರ್‌ಪಿಎಫ್‌ ಮಹಾ ನಿರ್ದೇಶಕ ಆರ್‌.ಆರ್‌. ಭಟ್ನಾಗರ್‌ ತಿಳಿಸಿದ್ದಾರೆ.

‘ಇತರ ಕಡಿಮೆ ಅಪಾಯಕಾರಿಯಾದ ಗುಂಡುಗಳನ್ನು (ಉದಾಹರಣೆಗೆ ಪೆಲೆಟ್‌) ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದಿಲ್ಲ. ಗುಂಡಿನ ದಿಕ್ಕನ್ನು ನಿಯಂತ್ರಿಸುವ ಸಾಧನಗಳನ್ನು ಅಳವಡಿಸಿರುವ ಬಂದೂಕುಗಳನ್ನು ಸಿಆರ್‌ಪಿಎಫ್‌ ಸಿಬ್ಬಂದಿಗೆ ಒದಗಿಸಲಾಗಿದೆ. ಹಾಗಾಗಿ ಪೆಲೆಟ್‌ ಗುಂಡುಗಳು ಸೊಂಟದ ಮೇಲಿನ ಭಾಗಕ್ಕೆ ತಾಗದಂತೆ ನೋಡಿಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.

ಗಲಭೆ ನಿಯಂತ್ರಣದಲ್ಲಿ ವಿಶೇಷ ಪರಿಣತಿ ಪಡೆದಿರುವ ಕ್ಷಿಪ್ರ ಕಾರ್ಯಪಡೆಗೂ ಪ್ಲಾಸ್ಟಿಕ್‌ ಗುಂಡುಗಳನ್ನು ಒದಗಿಸುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

**

ಪೊಲೀಸರು ನಾಗರಿಕವಾಗಿರಬೇಕು: ರಾಜನಾಥ್‌

ಮೀರಠ್‌: 21ನೇ ಶತಮಾನದ ಪೊಲೀಸರು ‘ಕ್ರೂರಿ’ಗಳಾಗಿರಬಾರದು. ಪೊಲೀಸ್‌ ಇಲಾಖೆಯು ‘ನಾಗರಿಕ’ವಾದ ಘಟಕವಾಗಬೇಕು. ಗಲಭೆ ಮತ್ತು ಪ್ರತಿಭಟನೆಗಳಂತಹ ಹೆಚ್ಚು ಸವಾಲಿನ ಸನ್ನಿವೇಶಗಳಲ್ಲಿ ಸಹನೆಯಿಂದ ವರ್ತಿಸಬೇಕು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಪ್ರತಿಭಟನೆ ಅಥವಾ ಗಲಭೆಯಂತಹ ಸನ್ನಿವೇಶದಲ್ಲಿ ಆಕ್ರಮಣಕಾರಿಯಾಗಿ ವರ್ತಿಸುವ ಜನರನ್ನು ನಿಯಂತ್ರಿಸಲು ಮತ್ತು ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಹೊಸ ತಂತ್ರಜ್ಞಾನ ಮತ್ತು ಮನಶ್ಶಾಸ್ತ್ರೀಯ ವಿಧಾನಗಳನ್ನು ಪೊಲೀಸರು ಅನುಸರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಕ್ಷಿಪ್ರ ಕಾರ್ಯಪಡೆಯ (ಆರ್‌ಎಎಫ್‌) ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ, ಧರ್ಮ ಅಥವಾ ಪ್ರದೇಶದ ನೆಲೆಯಲ್ಲಿ ದೇಶ ಒಡೆಯುವ ಪ್ರಯತ್ನಗಳ ಬಗ್ಗೆ ಭದ್ರತಾ ಸಿಬ್ಬಂದಿ ಸದಾ ಕಣ್ಣಿಟ್ಟಿರಬೇಕು ಎಂದು ಅವರು ತಿಳಿಸಿದರು.

ಗುಂಪು ನಿಯಂತ್ರಣದಂತಹ ಕೆಲಸಗಳಿಗೆ ಕಡಿಮೆ ಅಪಾಯಕಾರಿಯಾದ ಪರಿಹಾರಗಳನ್ನು ಕಂಡುಕೊಳ್ಳುವಂತೆ ಪೊಲೀಸ್‌ ಸಂಶೋಧನೆ ಮತ್ತು ಅಭಿವೃದ್ಧಿ ಘಟಕಕ್ಕೆ ಸೂಚಿಸಿರುವುದಾಗಿ ಅವರು ತಿಳಿಸಿದರು. ಪೊಲೀಸರು ಕನಿಷ್ಠ ಬಲ ಬಳಸಿ ಗರಿಷ್ಠ ಫಲಿತಾಂಶ ಪಡೆಯಬೇಕು ಎಂದು ರಾಜನಾಥ್‌ ತಿಳಿಸಿದರು.

ದೇಶದಲ್ಲಿ ಈಗ ಆರ್‌ಎಎಫ್‌ನ ಹತ್ತು ತುಕಡಿಗಳಿವೆ. ಕೋಮು ಸಂಘರ್ಷ ಮತ್ತು ಇತರ ಕಾರಣಗಳಿಂದ ಹೆಚ್ಚು ಸೂಕ್ಷ್ಮವಾದ ನಗರಗಳಲ್ಲಿ ಇವುಗಳ ನೆಲೆಗಳು ಇವೆ.  ಒಂದು ವರ್ಷದೊಳಗೆ ಇನ್ನೂ ಐದು ತುಕಡಿಗಳ ಕಾರ್ಯನಿರ್ವಹಣೆ ಆರಂಭವಾಗಲಿದೆ ಎಂದು ಅವರು ಹೇಳಿದರು.

**

ಕೆಲವೊಮ್ಮೆ ಪೊಲೀಸರು ಸ್ವಲ್ಪ ಬಲಪ್ರಯೋಗ ಮಾಡುವಂತಹ ಸನ್ನಿವೇಶವೂ ಸೃಷ್ಟಿಯಾಗುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿಯೂ ವಿವೇಕಯುತವಾಗಿ ವರ್ತಿಸಬೇಕು

–ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT