ಸೋಮವಾರ, ಸೆಪ್ಟೆಂಬರ್ 16, 2019
26 °C
ದಕ್ಷಿಣ ಭಾರತ ಅಂತರ ವಿ.ವಿ ಕೊಕ್ಕೊ

ಮೈಸೂರು ವಿ.ವಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ

Published:
Updated:
ಮೈಸೂರು ವಿ.ವಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ

ಮೈಸೂರು: ಕೊಕ್ಕೊ ಆಟದಲ್ಲಿ ಕೇರಳದ ತಂಡಗಳು ಹೊಂದಿದ್ದ ಪ್ರಾಬಲ್ಯವನ್ನು ಕೊನೆಗೊಳಿಸಿದ ಮೈಸೂರು ವಿಶ್ವವಿದ್ಯಾಲಯದ ತಂಡದವರು ದಕ್ಷಿಣ ಭಾರತ ಅಂತರ ವಿ.ವಿ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿ ಐತಿಹಾಸಿಕ ಸಾಧನೆ ಮಾಡಿದರು.

ವಿ.ವಿ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಶನಿವಾರ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ಮೈಸೂರು ವಿ.ವಿ 15–4 ರಲ್ಲಿ ಹಾಲಿ ಚಾಂಪಿಯನ್‌ ಕಲ್ಲಿಕೋಟೆ ವಿ.ವಿ ವಿರುದ್ಧ ಅಮೋಘ ಗೆಲುವು ಪಡೆಯಿತು. ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಸ್ಥಾನ ಪಡೆದದ್ದು ಮೈಸೂರು ವಿ.ವಿ ಯ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿತ್ತು. ಈ ಬಾರಿ ಎರಡು ಹೆಜ್ಜೆ ಮುಂದಿಟ್ಟು ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿತು.

ಮೈಸೂರು ಮತ್ತು ಕಲ್ಲಿಕೋಟೆ ವಿ.ವಿ ತಂಡಗಳು ತಮ್ಮ ಮೊದಲ ಎರಡೂ ಲೀಗ್‌ ಪಂದ್ಯಗಳಲ್ಲಿ ಗೆಲುವು ಪಡೆದಿದ್ದವು. ಇದರಿಂದ ಉಭಯ ತಂಡಗಳ ನಡುವಿನ ಕೊನೆಯ ಲೀಗ್‌ ಪಂದ್ಯಕ್ಕೆ ‘ಫೈನಲ್‌’ ಹೋರಾಟದ ಮೆರುಗು ಲಭಿಸಿತ್ತು.

ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಎದುರಾಳಿಗಳ ಏಳು ಆಟಗಾರ್ತಿಯರನ್ನು ಔಟ್‌ ಮಾಡಿದ ಆತಿಥೇಯ ತಂಡ ಉತ್ತಮ ಆರಂಭ ಪಡೆಯಿತು. ಎರಡನೇ ಇನಿಂಗ್ಸ್‌ನಲ್ಲಿ ಮತ್ತೆ ಐವರನ್ನು ಔಟ್‌ ಮಾಡಿತು. ಆದರೆ ಕಲ್ಲಿಕೋಟೆ ತಂಡ ಎರಡೂ ಇನಿಂಗ್ಸ್‌ಗಳಲ್ಲಿ ನಾಲ್ಕು ಪಾಯಿಂಟ್‌ ಮಾತ್ರ ಕಲೆಹಾಕಿತು.

ಮೂರು ನಿಮಿಷ ಆಡಿದ್ದಲ್ಲದೆ, ಎದುರಾಳಿಗಳ ಮೂವರನ್ನು ಔಟ್‌ ಮಾಡಿದ ಕೆ.ಎಸ್‌. ಮೇಘಾ ಮತ್ತು ನಾಲ್ವರನ್ನು ಔಟ್‌ ಮಾಡಿದ ಜಯಶ್ರೀ ಅವರು ಮೈಸೂರು ವಿ.ವಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಸಿಂಧೂ ಮತ್ತು ವೀಣಾ ತಲಾ ಮೂರು ನಿಮಿಷ ಆಟವಾಡಿದರು.

ಮೈಸೂರು ತಂಡದ 12 ಆಟಗಾರ್ತಿಯರಲ್ಲಿ 11 ಮಂದಿ ತಿ.ನರಸೀಪುರದ ವಿದ್ಯೋದಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು. ಇನ್ನೊಬ್ಬರು ಮೈಸೂರಿನ ಮಹಾರಾಣಿ ಕಾಮರ್ಸ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಮಂಗಳೂರು ವಿ.ವಿಗೆ ಮೂರನೇ ಸ್ಥಾನ: ಮೊದಲ ಎರಡು ಲೀಗ್‌ ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಮಂಗಳೂರು ವಿ.ವಿ ತಂಡದವರು ಕೊನೆಯ ಲೀಗ್‌ ಪಂದ್ಯದಲ್ಲಿ ತಿರುವನಂತಪುರದ ಕೇರಳ ವಿ.ವಿ ತಂಡವನ್ನು ಮಣಿಸಿ ಮೂರನೇ ಸ್ಥಾನ ಪಡೆದರು.

Post Comments (+)