ಮಾತೆ ಮಹಾದೇವಿ ಹೇಳಿಕೆಗೆ ಖಂಡನೆ

ಶನಿವಾರ, ಮೇ 25, 2019
27 °C

ಮಾತೆ ಮಹಾದೇವಿ ಹೇಳಿಕೆಗೆ ಖಂಡನೆ

Published:
Updated:
ಮಾತೆ ಮಹಾದೇವಿ ಹೇಳಿಕೆಗೆ ಖಂಡನೆ

ಘಟಪ್ರಭಾ: ‘ಚಿತ್ರದುರ್ಗದ ಮುರುಘಾಮಠದ ಪೀಠ ಸಿಗದಿರುವ ಕಾರಣಕ್ಕೆ ಹಾನಗಲ್ಲ ಕುಮಾರ ಶಿವಯೋಗಿಗಳು ವೀರಶೈವ ಮಹಾಸಭಾ ಸ್ಥಾಪಿಸಿದರು. ವೀರಶೈವ–ಲಿಂಗಾಯತರ ಗೊಂದಲಕ್ಕೆ ಅವರೇ ಕಾರಣ ಎಂಬ ಮಾತೆ ಮಹಾದೇವಿ ಹೇಳಿಕೆ ಸಮಂಜಸವಲ್ಲ.

ಅವರು ಕೂಡಲೇ ಕ್ಷಮೆ ಯಾಚಿಸಬೇಕು’ ಎಂದು ಹಾನಗಲ್ಲ ಕುಮಾರ ಶಿವಯೋಗಿಗಳ ಜಯಂತಿ ಸಮಿತಿಯ ರಾಜ್ಯ ಅಧ್ಯಕ್ಷ ಹಾಗೂ ಮೂರುಸಾವಿರ ಶಾಖಾ ಮಠವಾದ ಗುಬ್ಬಲಗುಡ್ಡದ ಕೆಂಪಯ್ಯ ಸ್ವಾಮಿ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಹಾನಗಲ್ಲ ಕುಮಾರ ಶಿವಯೋಗಿಗಳ ಕುರಿತು ನೀಡಿದ ಹೇಳಿಕೆಯನ್ನು ಮಾತೆ ಮಹಾದೇವಿ ಕೂಡಲೇ ಹಿಂದಕ್ಕೆ ಪಡೆದು ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

‘ಮಾತೆ ಮಹಾದೇವಿ ಹೇಳಿಕೆ ಸಂಪೂರ್ಣ ಸುಳ್ಳು. ಚಿತ್ರದುರ್ಗ ಮುರಘಾಮಠದ ಜಯದೇವ ಶ್ರೀಗಳೇ 1931ರಲ್ಲಿ ಶಿವಯೋಗ ಮಂದಿರ ಸಂಸ್ಥೆಯಿಂದ ಪ್ರಕಟಗೊಂಡ ‘ಸ್ಮಾರಕ ಚಂದ್ರಿಕೆ’ ಎಂಬ ಗ್ರಂಥಕ್ಕೆ ತಮ್ಮ ಸಂದೇಶ ಬರೆದುಕೊಟ್ಟಿದ್ದಾರೆ’ ಎಂದು ಹೇಳಿದರು.

‘ನನ್ನನ್ನು ಮುರಘಾಮಠದ ಪೀಠಕ್ಕೆ ಬರಮಾಡಿಕೊಂಡವರೇ ಹಾನಗಲ್ಲ ಕುಮಾರೇಶ್ವರರು. ನನಗೂ ಮತ್ತು ನನ್ನಂತಹ ಹಲವಾರು ಸಾಧಕರಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಿದವರು. ಅವರು ಅಸಮರ್ಥರನ್ನು ಸಮರ್ಥರನ್ನಾಗಿ ಮಾಡಿಸುವಂತಹ ದಕ್ಷರಾಗಿದ್ದರು ಎಂಬುದಾಗಿ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ’ ಎಂದೂ ಹೇಳಿದರು.

‘ಕೀಳು ಪ್ರಚಾರಕ್ಕಾಗಿ ಮಾತೆ ಮಹಾದೇವಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಇದೇ ರೀತಿ ಹೇಳಿಕೆ ನೀಡಿದ್ದರಿಂದ ಕೋರ್ಟ್‌ ನಿಂದಲೂ ಹಲವು ಬಾರಿ ಛೀಮಾರಿ ಹಾಕಿಸಿಕೊಂಡಿದ್ದಾರೆ’ ಎಂದರು. ಸಮಿತಿಯ ಕಾರ್ಯದರ್ಶಿ ಹಾವೇರಿಯ ಸದಾಶಿವ ಸ್ವಾಮೀಜಿ, ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಮತ್ತು ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry