ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಬಿಟ್ಟು ಮುಸುಕಿನಜೋಳಕ್ಕೆ ರೈತರ ಮೊರೆ

Last Updated 8 ಅಕ್ಟೋಬರ್ 2017, 6:06 IST
ಅಕ್ಷರ ಗಾತ್ರ

ಯಳಂದೂರು: ಕಳೆದ ಕೆಲ ವರ್ಷಗಳಿಂದ ರಾಗಿ ಬಿತ್ತಿ ಕೈ ಸುಟ್ಟುಕೊಂಡ ರೈತರು ಈಗ ಪರ್ಯಾಯ ಬೆಳೆಯತ್ತ ಗಮನ ಹರಿಸಿದ್ದಾರೆ. ತಾಲ್ಲೂಕಿನ ಬಹುಪಾಲು ರಾಗಿ ಬೆಳೆಯುತ್ತಿದ್ದ ಪ್ರದೇಶದಲ್ಲಿ ಈಗ ಮುಸುಕಿನಜೋಳದ ಬುತ್ತನೆ ಕಾಣಸಿಗುತ್ತಿದೆ.

ಹೌದು. ‘ಹೊಟ್ಟೆ ಹೊರೆಯಲು ರಾಗಿ, ನೀರಾವರಿಗೆ ಭತ್ತ. ಕೊಬ್ಬಿದ್ದವನಿಗೆ ಕಬ್ಬು’ ಎನ್ನುವ ಮಾತು ರೈತರಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದರೆ, ನಾಲ್ಕೈದು ವರ್ಷಗಳಿಂದ ಎದುರಾದ ಬರ, ಬೆಲೆ ಮತ್ತು ಇಳುವರಿ ಕೊರತೆಯಿಂದ ರೈತರು ಬೇಸತ್ತಿದ್ದಾರೆ. ಪರ್ಯಾಯ ಬೆಳೆಗಳತ್ತ ಮನಸ್ಸು ಬದಲಿಸಿದ್ದಾರೆ. ಅದರಲ್ಲೂ, ರಾಗಿ ಬಿಟ್ಟು ಮುಸುಕಿನ ಜೋಳ ಬಿತ್ತನೆಗೆ ಮುಂದಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರಾಗಿ ನಾಟಿ ಪ್ರದೇಶದಲ್ಲಿ ಜೋಳದ ಆವರಿಕೆ ಪ್ರಮಾಣ ಏರಿಕೆ ಕಂಡಿದೆ.

ತಾಲ್ಲೂಕಿನಲ್ಲಿ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗದ ಕಾರಣ ಯಾವ ಕಾಳಿಗೂ ಬೇಡಿಕೆ ಬಂದಿರಲಿಲ್ಲ. ಆದರೆ, ಆಗಸ್ಟ್‌– ಸೆಪ್ಟೆಂಬರ್‌ ನಡುವೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ನಿರೀಕ್ಷೆಗಿಂತ ಹೆಚ್ಚು ಅಂದರೆ, 367 ಮಿ.ಮೀ. ಮಳೆ ಆಗಿದೆ. ಹಾಗಾಗಿ, ಸಾಗುವಳಿ ನಿರ್ಲಕ್ಷಿಸಿದ ಮಂದಿ ಈಗ ಬಿತ್ತನೆಗೆ ಮುಂದಾಗಿದ್ದಾರೆ.

‘ಮುಂಗಾರಿನಲ್ಲಿ 290 ಕೃಷಿಕರಿಗೆ 31 ಕ್ವಿಂಟಲ್‌ ರಾಗಿ ವಿತರಿಸಲಾಗಿದೆ. ರಾಗಿ ತಾಕು 500 ಹೆಕ್ಕೇರ್‌ನಿಂದ 250 ಹೆಕ್ಟೇರ್‌ಗೆ ಕುಸಿದಿದೆ. ಇದೇ ವೇಳೆ 806 ಬೇಸಾಯಗಾರರು 119 ಕ್ವಿಂಟಲ್‌ ಮುಸುಕಿನ ಜೋಳವನ್ನು 1,200 ಹೆಕ್ಟೇರ್‌ ಪ್ರದೇಶಕ್ಕೆ ವಿಸ್ತರಿಸಿದ್ದಾರೆ. ಸುಲಭ ನಿರ್ವಹಣೆ ಮತ್ತು ಬರದ ನಡುವೆಯೂ ಕಾಸು ತರುವ ಜೋಳ ಹಾಗೂ ಕಡಿಮೆ ಸಮಯದಲ್ಲಿ ಕಟಾವಿಗೆ ಬರುವ ಕೃಷಿಯತ್ತ ಬಹುತೇಕ ಅನ್ನದಾತರು ಭೂಮಿ ಹಸನುಗೊಳಿಸಿದ್ದಾರೆ.

ಕಳೆದ ಬೇಸಿಗೆಯಲ್ಲಿ ಬರದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮೇವಿಗೆ ಬೇಡಿಕೆ ಹೆಚ್ಚಾಗಿತ್ತು. ನೆರೆಯ ತಾಲ್ಲೂಕುಗಳ ರೈತರು ಮುಸುಕಿನ ತಾಕಿನಲ್ಲಿ ಬೆಳೆದಿದ್ದ 2 ತಿಂಗಳ ಸಸಿಗಳನ್ನೇ ಹೆಚ್ಚು ಧಾರಣೆ ನೀಡಿ ಕೊಂಡರು. ರಾಗಿ ಬೆಳೆಗೆ ಅಗತ್ಯ ನೀರು ಪೂರೈಕೆಯಾಗದೇ ಸೊರಗಿತು. ಇದರಿಂದ ರೈತರು ಮುಸುಕಿನಜೋಳ ಬೆಳೆಯುವ ಆಸಕ್ತಿ ತೋರಿದ್ದಾರೆ ಎನ್ನುತ್ತಾರೆ ಸಹಾಯಕ ಕೃಷಿ ಅಧಿಕಾರಿ ವೆಂಕಟರಂಗ ಶೆಟ್ಟಿ.

ಬೆಂಬಲ ಬೆಲೆ, ಪ್ರೋತ್ಸಾಹ ಧನ ಘೋಷಣೆ: ‘ರಾಗಿಬೆಳೆ ಪ್ರೋತ್ಸಾಯಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ₹ 1,900 ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರ ₹ 400 ಪ್ರೋತ್ಸಾಹ ಧನ ಘೋಷಿಸಿದೆ. ಇವೆಲ್ಲದರ ನಡುವೆಯೂ ಬುಡಕಟ್ಟು ಜನರ ರಾಗಿಗೆ ಬೇಡಿಕೆ ಹೆಚ್ಚು. ಹೊರ ಜಿಲ್ಲೆಗಳ ಜನರು ಸಾವಯವ ರಾಗಿಗೆ ಮನ್ನಣೆ ನೀಡುತ್ತಿದ್ದಾರೆ. ಹಾಗಾಗಿ, ಮನೆ ಬಳಕೆಗೆ ರಾಗಿ ಬೆಳೆ ಕ್ಷೇತ್ರವನ್ನು ವಿಸ್ತರಿಸಲು ಮುಂದಾಗಿದ್ದೇವೆ’ ಎನ್ನುತ್ತಾರೆ ಕೃಷಿಕ ಯರಿಯೂರಿನ ರಂಗಸ್ವಾಮಿ.

ತಾಲ್ಲೂಕಿನಾದ್ಯಂತ ಜನವರಿಯಿಂದ ಸೆಪ್ಟೆಂಬರ್ ನಡುವೆ 738 ಮಿ.ಮೀ ಮಳೆ ಬಿದ್ದಿದೆ (ವಾರ್ಷಿಕ ವಾಡಿಕೆ ಮಳೆ 599 ಮಿ.ಮೀ). ಅಂದರೆ, ಶೇ 23 ಹೆಚ್ಚು ಮಳೆಯಾಗಿದೆ. 2,638 ಅನ್ನದಾತರು ನಾಟಿಗೆ ಸಿದ್ಧತೆ ನಡೆಸಿದ್ದಾರೆ. ಭತ್ತ 391 ಕ್ವಿಂಟಲ್, ಚಂಬೆ 161, ಉದ್ದು 94, ಹೆಸರು 31, ಸೆಣಬು 30 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಯಾಗಿದೆ. ಹಸಿಕಡಲೆ ಪಡೆಯಲು ಯಾರೂ ಮುಂದೆ ಬಂದಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

‘ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಇದೆ. ಸತತ ಮಳೆಯಿಂದ ಹೊಲ ಗದ್ದೆಗಳಲ್ಲಿ ನೀರು ಜಿನುಗುತ್ತಿದೆ. ಹಸಿಕಡ್ಲೆ ಮತ್ತು ಮುಸುಕಿನ ಜೋಳ ಬಿತ್ತನೆಗೆ ತೊಂದರೆ ಇಲ್ಲ. ತೇವ ತುಂಬಿದ ಕಪ್ಪು ಮಣ್ಣಿನಲ್ಲಿ ರಾಗಿ ಬಿತ್ತನೆ ಸೂಕ್ತವಲ್ಲ’ ಎನ್ನುತ್ತಾರೆ ಶೆಟ್ಟಿ.

ಈಗ ಸುರಿಯುವ ಹನಿಗೆ ಮುಸುಕಿನ ಜೋಳ ಸಮೃದ್ಧವಾಗಿ ಬೆಳೆಯುತ್ತದೆ. ಮುಂಬರುವ ಚಳಿಗಾಲದ ಇಬ್ಬನಿಯಿಂದಲೇ ಕಾಳು ಕಳೆಗಟ್ಟುತ್ತದೆ. ಮೇವು ಸಂಗ್ರಹವೂ ಸುಲಭ ಮತ್ತು ಧಾರಣೆಯೂ ಸ್ಥಿರವಾಗಿದೆ. ವನ್ಯಜೀವಿಗಳ ಕಾಟವೂ ಹೆಚ್ಚಿಲ್ಲ. ಹಾಗಾಗಿ, 2 ಎಕರೆಯಲ್ಲಿ ಮುಸುಕು ಬಿತ್ತಿದ್ದೇನೆ’ ಎನ್ನುವುದು ಮಲ್ಲಿಗೆಹಳ್ಳಿಯ ರಾಯಪ್ಪ ಅವರ ಲೆಕ್ಕಾಚಾರ.‌
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT