ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷದಲ್ಲಿರಲಿ ಶಿಸ್ತುಬದ್ಧ ಹೂಡಿಕೆ

Last Updated 30 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಸ ವರ್ಷ ಬಂತೆಂದರೆ, ಸಾಮಾನ್ಯವಾಗಿ ಎಲ್ಲರೂ ತಮ್ಮ ಹಣ ಹೂಡಿಕೆಯ ಸಿಂಹಾವಲೋಕನ ಆರಂಭಿಸುತ್ತಾರೆ. ಕಳೆದು ಹೋದ ವರ್ಷ ಹೇಗಿತ್ತು ಎಂದು ವಿಮರ್ಶೆ ಮಾಡುತ್ತಾ, ಹೊಸ ವರ್ಷದ ಯೋಜನೆಯನ್ನು ರೂಪಿಸುವುದು ಇದರ ಹಿಂದಿರುವ ಉದ್ದೇಶ. 2018ರಲ್ಲಿ ಮ್ಯೂಚುವಲ್‌ ಫಂಡ್‌ ಹೂಡಿಕೆ ಹೇಗಿರಬೇಕೆಂಬ ಯೋಚನೆಯನ್ನು ಬಹುತೇಕ ಎಲ್ಲರೂ ಈಗಾಗಲೇ ಆರಂಭಿಸಿರಬಹುದು.

ಮ್ಯೂಚುವಲ್‌ ಫಂಡ್‌ ನಿಧಿ ನಿರ್ವಹಿಸುವ ಸಂಸ್ಥೆಗಳು ಹೊಸ ಉತ್ಪನ್ನಗಳನ್ನು ಸಿದ್ಧಪಡಿಸುವಾಗ ಹೊಸವರ್ಷವನ್ನು ಆಶಾವಾದದಿಂದಲೇ ನೋಡಬೇಕು. ಈ ಪ್ರಕ್ರಿಯೆಯಲ್ಲಿ ಅವರು 1) ಜಾಗತಿಕ ಅರ್ಥ ವ್ಯವಸ್ಥೆ, 2) ಭಾರತೀಯ ಅರ್ಥ ವ್ಯವಸ್ಥೆ 3) ಸರಕುಗಳ ಬೆಲೆ, ರೂಪಾಯಿ ಮೌಲ್ಯ, ಬಡ್ಡಿ ದರಗಳ ಏರುಪೇರಿನ ಅಪಾಯಗಳು ಹಾಗೂ ಅತಿ ಮುಖ್ಯವಾಗಿ ಸೂಚ್ಯಂಕದ ಮೇಲೆ ಪರಿಣಾಮ ಉಂಟುಮಾಡುವ ಕಂಪನಿಗಳ ಗಳಿಕೆಯ ಬಗ್ಗೆ ವಿಶ್ಲೇಷಣೆ ನಡೆಸಬೇಕು.

ಈ ಕೆಲವು ವಿಚಾರಗಳ ಆಧಾರದಲ್ಲಿ ಹಲವು ಊಹೆಗಳನ್ನು ಮಾಡಿ, ಅದಕ್ಕೆ ಅನುಗುಣವಾದ ಉತ್ಪನ್ನಗಳನ್ನು ಸಂಸ್ಥೆಗಳು ರೂಪಿಸುತ್ತವೆ. ಇಂತಹ ಊಹೆ ಹಾಗೂ ವಾಸ್ತವದ ನಡುವೆ ಸಣ್ಣ ಅಂತರ ಇದ್ದೇ ಇರುತ್ತದೆ.

ಇದರ ಜೊತೆಗೆ ಹೂಡಿಕೆದಾರರು ಸಹ ತಮ್ಮ ಹೂಡಿಕೆಯಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡಬೇಕು. ಮ್ಯೂಚುವಲ್‌ ಫಂಡ್‌ನಲ್ಲಿ ಶಿಸ್ತುಬದ್ಧವಾಗಿ ಹೂಡಿಕೆ ಮಾಡಬೇಕು ಎಂಬುದು ಮರೆಯಬಾರದ ಅಂಶ. ಹಿಂದಿನ ವರ್ಷದ ಗಳಿಕೆಯನ್ನು ಲೆಕ್ಕ ಹಾಕಿ, ಮುಂದಿನ ವರ್ಷವೂ ಇಷ್ಟೇ ಗಳಿಕೆ ಆಗಬಹುದು ಎಂದು ಊಹಿಸುವ ತಪ್ಪನ್ನು ಹೂಡಿಕೆದಾರರು ಮಾಡಲೇಬಾರದು.

ಯಾವುದೇ ಹೂಡಿಕೆಯು ಪ್ರತಿ ವರ್ಷವೂ ಒಂದೇ ಪ್ರಮಾಣದ ಆದಾಯ ತಂದುಕೊಡುವುದಿಲ್ಲ. ಆದ್ದರಿಂದ ಯಶಸ್ವೀ ಯೋಜನೆಗಳಲ್ಲಿ ಮತ್ತೆ ಮತ್ತೆ ಹೂಡಿಕೆ ಮಾಡುವ ತಪ್ಪುನ್ನು ಹೂಡಿಕೆದಾರರು ಮಾಡಬಾರದು.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರು ಸಾಮಾನ್ಯವಾಗಿ ಮಾಡುವ ತಪ್ಪೆಂದರೆ, ಆದಾಯ ಕಡಿಮೆಯಾಗುತ್ತಿದ್ದಂತೆ ಹೂಡಿಕೆಯ ಹಣವನ್ನೇ ವಾಪಸ್‌ ಪಡೆಯುವುದು. ಹೂಡಿಕೆ ಯಾವತ್ತೂ ದೀರ್ಘಾವಧಿಯದ್ದಾಗಿರಬೇಕು ಮತ್ತು ಯಾವುದೋ ಒಂದು ಆರ್ಥಿಕ ಗುರಿಯನ್ನು ಹೊಂದಿರಬೇಕು. ಹೀಗಿರುವಾಗ ಹೂಡಿಕೆಯನ್ನೇ ಹಿಂತೆಗೆದುಕೊಳ್ಳುವ ತಪ್ಪನ್ನು ಎಂದೂ ಮಾಡಬಾರದು.

ಅದರಂತೆ, ಮ್ಯೂಚುವಲ್‌ ಫಂಡ್‌ನ ‘ನಿಗದಿತ ಆದಾಯ ಯೋಜನೆ’ಗಳಿಂದ ಒಂದೇ ಪ್ರಮಾಣದಲ್ಲಿ ಆದಾಯ ಬರಬೇಕು ಎಂದೂ ನಿರೀಕ್ಷಿಸಬಾರದು. ಮ್ಯೂಚುವಲ್‌ ಫಂಡ್‌ನಿಂದ ಹೆಚ್ಚಿನ ಆದಾಯ ಬರಬಹುದೆಂಬ ನಿರೀಕ್ಷೆಯಿಂದ ಹಲವರು ಬ್ಯಾಂಕ್‌ ಅವಧಿ ಠೇವಣಿಗಳಿಂದ ಮ್ಯೂಚುವಲ್‌ ಫಂಡ್‌ ನಿಗದಿತ ಆದಾಯ ಯೋಜನೆಗಳಿಗೆ ತಮ್ಮ ಹೂಡಿಕೆಯನ್ನು ಬದಲಿಸುತ್ತಿದ್ದಾರೆ. ಈ ನಿರೀಕ್ಷೆ ಕೆಲವೊಮ್ಮೆ ನಿಜವಾದರೆ, ಇನ್ನೂ ಕೆಲವೊಮ್ಮೆ ಹುಸಿಯಾಗಬಹುದು. ಮ್ಯೂಚುವಲ್‌ ಫಂಡ್‌ನ ನಿಗದಿತ ಆದಾಯ ಯೋಜನೆಗಳು ಸಹ ಷೇರು ಮಾರುಕಟ್ಟೆಯ ಏರುಪೇರಿನ ಜೊತೆ ಏರಿಳಿಕೆ ಕಾಣುತ್ತವೆ.

ಮಾಸಿಕ ಡಿವಿಡೆಂಡ್‌ ಕೊಡುವಂಥ ಕೆಲವು ಮ್ಯೂಚುವಲ್‌ ಫಂಡ್‌ ಯೋಜನೆಗಳೂ ಲಭ್ಯ ಇವೆ. ಪ್ರತಿ ತಿಂಗಳೂ ಒಂದಿಷ್ಟು ಆದಾಯ ಬರುತ್ತಿರಲಿ ಎಂದು ಇವುಗಳಲ್ಲಿ ಹೂಡಿಕೆ ಮಾಡುವವರೂ ಇದ್ದಾರೆ. ಇಂಥವರು ಕೆಲವು ವಿಚಾರಗಳನ್ನು ತಿಳಿದಿರಬೇಕು. ಹೂಡಿಕೆಯಿಂದ ಆಗಿರುವ ಲಾಭದ ಒಂದು ಭಾಗವನ್ನು ಹೂಡಿಕೆದಾರರಿಗೆ ಡಿವಿಡೆಂಡ್‌ ರೂಪದಲ್ಲಿ ಕೊಡಲಾಗುತ್ತದೆ. ಒಂದುವೇಳೆ ಇಂಥ ಯೋಜನೆಗಳಲ್ಲಿ ಕೆಲವು ತಿಂಗಳ ಕಾಲ ಲಾಭವೇ ಆಗಿಲ್ಲ ಎಂದಿಟ್ಟುಕೊಳ್ಳಿ. ಆ ತಿಂಗಳುಗಳಲ್ಲಿ ಗ್ರಾಹಕರಿಗೆ ಡಿವಿಡೆಂಡ್‌ ಬರುವುದೇ ಇಲ್ಲ. ಹೀಗಾದಾಗ ಹೂಡಿಕೆದಾರರು ಇಂತ ಯೋಜನೆಗಳ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಅರ್ಥ ವ್ಯವಸ್ಥೆಯಲ್ಲಾಗುವ ಏರುಪೇರು ಯಾವತ್ತೂ ಷೇರು ಮಾರುಕಟ್ಟೆ ಮೇಲೆ ಪ್ರತಿಫಲಿಸುತ್ತದೆ. ಕೆಲವೊಮ್ಮೆ ಇದು ಮ್ಯೂಚುವಲ್‌ ಫಂಡ್‌ ಯೋಜನೆಗಳ ಮೇಲೂ ಪರಿಣಾಮ ಬೀರುತ್ತದೆ. ಹಲವು ದಿನಗಳ ಕಾಲ ಮಾರುಕಟ್ಟೆಯು ಕುಸಿತ ಕಂಡು, ಫಂಡ್‌ಗಳ ಆದಾಯವೂ ಭಾರಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆತಂಕಪಡದೆ, ಅರ್ಥ ವ್ಯವಸ್ಥೆ ಮತ್ತು ಷೇರು ಮಾರುಕಟ್ಟೆ ಮತ್ತೆ ಚೇತರಿಕೆ ಕಾಣುವವರೆಗೆ ಕಾಯುವುದು ಅನಿವಾರ್ಯ.

ಹೂಡಿಕೆಯಲ್ಲಿ ಆಗುವ ಅನೇಕ ತಪ್ಪುಗಳಿಗೆ ‘ಅತಿಯಾಸೆ’ಯೇ ಕಾರಣವಾಗಿರುತ್ತದೆ ಎಂಬುದು ಸ್ಪಷ್ಟ. ಹೂಡಿಕೆದಾರರು ಅನೇಕ ಬಾರಿ ಕನಿಷ್ಠ ಅವಧಿಯಲ್ಲಿ ತಮ್ಮ ಹಣವನ್ನು ದ್ವಿಗುಣಗೊಳಿಸುವ ಧಾವಂತಕ್ಕೆ ಬೀಳುತ್ತಾರೆ. ಇಂಥ ತಪ್ಪು ಮಾಡದೆ, ಎಚ್ಚರವಾಗಿದ್ದುಕೊಂಡು, ಸಮಚಿತ್ತದಿಂದ ಹೂಡಿಕೆ ಮಾಡಿದರೆ ಒಳ್ಳೆಯ ಗಳಿಕೆ ದಾಖಲಿಸಲು ಸಾಧ್ಯವಿದೆ. ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಸಹ ಮಾಡುವುದು ಈ ಕೆಲಸವನ್ನೇ.

ಹೂಡಿಕೆ ನಿರ್ಧಾರಗಳು ಯಾವತ್ತೂ ಅರ್ಥವ್ಯವಸ್ಥೆಯ ಏರುಪೇರಿನ ಆಧಾರದಲ್ಲಿರುತ್ತದೆ. 2018 ರಲ್ಲೂ ಸಹ ಸಮಚಿತ್ತದಿಂದ, ಯೋಜನಾಬದ್ಧವಾಗಿ ದೀರ್ಘಾವಧಿಯ ಹೂಡಿಕೆ ಮಾಡಿದರೆ ಕೈತುಂಬ ಗಳಿಕೆ ಸಾಧ್ಯವಾಗಲಿದೆ.

(ಆದಿತ್ಯ ಬಿರ್ಲಾ ಸನ್‌ಲೈಫ್‌ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT