ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

Last Updated 8 ಅಕ್ಟೋಬರ್ 2017, 6:25 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಪಟ್ಟಣದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ 45ರಲ್ಲಿ ಬೃಹತ್‌ ತಗ್ಗು–ಗುಂಡಿಗಳು ನಿರ್ಮಾಣಗೊಂಡಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಚಳ್ಳಕೆರೆ ಮಾರ್ಗದಿಂದ ರಾಷ್ಟೀಯ ಹೆದ್ದಾರಿ13ರ ದೊಣೆಹಳ್ಳಿ, ಹೊಸಪೇಟೆ, ದಾವಣಗೆರೆಯನ್ನು ಸಂಪರ್ಕಿಸುವ ಈ ರಾಜ್ಯ ಹೆದ್ದಾರಿಯು ಪಟ್ಟಣದಲ್ಲಿ ಹಾದುಹೋಗಿದೆ. ಚಳ್ಳಕೆರೆಯ ರಸ್ತೆಯ ತಿಪ್ಪೇರುದ್ರಸ್ವಾಮಿ ಪೆಟ್ರೋಲ್‌ ಬಂಕ್‌ನಿಂದ ಚನ್ನಬಸಯ್ಯನಹಟ್ಟಿ ಗ್ರಾಮದವರೆಗೂ ಸುಮಾರು 2 ಕಿ.ಮೀ ದೂರದವರೆಗೆ ಹಲವು ಗುಂಡಿಗಳು ಬಿದ್ದಿವೆ.

ಸರಕು ತುಂಬಿಕೊಂಡ ನೂರಾರು ಭಾರಿ ವಾಹನಗಳು, ಬಸ್‌ ಹಾಗೂ ಲಘು ವಾಹನಗಳು ಈ ದಾರಿಯಲ್ಲಿ ನಿತ್ಯ ಸಂಚರಿಸುತ್ತವೆ. ಪಟ್ಟಣದ ಪಕ್ಕದಲ್ಲೇ ಅಪಾಯಕಾರಿ ರಸ್ತೆ ತಿರುವು ಇರುವುದರಿಂದ ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ಸಂಭವಿಸಿವೆ. ರಸ್ತೆ ತಿರುವಿನ ಎರಡು ಬದಿಯಲ್ಲಿ ದೊಡ್ಡ ಕಂದಕಗಳು ಸೃಷ್ಟಿಯಾದ ಪರಿಣಾಮ ಯಾವ ಕಡೆ ಹೋದರೂ ವಾಹನ ಗುಂಡಿಯಲ್ಲಿ ಇಳಿಯುತ್ತಿದೆ. ಇದರಿಂದಾಗಿ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಹಲವು ಬಾರಿ ಪತ್ರಿಕೆಗಳಲ್ಲಿ ವರದಿ ಪ್ರಕಟಗೊಂಡಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಕೋಡಿ ಕಾಲುವೆ ಕಾಮಗಾರಿ ವಿಳಂಬ: ಪಟ್ಟಣಕ್ಕೆ ಹೊಂದಿಕೊಂಡಿರುವ ತಿಪ್ಪೇರುದ್ರಸ್ವಾಮಿ ಚಿಕ್ಕಕೆರೆಯ ಬಲಗಡೆಯ ಕೋಡಿಯಲ್ಲಿ ಹಳೆಯ ಕಾಲುವೆ ಇದೆ. ನೂತನ ಕಾಲುವೆಯ ನಿರ್ಮಾಣ ಕೆಲಸ ಒಂದು ತಿಂಗಳಿನಿಂದ ನಡೆಯುತ್ತಿತ್ತು. ಆದರೆ, ಕಾರಣಾಂತರಗಳಿಂದ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ರಸ್ತೆಯ ಎರಡು ಬದಿಯಲ್ಲಿ ಸುಮಾರು 10 ಅಡಿಗಳಷ್ಟು ಆಳವಾದ ಕಂದಕಗಳಿವೆ. ಸ್ವಲ್ಪ ನಿಯಂತ್ರಣ ತಪ್ಪಿದರೂ ಅಪಘಾತ ನಡೆಯುತ್ತದೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯ: ನಾಯಕನಹಟ್ಟಿಯ ರಸ್ತೆಗಳು ಹಾಳಾಗಿದ್ದರೂ ದುರಸ್ತಿ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳುವಲ್ಲಿ ವಿಫಲಗೊಂಡಿದೆ. ಪಟ್ಟಣದ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಹದಗೆಟ್ಟಿವೆ.
ಪಟ್ಟಣಕ್ಕೆ ಬರುವ ಭಕ್ತರು ಹೈರಾಣಾಗುತ್ತಿದ್ದಾರೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೊಳಿಸಿ ಅಪಘಾತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT