ಮಳೆ ಅವಾಂತರ: ಮನೆಗಳಿಗೆ ಹಾನಿ

ಸೋಮವಾರ, ಮೇ 27, 2019
33 °C

ಮಳೆ ಅವಾಂತರ: ಮನೆಗಳಿಗೆ ಹಾನಿ

Published:
Updated:
ಮಳೆ ಅವಾಂತರ: ಮನೆಗಳಿಗೆ ಹಾನಿ

ದಾವಣಗೆರೆ: ನಗರದಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ವಿವಿಧ ಬಡಾವಣೆಗಳಲ್ಲಿ 62 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 73 ಮನೆಗಳಿಗೆ ನೀರು ನುಗ್ಗಿದೆ. ಮೂರು ಮನೆಗಳು ಸಂಪೂರ್ಣ ಕುಸಿದಿವೆ.

ನಗರದ ಭಗತ್‌ಸಿಂಗ್ ನಗರ, ಶೇಖರಪ್ಪ ನಗರ, ನಿಟುವಳ್ಳಿ, ಬಾಷಾ ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಇದನ್ನು ಹೊರಹಾಕಲು ಜನರು ಪರದಾಡಿದರು. ಕಾಳಿಕಾದೇವಿ ರಸ್ತೆಯ ಶಿವರುದ್ರಯ್ಯ, ಗೋಪಾಲಾಚಾರಿ ಹಾಗೂ ಕೃಷ್ಣಾಚಾರಿ ಎಂಬುವವರ ಮನೆಗಳು ಸಂಪೂರ್ಣ ಕುಸಿದಿವೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಶುಕ್ರವಾರ 45.66 ಮಿ.ಮೀಟರ್‌ ಮಳೆಯಾಗಿದೆ.

ನಗರದಲ್ಲಿ ಗಾಳಿ–ಮಳೆಗೆ ಬಳ್ಳಾರಿ ಸಿದ್ದಮ್ಮ ಪಾರ್ಕ್‌ ಸಮೀಪದ ರಸ್ತೆಯಲ್ಲಿ ಭಾರಿ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಜನನಿಬಿಡ ಸ್ಥಳದಲ್ಲಿ, ವಿದ್ಯುತ್‌ ತಂತಿಗಳ ಮೇಲೆ ಮರ ಬಿದ್ದಿದ್ದು, ಇಡೀ ದಿನ ಸಂಚಾರ ಹಾಗೂ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತ್ತು.

ಮಳೆ, ತಾಲ್ಲೂಕುವಾರು: ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 17 ಮಿ.ಮೀ. ಮಳೆಯಾಗಿದೆ. ದಾವಣಗೆರೆ ನಗರ 36.8 ಮಿ.ಮೀ., ಹರಿಹರ ತಾಲ್ಲೂಕು 13.6 ಮಿ.ಮೀ., ಹೊನ್ನಾಳಿ ತಾಲ್ಲೂಕು 6.2 ಮಿ.ಮೀ. ಚನ್ನಗಿರಿ ತಾಲ್ಲೂಕು 1.3 ಮಿ.ಮೀ., ಹರಪನಹಳ್ಳಿ ತಾಲ್ಲೂಕು 20.9 ಮಿ.ಮೀ., ಜಗಳೂರು ತಾಲ್ಲೂಕು 22.9 ಮಿ.ಮೀ. ಮಳೆಯಾಗಿದ್ದು, ಒಟ್ಟು 17 ಮಿ.ಮೀ. ಮಳೆಯಾಗಿದೆ.

ಹರಿಹರ ತಾಲ್ಲೂಕು ಕುರುಬರಹಳ್ಳಿ ಗ್ರಾಮದಲ್ಲಿ ಗೋಡೆ ಕುಸಿದು ಬಿದ್ದ ಪರಿಣಾಮ ಅಂಜಿನಪ್ಪ (58), ಸಾವಿತ್ರಮ್ಮ(50) ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ 2 ಕುರಿ ಹಾಗೂ ಕೋಳಿಗಳು ಮೃತ ಪಟ್ಟಿವೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 4 ಎಕರೆ ಮೆಕ್ಕೆಜೋಳ ಬೆಳೆ ಹಾನಿಗೊಂಡಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry