ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಸಾವಿರ ಮಂದಿಗೆ ನೌಕರಿ ಭಾಗ್ಯ

Last Updated 8 ಅಕ್ಟೋಬರ್ 2017, 6:57 IST
ಅಕ್ಷರ ಗಾತ್ರ

ಹಾಸನ: ಅಲ್ಲಿ ನಿರುದ್ಯೋಗಿಗಳ ದಂಡೆ ನೆರದಿತ್ತು. ಸಾವಿರಾರು ಯುವಕರು, ಯುವತಿಯರು ಉದ್ಯೋಗದ ಕನಸು ಹೊತ್ತು ಧಾವಿಸಿದ್ದರು. ಕೆಲವರಿಗೆ ನೌಕರಿ ದೊರೆಯಿತು, ಮತ್ತೆ ಕೆಲವರು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದರು.

ಗುರು ತೋರಿದ ದಾರಿ ತಿಂಗಳ ಮಾಮನ ತೇರು’ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಕಂಡು ದೃಶ್ಯ.

ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು ಸೇರಿದಂತೆ ಮತ್ತು ನೆರೆಹೊರೆ ಜಿಲ್ಲೆಗಳ ಸುಮಾರು 12 ಸಾವಿರ ಅಭ್ಯರ್ಥಿಗಳು ಸಂದರ್ಶನಕ್ಕೆ ಹೆಸರು ನೋಂದಾಯಿಸಿದ್ದರು.

ಇನ್ಫೊಸಿಸ್‌, ಟಿವಿಎಸ್, ಟಿಸಿಎಸ್, ಹಾಸನದ ನವಭಾರತ ಫರ್ಟಿಲೈಸರ್ಸ್‌ ಸೇರಿದಂತೆ ಎಂಬತ್ತಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು. ಅಭ್ಯರ್ಥಿಗಳ ಹೆಸರು ನೋಂದಣಿ ಬಳಿಕ ದಾಖಲೆಗಳನ್ನು ಪರಿಶೀಲಿಸಲಾಯಿತು. ಕಂಪೆನಿಗಳ ಪ್ರತಿನಿಧಿಗಳು ಅಭ್ಯರ್ಥಿಗಳ ಜತೆ ಎರಡು ಸುತ್ತಿನ ಸಂದರ್ಶನ ನಡೆಸಿದರು.

ಅವರಲ್ಲಿ 4050 ಮಂದಿಗೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಅವಕಾಶ ದೊರೆಯಿತು. ಅಲ್ಲದೆ 1600 ಅಭ್ಯರ್ಥಿಗಳಿಗೆ ತರಬೇತಿಗೆ ಆಹ್ವಾನ ನೀಡಲಾಯಿತು. ಉದ್ಯೋಗ ಪಡೆದವರಿಗೆ ನಿರ್ಮಲಾನಂದನಾಥ ಸ್ವಾಮೀಜಿ ನೇಮಕಾತಿ ಪತ್ರ ನೀಡಿ, ಶುಭ ಹಾರೈಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಶುಸಂಗೋಪನೆ ಸಚಿವ ಎ.ಮಂಜು, ಯುವಜನರು ಆತ್ಮವಿಶ್ವಾಸ ಬೆಳೆಸಿಕೊಂಡರೆ, ಉದ್ಯೋಗಾವಕಾಶ ಸೃಷ್ಟಿಯಾಗುತ್ತವೆ. ಇಂದು ವಿದ್ಯೆಗಿಂತ ಕೌಶಲ ಮತ್ತು ಸಾಮರ್ಥ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದ್ದರಿಂದ ಯುವಜನರು ಮೊದಲು ತಮಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಕೌಶಲ ಹೆಚ್ಚಿಸಿಕೊಳ್ಳಬೇಕು. ಇಂದು ಅನೇಕ ವಿದ್ಯಾವಂತರು ನಗರಗಳಲ್ಲಿನ ಕೆಲಸವನ್ನು ತೊರೆದು ಹಳ್ಳಿಗಳಿಗೆ ಹಿಂದುರುಗಿ ಹೈನುಗಾರಿಕೆ, ರೇಷ್ಮೆ ಕೃಷಿ ಮತ್ತಿತರ ಸ್ವ ಉದ್ಯೋಗಗಳನ್ನು ಕೈಗೊಂಡು ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ ಎಂದು ಹೇಳಿದರು.

ಬಿ.ಜಿ.ಎಸ್ ಸಂಸ್ಮರಣೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ಎಚ್.ಎಸ್. ಪ್ರಕಾಶ್ ಮಾತನಾಡಿದರು. ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್, ಉಪಾಧ್ಯಕ್ಷ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಹುಡಾ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಉಪ ವಿಭಾಗಾಧಿಕಾರಿ ಎಚ್‌.ಎಲ್‌.ನಾಗರಾಜ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಶೇಖರ್ ಮತ್ತು ಉದ್ಯೋಗ ಮೇಳದ ಸಂಯೋಜಕ ರುಕ್ಮಾಂಗದ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT