ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಸಾಕ್ಷಿಯಾದ ಬಲಿಕಲ್ಲು ಬದಲಾವಣೆ ಇಲ್ಲ

Last Updated 8 ಅಕ್ಟೋಬರ್ 2017, 9:20 IST
ಅಕ್ಷರ ಗಾತ್ರ

ಮಂಗಳೂರು: ಶತಮಾನದಷ್ಟು ಪುರಾ ತನವಾದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರದ ಸಂದ ರ್ಭದಲ್ಲಿ ದೇವಸ್ಥಾನದ ಮುಂದಿರುವ ಬೃಹತ್‌ ಬಲಿಕಲ್ಲನ್ನೂ ಬದಲಾಯಿಸುವ ನಿರ್ಧಾರವನ್ನು ಕೈ ಬಿಡಲಾಗಿದೆ. ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸುತ್ತುಪೌಳಿ ಮತ್ತು ಗರ್ಭಗುಡಿಯ ಹೊರಾವರಣದ ಉತ್ಖನನದ ಸಂದರ್ಭದಲ್ಲಿ ದೊರೆತ ಶಾಸನಗಳು ದೇವಸ್ಥಾನದ ಇತಿಹಾಸವನ್ನು ಅನಾವರಣಗೊಳಿಸಿವೆ.

ಪೊಳಲಿ ದೇವಸ್ಥಾನವು ಸುಮಾರು 7ನೇ ಶತಮಾನದಲ್ಲಿಯೇ ಪ್ರಸಿದ್ಧಿಯ ಉತ್ತುಂಗದಲ್ಲಿತ್ತು. ಅಂದರೆ ಸುಮಾರು 2 ಅಥವಾ 3ನೇ ಶತಮಾನದಲ್ಲಿಯೇ ದೇವಸ್ಥಾನವು ಆಡಳಿತದ ಕೇಂದ್ರವಾಗಿ ಇರಬಹುದು ಎಂಬ ಅಂದಾಜು ಇದೆ. ದೇವಸ್ಥಾನದ ಗರ್ಭಗುಡಿಯ ಮುಂಭಾಗದ ಧ್ವಜಸ್ತಂಭದ ಬಳಿ ಇರುವ ಆಳೆತ್ತರದ ಚೌಕಾಕಾರದ ಬೃಹತ್‌ ಬಲಿಕಲ್ಲು ದೇವಸ್ಥಾನದ ಇತಿಹಾಸವನ್ನೇ ಹೇಳುತ್ತದೆ.

ಈ ಕಲ್ಲು ಸುಮಾರು 1200 ವರ್ಷಗಳಷ್ಟು ಹಳೆಯದಾಗಿದ್ದು ದೇವಸ್ಥಾನ ಎಷ್ಟು ಪುರಾತನವಾಗಿದೆ ಎಂಬುದಕ್ಕೆ ಇರುವ ಸಾಕ್ಷಿಯಂತಿದೆ. ಆದ್ದರಿಂದ ಈ ಕಲ್ಲನ್ನು ಬದಲಾಯಿಸುವುದು ಸರಿಯಲ್ಲ ಎಂದು ಶಾಸನಗಳ ಅಧ್ಯಯನಕ್ಕೆ ಬಂದಿದ್ದ ನರಸಿಂಹ ಮೂರ್ತಿ ಅವರು ಸಲಹೆ ಮಾಡಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯು ಇತಿಹಾಸತಜ್ಞರ ಸಲಹೆಯನ್ನು ಪರಿಗಣಿಸಿದ್ದು, ಬಲಿಕಲ್ಲನ್ನು ಉಳಿಸಿಕೊಳ್ಳಲು ತೀರ್ಮಾನಿಸಿದೆ ಎನ್ನುತ್ತಾರೆ ದೇವಸ್ಥಾನದ ಆನುವಂಶಿಕ ಮೊಕ್ತೇಸರ ತಾರಾನಾಥ ಆಳ್ವ.

12ನೇ ಶತಮಾನದ ಆದಿ ಭಾಗದಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದ ದೇವಸ್ಥಾನದ ಹಾಗೂ ಸುತ್ತಮುತ್ತಲಿನ ಹಲವು ಊರುಗಳ ಎಲ್ಲ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಹಿಂದಿನ ಕಾಲದಲ್ಲಿ ಎಲ್ಲ ಸಾಮಾಜಿಕ ಚಟುವಟಿಕೆಗಳಿಗೂ ದೇವಸ್ಥಾನವೇ ಕೇಂದ್ರ ಸ್ಥಾನವಾಗಿತ್ತು ಎಂದು ‘ಪ್ರಜಾವಾಣಿ’ ಯ ಜೊತೆ ಮಾತನಾಡಿದ ಮಂಡ್ಯದ ಇತಿಹಾಸ ತಜ್ಞ ನರಸಿಂಹ ಮೂರ್ತಿ ಹೇಳುತ್ತಾರೆ.

800ಕ್ಕೂ ಹೆಚ್ಚು ವರ್ಷಗಳ ಕಾಲ ಶಾಸ್ತ್ರೋಕ್ತವಾಗಿ ಪೂಜೆಯನ್ನು ಪಡೆದ ಕಲ್ಲು, ಹೊಸದಾಗಿ ಆಯ್ಕೆ ಮಾಡುವ ಸಾಮಾನ್ಯ ಕಲ್ಲಿಗೆ ಸಮಾನವಾಗಿರುವುದಿಲ್ಲ. ಹಿರಿಯರು ಪೂಜಿಸಿದ ಕಲ್ಲು ಎಂಬ ಅಭಿಮಾನವೂ ಹೊಸತಲೆಮಾರಿಗೆ ಇರಬೇಕು. ಆದ್ದರಿಂದ ಜೀರ್ಣೋದ್ಧಾರ ಸಂದರ್ಭದಲ್ಲಿ ಬಲಿಕಲ್ಲಿನ ಮಹತ್ವವನ್ನು ಯುವಜನತೆಯೂ ಅರಿಯಬೇಕು ಎನ್ನುವುದು ಅವರ ಅಭಿಪ್ರಾಯ.

ದಕ್ಷಿಣ ಕನ್ನಡದಲ್ಲಿ ಮಣ್ಣಿನಿಂದ ಮಾಡಿದ ದೇವರ ಮೂರ್ತಿಯನ್ನು ಆರಾಧನೆ ಮಾಡುವ ಕ್ರಮ ಪುರಾತನ ಕಾಲದಿಂದಲೂ ನಡೆದುಬಂದಿದೆ. ಉದ್ಯಾವರ, ಬಾರ್ಕೂರು ದೇವಸ್ಥಾನಗಳಲ್ಲಿ ಮಣ್ಣಿನ ಮೂರ್ತಿ ಕಾಣಬಹುದು. ಅದೇ ರೀತಿ ಲೆಪ್ಪದ ಬಸದಿಯಲ್ಲಿಯೂ ಮಣ್ಣಿನ ಮೂರ್ತಿಗಳಿವೆ. ಆದರೆ ಪೊಳಲಿ ರಾಜರಾಜೇಶ್ವರಿ ದೇವಿಯ ವಿಗ್ರಹ 9 ಅಡಿಗಳಷ್ಟು ಎತ್ತರವಾಗಿದೆ. ಭದ್ರಕಾಳಿ ದೇವಿ ಮತ್ತು ಗಣಪತಿ ಹಾಗೂ ಸುಬ್ರಹ್ಮಣ್ಯ ದೇವರ ವಿಗ್ರಹ 7 ಅಡಿಗಳಷ್ಟು ಎತ್ತರವಿದೆ.

ಗರ್ಭಗುಡಿಯ ಒಳಗೆ ಇರುವ ಗೋಡೆಯೊಂದಕ್ಕೆ ಸಾಲಾಗಿ ಒರಗಿ ಕುಳಿತಂತೆ ದೇವರ ಮೂರ್ತಿಯನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ, ದೇವರ ಬಳಿ ಇನ್ನೂ ಹಲವಾರು ದೇವ ದೇವಿಯರ ವಿಗ್ರಹಗಳಿವೆ.

ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಗುಡಿಯಲ್ಲಿ ಯಾವುದೇ ಕಾಮಗಾರಿ ಮಾಡುವುದಿಲ್ಲ. ಆದರೆ ಛಾವಣಿಯನ್ನು ಇನ್ನಷ್ಟು ಭದ್ರಪಡಿಸಲಾಗುವುದು.  ಜೀರ್ಣೋದ್ಧಾರ 2018ರ ಫೆಬ್ರುವರಿ ವೇಳೆಗೆ ಮುಕ್ತಾಯವಾಗಿ, ಮಾರ್ಚ್‌ ವೇಳೆಗೆ ಬ್ರಹ್ಮಕಲಶ ಮಾಡುವ ನಿರೀಕ್ಷೆ ಇದೆ ಎಂದು ಜೀರ್ಣೋದ್ಧಾರ ಸಮಿತಿಯ ಸದಸ್ಯ ಸುಬ್ರಾಯ ಕಾರಂತ ಹೇಳಿದ್ದಾರೆ.
ಅಧ್ಯಯನಕ್ಕೆ ಇನ್ನಷ್ಟು ಶಾಸನಗಳು ಬಾಕಿ ಇವೆ. ನರಸಿಂಹ ಮೂರ್ತಿ ಅವರು ಪುರಾತತ್ವ ಇಲಾಖೆಯ ಪರಿಣತರನ್ನು ಅಧ್ಯಯನಕ್ಕಾಗಿ ಕಳುಹಿಸಲಿದ್ದಾರೆ ಎನ್ನುತ್ತಾರೆ ಕಾರಂತರು.

1039ನೇ ಕಾಲದ ಶಾಸನ: ಉತ್ಖನನದ ಸಂದರ್ಭ ದೊರೆತ ಶಾಸನ ಸ್ವಸ್ತಿ ಶ್ರೀ ಗಣಪತಯೇ ನಮಃ ಎಂದು ಆರಂಭವಾಗುತ್ತದೆ. ಶಾಸನದ ಎರಡನೆಯ ಸಾಲಿನ ಕೊನೆಯಲ್ಲಿರುವ 1039 ಎಂಬ ಸಂಖ್ಯೆಯನ್ನು ಶಕ ವರ್ಷವೆಂದು ಪರಿಗಣಿಸುವುದು ಸೂಕ್ತವಾಗಿದ್ದು ಅದರಂತೆ ಈ ಶಾಸನದ ಕಾಲ ಕ್ರಿ.ಶ.1117 ಕ್ಕೆ ಸರಿಹೊಂದುತ್ತದೆ ಎಂದು ಇತಿಹಾಸ ಸಂಶೋಧಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ಟ ಹೇಳುತ್ತಾರೆ. ಆಳುಪ ವಂಶದ ಅರಸನಾದ ಕುಲಶೇಖರನ ಆಳ್ವಿಕೆಯಲ್ಲಿ, ಆತನ ಭೃತ್ಯನಾಗಿದ್ದ ಬಿಳಿವೆಯ ನಂಬಿ ಎಂಬಾತ ಆತ್ಮಾರ್ಪಣೆಯನ್ನು (ಜೋಳವಾಳಿ) ಮಾಡಿ ವೀರಸಾಹಸವನ್ನು ಮೆರೆದ ವಿಚಾರವನ್ನು ಈ ಶಾಸನ ದಾಖಲಿಸುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT