ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್‌ಹಾಕಿ ನಿರೀಕ್ಷೆ ಅಪಾರ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಾಕಿ ಕ್ರೀಡೆಯ ಹೆಸರು ಕೇಳಿದಾಗ ಭಾರತದ ಕ್ರೀಡಾಪ್ರೇಮಿಗಳಿಗೆ ಮೊದಲು ನೆನಪಾಗುವುದು ತಂಡದ ಒಲಿಂಪಿಕ್‌ ಸಾಧನೆ. ಒಲಿಂಪಿಕ್ಸ್‌ನಲ್ಲಿ ಸತತ ಆರು ಚಿನ್ನ ಸೇರಿದಂತೆ ಎಂಟು ಪದಕ ಗೆದ್ದ ಸಾಧನೆ ನಮ್ಮದು. ವಿಶ್ವಕಪ್‌ ಟೂರ್ನಿಯಲ್ಲೂ ಒಮ್ಮೆ ಚಿನ್ನ ಜಯಿಸಿದ್ದೇವೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇವೆ.

ಆದರೆ ಇತಿಹಾಸದ ವೈಭವವನ್ನು ನೆನೆಯುತ್ತಾ ಮೂರೂವರೆ ದಶಕಗಳು ಕಳೆದುಹೋಗಿವೆ. ಭಾರತ ತಂಡಕ್ಕೆ ಗತ ವೈಭವದ ದಿನಗಳಿಗೆ ಮರಳಲು ಸಾಧ್ಯವಾಗಿಲ್ಲ ಎಂಬುದು ಸತ್ಯ. ಒಮ್ಮೊಮ್ಮೆ ಆ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಟ್ಟರೂ, ಬಳಿಕ ಎಡವುತ್ತಲೇ ಇದೆ.

ಹೊಸ ಆಟಗಾರರು, ಹೊಸ ತರಬೇತುದಾರರನ್ನು ನೇಮಿಸಿ ವಿವಿಧ ಪ್ರಯೋಗಗಳನ್ನು ಮಾಡಿದರೂ ವಿಶ್ವವನ್ನೇ ಮಣಿಸುವ ತಂಡವಾಗಿ ಬೆಳೆಯಲು ಭಾರತಕ್ಕೆ ಇನ್ನೂ ಸಾಧ್ಯವಾಗಿಲ್ಲ. ಇದೀಗ ಮತ್ತೊಮ್ಮೆ ಹೊಸ ತರಬೇತುದಾರರನ್ನು ಪಡೆದಿರುವ ತಂಡ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುವ ಕನಸು ಕಾಣುತ್ತಿದೆ. ಆ ದಾರಿಯಲ್ಲಿ ಎದುರಾಗಿರುವ ಮೊದಲ ಸವಾಲು ಏಷ್ಯಾಕಪ್‌ ಟೂರ್ನಿ.

ಏಷ್ಯಾದ ತಂಡಗಳಿಗೆ ಬಲುದೊಡ್ಡ ‘ಹಾಕಿ ಉತ್ಸವ’ ಎನಿಸಿರುವ ಟೂರ್ನಿ ಬಾಂಗ್ಲಾದೇಶದ ಢಾಕಾದಲ್ಲಿ ಇದೇ 11 ರಿಂದ ನಡೆಯಲಿದೆ. ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಅ. 11 ರಂದು ನಡೆಯುವ ಪಂದ್ಯದಲ್ಲಿ ಜಪಾನ್‌ ತಂಡವನ್ನು ಎದುರಿಸುವುದರೊಂದಿಗೆ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ. ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಭಾರತ–ಪಾಕಿಸ್ತಾನ ನಡುವಿನ ಹೋರಾಟಕ್ಕೆ ಅ.15 ರಂದು ಮುಹೂರ್ತ ನಿಗದಿಯಾಗಿದೆ.

ನಿರೀಕ್ಷೆ ಅಪಾರ: ಮನ್‌ಪ್ರೀತ್‌ ಸಿಂಗ್‌ ನೇತೃತ್ವದ ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರನ್ನು ಒಳಗೊಂಡಿದ್ದು, ಅಪಾರ ನಿರೀಕ್ಷೆ ಹುಟ್ಟಿಸಿದೆ. ಪಾಕಿಸ್ತಾನ ಮತ್ತು ದಕ್ಷಿಣ ಕೊರಿಯಾ ತಂಡಗಳಿಂದ ಭಾರತಕ್ಕೆ ಪ್ರಬಲ ಪೈಪೋಟಿ ಎದುರಾಗುವುದು ಖಚಿತ.

ಆದರೆ ಎಫ್‌ಐಎಚ್‌ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿರುವ ಭಾರತವು ಏಷ್ಯಾ ಕಪ್‌ನಲ್ಲಿ ಆಡುತ್ತಿರುವ ಇತರ ತಂಡಗಳಿಗಿಂತ ತುಂಬಾ ಮುಂದಿದೆ. ರ‍್ಯಾಂಕಿಂಗ್‌ನಲ್ಲಿ ದಕ್ಷಿಣ ಕೊರಿಯಾ (13), ಪಾಕಿಸ್ತಾನ (14) ಮತ್ತು ಜಪಾನ್‌(17) ತಂಡಗಳಿಗಿಂತ ಎತ್ತರದ ಸ್ಥಾನದಲ್ಲಿದೆ.

ಏಷ್ಯಾಕಪ್‌ಗೆ ಕೇವಲ ಯುವಕರನ್ನು ಕಟ್ಟಿಕೊಂಡು ಹೋದರೆ ಯಶಸ್ಸು ಕಷ್ಟ ಎಂಬ ಕಾರಣ ಹಾಕಿ ಇಂಡಿಯಾ (ಎಚ್‌ಐ) ಆಯ್ಕೆ ಸಮಿತಿ ಅನುಭವಿಗಳನ್ನೂ ತಂಡದಲ್ಲಿ ಸೇರಿಸಿಕೊಂಡಿದೆ. ಹಿರಿಯ ಮಿಡ್‌ಫೀಲ್ಡರ್‌ ಸರ್ದಾರ್‌ಸಿಂಗ್‌, ಎಸ್‌.ವಿ.ಸುನಿಲ್‌ ಮತ್ತು ಆಕಾಶದೀಪ್‌ಸಿಂಗ್‌ ಅವರಿಗೆ ಅವಕಾಶ ದೊರೆತಿದೆ.

ಹೋದ ತಿಂಗಳು ಯುರೋಪ್‌ ಪ್ರವಾಸ ಕೈಗೊಂಡಿದ್ದ ಭಾರತ ತಂಡದಲ್ಲಿ ಈ ಮೂವರು ಆಟಗಾರರು ಸ್ಥಾನ ಪಡೆದಿರಲಿಲ್ಲ. ಅಂತರರಾಷ್ಟ್ರೀಯ ಪಂದ್ಯದಲ್ಲಿ ಅನುಭವ ದೊರೆಯಲಿ ಎಂಬ ಕಾರಣ ಯುರೋಪ್‌ ಪ್ರವಾಸಕ್ಕೆ ತಂಡದಲ್ಲಿ ಹೆಚ್ಚಿನ ಯುವ ಆಟಗಾರರನ್ನು ಸೇರಿಸಿಕೊಳ್ಳಲಾಗಿತ್ತು. ಭಾರತ ತಂಡ ಏಷ್ಯಾಕಪ್‌ ಟೂರ್ನಿಯನ್ನು ನೂತನ ಕೋಚ್‌ ಶೊರ್ಡ್‌ ಮ್ಯಾರಿಜ್‌ ಮಾರ್ಗದರ್ಶನದಲ್ಲಿ ಆಡಲಿರುವುದರಿಂದಲೇ ಅನುಭವಿಗಳಿಗೆ ಮಣೆ ಹಾಕಲಾಗಿದೆ ಎಂಬುದು ಸ್ಪಷ್ಟ.

ಮ್ಯಾರಿಜ್‌ಗೆ ಅಗ್ನಿಪರೀಕ್ಷೆ: ಏಷ್ಯಾಕಪ್‌ ಟೂರ್ನಿ ಆಟಗಾರರಿಗೆ ಮಾತ್ರವಲ್ಲ, ನೂತನ ಕೋಚ್‌ ಮ್ಯಾರಿಜ್‌ ಅವರಿಗೂ ಅಗ್ನಿಪರೀಕ್ಷೆಯಾಗಿದೆ. ನೆದರ್ಲೆಂಡ್ಸ್‌ನ ಮ್ಯಾರಿಜ್‌ಗೆ ಪುರುಷರ ರಾಷ್ಟ್ರೀಯ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ ಅನುಭವ ಇಲ್ಲ. ಭಾರತ ಮಹಿಳಾ ತಂಡದ ತರಬೇತುದಾರರಾಗಿದ್ದ ಅವರಿಗೆ ಪುರುಷರ ತಂಡದ ಕೋಚ್‌ ಹುದ್ದೆ ನೀಡಿದ್ದು ಹಲವರಿಗೆ ಅಚ್ಚರಿ ಉಂಟುಮಾಡಿತ್ತು.

ಅವರ ನೇಮಕಕ್ಕೆ ಕೆಲವು ಮಾಜಿ ಆಟಗಾರರಿಂದ ಟೀಕೆಯೂ ವ್ಯಕ್ತವಾಗಿತ್ತು. ಟೀಕೆಗಳಿಗೆ ಉತ್ತರ ನೀಡುವ ಸವಾಲು ಅವರ ಮುಂದಿದೆ. ‘ಏಷ್ಯಾ ಕಪ್‌ಟೂರ್ನಿ ನನಗೂ ಈ ತಂಡಕ್ಕೂ ಹೊಸ ಆರಂಭ’ ಎಂದು ಮ್ಯಾರಿಚ್‌ ಈಗಾಗಲೇ ಹೇಳಿದ್ದಾರೆ.

ಮುಂಬರುವ ದಿನಗಳಲ್ಲಿ ಭಾರತ ತಂಡದ ಸುಧಾರಣೆಗೆ ಏನು ಮಾಡಬೇಕು ಎಂಬುದರ ಬಗ್ಗೆ ಅವರಿಗೆ ಒಂದು ಸ್ಪಷ್ಟ ಚಿತ್ರಣವನ್ನು ಈ ಟೂರ್ನಿ ನೀಡಲಿದೆ. ಮುಂದಿನ 15 ತಿಂಗಳಲ್ಲಿ ಹಾಕಿ ವಿಶ್ವಲೀಗ್‌ ಫೈನಲ್‌, ಏಷ್ಯನ್‌ ಕ್ರೀಡಾಕೂಟ, ಕಾಮನ್‌ವೆಲ್ತ್‌ ಕ್ರೀಡಾಕೂಟ ಮತ್ತು ವಿಶ್ವಕಪ್‌ ಟೂರ್ನಿಗಳು ನಡೆಯಲಿವೆ. ಅದಕ್ಕೆ ಸಜ್ಜಾಗುವ ನಿಟ್ಟಿನಲ್ಲಿ ಏಷ್ಯಾಕಪ್‌ ಮೊದಲ ಹೆಜ್ಜೆಯಾಗಿದೆ.

ಭಾರತ ತಂಡ ಬೆಂಗಳೂರಿನಲ್ಲಿ ಕಠಿಣ ತರಬೇತಿ ನಡೆಸಿ ಢಾಕಾಕ್ಕೆ ಪ್ರಯಾಣಿಸಿದೆ. ಮ್ಯಾರಿಜ್‌ ಅವರು ಈ ತರಬೇತಿ ಶಿಬಿರದಲ್ಲಿ ಆಟಗಾರರ ಶಕ್ತಿ, ದೌರ್ಬಲ್ಯಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಆಟಗಾರರು ತರಬೇತಿಯ ಅವಧಿ ಮತ್ತು ಪಂದ್ಯದಲ್ಲಿ ತೋರುವ ಸಾಮರ್ಥ್ಯಕ್ಕೂ ಭಾರಿ ವ್ಯತ್ಯಾಸವಿದೆ. ಏಷ್ಯಾ ಕಪ್‌ ಟೂರ್ನಿಯ ಬಳಿಕವಷ್ಟೇ ಅವರಿಗೆ ತಂಡದ ಆಟಗಾರರ ಸಾಮರ್ಥ್ಯದ ಅರಿವಾಗಲಿದೆ.

ಹಾಕಿ ಇಂಡಿಯಾದ ಹೈ ಪರ್ಫಾರ್ಮೆನ್ಸ್‌ ಡೈರೆಕ್ಟರ್‌ ಡೇವಿಡ್‌ ಜಾನ್‌ ಅವರು ಆಟದ ತಂತ್ರ ರೂಪಿಸಲು ಆಟಗಾರರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆಟಗಾರರ ಬಯಕೆಗೆ ತಕ್ಕಂತೆ ತರಬೇತಿ ಕಾರ್ಯಕ್ರಮ ರೂಪಿಸುವ ಜವಾಬ್ದಾರಿಯನ್ನು ಕೋಚ್‌ಗೆ ನೀಡಲಾಗಿದೆ. ಆಟಗಾರರನ್ನು ಸ್ವತಂತ್ರವಾಗಿ ಆಡಲು ಬಿಟ್ಟರೆ ಅವರಿಂದ ಶ್ರೇಷ್ಠ ಆಟ ಹೊರಹೊಮ್ಮಬಹುದು ಎಂಬುದು ಹಾಕಿ ಇಂಡಿಯಾದ ಲೆಕ್ಕಾಚಾರ. ಈ ಪ್ರಯೋಗ ಯಶಸ್ವಿಯಾಗುವುದೇ ಎಂಬುದನ್ನು ನೋಡಬೇಕು.

ಏಷ್ಯಾಕಪ್‌ ಗೆಲ್ಲುವ ತಂಡ 2018ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಲಿದೆ. ಆತಿಥೇಯರು ಎಂಬ ಕಾರಣ ಭಾರತ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದ್ದರಿಂದ ಮನ್‌ಪ್ರೀತ್ ಬಳಗ ಯಾವುದೇ ಒತ್ತಡವಿಲ್ಲದೆ ಢಾಕಾದಲ್ಲಿ ಕಣಕ್ಕಿಳಿಯಲಿದೆ.

***
ದಕ್ಷಿಣ ಕೊರಿಯಾ ಪಾರಮ್ಯ

ಏಷ್ಯಾ ಕಪ್‌ಹಾಕಿ ಟೂರ್ನಿಯ ಇದುವರೆಗಿನ ಇತಿಹಾಸವನ್ನು ನೋಡಿದರೆ ದಕ್ಷಿಣ ಕೊರಿಯಾ ತಂಡದ ಪ್ರಾಬಲ್ಯ ಕಂಡುಬರುತ್ತದೆ. ಒಂಬತ್ತು ಟೂರ್ನಿಗಳಲ್ಲಿ ನಾಲ್ಕರಲ್ಲಿ ಕೊರಿಯಾ ಚಾಂಪಿಯನ್‌ ಆಗಿದೆ. ಪಾಕಿಸ್ತಾನ ಮೂರು ಸಲ ಟ್ರೋಫಿ ಎತ್ತಿಹಿಡಿದರೆ, ಭಾರತ ಎರಡು ಸಲ (2003, 2007) ಈ ಸಾಧನೆ ಮಾಡಿದೆ. ಕಳೆದ ಎರಡು ಟೂರ್ನಿಗಳಲ್ಲಿ ಕಪ್‌ ಗೆದ್ದಿರುವ ಕೊರಿಯ ಈ ಬಾರಿ ಹ್ಯಾಟ್ರಿಕ್‌ ಪ್ರಶಸ್ತಿಯ ಕನಸಿನಲ್ಲಿದೆ. ಭಾರತವು 10 ವರ್ಷಗಳ ಬಿಡುವಿನ ಬಳಿಕ ಏಷ್ಯಾದ ಚಕ್ರವರ್ತಿ ಎನಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಏಷ್ಯಾ ಕಪ್‌ನಲ್ಲಿ ಎರಡು ಸಲ ಟ್ರೋಫಿ ಜಯಿಸಿರುವ ಭಾರತ ಐದು ಸಲ ರನ್ನರ್ಸ್‌ ಅಪ್‌ ಸ್ಥಾನ ಪಡೆದುಕೊಂಡಿದೆ. 1999 ರಲ್ಲಿ ಮೂರನೇ ಸ್ಥಾನ ಪಡೆದಿತ್ತು. ಏಷ್ಯಾ ಕಪ್‌ನಲ್ಲಿ ಭಾರತದ ಅತ್ಯಂತ ಕಳಪೆ ಪ್ರದರ್ಶನ 2009 ರಲ್ಲಿ ಮೂಡಿಬಂದಿತ್ತು. ಆ ಟೂರ್ನಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT