ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹಕ ವಜ್ರ

Last Updated 8 ಅಕ್ಟೋಬರ್ 2017, 10:05 IST
ಅಕ್ಷರ ಗಾತ್ರ

ಅಬ್ಬಾ! ಏನಿದು ಹಸಿರು ಕಾನನ. ಇದೆಲ್ಲೋ ಪಶ್ಚಿಮಘಟ್ಟದ ನೆಲೆಯೇ? ಏನೀ ಗಿರಿ ಶಿಖರ... ಮನ ಮೋಹಕ ಕಣಿವೆಗಳು... ಬರಗಾಲದ ಬಯಲು ಸೀಮೆಯ ತುಮಕೂರು ಜಿಲ್ಲೆಯಲ್ಲಿ ಇಂಥದ್ದೊಂದು ಸ್ಥಳ ನೋಡಬೇಕೆಂದರೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಜ್ರಕ್ಕೆ ಹೋಗಬೇಕು. ಪುರಾತನ ಕಾಲದ ವಜ್ರ ತೀರ್ಥ ರಾಮೇಶ್ವರ ದೇವಸ್ಥಾನದ ಸುತ್ತೆಲ್ಲ ಬರೀ ಗಿರಿ ಶಿಖರಗಳು.

ಸಿಮೆಂಟ್‌ ಕೈಗಾರಿಕೆಗೆ ತುತ್ತಾಗಿ ಹೋಗಬೇಕಾಗಿದ್ದ ವಜ್ರ ತೀರ್ಥ ರಾಮೇಶ್ವರ ದೇವಸ್ಥಾನ ಊರವರು, ವಿದ್ಯಾರ್ಥಿಗಳ ಹೋರಾಟದಿಂದ ಉಳಿದುಕೊಂಡಿದೆ. ಆದರೂ ನಾಲ್ಕೈದು ವರ್ಷಗಳ ಹಿಂದೆ ನಡೆದ ಕಬ್ಬಿಣದ ಅದಿರು ಗಣಿಗಾರಿಕೆಗೆ ತತ್ತರಿಸಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಎಂದರೆ ಅದು ನಿಸರ್ಗದ ಕಣಜ. ಇಲ್ಲಿರುವ ಮದಲಿಂಗನ ಕಣಿವೆ ಯಾವ ಪ್ರವಾಸಿ ತಾಣಕ್ಕೂ ಕಡಿಮೆ ಇಲ್ಲ. ಆದರೆ ಮೂಲ ಸೌಲಭ್ಯಗಳ ಕೊರತೆ, ಮಾಹಿತಿ ಕೊರತೆ ಕಾರಣ ಮದಲಿಂಗನ ಕಣಿವೆ ಯಾರ ಕಣ್ಣಿಗೂ ಕಾಣದೇ ಉಳಿದಿದೆ. ಮದಲಿಂಗನ ಕುರಿತು ಜಾನಪದ ಕತೆಯೇ ಉಂಟು.

ಹೆಂಡತಿಯ ತಂಗಿಯನ್ನು ಮದುವೆಯಾಗುವ ಸವಾಲಿಗೆ ಸಿಲುಕಿ ಹಿಮ್ಮುಖವಾಗಿ ಗಿರಿಶಿಖರವನ್ನು ಹತ್ತಲು ಹೋಗಿ ಪ್ರಾಣ ಬಿಟ್ಟ ಮದಲಿಂಗ ಈಗಲೂ ಇಲ್ಲಿನ ಜನರ ಬಾಯಲ್ಲಿ ಕಥೆಯಾಗಿ ನಲಿಯುತ್ತಿದ್ದಾನೆ.

ವಜ್ರ ತೀರ್ಥರಾಮೇಶ್ವರ ಧಾರ್ಮಿಕ ತಾಣವಾಗಿ ಗಮನ ಸೆಳೆಯುತ್ತಿದೆ. ಇಲ್ಲಿ ಹರಿಯುವ ತೀರ್ಥ ರಾಮೇಶ್ವರ ಹೊಳೆಯಲ್ಲಿ ನೂರಾರು ಗ್ರಾಮಗಳ ದೇವರನ್ನು ಮೀಯಿಸುವ ಧಾರ್ಮಿಕ ಕೆಲಸ ಈಗಲೂ ಇದೆ. ಪ್ರತಿ ವರ್ಷ ದೇವರುಗಳನ್ನು ಕರೆದುಕೊಂಡು ಬಂದು ಇಲ್ಲಿ ‘ಹೊಳೆ ದಾಟಿಸಿ’ ಹೋಗುವ ಕೆಲಸ ಸಾಂಗವಾಗಿ ನಡೆಯುತ್ತಿದೆ.

ಗಣಿಗಾರಿಕೆಗೆ ತುತ್ತಾಗಿ ಹೊಳೆಯಲ್ಲಿ ನೀರು ಹರಿಯುತ್ತಿಲ್ಲ. ಆದರೆ ಕೆಲವೇ ವರ್ಷಗಳ ಹಿಂದೆ ವರ್ಷ ಪೂರಾ ಹೊಳೆ ಹರಿಯುತ್ತಿತ್ತು ಎಂದು ಇಲ್ಲಿನ ಭಕ್ತರು ನೆನಪು ಮಾಡಿಕೊಳ್ಳುತ್ತಾರೆ.

ಈಗಲೂ ಇಲ್ಲಿ ಅಳಿದುಳಿದ ಕೋಟೆ ಇಲ್ಲಿ ಇದೆ. ಹಾಗಲವಾಡಿ ಪಾಳೆಗಾರ ಎರಿಮಾದನಾಯಕ (ಕ್ರಿ.ಶ. 1456–1506) ಇದನ್ನು ಆಳ್ವಿಕೆ ಮಾಡಿದ್ದನು. ವಿಹಾರ ತಾಣವಾಗಿ ಅಭಿವೃದ್ಧಿ ಪಡಿಸಿದ್ದನು. ಆಗಾಗ ಈ ಕೋಟೆಯಲ್ಲಿ ತಂಗುತ್ತಿದ್ದನು ಎಂದು ಇತಿಹಾಸ ಹೇಳುತ್ತದೆ.

ಎರಿಮಾದ ನಾಯಕ ಒಮ್ಮೆ ಇಲ್ಲಿಗೆ ಬೇಟೆಯಾಡಲು ಬಂದಾಗ ಕುದುರೆ ಎಡವಿ ಬಿತ್ತು. ರಾತ್ರಿ ಕನಸಿನಲ್ಲಿ ಬಂದ ದೇವರು ಇಲ್ಲಿ ದೇವಸ್ಥಾನ ಕಟ್ಟುವಂತೆ ಹೇಳಿತು. ಆತ ದೇವಸ್ಥಾನ ಕಟ್ಟಿಸಿದ ಎಂದು ಇತಿಹಾಸ ಹೇಳುತ್ತದೆ. ದೇವಸ್ಥಾನದಿಂದ ಐದು ಕಿಲೋ ಮೀಟರ್ ದೂರದಲ್ಲಿ ಸಪ್ತ ಮಾತೃಕೆಯರ ದೇವಸ್ಥಾನವಿದೆ. ಇದು ಕೂಡ ನೋಡಲು ಸುಂದರವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT