ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ ₹50 ಸಾವಿರದಿಂದ ₹80 ಕೋಟಿಗೆ ಏರಿದ ಅಮಿತ್‌ ಶಾ ಪುತ್ರನ ಕಂಪೆನಿಯ ಆದಾಯ: ‘ದಿ ವೈರ್‌’ ವರದಿ

Last Updated 10 ಅಕ್ಟೋಬರ್ 2017, 9:13 IST
ಅಕ್ಷರ ಗಾತ್ರ

ನವದೆಹಲಿ: ‘ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಅಮಿತ್‌ಬಾಯ್‌ ಶಾ ಅವರ ಕಂಪೆನಿಯ ಆದಾಯ ಒಂದು ವರ್ಷದಲ್ಲೇ ₹ 50 ಸಾವಿರದಿಂದ ₹ 80 ಕೋಟಿಗೆ ಏರಿಕೆಯಾಗಿದೆ’ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿದೆ.

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಾಗೂ ಅಮಿತ್‌ ಶಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಯ್‌ ಶಾ ಒಡೆತನದ ‘ಟೆಂಪಲ್‌ ಎಂಟರ್‌ಪ್ರೈಸಸ್‌’ ಕಂಪೆನಿಯ ಆದಾಯ 16 ಸಾವಿರ ಪಟ್ಟು ಹೆಚ್ಚಾಗಿದೆ’ ಎಂದು ‘ದಿ ವೈರ್‌’ ವರದಿ ಮಾಡಿದೆ.

‘ಟೆಂಪಲ್‌ ಎಂಟರ್‌ಪ್ರೈಸಸ್ ಕಂಪೆನಿಯು ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ 2013 ಮತ್ತು 2014ರಲ್ಲಿ ಕ್ರಮವಾಗಿ ₹ 6,230 ಮತ್ತು ₹1,724 ನಷ್ಟ ಅನುಭವಿಸಿತ್ತು. 2014–15ರಲ್ಲಿ ಕಂಪೆನಿ ₹ 50 ಸಾವಿರ ಆದಾಯ ಗಳಿಸಿದೆ. ಈ ಪೈಕಿ ಕಂಪೆನಿಯು ₹18,728 ಲಾಭ ಗಳಿಸಿದೆ. ಆದರೆ, 2015–16ನೇ ಸಾಲಿನಲ್ಲಿ ಕಂಪೆನಿಯ ಆದಾಯ ಏಕಾಏಕಿ ₹ 80.5 ಕೋಟಿಗೆ ಏರಿದೆ’ ಎಂದು ವರದಿ ಹೇಳಿದೆ.

‘ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ಪರಿಮಲ್‌ ನತವಾನಿ ಅವರ ಸಂಬಂಧಿ ರಾಜೇಶ್‌ ಖಂಡ್ವಾಲಾ ಒಡೆತನದ ಹಣಕಾಸು ಸಂಸ್ಥೆಯು ಟೆಂಪಲ್‌ ಎಂಟರ್‌ಪ್ರೈಸಸ್‌ಗೆ ₹15.78 ಕೋಟಿ ಸಾಲ ನೀಡಿದ ಬಳಿಕ ಟೆಂಪಲ್‌ ಕಂಪೆನಿಯ ಆದಾಯದಲ್ಲಿ ಈ ‘ಭಾರೀ ಏರಿಕೆ’ ಕಂಡುಬಂದಿದೆ’ ಎಂದು ವರದಿ ತಿಳಿಸಿದೆ.

‘2016ರ ಅಕ್ಟೋಬರ್‌ನಲ್ಲಿ ತನ್ನ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳ್ಳಿಸಿದ್ದ ಜಯ್‌ ಶಾ ಕಂಪೆನಿಯು ₹ 1.4 ಕೋಟಿ ನಷ್ಟ ಘೋಷಿಸಿಕೊಂಡಿತ್ತು. 2004ರಲ್ಲಿ ಆರಂಭವಾದ ಟೆಂಪಲ್‌ ಎಂಟರ್‌ಪ್ರೈಸಸ್‌ಗೆ ಜಯ್‌ ಶಾ ಮತ್ತು ಜಿತೇಂದ್ರ ಶಾ ನಿರ್ದೇಶಕರಾಗಿದ್ದಾರೆ. ಅಮಿತ್ ಶಾ ಅವರ ಪತ್ನಿ ಸೋನಾಲ್‌ ಶಾ ಅವರು ಕಂಪೆನಿಯ ಆಡಳಿತ ಮಂಡಳಿಯಲ್ಲಿದ್ದಾರೆ’ ಎಂದು ವರದಿ ಹೇಳಿದೆ

‘2013–14ರಲ್ಲಿ ಟೆಂಪಲ್‌ ಎಂಟರ್‌ಪ್ರೈಸಸ್‌ ಯಾವುದೇ ಸ್ಥಿರಾಸ್ತಿ ಅಥವಾ ಹೂಡಿಕೆ ಹೊಂದಿರಲಿಲ್ಲ. 2014–15ರ ಆರ್ಥಿಕ ವರ್ಷದಲ್ಲಿ ಕಂಪೆನಿಯು ₹ 5,796 ಆದಾಯ ತೆರಿಗೆ ರಿಫಂಡ್‌ ಪಡೆದಿದೆ. ಆದರೆ ಮುಂದಿನ ವರ್ಷದಲ್ಲೇ ಅಂದರೆ 2015–16ರಲ್ಲಿ ಕಂಪೆನಿಯ ಆದಾಯ ₹ 80.5 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ 2015–16ರಲ್ಲಿ ₹ 2 ಲಕ್ಷ ಸ್ಥಿರಾಸ್ತಿ, ₹ 9 ಕೋಟಿ ಹೂಡಿಕೆ ಹೊಂದಿರುವುದಾಗಿ ಕಂಪೆನಿ ಹೇಳಿದೆ. ತನ್ನ ‘ಉತ್ಪನ್ನಗಳ ಮಾರಾಟ’ದಿಂದ ಆದಾಯದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿಕೊಂಡಿರುವ ಟೆಂಪಲ್‌ ಎಂಟರ್‌ಪ್ರೈಸಸ್‌ 2015–16ರಲ್ಲಿ ₹51 ಕೋಟಿ ವಿದೇಶಿ ಆದಾಯ ತೋರಿಸಿದೆ’ ಎಂದು ದಿ ವೈರ್‌ ವರದಿ ಮಾಡಿದೆ.

‘ರಾಜೇಶ್‌ ಖಂಡ್ವಾಲಾ ಒಡೆತನದ ಕೆಐಎಫ್‌ಎಸ್‌ ಹಣಕಾಸು ಸಂಸ್ಥೆಯಿಂದ ₹ 15.78 ಸಾಲ ಪಡೆದಿರುವುದಾಗಿ ಟೆಂಪಲ್‌ ಎಂಟರ್‌ಪ್ರೈಸಸ್‌ ತನ್ನ ದಾಖಲೆಗಳಲ್ಲಿ ಹೇಳಿಕೊಂಡಿದೆ. ಆದರೆ, ಕೆಐಎಫ್‌ಎಸ್‌ ಹಣಕಾಸು ಸಂಸ್ಥೆ ಆ ವರ್ಷದಲ್ಲಿ ತನ್ನ ಆದಾಯ ₹ 7 ಕೋಟಿ ಎಂದು ತೋರಿಸಿದೆ. ಅಲ್ಲದೆ ಟೆಂಪಲ್‌ ಎಂಟರ್‌ಪ್ರೈಸಸ್‌ಗೆ ಸಾಲ ನೀಡಿರುವುದನ್ನು ಕೆಐಎಫ್‌ಎಸ್‌ ದಾಖಲೆಗಳಲ್ಲಿ ತೋರಿಸಿಲ್ಲ’ ಎಂದು ವರದಿ ಹೇಳಿದೆ.

‘ದಿ ವೈರ್‌’ ಕಳಿಸಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ಜಯ್‌ ಶಾ ಅವರ ವಕೀಲ ಮಾಣಿಕ್‌ ದೋಗ್ರಾ, ‘ಟೆಂಪಲ್‌ ಎಂಟರ್‌ಪ್ರೈಸಸ್‌ ಆದಾಯ ಏಕಾಏಕಿ ಏರಿಕೆಯಾಗಿಲ್ಲ. ಕಂಪೆನಿಯ ವ್ಯವಹಾರ ಪಾರದರ್ಶಕವಾಗಿದೆ’ ಎಂದು ಹೇಳಿದ್ದಾರೆ.

‘ನಾವು ನೀಡುವ ಮಾಹಿತಿಯನ್ನು ನೀವು ತಿರುಚಿ ಪ್ರಕಟಿಸಬಾರದು. ಒಂದು ವೇಳೆ ನೀವು ಈ ಮಾಹಿತಿ ತಿರುಚಿ ವರದಿ ಪ್ರಕಟಿಸಿದರೆ ನಿಮ್ಮ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಮಾಣಿಕ್‌ ಎಚ್ಚರಿಕೆ ನೀಡಿದ್ದಾರೆ.

ಎದುರಾದ ತಾಂತ್ರಿಕ ಸಮಸ್ಯೆ?
ಜಯ್‌ ಶಾ ಕಂಪೆನಿಯ ಈ ಸುದ್ದಿಯನ್ನು ‘ದಿ ವೈರ್‌’ ಪ್ರಕಟಿಸಿದ ಬಳಿಕ ಸುದ್ದಿತಾಣದ ವೆಬ್‌ಸೈಟ್‌ನಲ್ಲಿ ಹಲವು ಬಾರಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಸುದ್ದಿಯ ಲಿಂಕ್‌ ಕ್ಲಿಕ್‌ ಮಾಡಿದ ವೇಳೆ ವೆಬ್ ಪೇಜ್ ತೆರೆದುಕೊಳ್ಳುತ್ತಿರಲಿಲ್ಲ.

ಈ ಬಗ್ಗೆ ‘ದಿ ವೈರ್‌’ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್‌ ವರದರಾಜನ್‌ ಟ್ವೀಟ್‌ ಮಾಡಿದ್ದರು. ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಹಲವರು, ‘ಇದು ಡಿಡಿಒಎಸ್‌ (Distributed Denial Of Service) ದಾಳಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT