ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಪ್ರಿಯರಿಗೆ ‘ಫಿಶ್ ಫ್ಯಾಕ್ಟರಿ’

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕರಾವಳಿಯ ತಾಜಾ ಮೀನು, ಮುಂಬೈನ ಏಡಿ, ಮಂಗಳೂರಿನ ಸೀಗಡಿ ಎಲ್ಲವೂ ಒಂದೇ ಕಡೆ ಸಿಕ್ಕರೆ ಸಮುದ್ರ ಆಹಾರ ಪ್ರಿಯರಿಗಂತೂ ಸ್ವರ್ಗಕ್ಕೆ ಮೂರೇ ಗೇಣು! ಅಂಥದ್ದೊಂದು ಪ್ರಯೋಗ ಮಾಡಿದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಹೋಟೆಲ್ ಸಿಟ್ರಸ್. ಮೀನು ಮತ್ತು ಸಮುದ್ರ ಆಹಾರ ಪ್ರಿಯರಿಗಾಗಿಯೇ ಸಿಟ್ರಸ್ ‘ಫಿಶ್ ಫ್ಯಾಕ್ಟರಿ’ ಎಂಬ ವಿನೂತನವಾದ ಪುಟ್ಟ ವಿಭಾಗವನ್ನು ತೆರೆದಿದೆ. ಅದಕ್ಕಾಗಿಯೇ ಮರದ ಪುಟ್ಟ ಹೋಟೆಲೊಂದನ್ನು ಆಕರ್ಷಕವಾಗಿ ರೂಪಿಸಿದೆ.

ಮಬ್ಬು ಬೆಳಕು, ಇಂಪಾದ ಸಂಗೀತ, ಹಸಿರ ಸಿರ ನಡುವೆ ಬಾಯಲ್ಲಿ ನೀರೂರಿಸುವ ಥರಾವರಿ ಮೀನುಗಳ ಸಂಗ್ರಹ ‘ಫಿಶ್ ಫ್ಯಾಕ್ಟರಿ’ಯ ವಿಶೇಷ. ಹತ್ತು ಟೇಬಲ್‌ಗಳ ಈ ಪುಟ್ಟ ಹೋಟೆಲ್‌ನಲ್ಲಿ ತಾಜಾ ಸಮುದ್ರ ಆಹಾರ ಲಭ್ಯ. ಇಲ್ಲಿ ಗ್ರಾಹಕರೇ ನೇರವಾಗಿ ತಮಗೆ ಬೇಕಾದ ಮೀನು ಮತ್ತು ಇತರ ಸಮುದ್ರ ಆಹಾರಗಳನ್ನು ಆಯ್ಕೆ ಮಾಡುವ ಅವಕಾಶವೂ ಉಂಟು. ಯಾವುದನ್ನು ಆಯ್ಕೆ ಮಾಡಲಿ ಎಂಬ ಗೊಂದಲವಾದರೆ ಶೆಫ್ ನಚಿಕೇತ್ ನಗುಮೊಗದಿಂದ ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಅಷ್ಟೇ ಅಲ್ಲ ನಿಮ್ಮ ಆಯ್ಕೆಯ ಮೀನು, ಏಡಿ, ಸೀಗಡಿಯನ್ನು ನಿಮ್ಮ ಎದುರಿನಲ್ಲೇ ತಾಜಾವಾಗಿ ತಯಾರಿಸಿಕೊಡುತ್ತಾರೆ ಕೂಡಾ.

ನಿಮ್ಮಿಷ್ಟದ ಮೀನು, ಏಡಿ, ಸೀಗಡಿ ಆಹಾರ ತಯಾರಾಗುವ ಮುನ್ನ ಕೆಂಪು ವೈನ್, ಬ್ರೆಡ್‌ನ ವಿವಿಧ ಖಾದ್ಯಗಳು ನಿಮ್ಮನ್ನು ಸ್ವಾಗತಿಸುತ್ತವೆ. ಸ್ಟಾರ್ಟರ್ ಆಗಿ ನೀಡುವ ಲಾಬೆಸ್ಟರ್ ಬಿಸ್ಕ್ಯೂ ಸೂಪ್ ಅಂತೂ ಮತ್ತೆಮತ್ತೆ ಕುಡಿಯಬೇಕೆನಿಸುತ್ತದೆ. ಈ ಸೂಪ್ ಅನ್ನು ಇಷ್ಟು ರುಚಿಕಟ್ಟಾಗಿ ಹೇಗೆ ಮಾಡ್ತೀರಿ ಅಂತ ಪ್ರಶ್ನಿಸಿದರೆ, ‘ಮೀನು, ಸೀಗಡಿ, ಏಡಿಯನ್ನು ಸ್ವಚ್ಛಗೊಳಿಸುವಾಗ ಅನೇಕ ಭಾಗಗಳು ಹಾಗೇ ಉಳಿಯುತ್ತವೆ. ಅವುಗಳನ್ನು ಅಡುಗೆಗೆ ಬಳಸಲು ಆಗೋದಿಲ್ಲ. ಅಂಥ ಭಾಗಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು, ಈ ವಿಶಿಷ್ಟ ಸೂಪ್ ತಯಾರಿಸುತ್ತೇವೆ’ ಎನ್ನುತ್ತಾರೆ ಶೆಫ್ ನಚಿಕೇತ್.

ಒಣಗಿದ ಮೀನಿನ ವಾಸನೆಯ, ತುಸು ಖಾರವಾಗಿರುವ ಈ ಸೂಪ್ ಬಾಣಂತಿಯರಿಗೆ ಹೇಳಿ ಮಾಡಿಸಿದ್ದು ಎನ್ನುವುದನ್ನು ಹೇಳಲು ಅವರು ಮರೆಯುವುದಿಲ್ಲ. ಶೀತ, ಜ್ವರದಿಂದ ರುಚಿ ಕಳೆದುಕೊಂಡ ನಾಲಗೆಯ ರುಚಿಮೊಗ್ಗನ್ನು ಅರಳಿಸುವ ಶಕ್ತಿ ಈ ಸೂಪ್‌ಗಿದೆ.‌

ಮೀನಿನ ಜತೆಗೆ ತುಸು ಚಿಕನ್ ಇದ್ದರೆ ಚಂದ ಎನ್ನುವವರಿಗೆ ತಂದೂರಿ ಕ್ವೇಲ್ ಸಿದ್ಧ. ನಾಟಿ ಕೋಳಿಯನ್ನು ಹದವಾಗಿ ಸುಟ್ಟು, ಅದಕ್ಕೆ ಸಮಪ್ರಮಾಣದ ಉಪ್ಪು, ಖಾರ, ತುಸುವೇ ಮಸಾಲೆ ಲೇಪಿಸಲಾಗಿರುತ್ತದೆ. ನೋಡಿದರೆ ಬಾಯಲ್ಲಿ ನೀರೂರುವ ತಂದೂರಿ ಕ್ವೇಲ್ ಅನ್ನು ಬಾಯಲ್ಲಿಟ್ಟಾಗ ಮೆತ್ತಗೆ ಕರಗುವ ಮಜವೇ ಸುಖಕರ. ಪುಟ್ಟ ಮಕ್ಕಳಿಗಂತೂ ತಂದೂರಿ ಕ್ವೇಲ್ ಹೇಳಿ ಮಾಡಿಸಿದಂತಿರುತ್ತದೆ.

ಸ್ಟಾರ್ಟರ್‌ಗಳಾದ ಸೂಪ್ ಮತ್ತು ಚಿಕನ್ ತಿಂದು ಮುಗಿಸುವಷ್ಟರಲ್ಲಿ ‘ಬ್ಲ್ಯಾಕ್ ಪಾಂಫ್ರೆಟ್ ಪೆರಿ ಪೆರಿ ಸಾಸ್’ ಸಿದ್ಧವಾಗಿತ್ತು. ತುಸುವೇ ಆಲಿವ್ ಎಣ್ಣೆಯಲ್ಲಿ ಏಳೆಂಟು ನಿಮಿಷ ಫ್ರೈ ಮಾಡಿದ ಬ್ಲ್ಯಾಕ್ ಪಾಂಫ್ರೆಟ್ ಮೇಲೆ ಪೆರಿ ಪೆರಿ ಸಾಸ್ ಹಾಕಿರಲಾಗುತ್ತದೆ. ಮಸಾಲೆ ಭರಿತವಾಗಿದ್ದರೂ ಅಷ್ಟಾಗಿ ಖಾರವಿರದ ಸ್ವಾದಿಷ್ಟವಾಗಿರುವ ಪೆರಿಪೆರಿ ಸಾಸ್ ಅನ್ನು ಪಾಂಫ್ರೆಟ್ ಜತೆ ಮಿಶ್ರಣ ಮಾಡಿಕೊಂಡು ತಿನ್ನುವಾಗ ಆಗುವ ಆನಂದ ಅಷ್ಟಿಷ್ಟಲ್ಲ. ಈ ಮೀನಿನ ಜತೆಗೆ ನೆಂಚಿಕೊಳ್ಳಲೆಂಬಂತೆ ಮುಷ್ಟಿಯಷ್ಟು ಸುಗಂಧಭರಿತ ಅನ್ನ, ಹಸಿ ತರಕಾರಿಗಳೂ ಇರುತ್ತವೆ.

ಏಡಿ ಪ್ರಿಯರಿಗಾಗಿ ಪಿರಿಪಿರಿ ಗ್ರ್ಯಾಬ್, ಸೀಗಡಿ ಪ್ರಿಯರಿಗಾಗಿ ಬೆಣ್ಣೆಹಚ್ಚಿದ ಬೆಳ್ಳುಳ್ಳಿ ಸೀಗಡಿ ಬಾಯಲ್ಲಿ ನೀರೂರಿಸುತ್ತದೆ. ಎಲ್ಲಾ ಆಹಾರವನ್ನು ನಿಮ್ಮ ಟೇಬಲ್ ಎದುರಿನಲ್ಲೇ ಟ್ರಾಲಿ ಸ್ಟೌನಲ್ಲೇ ತಯಾರು ಮಾಡುವುದರಿಂದ ಅಡುಗೆ ವಿಧಾನವನ್ನೂ ಸುಲಭವಾಗಿ ಅರಿಯಬಹುದು. ಊಟ ಮುಗಿದ ಮೇಲೆ ಚಾಕೊಲೇಟ್ ಸಿರಪ್‌ ಮತ್ತು ಸ್ಕೂಪ್ ಐಸ್‌ಕ್ರೀಂ ಮಿಶ್ರಣದ ಬಬಲ್ ವೆಫಲ್ ನಾಲಗೆಯನ್ನು ತಂಪಾಗಿಸುತ್ತದೆ. ಮೀನು, ಏಡಿ, ಸೀಗಡಿಯ ಗಾತ್ರಕ್ಕನುಸಾರವಾಗಿ ಆಹಾರದ ದರದಲ್ಲಿ ವ್ಯತ್ಯಾಸವಿರುತ್ತದೆ. ಆಹಾರ ದರ ತುಸು ದುಬಾರಿ ಅನಿಸಿದರೂ ವಿಶಿಷ್ಟ ಸ್ವಾದಕ್ಕಾಗಿ ಒಮ್ಮೆ ‘ಫಿಶ್ ಫ್ಯಾಕ್ಟರಿ’ಗೆ ಭೇಟಿ ಕೊಡಲು ಅಡ್ಡಿಯಿಲ್ಲ.

***
ರೆಸ್ಟೊರೆಂಟ್: ಫಿಶ್ ಫ್ಯಾಕ್ಟರಿ, ಹೋಟೆಲ್ ಸಿಟ್ರಸ್ವಿ
ಶೇಷ: ಸಮುದ್ರ ಆಹಾರ
ಇಬ್ಬರಿಗೆ: ಆರಂಭಿಕ ಬೆಲೆ ₹ 2,500
ಸ್ಥಳ: ಫಿಶ್ ಫ್ಯಾಕ್ಟರಿ, ಹೋಟೆಲ್ ಸಿಟ್ರಸ್, ನಂ. 34, ಕನ್ನಿಂಗ್ ಹ್ಯಾಮ್ ರಸ್ತೆ
ಪ್ರೆಸ್ಟೀಜ್ ಸೆಂಟರ್ ಪಾಯಿಂಟ್ ಎದುರು
ಟೇಬಲ್ ಕಾಯ್ದಿರಿಸಲು: 81508 28222

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT