ಗುರುವಾರ , ಸೆಪ್ಟೆಂಬರ್ 19, 2019
29 °C

ಯುಬಿ ಸಿಟಿಯಲ್ಲಿ ‘ಕಲಾಸಂಗಮ’

Published:
Updated:
ಯುಬಿ ಸಿಟಿಯಲ್ಲಿ ‘ಕಲಾಸಂಗಮ’

ಕಲೆಯ ಉದ್ದೇಶವೇನು? ಕೇವಲ ಸೌಂದರ್ಯಾಭಿವ್ಯಕ್ತಿಯೆ? ಅಥವಾ ಸೌಂದರ್ಯಾಭಿವ್ಯಕ್ತಿ ಜೊತೆಗೆ ದಿನನಿತ್ಯದ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವುದೇ? ಇಂತಹ ಪ್ರಶ್ನೆಗಳು ಹುಟ್ಟಿಸುವ ವಾಗ್ವಾದಗಳಿಗೆ ಕೊನೆಯಿಲ್ಲ. ಆದರೆ, ಕಲೆಗೆ ಸಾಮಾಜಿಕ ಜವಾಬ್ದಾರಿ ತಳುಕು ಹಾಕಿಕೊಂಡಿರುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.

ಈ ಅಂಶವನ್ನು ಉದ್ದೇಶವಾಗಿಟ್ಟುಕೊಂಡಿರುವ ‘ದಿ ರೌಂಡ್ ಗ್ಲಾಸ್ ಸಂಸಾರ ಕಲಾ ಪ್ರದರ್ಶನ’ವು ನಗರದ ಯು.ಬಿ. ಸಿಟಿಯಲ್ಲಿ ಅಕ್ಟೋಬರ್ 4ರಿಂದ ಆರಂಭವಾಗಿದೆ. ‘ದಿ ರೌಂಡ್ ಗ್ಲಾಸ್ ಸಂಸಾರ ಹಬ್ಬ -2017’ರ ಅಂಗವಾಗಿ, ದಿ ಕಲೆಕ್ಷನ್, ಯು.ಬಿ. ಸಿಟಿ ಹಾಗೂ ಸಬ್‌ಲೈಮ್ ಗ್ಯಾಲರಿ ಈ ಕಲಾ ಪ್ರದರ್ಶನವನ್ನು ಆಯೋಜಿಸಿದೆ. ಈ ಇಡೀ ಕಾರ್ಯಕ್ರಮವನ್ನು ಗ್ರ್ಯಾಮ್ಮಿ ಪ್ರಶಸ್ತಿ ವಿಜೇತ, ಪರಿಸರ ಸಂರಕ್ಷಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ರಿಕ್ಕಿ ಕೇಜ್ ಅವರು ರೂಪಿಸಿದ್ದಾರೆ.

ಪರಿಸರ ಸಂರಕ್ಷಣೆಯ ಉದ್ದೇಶವನ್ನು ಕಲಾ ಮಾದರಿಗಳ ಮೂಲಕ ದೊಡ್ಡ ಕ್ಯಾನ್ವಾಸ್‌ನಲ್ಲಿ ಈ ಹಬ್ಬ ಪಸ್ತುತಪಡಿಸುತ್ತದೆ. ಇದರ ಅಂಗವಾಗಿ ಪರಿಸರ ಸಂಬಂಧಿ ಕಲಾ ಪ್ರದರ್ಶನಗಳು, ಚಲನಚಿತ್ರ ಪ್ರದರ್ಶನಗಳು ಹಾಗೂ ಸಂಗೀತ ಕಛೇರಿಗಳ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಕಲಾವಿದರಾದ ಬೆಂಗಳೂರಿನ ಅಮೋಘವರ್ಷ, ಭೂಷಣ್ ಬಾಗಡಿಯ, ಗೋಪಿನಾಥ್ ಸುಬ್ಬಣ್ಣ, ಮಿಲಿಂದ ನಾಯಕ್, ಪೂಜಾ ಗುಪ್ತಾ, ಪವಿತ್ರ ಚೌಡಪ್ಪ, ಶ್ರೀಕಲಾ ಗಾಂಗಿ ರೆಡ್ಡಿ, ತಸ್ನೀಮ್ ಖಾನ್, ಉಮೀದ್ ಮಿಸ್ತ್ರಿ ಹಾಗೂ ಹರೀಶ ಚೆನ್ನಂಗೊಡ್ (ವಡೋದರ), ಕಾಸಿ ನಾಸಿರ್ (ಹೌರಾ), ಸಚಿನ್ ದಿಯೊ (ಇಂದೋರ್), ಸಾಯಿರಾಮ್ ಸಗಿರಾಜು (ಮುಂಬೈ), ಸತೀಶ್ ಭೈಸಾರೆ (ದೆಹಲಿ) ಅವರ ಭಿನ್ನ ಮಾದರಿಗಳ ಕಲಾಕೃತಿಗಳು ಈ ಪ್ರದರ್ಶನದಲ್ಲಿವೆ.

ಚಿತ್ರಕಲೆ, ಡಿಜಿಟಲ್ ಪ್ರಿಂಟಿಂಗ್, ಫೊಟೋಗ್ರಫಿಯಂತಹ ಕಲಾ ಮಾದರಿಗಳಲ್ಲಿ ಈ ಕಲಾಕೃತಿಗಳು ರಚಿತವಾಗಿವೆ. ಪರಿಸರ ಸಂರಕ್ಷಣೆ, ನಮ್ಮಲ್ಲಿನ ವನ್ಯಜೀವಿ ಸಂಪತ್ತು ಹಾಗೂ ಬದುಕಿನ ಸಂಬಂಧವನ್ನು ಗಾಢವಾಗಿ ಪರಿಭಾವಿಸಿ ಅಭಿವ್ಯಕ್ತಿಸುವಲ್ಲಿ ಈ ಎಲ್ಲ ಕಲಾಕೃತಿಗಳು ಯಶಸ್ವಿಯಾಗಿವೆ.

ಪ್ರಕೃತಿಯ ದೊಡ್ಡ ಪರದೆಯಲ್ಲಿ ಕಂಡುಬರುವ ಅನೇಕ ಅಂಶಗಳು ಎಂತಹ ಕಲೆಗಾದರೂ ಸಾಕಷ್ಟು ಸಾಮಗ್ರಿ ಒದಗಿಸುತ್ತವೆ. ಇಂತಹ ಅಂಶಗಳನ್ನು ಸೃಜನಾತ್ಮಕವಾಗಿ ಬಳಸಿಕೊಂಡಿರುವ ಈ ಕಲಾವಿದರು, ಮನುಷ್ಯ ಹಾಗೂ ಪ್ರಕೃತಿ ಒಂದಕ್ಕೊಂದು ತಳಕು ಹಾಕಿಕೊಂಡಿರುವ ಬಗೆಯನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಹಾಗಾಗಿ, ಕಲೆಯ ಮೂಲಕ ರಚನಾತ್ಮಕ ಸಂವಾದವನ್ನು ಕಟ್ಟುವ ಹೊಸ ಸಾಧ್ಯತೆಗಳನ್ನು ಈ ಪ್ರದರ್ಶನದಲ್ಲಿ ಕಾಣಬಹುದು.

ಬೆಂಕಿ, ಗಾಳಿ, ನೀರು ಹಾಗೂ ಭೂಮಿಯ ಪ್ರಾಮುಖ್ಯತೆ ಮತ್ತು ನಿತ್ಯ ಬದುಕಿನಲ್ಲಿ ಅವುಗಳ ಮೇಲಿನ ಅವಲಂಬನೆಯ ಮಹತ್ವವನ್ನು ಸತೀಶ್ ಭೈಸಾರೆ ಹಾಗೂ ಶ್ರೀಕಲಾ ಗಂಗಿ ರೆಡ್ಡಿ ಅವರ ಪ್ರಯೋಗಾತ್ಮಕ ರೇಖೆ ಮತ್ತು ಬಣ್ಣಗಳ ಮಿಶ್ರಣದ ಕಲಾಕೃತಿಗಳಲ್ಲಿ ಕಾಣಬಹುದು.

ಉಮೀದ್ ಮಿಸ್ತ್ರಿ, ತಸ್ನೀಮ್ ಖಾನ್ ಹಾಗೂ ಭೂಷಣ್ ಬಗಾಡಿಯ ಅವರ ‘ಜಲಗರ್ಭ ಫೊಟೋಗ್ರಫಿ’ ಈ ಪ್ರದರ್ಶನ ಪ್ರಮುಖ ಆಕರ್ಷಣೆ ಎನ್ನಬಹುದು. ಇವರ ಛಾಯಾಚಿತ್ರಗಳು ಸಮುದ್ರದಾಳದಲ್ಲಿರುವ ‘ವಂಡರ್’ ಜಗತ್ತನ್ನು ಸೂಕ್ಷ್ಮ ವಿವರಣೆಗಳೊಂದಿಗೆ ಅದ್ಭುತವಾಗಿ ತೆರೆದಿಟ್ಟಿವೆ. ನಮ್ಮ ಗ್ರಹಿಕೆಗೆ ಬಾರದ ನೀರಿನೊಳಗಿನ ಪ್ರಾಣಿ ಹಾಗೂ ಸಸ್ಯ ಸಂಕುಲದ ವಿಭಿನ್ನತೆಯು ಅಚ್ಚರಿ ಹುಟ್ಟಿಸುತ್ತದೆ.

ತಸ್ನೀಮ್ ಖಾನ್ ಅವರ ತೈಲವರ್ಣದ ಕ್ಯಾನ್ವಾಸ್‌ಗಳು ಹುಲಿ, ಚಿರತೆಯಂತಹ ವನ್ಯಮೃಗಗಳನ್ನು ಸುಂದರವಾಗಿ ಕಟ್ಟಿಕೊಟ್ಟಿವೆ. ಗಾಂಭೀರ್ಯ, ವ್ಯಗ್ರತೆ ಹಾಗೂ ವಿಶೇಷ ದೈಹಿಕ ಸೌಂದರ್ಯದ ಈ ವನ್ಯ ಜೀವಿಗಳನ್ನು ಅಷ್ಟೇ ಚಿಕ್ಕ ಚಿಕ್ಕ ವಿವರಗಳೊಂದಿಗೆ ಸುಂದರವಾಗಿ ರೂಪಿಸಲಾಗಿದೆ.

ಅಂತಾರಾಷ್ಟ್ರೀಯ ಖ್ಯಾತಿ ಹೊಂದಿರುವ ಬೆಂಗಳೂರಿನ ವನ್ಯಜೀವಿ ಛಾಯಾಚಿತ್ರಗಾರ ಅಮೋಘವರ್ಷ ಅವರು ಪಶ್ಚಿಮ ಘಟ್ಟ ಹಾಗೂ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸೆರೆಹಿಡಿದ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ. ಪ್ರಕೃತಿಯ ಅಗಾಧತೆ, ವರ್ಣನೆಗೂ ನಿಲುಕದ ಸೌಂದರ್ಯ ಹಾಗೂ ಸಹಜವಾಗಿ ನಮಗೆ ಕಾಣಸಿಗದ ಅಲ್ಲಿನ ಪ್ರಪಂಚವನ್ನು ನೋಡುಗನ ಭಾವ-ಭಿತ್ತಿಗೆ ಸಾಗಿಸುವ ಸಾಮರ್ಥ್ಯ ಈ ಛಾಯಾಚಿತ್ರಗಳಿಗಿವೆ.

ಒಟ್ಟಾರೆಯಾಗಿ ನೋಡುವುದಾದರೆ, ಭಿನ್ನ ಕಲಾ ಮಾದರಿಗಳಿಗೆ ಅವಕಾಶ ಕಲ್ಪಿಸುವುದಷ್ಟೇ ಅಲ್ಲದೆ, ಒಂದೇ ಬಗೆಯ ಚಿಂತನೆಯನ್ನು ಸ್ಫುರಿಸುವ ಕಲಾಕೃತಿಗಳನ್ನು ಒಂದೆಡೆ ಸೇರಿಸಿ ಪ್ರದರ್ಶಕ್ಕಿಟ್ಟಿರುವ ಈ ಪ್ರಯತ್ನ ವಿಶೇಷವಾಗಿದೆ. ಕಲಾಪ್ರದರ್ಶನ ಯು.ಬಿ. ಸಿಟಿಯಲ್ಲಿ ಅ.11 ರವರೆಗೆ ನಡೆಯಲಿದೆ.

Post Comments (+)