ಅವಕಾಶಗಳ ಅರಸುತಿರುವ ಜೀವಂತ ರೋಬೊ

ಮಂಗಳವಾರ, ಜೂನ್ 18, 2019
24 °C

ಅವಕಾಶಗಳ ಅರಸುತಿರುವ ಜೀವಂತ ರೋಬೊ

Published:
Updated:
ಅವಕಾಶಗಳ ಅರಸುತಿರುವ ಜೀವಂತ ರೋಬೊ

'ನಾನೊಂದು ಮಿಸೈಲ್‌. ಸಿಡಿಯಲು ಸಿದ್ಧನಾಗಿ ನಿಂತಿದ್ದೇನೆ. ಬೆನ್ನಿಗೆ ನಿಂತು ಟ್ರಿಗರ್‌ ಒತ್ತುವವರು ಬೇಕು. ಅವರಿಗಾಗಿ ಕಾಯುತ್ತಿದ್ದೇನೆ’ ಹೀಗೆ ಹೇಳಿ ನಕ್ಕ ರೋಬೊ ಗಣೇಶ್‌ ಅವರ ಧ್ವನಿಯಲ್ಲಿ ವಿಷಾದಭಾವವೇ ಎದ್ದು ಕಾಣುತ್ತಿತ್ತು. ಇಂದಲ್ಲ ನಾಳೆ ನನ್ನ ಪಾಲಿನ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎಂಬ ಆಶೆಯೂ ಅವರ ಮಾತುಗಳಲ್ಲಿ ಆಗೀಗ ಇಣುಕುತ್ತಿತ್ತು.

2009ರಲ್ಲಿ ಸೂಪರ್‌ ಹಿಟ್ ಆದ ‘ಜೋಶ್‌’ ಸಿನಿಮಾದಲ್ಲಿ ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ರೋಬೊ ಗಣೇಶ್‌ ಅವರ ಪಾತ್ರವನ್ನು ಸುಲಭಕ್ಕೆ ಮರೆಯುವಂತಿರಲಿಲ್ಲ. ಈಗಲೂ ಜನ ಅವರನ್ನು 'ಜೋಶ್‌'ನ ರೋಬೊ ಪಾತ್ರದ ಮೂಲಕವೇ ಗುರುತಿಸುತ್ತಾರೆ. ಚಿತ್ರದಲ್ಲಿ ಅವರ ಮಿಂಚಿನ ಪ್ರತಿಭೆಯನ್ನು ಕಂಡವರು ಕನ್ನಡ ಚಿತ್ರರಂಗಕ್ಕೊಬ್ಬ ವಿಭಿನ್ನ ಪ್ರತಿಭಾವಂತ ಕಲಾವಿದ ಸಿಕ್ಕ ಎಂದು ಖುಷಿಪಟ್ಟಿದ್ದರು. ಆದರೆ ಚಿತ್ರರಂಗ ಅವರನ್ನು ಬಳಸಿಕೊಂಡಿದ್ದು ಕಡಿಮೆಯೇ.

‘ಜೋಶ್‌ನ ನಂತರ ಅದೇ ಸಿನಿಮಾದ ತಮಿಳು, ತೆಲುಗು ರೀಮೆಕ್‌ನಲ್ಲಿ ನಟಿಸಿದೆ. ಅದಾದಮೇಲೆ ನನಗೆ ಹೆಚ್ಚು ಅವಕಾಶ ಸಿಗಲೇ ಇಲ್ಲ. ಒಮ್ಮೊಮ್ಮೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವುದೇ ನನಗೆ ಗೊತ್ತಿಲ್ಲವೇನೋ ಅನಿಸುತ್ತದೆ. ಯಾವ ನಿರ್ದೇಶಕ ಸಿಕ್ಕರೂ ನನ್ನನ್ನು ಗುರುತಿಸುತ್ತಾರೆ. ‘ನೀವು ತುಂಬಾ ಚೆನ್ನಾಗಿ ನಟಿಸ್ತೀರಾ... ಆದರೆ ನನ್ನ ಸಿನಿಮಾದಲ್ಲಿ ನಿಮಗೆ ಹೊಂದುವಂತಹ ಪಾತ್ರ ಯಾವುದೂ ಇಲ್ಲ. ನೀವು ಚಿಕ್ಕ ಚಿಕ್ಕ ಪಾತ್ರಗಳನ್ನೆಲ್ಲ ಮಾಡಬೇಡಿ... ದೊಡ್ಡ ಪಾತ್ರ ಮಾಡಿ’ ಎಂದು ಹೇಳಿ ಕಳಿಸುತ್ತಾರೆ. ಆದ್ರೆ ಅವಕಾಶ ಮಾತ್ರ ಕೊಡುವುದಿಲ್ಲ’ ಎಂದು ಬೇಸರದಿಂದಲೇ ಅವರು ಹೇಳಿಕೊಳ್ಳುತ್ತಾರೆ.

ಗಣೇಶ್‌ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿಯೇ. ಆದರೆ ಬೆಳೆದಿದ್ದು ತಮಿಳುನಾಡಿನಲ್ಲಿ. ಈಗ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದಾರೆ. ಕನ್ನಡದ ಬಗ್ಗೆ ಅಪಾರ ಪ್ರೀತಿ, ಗೌರವ ಬೆಳೆಸಿಕೊಂಡಿರುವ ಗಣೇಶ್ ಅವರಿಗೆ ಕನ್ನಡ ಚಿತ್ರರಂಗಲ್ಲಿಯೇ ಬದುಕಿನ ನೆಲೆ ಕಂಡುಕೊಳ್ಳಬೇಕು ಎಂಬ ಆಸೆಯೂ ಇದೆ.

ಸಿನಿ ವ್ಯಾಮೋಹಿಯಾದರೂ ಸ್ಟೇಜ್ ಷೋಗಳ ಮೂಲಕ ಜಗತ್ತಿನಾದ್ಯಂತ ಜನಪ್ರಿಯಗೊಂಡಿದ್ದಾರೆ. ಲಂಡನ್‌, ಜಪಾನ್, ಅಮೆರಿಕ ಸೇರಿದಂತೆ ಮೂವತ್ತು ದೇಶಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಸ್ಟೇಜ್ ಷೋ ನೀಡಿದ್ದಾರೆ. ಇವರ ಸ್ಟೇಜ್‌ ಷೋ ಅಂದರೆ ಡಾನ್ಸ್ ಅಷ್ಟೇ ಅಲ್ಲ. ಹತ್ತಕ್ಕೂ ಅಧಿಕ ಬಗೆಯ ಪ್ರದರ್ಶನ ಕಲೆಗಳು ಗಣೇಶ್‌ ಅವರಿಗೆ ಕರತಲಾಮಲಕವಾಗಿವೆ.

ಚಿತ್ರರಂಗದವರ ನಿರ್ಲಕ್ಷ್ಯವನ್ನು ಎದುರಿಸಿ ಸಾಕಾಗಿ ಈಗ ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳುವ ನಿರ್ಧಾರಕ್ಕೂ ಅವರು ಬಂದಿದ್ದಾರೆ.

‘ಅವಕಾಶಗಳನ್ನು ಕೇಳಿಕೊಂಡು ಅಲೆಯುವಷ್ಟು ಅಲೆದೆ. ನಂತರ ಯಾಕೋ ಇನ್ನು ಸಾಕು ಅನ್ನಿಸಿತು. ಬೇರೆಯವರನ್ನು ನಂಬಿಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕಿಂತ ನಾವೇ ಏನಾದರೂ ಮಾಡೋಣ ಎಂದು ಅಂದುಕೊಂಡು ಸ್ನೇಹಿತರೊಬ್ಬರ ಜತೆ ಸೇರಿ ಒಂದು ಕಥೆ ಸಿದ್ಧಮಾಡಿಕೊಂಡಿದ್ದೇನೆ’ ಎನ್ನುತ್ತಾರೆ.

‘ಇದೊಂದು ಹಳ್ಳಿಯ ಕಥೆ. ಪೂರ್ತಿ ಹಾಸ್ಯಮಯ ಚಿತ್ರ. ಹಾಸ್ಯದ ಜತೆಗೆ ಕಥೆಯ ಓಟದೊಳಗೇ ಒಂದು ಸಂದೇಶವೂ ಅಡಕವಾಗಿದೆ. ಈ ಚಿತ್ರದಲ್ಲಿ ನೀವು ಹಾರುವ ಕುಣಿಯುವ ರೋಬೊ ಗಣೇಶನಿಗಿಂತ ಭಿನ್ನವಾದ ನಟನನ್ನು ನೋಡುತ್ತೀರಿ’ ಎಂದು ಭರವಸೆ ನೀಡುತ್ತಾರೆ. ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಈ ಕಥೆಯನ್ನು ಸಿದ್ಧ ಮಾಡಿಟ್ಟುಕೊಂಡಿದ್ದರೂ ಕನ್ನಡದಲ್ಲಿ ನಾಯಕನಟನಾಗಿಯೇ ಸಿನಿಮಾ ಮಾಡುವ ಆಸೆ ಅವರದು.

‘ನಾನು ಬೆಳೆದಿದ್ದು ತಮಿಳುನಾಡಿನಲ್ಲಾದರೂ ಕನ್ನಡದ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. 'ಜೋಶ್‌' ಚಿತ್ರೀಕರಣದ ಸಮಯದಲ್ಲಿ ಒಂದಕ್ಷರ ಕನ್ನಡ ಬರುತ್ತಿರಲಿಲ್ಲ. ಈಗ ಆರಾಮಾಗಿ ಕನ್ನಡದಲ್ಲಿ ಮಾತನಾಡುತ್ತೇನೆ. ಈ ಪ್ರೀತಿಯ ಕಾರಣಕ್ಕೇ ನಾನು ನಾಯಕನಾಗಿ ನಟಿಸುವ ಮೊದಲ ಸಿನಿಮಾ ಕನ್ನಡದಲ್ಲಿಯೇ ಬಿಡುಗಡೆಯಾಗಬೇಕು ಎಂಬ ಆಸೆ ಇದೆ’ ಎಂದು ತಮ್ಮ ಕನ್ನಡಪ್ರೇಮವನ್ನು ವ್ಯಕ್ತಪಡಿಸುತ್ತಾರೆ.

‘ಹೀಗೊಂದು ಸಿನಿಮಾ ಮಾಡುವುದರ ಮೂಲಕ ಚಿತ್ರರಂಗದಲ್ಲಿ ರೋಬೊ ಗಣೇಶ್‌ ಅಂದರೆ ಬರಿ ಹಾಡಿ ಕುಣಿಯಲಿಕ್ಕಷ್ಟೇ ಗೊತ್ತು ಎಂಬ ಪೂರ್ವಗ್ರಹವನ್ನೂ ತೊಡೆದು ಹಾಕುವ ವಿಶ್ವಾಸದಲ್ಲಿ ಅವರಿದ್ದಾರೆ. ಹಳ್ಳಿ ಕಥೆಯ ಜತೆಗೆ ತಮ್ಮ ಪ್ರದರ್ಶನಕಲೆಗಳನ್ನೇ ಪ್ರಧಾನಾಗಿಸಿಕೊಂಡಿರುವ ಇನ್ನೊಂದು ಕಥೆಯನ್ನೂ ಅವರು ಸಿದ್ಧಪಡಿಸಿಕೊಂಡಿದ್ದಾರೆ. ‘ಒಂದು ಕಥೆ ನನ್ನೊಳಗಿನ ನಟನ ಪ್ರತಿಭೆಯನ್ನು ಸಾಬೀತುಗೊಳಿಸಲಿಕ್ಕಾದರೆ, ಇನ್ನೊಂದು ಜನರನ್ನು ಖುಷಿಪಡಿಸಲಿಕ್ಕೆ’ ಎನ್ನುತ್ತಾರೆ ಅವರು.

ಇಷ್ಟೆಲ್ಲ ಪ್ರತಿಭೆ ಸಿದ್ಧತೆ ಎಲ್ಲ ಇದ್ದರೂ ಅವರಿಗಿರುವ ಏಕೈಕ ಕೊರತೆ ಧನಬೆಂಬಲ. ತನ್ನ ಪ್ರತಿಭೆಯನ್ನು ನಂಬಿ ಹಣ ತೊಡಗಿಸಲು ಯಾರಾದರೂ ಮುಂದೆ ಬರುತ್ತಾರೆಯೇ ಎಂಬ ಆಸೆಯಿಂದ ಅವರು ಕಾಯುತ್ತಲೇ ಇದ್ದಾರೆ. ಬಂದೇ ಬರುತ್ತಾರೆ ಎಂಬ ವಿಶ್ವಾಸವೂ ಅವರಿಗಿದೆ.

ರೋಬೊ ಗಣೇಶ್‌ ಅವರಂಥ ಬಹುಮುಖಿ ಕಲಾವಿದರನ್ನು ಗುರುತಿಸಿ ಪೊಷಿಸುವುದು ಚಿತ್ರರಂಗದ ಅವಶ್ಯಕತೆಯೂ ಹೌದು. ಅದನ್ನು ಅರಿತುಕೊಳ್ಳುವ ಕಾಲ ಯಾವಾಗ ಬರುತ್ತೆದೆಯೋ ಆಗಲೇ ಗಣೇಶ್‌ ಅವರೊಳಗಿನ ರೋಬೊ ಒಳಗೆ ಜೀವಸಂಚಾರವೂ ಆಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry