ಭಾನುವಾರ, ಸೆಪ್ಟೆಂಬರ್ 22, 2019
23 °C

ವಿದ್ಯುತ್‌ ಕ್ಷೇತ್ರ: ಹೂಡಿಕೆಗೆ ಹಿಂಜರಿಕೆ

Published:
Updated:
ವಿದ್ಯುತ್‌ ಕ್ಷೇತ್ರ: ಹೂಡಿಕೆಗೆ ಹಿಂಜರಿಕೆ

ವಿಜಯಪುರ: ಪವನ ವಿದ್ಯುತ್‌, ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಬೃಹತ್‌ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದ ಗ್ರೀನ್‌ಕೊ, ಗಮೇಸ (Gamesa), ಮೈತ್ರಾ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು, ಸರಕು ಮತ್ತು ಸೇವಾ ತೆರಿಗೆ ಪದ್ಧತಿ (ಜಿಎಸ್‌ಟಿ) ಜಾರಿಯಾದ ಬಳಿಕ ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿವೆ.

‘ವಿಜಯಪುರ ಜಿಲ್ಲೆಯ ವಾತಾವರಣ ಪವನ ಹಾಗೂ ಸೌರ ವಿದ್ಯುತ್‌ ಉತ್ಪಾದನೆಗೆ ಪೂರಕವಾಗಿದ್ದುದರಿಂದ, 2017–18ನೇ ಸಾಲಿನಲ್ಲಿ ಒಂದು ಸಾವಿರ ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಈ ಕಂಪೆನಿಗಳು ಆಸಕ್ತಿ ತೋರಿದ್ದವು. ಈ ಸಲುವಾಗಿ ₹ 4 ಸಾವಿರ ಕೋಟಿ ಹೂಡಿಕೆಗೂ ಯೋಜನೆ ರೂಪಿಸಿದ್ದವು.

‘ನಿರೀಕ್ಷೆಯಂತೆ ಎಲ್ಲವೂ ನಡೆದಿದ್ದರೆ ಸ್ಥಳೀಯ ಉದ್ದಿಮೆದಾರರು, ಲ್ಯಾಂಡ್‌ ಡೆವಲಪರ್‌ಗಳ ಜತೆ ಸೆಪ್ಟೆಂಬರ್ ಒಳಗಾಗಿ ಹೊಸ ಒಪ್ಪಂದ ಏರ್ಪಡಬೇಕಿತ್ತು. ಅದಕ್ಕಾಗಿ ಬಿರುಸಿನಿಂದಲೇ ಸಿದ್ಧತೆಗಳು ನಡೆದಿದ್ದವು. ಆದರೆ, ಜಿಎಸ್‌ಟಿ ಜಾರಿಯಾದ ಬಳಿಕ ಬಂಡವಾಳ ಹೂಡಿಕೆಗಿರಲಿ, ಹೊಸ ಒಪ್ಪಂದಕ್ಕೂ ಕಂಪೆನಿಗಳು ಹಿಂಜರಿಯುತ್ತಿವೆ’ ಎಂದು ಉದ್ದಿಮೆದಾರ ರವೀಂದ್ರ ಲೋಣಿ ತಿಳಿಸಿದರು.

ವಿದೇಶಿ ಕಂಪೆನಿಗಳ ಪ್ರತಿನಿಧಿಗಳು ಮಾತುಕತೆಗೂ ಹಿಂದೇಟು ಹಾಕುತ್ತಿದ್ದಾರೆ ಎಂದ ಅವರು, ‘ಸದ್ಯದ ಮಟ್ಟಿಗೆ ಯೋಜನೆಗಳನ್ನು ಯಥಾಸ್ಥಿತಿಯಲ್ಲಿಟ್ಟುಕೊಂಡಿದ್ದೇವೆ. 2018ರ ಮಾರ್ಚ್‌ ಅಂತ್ಯದವರೆಗೂ ಕಾದು ನೋಡುತ್ತೇವೆ. ಪೂರಕ ವಾತಾವರಣ ಸೃಷ್ಟಿಯಾದರೆ ಯೋಜನೆಯನ್ನು ಮುಂದುವರಿಸಿ, ಒಡಂಬಡಿಕೆ ಮಾಡಿಕೊಳ್ಳೋಣ ಎನ್ನುತ್ತಿದ್ದಾರೆ’ ಎಂದರು.

‘ಜಿಲ್ಲೆಯ ಕೆಲ ಪ್ರದೇಶಗಳು ಎತ್ತರದಲ್ಲಿರುವುದರಿಂದ ಪವನ ವಿದ್ಯುತ್‌ ಉತ್ಪಾದನೆಗೆ ಪ್ರಶಸ್ತ ತಾಣಗಳಾಗಿವೆ. ಬಿಸಿಲ ನಾಡಾಗಿದ್ದರಿಂದ ಸೌರ ವಿದ್ಯುತ್‌ ಉತ್ಪಾದನೆಗೂ ವಿದೇಶಿ ಕಂಪೆನಿಗಳು ಮುಂದೆ ಬಂದಿದ್ದವು. ಇದಕ್ಕೆ ಅಗತ್ಯವಾದ ಭೂಮಿಯನ್ನು ರೈತರಿಂದ ವಿದೇಶಿ ಕಂಪೆನಿಗಳಿಗೆ ಕೊಡಿಸುತ್ತಿದ್ದೆವು. ನಂತರ ಕಂಪೆನಿಗಳು ಅಲ್ಲಿ ಘಟಕ ಸ್ಥಾಪಿಸಿ ವಿದ್ಯುತ್‌ ಉತ್ಪಾದಿಸುತ್ತಿದ್ದವು.

‘ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿದ್ದರಿಂದ ಪ್ರಸಕ್ತ ಸಾಲಿನಲ್ಲಿ ಸಾಕಷ್ಟು ಬೇಡಿಕೆಯೂ ಬಂದಿತ್ತು. ಆದರೆ ಜಿಎಸ್‌ಟಿ ಜಾರಿಗೊಂಡ ಬಳಿಕ ಒಂದೇ ಒಂದು ಒಡಂಬಡಿಕೆ ನಡೆದಿಲ್ಲ’ ಎಂದು ಉದ್ಯಮಿ ರಾಜಶೇಖರ ಪಾಟೀಲ ತಿಳಿಸಿದರು.

‘ಈ ಎರಡೂ ವಿದ್ಯುತ್‌ ಉತ್ಪಾದನಾ ಕ್ಷೇತ್ರಗಳಲ್ಲಿ ವಿದೇಶಿ ಕಂಪೆನಿಗಳು 2014ರಿಂದ 2017ರ ಮಾರ್ಚ್‌ ಅಂತ್ಯದವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಕನಿಷ್ಠ ₹ 500 ಕೋಟಿ ಬಂಡವಾಳ ತೊಡಗಿಸಿದ್ದವು. ಇದರ ಪರಿಣಾಮವಾಗಿ ವಿಜಯಪುರ, ಬಸವನಬಾಗೇವಾಡಿ, ಇಂಡಿ ತಾಲ್ಲೂಕು ವ್ಯಾಪ್ತಿಯಲ್ಲಿ ಪವನ ವಿದ್ಯುತ್‌ ಉತ್ಪಾದನೆ ಆರಂಭವಾಗಿತ್ತು. ಪೂರಕ ವಾತಾವರಣ ಇರುವುದು ಕಂಪೆನಿಗಳ ಗಮನಕ್ಕೆ ಬರುತ್ತಿದ್ದಂತೆ ಹೆಚ್ಚಿನ ಬಂಡವಾಳ ಹೂಡಿಕೆಗೆ ಉತ್ಸಾಹ ತೋರಿದ್ದವು. ಆದರೆ ಜಿಎಸ್‌ಟಿ ಇದಕ್ಕೆ ತಣ್ಣೀರೆರಚಿತು’ ಎಂದು ಬೆಂಗಳೂರಿನ ಉದ್ಯಮಿ ರಾಜೇಶ್‌ ಹೇಳಿದರು.

‘ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಚೇರಿ, ನಿವಾಸ, ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದ ಬಳಿಕ, ಹೊಸ ಒಡಂಬಡಿಕೆ ನಡೆಯುವುದು ಸಂಪೂರ್ಣ ಸ್ಥಗಿತಗೊಂಡಿತು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉದ್ದಿಮೆದಾರರೊಬ್ಬರು ತಿಳಿಸಿದರು.

* ನಾಲ್ಕೈದು ವರ್ಷದಿಂದ ಉದ್ಯಮ ಚೆನ್ನಾಗಿಯೇ ನಡೆದಿತ್ತು. ಜಿಎಸ್‌ಟಿ ಜಾರಿಯಾದ ಬಳಿಕ ಏಕಾಏಕಿ ಸ್ಥಗಿತಗೊಂಡಿದೆ. ಈಗ ಹಳೆಯ ಯೋಜನೆಗಳನ್ನೇ ಪೂರ್ಣಗೊಳಿಸುತ್ತಿದ್ದೇವೆ

-ರವೀಂದ್ರ ಲೋಣಿ, ಉದ್ಯಮಿ

Post Comments (+)