ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡದಲ್ಲಿ ಅಭಿವೃದ್ಧಿಯಾದ ಹತ್ತಿ ತಳಿ ‘ಇಕ್ರಾ’ ಪಾಲು

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿನ ಆಂತರಿಕ ಕಲಹದಿಂದಾಗಿ, ಬಿ.ಟಿ ಹತ್ತಿ ತಳಿ ಅಭಿವೃದ್ಧಿ ಯೋಜನೆಯು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ (ಇಕ್ರಾ) ಪಾಲಾಗಿದೆ.

ಮೊನ್ಸಾಂಟೊ ಬೊಲ್ಗಾರ್ಡ್‌ ಹಾಗೂ ಬೊಲ್ಗಾರ್ಡ್‌–2, ಈ ಎರಡೂ ತಳಿಗಳಿಗಿಂತ ದುಪ್ಪಟ್ಟು ಗುಣಾತ್ಮಕ ಅಂಶಗಳನ್ನು ಹೊಂದಿದೆ ಎನ್ನಲಾದ ಬಿ.ಟಿ ಹತ್ತಿ ‘ಯುಎಎಸ್‌ಡಿ ಇವೆಂಟ್ ನಂ.78’ ಅನ್ನು 2014ರಲ್ಲೇ ಹಿರಿಯ ಸಂಶೋಧಕಿ ಮಂಜುಳಾ ಎಸ್.ಮರಳಪ್ಪನವರ ಅಭಿವೃದ್ಧಿಪಡಿಸಿದ್ದರು. ಆದರೆ, ಅದರ ಕ್ಷೇತ್ರ ಪ್ರಯೋಗಕ್ಕೆ ವಿಶ್ವವಿದ್ಯಾಲಯ ಅವಕಾಶ ನೀಡಿರಲಿಲ್ಲ. ಈ ಕಾರಣದಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.

ಮಂಜುಳಾ ಅವರ ಸತತ ಪ್ರಯತ್ನದ ಬಳಿಕ, ಪ್ರಧಾನಿ ಕಚೇರಿ ಹಾಗೂ ಕೇಂದ್ರ ಕೃಷಿ ಸಚಿವಾಲಯ ಮಧ್ಯಪ್ರವೇಶಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಇಕ್ರಾಗೆ ಸೂಚಿಸಿದೆ. ಅದಾದ ನಂತರವಷ್ಟೇ ಕೃಷಿ ವಿ.ವಿ ಕುಲಪತಿ ಡಾ. ಡಿ.ಪಿ.ಬಿರಾದಾರ ಅವರು ತಳಿ ಅಭಿವೃದ್ಧಿಗೆ ‘ಇಕ್ರಾ’ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷತೆ ಏನು?:
‘ಹಾಲಿ ಇರುವ ಬಿ.ಟಿ ಹತ್ತಿ ಬೀಜಗಳನ್ನು ಒಮ್ಮೆ ಮಾತ್ರ ಬಿತ್ತನೆ ಮಾಡಬಹುದು. ಅದರಿಂದ ಪುನಃ ಬೀಜ ಉತ್ಪಾದನೆ ಸಾಧ್ಯವಿಲ್ಲ. ಆದರೆ, ನಾನು ಅಭಿವೃದ್ಧಿಪಡಿಸಿರುವ ತಳಿಯಲ್ಲಿ ಅದಕ್ಕೆ ಅವಕಾಶ ಇದೆ. ಬಿತ್ತನೆ ಬೀಜಕ್ಕಾಗಿ ರೈತರು ಪ್ರತಿ ವರ್ಷ ಬಂಡವಾಳ ಹಾಕುವುದನ್ನು ತಪ್ಪಿಸಬಹುದು’ ಎನ್ನುತ್ತಾರೆ ಮಂಜುಳಾ.

ಕುಲಪತಿ ವಿರುದ್ಧ ಕಿಡಿ

‘2014ರ ಮಾರ್ಚ್‌ನಲ್ಲಿ ತಳಿ ಅಭಿವೃದ್ಧಿಪಡಿಸಿ, ಅದರ ಪ್ರಾಯೋಗಿಕ ಮಾದರಿಯನ್ನು ಕುಲಪತಿ ಬಿರಾದಾರ ಅವರಿಗೆ ತೋರಿಸಿದ್ದೆ.

ವರದಿ ರೂಪದಲ್ಲಿ ಅದರ ಒಳ್ಳೆ ಗುಣಗಳ ಬಗ್ಗೆಯೂ ವಿವರಿಸಿದ್ದೆ. ಅದನ್ನು ಸಹಿಸದ ಅವರು, ಮೂರು ತಿಂಗಳಲ್ಲಿಯೇ ನನ್ನನ್ನು ಅಣ್ಣಿಗೇರಿಯಲ್ಲಿರುವ ಕುಸುಬೆ ಸಂಶೋಧನಾ ಕೇಂದ್ರಕ್ಕೆ ವರ್ಗಾಯಿಸಿದರು’ ಎಂದು ಮಂಜುಳಾ ದೂರುತ್ತಾರೆ.

‘ಪ್ರಯೋಗಾಲಯದಲ್ಲಿನ ಯಶಸ್ಸಿನ ನಂತರ ಕ್ಷೇತ್ರ ಪ್ರಯೋಗಕ್ಕೆ ಬಯೊಸೇಫ್ಟಿ ಸಮಿತಿಯಿಂದ ಅನುಮತಿ ಪಡೆಯುವಂತೆ ಕುಲಪತಿಗೆ ಮಾಡಿಕೊಂಡ ಮನವಿಗೂ ಸ್ಪಂದನೆ ಸಿಗಲಿಲ್ಲ. ಬದಲಿಗೆ ನಿಂತ ಕಡೆಯೇ ವರ್ಗಾವಣೆ ಆದೇಶಪತ್ರ ಕೊಟ್ಟರು. ತಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುವಂತೆ ನಿರಂತರ ಒತ್ತಡ ಹೇರಿದರು. ನಾನು ಮಾಡಿದ ಸಂಶೋಧನೆಯನ್ನು ಬೇರೊಬ್ಬ ವಿಜ್ಞಾನಿಗೆ ನೀಡುವಂತೆಯೂ ಸೂಚಿಸಿದ್ದರು’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಕುರಿತು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಇ–ಮೇಲ್‌ ಮೂಲಕ ಮಾಹಿತಿ ನೀಡಿದ್ದೆ. ಅವರಿಂದ ‘ಪರಿಶೀಲಿಸುವ’ ಉತ್ತರ ಬಂತು. ಬಳಿಕ ಪ್ರಧಾನಿ ಕಚೇರಿ ಮತ್ತು ಇಕ್ರಾ ಸಂಸ್ಥೆಯನ್ನು ನಿರಂತರವಾಗಿ ಸಂಪರ್ಕಿಸಿ, ಮಾಹಿತಿ ಕೊಟ್ಟೆ. 2015ರಲ್ಲಿ ಇಕ್ರಾ ಸಂಸ್ಥೆಯು ಕುಲಪತಿಗೆ ಪತ್ರ ಬರೆದು, ತಳಿ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿಸಿತು. ಅದಾದ ನಂತರವೂ ಕುಲಪತಿ ಆಸಕ್ತಿ ತೋರಿಸಲಿಲ್ಲ ಎಂಬುದನ್ನು ಇಕ್ರಾ ಸಂಸ್ಥೆ, ಪ್ರಧಾನಿ ಕಚೇರಿಗೆ ಬರೆದ ಪತ್ರದಲ್ಲಿ ತಿಳಿಸಿದೆ. ಹೀಗೆ ಒತ್ತಡ ಹೆಚ್ಚಾದ ನಂತರ ಎರಡು ತಿಂಗಳ ಹಿಂದೆ ವಿಶ್ವವಿದ್ಯಾಲಯವೇ ಇಕ್ರಾ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ. ನಾವೇ ಅಭಿವೃದ್ಧಿಪಡಿಸಿ, ನಮ್ಮ ವಿಶ್ವವಿದ್ಯಾಲಯವೇ ತಳಿಯ ಮಾಲೀಕ ಆಗುವುದನ್ನು ಉದ್ದೇಶಪೂರ್ವಕವಾಗಿ ತಪ್ಪಿಸಲಾಯಿತು’ ಎಂದು ಮಂಜುಳಾ ದೂರುತ್ತಾರೆ.

‘ನನ್ನ ವರದಿ ಬಗ್ಗೆ ದೆಹಲಿ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ದೀಪಕ್ ಪೆಂಟಾಲ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಅತ್ಯುತ್ತಮ ತಳಿ ಆಗುವುದರಲ್ಲಿ ಸಂದೇಹವಿಲ್ಲ ಎಂದಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ವಿಳಂಬವಾಗಿದೆ ಅಷ್ಟೆ; ಬೇರೆ ಕಾರಣವಿಲ್ಲ’

‘ಅಂತರರಾಷ್ಟ್ರೀಯ ತಳಿಸಂವರ್ಧನೆ ಎಂಜಿನಿಯರಿಂಗ್ ಸಂಸ್ಥೆಯಿಂದ ಅಧ್ಯಯನಕ್ಕಾಗಿ ತಂದ ಜೀನ್ ಅನ್ನು, ವಾಣಿಜ್ಯ ಬಳಕೆ ಉದ್ದೇಶಕ್ಕೆ ಬಳಸುವಾಗ ಆ ಸಂಸ್ಥೆಯ ಅನುಮತಿ ಪಡೆಯುವುದು ಕಡ್ಡಾಯ. ಜತೆಗೆ ಬಯೊಸೇಫ್ಟಿ ಅನುಮತಿ ಪಡೆಯಲು ಮತ್ತು ಮುಂದಿನ ಸಂಶೋಧನೆಗಾಗಿ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಹಣದ ಅಗತ್ಯವಿತ್ತು. ಈ ಎಲ್ಲಾ ಅಂಶಗಳಿಂದಾಗಿ ತಳಿ ನೀಡಿದ ಸಂಸ್ಥೆಗೆ ಶೇ 10ರಷ್ಟು ಲಾಭಾಂಶ ನೀಡುವಂತೆ ಹಾಗೂ ಮುಂದಿನ ಸಂಶೋಧನೆ ನಡೆಸುವ ಇಕ್ರಾ ಸಂಸ್ಥೆಯೊಂದಿಗೆ ಶೇ 50ರಷ್ಟ ಲಾಭ ಹಂಚಿಕೊಳ್ಳುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕ್ರಿಯೆಯಲ್ಲಿ ವಿಳಂಬವಾಗಿದೆಯೇ ಹೊರತು, ಇದಕ್ಕೆ ಬೇರೆ ಯಾವುದೇ ಕಾರಣವಿಲ್ಲ’ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ. ಪಿ. ಬಿರಾದಾರ ಪ್ರತಿಕ್ರಿಯಿಸಿದರು.

* ರೈತ ಸ್ನೇಹಿ ತಳಿಯ ಕುಡಿಯನ್ನು ಚಿವುಟಬಾರದು. ಇದು ಉದ್ದೇಶಪೂರ್ವವಾಗಿಯೇ ಮಾಡಿದಂಥ ಕೃತ್ಯ.

– ಮಂಜುಳಾ ಎಸ್. ಮರಳಪ್ಪನವರ,

ತಳಿ ಸಂಶೋಧಕಿ ಹಾಗೂ ಹಿರಿಯ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT