ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಹಾಸ್ಪಿಟಲ್ ಟೆಂಡರ್‌ನಲ್ಲಿ ಅಕ್ರಮ ನಡೆದಿಲ್ಲ: ಸ್ಪಷ್ಟನೆ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇ–ಹಾಸ್ಪಿಟಲ್‌ ಕಾರ್ಯಕ್ರಮ ಅನುಷ್ಠಾನದಲ್ಲಿ ಅಕ್ರಮ ನಡೆದಿಲ್ಲ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ (ಪ್ರಭಾರ) ಡಾ.ಸುರೇಶ ಶಾಸ್ತ್ರಿ ತಿಳಿಸಿದ್ದಾರೆ.

‘ಟೆಂಡರ್‌ನ ವಾಣಿಜ್ಯ ಮೌಲ್ಯಮಾಪನ ಮಾಡುವಾಗ ಮಾರುಕಟ್ಟೆ ದರದ ತುಲನೆ ಮಾಡಲಾಗಿದೆ. ಹೆಚ್ಚುವರಿ ಬೆಲೆಯು ಟೆಂಡರ್‌ನ ನಿಬಂಧನೆಗಳಲ್ಲಿ ಒಂದಾದ ಐದು ವರ್ಷದ ವಾರಂಟಿ ಹಾಗೂ ಸೇವೆಯನ್ನು ಒಳಗೊಂಡಿದೆ’ ಎಂದು ವಿವರಿಸಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಇ– ಹಾಸ್ಪಿಟಲ್‌ ಉ‍ಪಕರಣ ಖರೀದಿಯಲ್ಲಿ ಅಕ್ರಮದ ವಾಸನೆ’ ಕುರಿತ ವರದಿಗೆ ಸುರೇಶ ಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.

‘ಕಾರ್ಯಕ್ರಮ ಅನುಷ್ಠಾನಕ್ಕೆ 2016ರ ಆಗಸ್ಟ್‌ ಹಾಗೂ 2017ರ ಜನವರಿಯಲ್ಲಿ ಎರಡು ಬಾರಿ ಟೆಂಡರ್ ಕರೆಯಲಾಗಿದ್ದು, ಯಾವುದೇ ಬಿಡ್ಡರ್‌ ಪಾಲ್ಗೊಂಡಿರಲಿಲ್ಲ. ಬಳಿಕ ಕೇಂದ್ರ ಸರ್ಕಾರ ಸ್ವಾಮ್ಯದ ನ್ಯಾಷನಲ್ ಇನ್ ಫಾರ್ಮೇಟಿಕ್ಸ್‌ ಸೆಂಟರ್‌ ಸರ್ವೀಸ್‌ ಇನ್‌ ಕಾರ್ಪೊರೇಟೆಡ್‌ ಅನ್ನು ಸಂಪರ್ಕಿಸಲಾಯಿತು.

ಸಂಸ್ಥೆ ನೀಡಿರುವ ಪ್ರಸ್ತಾವನೆಯಲ್ಲಿ ಟೆಂಡರ್ ದಾಖಲೆಯಲ್ಲಿ ನಮೂದಿಸಿರುವ ಐ.ಸಿ.ಟಿ ಭಾಗಗಳು ಇರಲಿಲ್ಲ. ಟೆಂಡರ್‌ ನಿಯಮಗಳನ್ನೂ ಸಂಸ್ಥೆ ಒಪ್ಪಲಿಲ್ಲ. ಕರ್ನಾಟಕ ಸರ್ಕಾರದ ಕಿಯೋನಿಕ್ಸ್‌ ಅನ್ನು ಸಂಪರ್ಕಿಸಿದಾಗ, ಅದು ಸಹ ಟೆಂಡರ್‌ ಪ್ರಕ್ರಿಯೆ ಮುಖಾಂತರ ವೆಂಡರ್‌ ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿತು.

ಕೇಂದ್ರ ಸರ್ಕಾರದ ಗವರ್ನಮೆಂಟ್ ಇ–ಮಾರ್ಕೆಟ್‌ ಪೋರ್ಟಲ್‌ನಲ್ಲಿ ಹುಡುಕಿದಾಗ ಇಲಾಖೆಯ ನಿಯಮ ನಿಬಂಧನೆ ಅನುಸರಣೆಯಾಗುವುದಿಲ್ಲ ಎಂದು ತಿಳಿಯಿತು. ಹೀಗಾಗಿ, ಮೂರನೇ ಬಾರಿ ಟೆಂಡರ್‌ ಕರೆದು ಅಂತಿಮಗೊಳಿಸಲಾಯಿತು’ ಎಂದು ತಿಳಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ₹16,000 ಕ್ಕೆ ಸಿಗುವ ಟ್ಯಾಬ್ಲೆಟ್‌ನ್ನು ₹29,427ರ ದರದಲ್ಲಿ ಖರೀದಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಇಲಾಖೆ ಖರೀದಿಸಿದ ಟ್ಯಾಬ್ಲೆಟ್‌ನ ಮೂಲ ಬೆಲೆ ₹16,000 ಆಗಿದ್ದು, ಐದು ವರ್ಷದ ಸೇವೆ ಮತ್ತು ನಿರ್ವಹಣೆಗಾಗಿ ಹೆಚ್ಚಿನ ದರದಲ್ಲಿ ಅನುಮೋದನೆ ನೀಡಲಾಗಿದೆ. ಎಚ್‌ಪಿ ಸ್ಕ್ಯಾನರ್ ದರ ಮಾರುಕಟ್ಟೆಯಲ್ಲಿ ₹30,000 ಇದ್ದು, ಮೂಲಬೆಲೆಯಾದ ₹25,075ರಲ್ಲಿ ಖರೀದಿಸಲಾಗಿದೆ. ಇದರಲ್ಲಿ ಐದು ವರ್ಷದ ಸೇವೆಯೂ ಒಳಗೊಂಡಿದೆ’ ಎಂದು ವಿವರಿಸಿದ್ದಾರೆ.

‘60 ನಿಮಿಷ ಬ್ಯಾಕ್ ಅಪ್‌ ಇರುವ ಯುಪಿಎಸ್‌ನ ಮಾರುಕಟ್ಟೆ ದರ ₹26,000 ದಿಂದ ₹29,000 ಗಳಿದ್ದು, ₹59,000 ನಲ್ಲಿ ಖರೀದಿಸಲಾಗಿದೆ ಎಂದು ವರದಿ ಹೇಳಿದೆ. ನಿರ್ದಿಷ್ಟ ತಾಂತ್ರಿಕತೆ ಇರುವ 120 ನಿಮಿಷಗಳ ಬ್ಯಾಕ್ ಅಪ್‌ ಇರುವ ಯುಪಿಎಸ್‌ನ ಮಾರುಕಟ್ಟೆ ದರ ₹47,000 ಆಗಿದ್ದು, ಐದು ವರ್ಷದ ವಾರಂಟಿಯೊಂದಿಗೆ ಇಷ್ಟು ದರ ನೀಡಿ ಖರೀದಿಸಲಾಗಿದೆ’ ಎಂದು ಇಲಾಖೆ ಸಮರ್ಥನೆ ನೀಡಿದೆ. ಆದರೆ, ‘ಪ್ರಜಾವಾಣಿ’ಗೆ ಲಭ್ಯವಾಗಿರುವ ದಾಖಲೆಗಳ ಅನುಸಾರ, 120 ನಿಮಿಷಗಳ ಬ್ಯಾಕ್ ಅಪ್‌ ಇರುವ ಯುಪಿಎಸ್‌ಗೆ ₹1,12,388 ದರ ಪಾವತಿಸಲಾಗಿದೆ.

‘ಒಂದು ರಂಧ್ರ ಕೊರೆಯಲು ₹147, ಒಂದು ಗುಂಡಿ ತೋಡಲು ₹229 ನಂತೆ ಒಟ್ಟು ₹30 ಲಕ್ಷ ನಿಗದಿ ಮಾಡಲಾಗಿದೆ. ಆದರೆ, ಅನುಷ್ಠಾನದ ಪೂರ್ಣ ಜವಾಬ್ದಾರಿಯನ್ನು ಗುತ್ತಿಗೆ ಕೊಡಲಾಗಿದೆ. ಕೆಲವು ಸಂಗತಿಗಳು ತುಲನೆಗೆ ಒಳಪಡುವುದಿಲ್ಲ. ಸಿವಿಲ್, ಇಲೆಕ್ಟ್ರಿಕಲ್‌, ಸಮೀಕ್ಷೆ ಕೆಲಸ 47 ಸಂಸ್ಥೆಗಳಲ್ಲಿ ಮಾಡಬೇಕಾಗಿರುವುದು ಗಮನಿಸಬೇಕಾದ ಸಂಗತಿ’ ಎಂದು ಸುರೇಶ ಶಾಸ್ತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT