ಗೋಲಿನ ಮಳೆ ಸುರಿಸಿದ ಫ್ರಾನ್ಸ್‌

ಮಂಗಳವಾರ, ಜೂನ್ 25, 2019
25 °C

ಗೋಲಿನ ಮಳೆ ಸುರಿಸಿದ ಫ್ರಾನ್ಸ್‌

Published:
Updated:
ಗೋಲಿನ ಮಳೆ ಸುರಿಸಿದ ಫ್ರಾನ್ಸ್‌

ಗುವಾಹಟಿ: ಇಂದಿರಾಗಾಂಧಿ ಅಥ್ಲೆಟಿಕ್ಸ್‌ ಕ್ರೀಡಾಂಗಣದಲ್ಲಿ ಭಾನುವಾರ ಫ್ರಾನ್ಸ್‌ ತಂಡದ ಆಟಗಾರರು ಗೋಲಿನ ಮಳೆ ಸುರಿಸಿದರು. ಹೀಗಾಗಿ ಕಾಲ್ಚೆಂಡಿನಾಟದ ಸೊಬಗು ಕಣ್ತುಂಬಿಕೊಳ್ಳಲು ಬಂದಿದ್ದ ಪ್ರೇಕ್ಷಕರು ಖುಷಿಯ ಕಡಲಲ್ಲಿ ತೇಲಿದರು.

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌ ಫುಟ್‌ಬಾಲ್‌ನ ‘ಇ’ ಗುಂಪಿನ ಪಂದ್ಯದಲ್ಲಿ ಫ್ರಾನ್ಸ್‌ 7–1 ಗೋಲುಗಳಿಂದ ನ್ಯೂ ಕ್ಯಾಲೆಡೋನಿಯಾ ತಂಡವನ್ನು ಹಣಿಯಿತು.

ಫುಟ್‌ಬಾಲ್‌ ಲೋಕದ ಶಕ್ತಿಕೇಂದ್ರಗಳಲ್ಲಿ ಒಂದೆನಿಸಿರುವ ಫ್ರಾನ್ಸ್‌ ತಂಡದ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು. ಹೀಗಾಗಿ ಮೊದಲರ್ಧದಲ್ಲೇ ಆರು ಗೋಲುಗಳು ದಾಖಲಾದವು.

ಫ್ರಾನ್ಸ್‌ಗೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸದೊಂದಿಗೆ ಕಣಕ್ಕಿಳಿದಿದ್ದ ಕ್ಯಾಲೆಡೋನಿಯಾ ತಂಡಕ್ಕೆ ಐದನೇ ನಿಮಿಷದಲ್ಲಿ ಹಿನ್ನಡೆ ಉಂಟಾಯಿತು. ಈ ತಂಡದ ಇವಾ 5ನೇ ನಿಮಿಷದಲ್ಲಿ ಎದುರಾಳಿಗಳಿಗೆ ‘ಉಡುಗೊರೆ’ ಗೋಲು ನೀಡಿದರು. ಅವರು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು.

ಆ ನಂತರದ ಅವಧಿಯಲ್ಲಿ ಫ್ರಾನ್ಸ್‌ ಆಟಗಾರರು ಆಧಿಪತ್ಯ ಸಾಧಿಸಿದರು. ಎದುರಾಳಿ ತಂಡದ ದುರ್ಬಲ ರಕ್ಷಣಾವ್ಯೂಹವನ್ನೇ ಗುರಿಯಾಗಿಸಿಕೊಂಡು ನಿರಂತರವಾಗಿ ಚೆಂಡನ್ನು ಗುರಿ ಸೇರಿಸಿದರು.

19ನೇ ನಿಮಿಷದಲ್ಲಿ ಗೌಯಿರಿ ಮೋಡಿ ಮಾಡಿದ್ದರಿಂದ ಈ ತಂಡ 2–0ರ ಮುನ್ನಡೆ ಗಳಿಸಿತು. 30ನೇ ನಿಮಿಷದಲ್ಲಿ ಗೊಮೆಸ್‌ ಗೋಲು ತಂದಿತ್ತು ಮುನ್ನಡೆಯನ್ನು ಹೆಚ್ಚಿಸಿದರು.

33ನೇ ನಿಮಿಷದಲ್ಲಿ ವೈಯಕ್ತಿಕ ಎರಡನೇ ಗೋಲು ದಾಖಲಿಸಿದ ಗೌಯಿರಿ ಗುವಾಹಟಿಯ ಫುಟ್‌ಬಾಲ್‌ ಪ್ರೇಮಿಗಳ ಪ್ರೀತಿಗೆ ಪಾತ್ರರಾದರು. ಇದಾದ 10 ನಿಮಿಷಗಳಲ್ಲಿ ಈ ತಂಡ ಮತ್ತೆ ಮುನ್ನಡೆ ಹೆಚ್ಚಿಸಿಕೊಂಡಿತು.ಕಾಕ್ವೆರೆಟ್‌ 40ನೇ ನಿಮಿಷದಲ್ಲಿ ಚೆಂಡನ್ನು ಗುರಿ ತಲುಪಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಇದರಿಂದ ವಿಚಲಿತರಾದಂತೆ ಕಂಡ ಕ್ಯಾಲೆಡೋನಿಯಾ ತಂಡದವರು 43ನೇ ನಿಮಿಷದಲ್ಲಿ ಎರಡನೇ ‘ಉಡುಗೊರೆ ಗೋಲು’ ನೀಡಿದರು. ಈ ತಂಡದ ವಾನೆಸ್ಸೆ ಚೆಂಡನ್ನು ತಮ್ಮದೇ ಗೋಲು ಪೆಟ್ಟಿಗೆಯೊಳಗೆ ಒದ್ದರು. ಹೀಗಾಗಿ ಫ್ರಾನ್ಸ್‌ ತಂಡ 6–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ  ಕ್ಯಾಲೆಡೋನಿಯಾ ತಂಡದವರು ತ‍‍ಪ್ಪುಗಳನ್ನು ತಿದ್ದಿಕೊಂಡು ಆಡಿದರು. ಹೀಗಾಗಿ ಫ್ರಾನ್ಸ್‌ ತಂಡದ ಆಟಗಾರರ ಗೋಲಿನ ಅಬ್ಬರ ತಗ್ಗಿತು. 90ನೇ ನಿಮಿಷದಲ್ಲಿ ವಾಡೆಂಗೆಸ್‌ ಕ್ಯಾಲೆಡೋನಿಯಾ ತಂಡದ ಖಾತೆ ತೆರೆದರು. ಹೆಚ್ಚುವರಿ ಅವಧಿಯಲ್ಲಿ  ಫ್ರಾನ್ಸ್‌ ತಂಡದ ಇಸಿಡೊರ್‌ (90+1) ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ 4–0 ಗೋಲುಗಳಿಂದ ಚಿಲಿ ತಂಡದ ಸವಾಲು ಮೀರಿನಿಂತಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry