ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ಉಳಿಸಿಕೊಂಡವರ ಅನರ್ಹತೆ ಇಲ್ಲ: ಆಯೋಗದ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ನಿವಾಸಗಳ ಬಾಡಿಗೆ, ವಿದ್ಯುತ್‌, ನೀರು, ದೂರವಾಣಿ ಶುಲ್ಕ ಬಾಕಿ ಪಾವತಿಸದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂಬ ಚುನಾವಣಾ ಆಯೋಗದ ಪ್ರಸ್ತಾಪನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದೆ.

ಬಾಕಿ ಉಳಿಸಿಕೊಂಡ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ಜನಪ್ರತಿನಿಧಿಗಳ ಕಾಯ್ದೆಗೆ ತಿದ್ದುಪಡಿ ತರುವಂತೆ ಕೋರಿ ಚುನಾವಣಾ ಆಯೋಗವು ಕೇಂದ್ರ ಕಾನೂನು ಸಚಿವಾಲಯಕ್ಕೆ ಇತ್ತೀಚೆಗೆ ಪತ್ರ ಬರೆದಿತ್ತು. ಆದರೆ, ‘ಇದು ಆಪೇಕ್ಷಣೀಯವಲ್ಲ’ ಎಂದು ಸಚಿವಾಲಯ ಪ್ರಸ್ತಾಪವನ್ನು ತಿರಸ್ಕರಿಸಿದೆ.

ನಿರಾಕ್ಷೇಪಣಾ ಪ್ರಮಾಣ ಪತ್ರ ಸಲ್ಲಿಸದ ಕಾರಣಕ್ಕೆ ಅಭ್ಯರ್ಥಿಯನ್ನು ಅನರ್ಹಗೊಳಿಸುವುದು ಸಮರ್ಥನೀಯ ಕ್ರಮವಲ್ಲ. ಬಾಕಿ ಪಾವತಿ ಇಲ್ಲವೇ ಶುಲ್ಕಗಳಿಗೆ ಸಂಬಂಧಿಸಿದಂತೆ ಕೆಲವೊಂದು ಬಾರಿ ಆಕ್ಷೇಪಣೆ, ಗೊಂದಲಗಳಿರುತ್ತವೆ. ಅಂತಹ ಪ್ರಕರಣ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ಈ ಪ್ರಸ್ತಾವನೆ ಸಾಧುವಲ್ಲ ಎಂದು ಸಚಿವಾಲಯ ಇದೇ ಮೇ ತಿಂಗಳಲ್ಲಿ ಆಯೋಗಕ್ಕೆ ಪತ್ರ ಬರೆದು ತಿಳಿಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರಿ ಸ್ವತ್ತುಗಳನ್ನು ಬಳಸಿ ಶುಲ್ಕ ಪಾವತಿಸದ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ದೆಹಲಿ ಹೈಕೋರ್ಟ್‌ 2015ರಲ್ಲಿ ಸೂಚಿಸಿತ್ತು.  ಇದರ ಆಧಾರದಲ್ಲಿ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಮನೆಗೆ ವಿದ್ಯುತ್‌, ನೀರು ಮತ್ತು ದೂರವಾಣಿ ಸಂಪರ್ಕ ಕೊಟ್ಟ ಸಂಸ್ಥೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು ಸಲ್ಲಿಸುವುದನ್ನು ಆಯೋಗ ಕಡ್ಡಾಯಗೊಳಿಸಿತ್ತು. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರ ಸಲ್ಲಿಸದ ಕಾರಣ ಕೆಲವು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಾಗಲಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಮ್‌ ಜೈದಿ ತಿಳಿಸಿದ್ದರು.

ದೆಹಲಿ ಹೈಕೋರ್ಟ್‌ ಆದೇಶದ ಆಧಾರದಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳಿಗೆ ಆಯೋಗ ನೋಟಿಸ್ ನೀಡಿದೆ. ಸರ್ಕಾರಿ ಕಚೇರಿ ಬಾಡಿಗೆ, ದೂರವಾಣಿ, ವಿದ್ಯುತ್‌, ನೀರಿನ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ವಾರ್ಷಿಕ ಲೆಕ್ಕಪತ್ರ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT