ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಹಜಾರ; ಹರಾಜಾದ ಮನ!

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪರೀಕ್ಷಾ ಕೊಠಡಿ. ತಡವಾಗಿ ಬರುವವರನ್ನು ಒಳಬಿಡಲು ನಿಗದಿಯಾಗಿರುವ ಮೊದಲ ಅರ್ಧಗಂಟೆಯ ಗಡುವು ಸಮೀಪಿಸುತ್ತಿದೆ. ಬಾಗಿಲ ಬಳಿ ನೆರಳು. ಅತ್ತ ತಿರುಗಿದರೆ ಹಣೆ ಬೆವರಿಟ್ಟ ಪ್ರಶ್ನಾರ್ಥಕ ಚಿಹ್ನೆಯ ಯುವಮುಖ. ’ತಡವಾಗಿದೆಯೆಂದು ಕಾಣುತ್ತದೆ. ಒಳಗೆ ಬರಲು ಪ್ರಾಂಶುಪಾಲರಿಂದ ವಿಶೇಷ ಅಪ್ಪಣೆ ತರಬೇಕೆ?’ ಎಂದು ಆ ವಿದ್ಯಾರ್ಥಿ ಪ್ರಶ್ನಿಸಿದಾಗ ಗಲಿಬಿಲಿಗೊಳ್ಳುವುದು ಮೇಲ್ವಿಚಾರಕನ ಸರದಿ. ಅರ್ಧಗಂಟೆಯ ಬೆಲ್ಲು ಮೊಳಗಿಲ್ಲವಾದ್ದರಿಂದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅನುಮತಿ.

ಇಲ್ಲಿ ಗಮನಿಸಬೇಕಾದ್ದು ಆ ವಿದ್ಯಾರ್ಥಿಯ ಧೋರಣೆ. ಕ್ಷಮೆ ಕೇಳುವ ಮಾತಿರಲಿ, ತಡವಾದದ್ದರ ಬಗ್ಗೆ ಖೇದವಾಗಲೀ, ವಿಷಾದವಾಗಲೀ ಇಲ್ಲ; ಜೊತೆಗೆ ತಡವಾದರೆ ಮುಂದಿನ ಕ್ರಮವೇನು ಎಂಬ ತಾಂತ್ರಿಕ (ಯಾಂತ್ರಿಕ?) ವಿಚಾರವೂ ತಿಳಿದಿದೆ. ಈ ಧೋರಣೆ ಹೊತ್ತವನೆಂತು ಜವಾಬ್ದಾರಿಯುತ ವಿದ್ಯಾರ್ಥಿಯಾಗಬಲ್ಲ? ತರಗತಿಯಲ್ಲಿ ಪಾಠ ಮಾಡುವಾಗಲೊಮ್ಮೆ ಕಣ್ಣು ಹಾಯಿಸಿದರೆ ತಿಳಿಯುವುದು ಎಷ್ಟು ಮಂದಿ ತರಗತಿಯಲ್ಲಿದ್ದಾರೆ, ಪಾಠದಲ್ಲಿ ಮನಸ್ಸಿಟ್ಟಿದ್ದಾರೆ ಎಂದು. ಹಾಜರಾಗುವವರ ಸಂಖ್ಯೆ ಕಡಮೆಯೇನಲ್ಲ. ಆದರೆ ಅದು ‘ಹಾಜರಾತಿ’ ಮಾತ್ರ. ಮನಸ್ಸು ಹರಾಜಾಗಿ ಕುಳಿತಿರುವವರೇ ಹೆಚ್ಚು! ‘ಸತ್ತಂತಿಹರನು ಬಡಿದೆಚ್ಚರಿಸು’ ಎಂಬ ಕವಿಯ ಆಶಯ ಸೋಲುವುದು ಇಲ್ಲಿ. ಸತ್ತವರನ್ನೂ ಗಾರುಡಿ ಮಾಡಿ ಬದುಕಿಸಬಹುದೇನೋ? ಸತ್ತಂತೆ ಇರುವವರನ್ನು ಬದುಕಿಸಲಾಗದು. ಮಲಗಿರುವವರನ್ನು ಎಬ್ಬಿಸಬಹುದು; ಆದರೆ ಮಲಗಿದಂತೆ ನಟಿಸುವವರನ್ನು ಎಬ್ಬಿಸುವುದು ಕಷ್ಟ, ಅಸಾಧ್ಯ.

ಹಾಜರಾತಿಯನ್ನು ಕಡ್ಡಾಯ ಮಾಡಿದರೆ ಸಾಲದು, ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತಹ ಪಠ್ಯ, ಬೋಧನಾವಿಧಾನ ಅಳವಡಿಕೆಯಾಗಬೇಕು. ಇಲ್ಲಿ ಶಿಕ್ಷಕರ ಧೋರಣೆಯೂ ಮುಖ್ಯಪಾತ್ರ ವಹಿಸುತ್ತದೆ. ಹಿಂದೊಮ್ಮೆ ಸರ್ಕಾರದ ವತಿಯಿಂದ ಶಿಕ್ಷಣಸಂಸ್ಥೆಗಳಿಗೆ ಗಣಕಯಂತ್ರ ಮತ್ತು ಯು.ಪಿ.ಎಸ್‌.ಗಳ ರವಾನೆಯಾಯಿತು. ಆದರೆ ಕೆಲವು ವರ್ಷಗಳ ಬಳಿಕ ಗಮನಿಸಿದಾಗ ಎಷ್ಟೋ ಶಾಲೆಗಳಲ್ಲಿ ಈ ಆಧುನಿಕ ಯಂತ್ರಗಳ ಹೊರಕವಚ ಕೂಡ ತೆಗೆಯದೆ ಇಟ್ಟಿದ್ದರಂತೆ, ಕಾರಣ ಅವರಿಗೆ ಅವುಗಳನ್ನು ಬಳಸುವ ತರಬೇತಿ ಆಗಿರಲಿಲ್ಲ, ಅವರಾದರೋ ಸ್ವಂತ ಆಸಕ್ತಿಯಿಂದ ಅವುಗಳನ್ನು ಬಳಸುವ ಕೌಶಲವನ್ನು ಕಲಿಯುವ ಮನಸ್ಸು ಮಾಡಲಿಲ್ಲ. ವ್ಯವಸ್ಥೆಯ ಲೋಪ ಎಂಬುದು ಸದಾ ಇರುವಂತಹದ್ದೇ. ಆದರೆ ಎಷ್ಟು ಮಂದಿ ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಿಭಾಯಿಸಬಲ್ಲರು? ಹೀಗೆ ನಿಭಾಯಿಸಲಾಗದವರು ಉತ್ತಮ ಶಿಕ್ಷಕರಾಗಲು ಸಾಧ್ಯವೆ? ವಿದ್ಯಾರ್ಥಿ-ಶಿಕ್ಷಕ-ಶಿಕ್ಷಣವ್ಯವಸ್ಥೆ ಒಂದಕ್ಕೊಂದು ಪೂರಕವಾಗಿ ಸ್ಪಂದಿಸಿದಾಗಲೇ ಶಿಕ್ಷಣವೆಂಬುದು ಪರಿಪೂರ್ಣವಾಗುವುದು. ಲೋಪದೋಷಗಳನ್ನೇ ಬಂಡವಾಳವಾಗಿಸಿಕೊಂಡು ಹೇಗೋ ಪಾರಾಗಿ ಬರುವ ಬುದ್ಧಿಯನ್ನು ಇದಕ್ಕೆ ಸಂಬಂಧಿಸಿದವರೆಲ್ಲ ಕೈಬಿಡಬೇಕು. ಹಾಜರಾತಿ ಕೊರತೆ ತುಂಬಿಕೊಳ್ಳಲು ಅವಕಾಶವಿರಬೇಕೇ ಹೊರತು ಆ ನಿಯಮವನ್ನು ಅಡ್ಡಬಳಸಲು ಬಿಡಬಾರದು. ಹಾಗೇ ಶಿಕ್ಷಕರೂ ಪ್ರಾಮಾಣಿಕವಾಗಿ ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕು.

ವಸ್ತುಸ್ಥಿತಿ ನಿರಾಶಾದಾಯಕವಾಗಿದೆಯೆಂದು ಕೈಚೆಲ್ಲಿ ಕುಳಿತುಕೊಳ್ಳಬಾರದು. ಏನಾದರೂ ಮಾಡಬೇಕು. ಸಾಧ್ಯವಾದಷ್ಟೂ ಸರಿಪಡಿಸಬೇಕು ಎಂಬ ಹಂಬಲ ಶಿಕ್ಷಕರಿಗೆ ಇರಬೇಕು. ಹರಾಜಾದ ನೂರು ಮನಗಳ ಮಧ್ಯೆ ವಿಷಯದ ಮಕರಂದ ಹೀರಲು ತೆರೆದ ಮೂರು ಮನವಿದ್ದರೂ ಅಧ್ಯಾಪಕನ ಪ್ರಯತ್ನ ಸಾರ್ಥಕ. ಕಾಲೇಜಿನ ಮೊದಲ ದಿನ ತರಗತಿಗಳು ಮುಗಿದ ಬಳಿಕ ಅಧ್ಯಾಪಕರ ಕೊಠಡಿಯಲ್ಲಿ ಕಣ್ಣೀರ ಕೋಡಿ ಹರಿಸುತ್ತಾ ನಿಂತಿದ್ದಳು ಒಬ್ಬ ವಿದ್ಯಾರ್ಥಿನಿ. ಕಾರಣವೇನೆಂದರೆ ಅವಳು ಆಯ್ದುಕೊಂಡ ಐಚ್ಛಿಕ ಆಂಗ್ಲಪಠ್ಯವಿರಲಿ, ಸಾಮಾನ್ಯ ಇಂಗ್ಲಿಷ್ ತರಗತಿಯೂ ಕಬ್ಬಿಣದ ಕಡಲೆಯಾಗಿಬಿಟ್ಟಿತ್ತು ಅವಳಿಗೆ. ಜೊತೆಗೆ ಅವಳು ತನ್ನ ವಿಷಯಗಳ ಬದಲಾವಣೆ ಮಾಡಿಕೊಳ್ಳುವ ಅವಧಿ ಮೀರಿಹೋಗಿತ್ತು. ಮಾಡು ಇಲ್ಲವೆ ಮಡಿ – ಎಂಬ ಸ್ಥಿತಿ ಅವಳದು. ಮತ್ತೊಂದು ವರ್ಷ ಕಾಯುವ, ಮತ್ತೊಮ್ಮೆ ಫೀ ಕಟ್ಟುವ ಶಕ್ತಿಯೂ ಇಲ್ಲದ ಹಿನ್ನೆಲೆ ಅವಳದು. ಅಂದು ಸಮಾಧಾನಗೊಳಿಸಿ ಅವಳನ್ನು ಸಾಗಹಾಕಿದ ಬಳಿಕ ಆಂಗ್ಲವಿಭಾಗದ ಎಲ್ಲ ಅಧ್ಯಾಪಕರು ಸಭೆ ನಡೆಸಿ ಅವಳಿಗೆ ಯಾವ ರೀತಿಯಲ್ಲಿ ನೆರವಾಗಬಹುದೆಂದು ಸಮಾಲೋಚಿಸಿದೆವು. ಈ ಸವಾಲನ್ನು ಕೇವಲ ಆ ವಿದ್ಯಾರ್ಥಿನಿಯೊಬ್ಬಳೇ ಅಲ್ಲ, ಅಧ್ಯಾಪಕರಾದ ನಾವೂ ಎದುರಿಸಬೇಕಾಯಿತು.

ಪ್ರತಿ ಪಾಠದ ಅವಧಿಯ ಕೊನೆಯ ಐದು ನಿಮಿಷ ಅವಳಿಗೇ ಮೀಸಲಾಯಿತು. ಸಾರಾಂಶವನ್ನು ಕನ್ನಡದಲ್ಲಿ ಹೇಳುತ್ತಿದ್ದೆವು. ಜೊತೆಗೆ ಸರಳ ಇಂಗ್ಲಿಷಿನಲ್ಲಿ ಟಿಪ್ಪಣಿ ನೀಡುತ್ತಿದ್ದೆವು. ಅಲ್ಲದೆ ಅವಳ ಇಂಗ್ಲಿಷ್ ಜ್ಞಾನ, ಓದುವಿಕೆ ವೃದ್ಧಿಸಲು  Alice in Wonderland ಕೃತಿಯಿಂದ ಮೊದಲಿಟ್ಟು ವಾರಕ್ಕಿಂತಿಷ್ಟು ಪುಸ್ತಕ ಓದಬೇಕೆಂದು ಪ್ರೋತ್ಸಾಹಿಸಿದೆವು. ಆ ವಿದ್ಯಾರ್ಥಿನಿ ಕೂಡ ಅಷ್ಟೇ ಶ್ರದ್ಧೆಯಿಂದ ಹಟತೊಟ್ಟು ಶ್ರಮವಹಿಸಿ ಅಧ್ಯಯನದಲ್ಲಿ ಮನವಿಟ್ಟಳು. ಫಲಿತಾಂಶಗಳು ಬಂದಾಗ ಇಡೀ ಅಧ್ಯಾಪಕವೃಂದ ಮೊದಲಿಗೆ ನೋಡುತ್ತಿದ್ದುದು ಈ ವಿದ್ಯಾರ್ಥಿನಿಯ ಫಲಿತಾಂಶವನ್ನು. ಮೊದಲ ಸೆಮಿಸ್ಟರ್ ಪಾಸಾದಳು, ಎರಡನೆ ಸೆಮಿಸ್ಟರ್ ಕೂಡ. ಮೂರನೇ ಸೆಮಿಸ್ಟರ್ ಫಲಿತಾಂಶ ಬಂದಾಗ ಇವಳ ಓರಗೆಯವರೇ, ಆಂಗ್ಲಮಾಧ್ಯಮದಲ್ಲೇ ಓದಿದ್ದ ಹಲವರು ಸಹಪಾಠಿಗಳು ನಪಾಸಾಗಿದ್ದರೂ ಇವಳು ಮಾತ್ರ ಪಾಸಾಗಿಬಿಟ್ಟಿದ್ದಳು. ಸಮಯಕ್ಕೆ ಸರಿಯಾಗಿ ಪದವಿಯನ್ನೂ ಪಡೆದಳು. ಇಂದು ಅವಳೂ ಕೂಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ ಎಂಬುದು ಬಹಳ ಖುಷಿಯ ಸಂಗತಿ.

ಈ ಸಾಲಿನ, ಇದೇ ವರ್ಗದ ಕೆಲವು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಮಟ್ಟದ ರ‍್ಯಾಂಕ್‌ಗಳು ಕೂಡ ಬಂದವು. ಆದರೆ ಅಧ್ಯಾಪಕ ವೃಂದದವರಿಗೆಲ್ಲ ಹೆಮ್ಮೆಯಾದದ್ದು, ಈ ಕನ್ನಡ ಮಾಧ್ಯಮದ ಹಿನ್ನೆಲೆಯ ಬಡ ವಿದ್ಯಾರ್ಥಿನಿ ಸಕಾಲದಲ್ಲಿ ಪದವಿಧರಳಾದದ್ದು. ಎಲ್ಲ ನಿರಾಶೆಗಳನ್ನೂ ಬದಿಗೊತ್ತಿ ಇಂತಹ ಆಕಾಶಬುಟ್ಟಿಗೆ ಕಿಚ್ಚು ಹಚ್ಚಿ ಮುಂದೆ ಅವು ಬೆಳಕು ಚೆಲ್ಲುವುದನ್ನು ಕಾಣುವ ಕೌತುಕ ಶಿಕ್ಷಕರಲ್ಲಿ ಇರಬೇಕು. ತೆರದ ಮನದವರ ಮಧ್ಯೆ ಇಂತಹ ತೆರೆದ ಮನದವರ ನಿರೀಕ್ಷೆಯಲ್ಲಿಯೇ ಅಧ್ಯಾಪಕರ ವೃತ್ತಿಜೀವನದ ಸೊಗಸು. ಇಂತಹ ದೃಢಮನಸ್ಸಿನವರಿಗಾಗಿ ಕಾಯುವುದು ಜಗತ್ತು. ಅದರಿಂದಾಗಿಯೇ ಅಲ್ಲವೇ ಹಿಂದೆ ದಾರ್ಶನಿಕ ಸಂತ ವಿವೇಕಾನಂದರು ಕೇಳಿದ್ದು, ‘ಸ್ವಾತಂತ್ರ!? ನಿಮಗೆ ನಾಳೆಯೇ ಕೊಡಿಸಬಲ್ಲೆ. ಆದರೆ ಮನುಷ್ಯರೆಲ್ಲಿದ್ದಾರೆ?!’ (Freedom?! I can get it tomorrow but where are Men?). ಪ್ರತಿಯೊಬ್ಬರೂ ತಮ್ಮ ವೃತ್ತಿಗೆ ನಿಷ್ಠರಾಗಿದ್ದುಬಿಟ್ಟರೆ ಅದೇ ದೊಡ್ಡ ಸಾಧನೆ. ಮುಖ್ಯವಾಗಿ ಶಿಕ್ಷಕರಲ್ಲಿ ಈ ಗುಣವಿರಬೇಕು.

ಮುಕ್ತಸಮಾಜ, ಸ್ವತಂತ್ರ ಪ್ರಜೆಗಳನ್ನು ನಿರ್ಮಿಸುವ ಭರದಲ್ಲಿ ಸಾಮಾನ್ಯ ಶಿಕ್ಷಣದ ಹೆಸರಿನಲ್ಲಿ ಎತ್ತಲೂ ಮನ ನೆಡದ ಅತಂತ್ರ ಮನದ ದುರ್ಬಲ ವ್ಯಕ್ತಿತ್ವದ ಸಮಾಜ ನಿರ್ಮಾಣವಾಗುತ್ತಿದೆಯೆ ಎಂಬ ಆತಂಕ ಕಾಡುತ್ತದೆ. ಮಹೋದ್ದೇಶವೊಂದಕ್ಕೆ ಅರ್ಪಿತವಾಗಬೇಕಾದ ಮನಸ್ಸು ಚೆಲ್ಲಾಪಿಲ್ಲಿಯಾಗಿ, ಪೇಲವ ಜೀವನ ನಡೆಸಿ ನಿರ್ಗಮಿಸುವ ಸಾಮಾನ್ಯರ ಸಾಲಿಗೆ ಹೆಚ್ಚು ಪದವೀಧರರು ಸೇರುತ್ತಿರುವುದು ವಿಷಾದನೀಯ. ಅಸಾಮಾನ್ಯ ಸಾಧನೆಯೆಂದರೆ ಎಲ್ಲರೂ ಕಾಣುವ, ಮೆಚ್ಚುವ ಸಾಧನೆ ಆಗಿರಬೇಕು ಎಂದೇನೂ ಅಲ್ಲ. ಕರ್ಮಕುಶಲತೆಯನ್ನು ಸಾಧಿಸಿದ ಯಾರನ್ನು ಕಂಡಾಗಲೂ ಕೈಮುಗಿಯುವ ಸಂಸ್ಕಾರ ಶಿಕ್ಷಣದಿಂದ ದೊರೆಯಬೇಕು. ನಾವಿರುವ ಕ್ಷೇತ್ರದ ಅತ್ಯುನ್ನತ ಮೌಲ್ಯಗಳನ್ನು ಎಟುಕಿಸಿ ಬದುಕಿಗೆ ಎರಕ ಮಾಡಿಕೊಳ್ಳುವುದೇ ಶಿಕ್ಷಣ, ಅದೇ ಉನ್ನತ ಸಾಧನೆ. ‘ಅತ್ತಿತ್ತ ಹೋಗದಂತೆ ಹೆಳವನ ಮಾಡು’ ಎಂಬ ವಚನಕಾರ, ‘ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ’ ಎನ್ನುವ ದಾಸರು, ‘ಏಕಾಗ್ರತೆಯೇ ಯಶಸ್ಸಿನ ರಹಸ್ಯ’ (Concentration is the secret of success) ಎನ್ನುವ ಆಧುನಿಕ ಗುರುಗಳು ಹೇಳುತ್ತಿರುವುದು ಇದನ್ನೇ - ’ಮನವನ್ನು ಚಂಚಲಗೊಳಿಸದೆ ಘನ ಉದ್ದೇಶಕ್ಕೆ ತೆತ್ತುಕೊಳ್ಳಿ’ ಎಂದು. ತೆರೆದ ಮನವಿರಲಿ, ಶುಭವಾದ ಒಳಿತಾದ ಚಿಂತನೆಗಳು ಎಲ್ಲ ಕಡೆಗಳಿಂದ ಬರಲಿ. ಆದರೆ ಅದೆಂದೂ ‘ತೆರದ’ ಮನವಾಗದಿರಲಿ. ಶಿಕ್ಷಣಕ್ಕೆ ಬೇಕು ಇಂತಹ ತೆರೆದ ಮನಗಳು; ಶಿಕ್ಷಕರು-ವಿದ್ಯಾರ್ಥಿಗಳು-ಶಿಕ್ಷಣದ ಹೊಣೆ ಹೊತ್ತ ಅಧಿಕಾರಿಗಳು.

(ಲೇಖಕ ಶಿಕ್ಷಣತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT