7

ಬಂಡವಾಳ ಸುರಕ್ಷತೆಗೆ ಗಮನ ಅಗತ್ಯ

ಕೆ. ಜಿ. ಕೃಪಾಲ್
Published:
Updated:
ಬಂಡವಾಳ ಸುರಕ್ಷತೆಗೆ ಗಮನ ಅಗತ್ಯ

ಷೇರಿನ ಬೆಲೆಗಳಲ್ಲಿ ಏರಿಳಿತ ಪ್ರದರ್ಶನಕ್ಕೆ ಕಾರಣಗಳು ವೈವಿಧ್ಯಮಯವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಏರಿಳಿತಕ್ಕೆ ಹೊರಗಿನ ಕಾರಣಗಳೇ ಹೆಚ್ಚು ಪ್ರಭಾವಿಯಾಗಿರುವುದನ್ನು ಕಾಣುತ್ತೇವೆ. ವಿಶೇಷವಾಗಿ ಅಗ್ರಮಾನ್ಯ ಕಂಪನಿಗಳ ಷೇರುಗಳ ಬೆಲೆಗಳಲ್ಲಿ ತೀವ್ರತರವಾದ ಏರಿಳಿತಗಳು ಪ್ರದರ್ಶಿತವಾಗಿ ಹಲವಾರು ಅಲ್ಪಕಾಲೀನ ಅವಕಾಶಗಳು ಸೃಷ್ಟಿಯಾಗಿ ಮಾಯವಾಗುವುದು ಈ ವಾರವೂ ಕಂಡು ಬಂದಿದೆ. ಕಂಪನಿಗಳಾದ ದಿವೀಸ್ ಲ್ಯಾಬೊರೇಟರೀಸ್, ಡಿಮಾರ್ಟ್, ದಿವಾನ್ ಹೌಸಿಂಗ್ ಫೈನಾನ್ಸ್, ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್, ರಿಲಯನ್ಸ್ ಕ್ಯಾಪಿಟಲ್, ಎಡಲ್ವಿಸ್ ಫೈನಾನ್ಶಿಯಲ್ ಸರ್ವಿಸಸ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ಸಿಮನ್ಸ್ ಲಿಮಿಟೆಡ್, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಏಷಿಯನ್ ಪೇಂಟ್ಸ್, ಬಜಾಜ್ ಫಿನ್ ಸರ್ವ್ , ಇಂಡಿಗೊ, ಜೆಟ್ ಏರ್‌ವೇಸ್ ಮುಂತಾದ ಕಂಪನಿಗಳು ಕಂಡ ಕುಸಿತವು ಅಗಾಧವಾದುದಾಗಿದೆ.  ಇವುಗಳಲ್ಲಿ ಹಲವಾರು ಕಂಪನಿಗಳು ಆಕರ್ಷಕ ಚೇತರಿಕೆ ಕಂಡಿವೆ.

ಈ ವಾರ ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಇನ್ಫ್ರಾ ಸ್ಟ್ರಕ್ಚರ್, ದಿವೀಸ್ ಲ್ಯಾಬ್, ಕಂಪನಿಗಳ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲಾಯಿತು. ಈ ಕಾರಣಕ್ಕೆ ಷೇರಿನ ಬೆಲೆಗಳು ಉತ್ತುಂಗಕ್ಕೆ ತಲುಪಿ ನಂತರ ಜಾರಿದವು. ಆದರೆ, ದಿವೀಸ್ ಲ್ಯಾಬ್ ಕಂಪನಿಯ ಬಗ್ಗೆ ಪ್ರಚಲಿತದಲ್ಲಿದ್ದ ಸುದ್ದಿಯು ಬೇರೆಯೇ ಆಗಿದೆ. ಅಮೆರಿಕದ ಎಫ್ ಡಿ ಎ ಯ ಕ್ಲಿನ್ ಚಿಟ್ ನಿರೀಕ್ಷೆಯಿಂದ ಷೇರಿನ ಬೆಲೆ ₹ 1,000  ದಾಟಿತು. ವಾರ್ಷಿಕ ಸಾಮಾನ್ಯ ಸಭೆಯ ನಂತರ ಷೇರಿನ ಬೆಲೆ, ಅಮೆರಿಕಾದ ಎಫ್ ಡಿ ಎ ಯ ಹೊಸ ತಕರಾರುಗಳ ಕಾರಣ ಕುಸಿಯಿತು.

ಡಿಮಾರ್ಟ್ ಕಂಪನಿಯ ಷೇರಿನ ಬೆಲೆಯು ₹ 984 ರ ಸಮೀಪಕ್ಕೆ ಸೋಮವಾರ ಕುಸಿಯಿತು. ಆದರೆ, ಮಂಗಳವಾರ   ₹1,217 ರ ವಾರ್ಷಿಕ ಗರಿಷ್ಠದ ದಾಖಲೆ ಮಟ್ಟಕ್ಕೆ ಜಿಗಿತ ಕಂಡಿತು. ಬುಧವಾರ ₹1,070 ಕ್ಕೆ ಇಳಿದು ₹1,077 ರಲ್ಲಿ ಕೊನೆಗೊಂಡಿತು. ಈ ಮಟ್ಟದ ರಭಸದ ಏರಿಳಿತಕ್ಕೆ ಯಾವುದೇ ಆಂತರಿಕ ಬೆಳವಣಿಗೆಗಳಾಗಲಿ, ಘೋಷಣೆಗಳಾಗಲಿ ಇದ್ದಿರಲಿಲ್ಲ ಎನ್ನುವುದು ಕುತೂಹಲಕಾರಿ ಸಂಗತಿಯಾಗಿದೆ.

ಅದರಂತೆ ವಿತ್ತೀಯ ಸೇವಾ ವಲಯದ ಎಡಲ್ವಿಸ್ ಫೈನಾನ್ಶಿಯಲ್ ಸರ್ವಿಸಸ್ ಕಂಪನಿ ಷೇರಿನ ಬೆಲೆಯು ಸೋಮವಾರ ₹237 ರ ಸಮೀಪಕ್ಕೆ ಕುಸಿದು ಮಂಗಳವಾರ ₹280 ರ ಸಮೀಪಕ್ಕೆ ಚೇತರಿಸಿಕೊಂಡು ಬುಧವಾರ ₹294 ರವರೆಗೂ ಜಿಗಿದು ಅಂದೇ ₹263 ರ ಸಮೀಪಕ್ಕೆ ಕುಸಿದಿದೆ. ಈ ರೀತಿಯ ಚಟುವಟಿಕೆಯ ಹಿಂದೆ ಕಂಪನಿ ₹2,000 ಕೋಟಿ ಮೌಲ್ಯದ ಷೇರುಗಳ ಅಥವಾ ಮತ್ತ್ಯಾವುದೋ ರೂಪದಲ್ಲಿ ಸಂಪನ್ಮೂಲ ಸಂಗ್ರಹಣೆಗೆ ನಿರ್ಧರಿಸಿರುವುದೇ ಮುಖ್ಯ ಕಾರಣ.

ಗೃಹ ಸಾಲಗಳ ಕಂಪನಿ ದಿವಾನ್ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆಯೂ ಸಹ ಹೆಚ್ಚು ಏರಿಳಿತಗಳನ್ನು ಪ್ರದರ್ಶಿಸಿದೆ. ಹಿಂದಿನ ವಾರ ₹597 ರವರೆಗೂ ಏರಿಕೆ ಕಂಡಿದ್ದ ಈ ಕಂಪನಿ ಸೋಮವಾರ ಭಾರಿ ಕುಸಿತಕ್ಕೊಳಗಾಗಿ ₹518 ರ ಸಮೀಪಕ್ಕೆ ಇಳಿಯಿತು. ಆದರೆ ಮಂಗಳವಾರ ಷೇರಿನ ಬೆಲೆಯು ಪುಟಿದೆದ್ದು ₹556 ರ ಸಮೀಪ ಕೊನೆಗೊಂಡಿತು. ಬುಧವಾರ ಷೇರು ಮತ್ತೊಮ್ಮೆ ₹520 ರವರೆಗೂ ಕುಸಿಯಿತು. ಈ ರೀತಿ ಏರಿಳಿತಕ್ಕೆ ಯಾವುದೇ ಅಧಿಕೃತ ಕಾರಣಗಳು ಇದ್ದಿರಲಿಲ್ಲ.

ಒಟ್ಟಾರೆ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಮಾದರಿಯ ಚಟುವಟಿಕೆಯು ಬಂಡವಾಳ ಸುರಕ್ಷತೆಯೊಂದಿಗೆ ಲಾಭ ಗಳಿಕೆಗೆ ಅವಕಾಶ ಮಾಡಿಕೊಡುವುದು ಎಂಬುದು ಖಾತ್ರಿಯಾಗಿದೆ.

ಸೆಪ್ಟೆಂಬರ್ ಮಾಸದ ಅಂತ್ಯದಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಗಳನ್ನು ನಡೆಸಲೇ ಬೇಕಾಗಿದ್ದರಿಂದ ಕಂಪನಿಗಳ ಗಮನವು ಅತ್ತ ಕಡೆ ಕೇಂದ್ರೀಕೃತವಾಗಿರುತ್ತದೆ. ಈ ತ್ರೈಮಾಸಿಕದಲ್ಲಿ ಹೆಚ್ಚಿನ ಕಂಪನಿಗಳುತಮ್ಮ ಸಂಪನ್ಮೂಲ ಸಂಗ್ರಹಣೆಯತ್ತ ಹೆಚ್ಚಿನ ಗಮನ ಹರಿಸಿವೆ. ಲಾಭಾಂಶ ಪ್ರಕಟಣೆಯಂತೂ ಇಲ್ಲವೇ ಇಲ್ಲ ಎನ್ನುವಂತಿದೆ.

ವಾರದುದ್ದಕ್ಕೂ ನಕಾರಾತ್ಮಕ ವಿಚಾರಗಳು ತೇಲುತ್ತಿದ್ದವು. ಜಿಡಿಪಿ ಕುಸಿತ, ವಿದೇಶಿ ವಿತ್ತೀಯ ಸಂಸ್ಥೆಗಳ ಭರ್ಜರಿ ಮಾರಾಟ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮೂಡಿರುವ ಉತ್ತರ ಕೊರಿಯಾ ಗೊಂದಲ, ರೂಪಾಯಿ ಬೆಲೆ ಕುಸಿತಗಳೊಂದಿಗೆ ಮೂಲಾಧಾರಿತ ಪೇಟೆಯ ಚುಕ್ತಾಚಕ್ರದ ಅಂತಿಮ ಸಮಯವೂ ಪೇಟೆಯ ಕುಸಿತಕ್ಕೆ ಕಾರಣಗಳಾದರೂ ಇತ್ತೀಚಿಗೆ ಪೇಟೆಯಲ್ಲಿ ಕಂಡಿರುವ ಅಭೂತಪೂರ್ವ ಏರಿಕೆಯು ಲಾಭದ ನಗದೀಕರಣಕ್ಕೆ ಒತ್ತು ನೀಡಿದೆ. ಒಟ್ಟಾರೆ 688 ಪಾಯಿಂಟುಗಳ ಇಳಿಕೆ ಕಂಡ ಸಂವೇದಿ ಸೂಚ್ಯಂಕವು ಒಂದು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿದರೆ, ಮಧ್ಯಮಶ್ರೇಣಿ ಸೂಚ್ಯಂಕವು 17 ಪಾಯಿಂಟುಗಳ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 178 ಪಾಯಿಂಟುಗಳ ಇಳಿಕೆ ಕಂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿಯಲ್ಲಿದ್ದರೂ ಸಹ ಸೂಚ್ಯಂಕಗಳು ಅದಕ್ಕನುಗುಣವಾಗಿ ಕುಸಿಯದಿರುವುದಕ್ಕೆ ಸ್ಥಳೀಯ ವಿತ್ತೀಯ ಸಂಸ್ಥೆ

ಗಳು ಮತ್ತು ಮ್ಯೂಚುವಲ್ ಫಂಡ್ ಗಳ ಬೆಂಬಲ ಪೇಟೆಗೆ ದೊರೆತಿರುವುದಾಗಿದೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹133.35 ಲಕ್ಷ ಕೋಟಿ

ಯಿಂದ ₹131.81 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

ಬೋನಸ್ ಷೇರಿನ ವಿಚಾರ: ಶಿವಾಲಿಕ್ ಬೈಮೆಟಲ್ ಕಂಟ್ರೋಲ್ಸ್ ಲಿಮಿಟೆಡ್ ಕಂಪನಿ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಅಕ್ಟೊಬರ್ 6 ನಿಗದಿತ ದಿನವಾಗಿದೆ.

ಹೊಸ ಷೇರಿನ ವಿಚಾರ: ಇತ್ತೀಚಿಗೆ ಪ್ರತಿ ಷೇರಿಗೆ ₹700 ರಂತೆ ಸಾರ್ವಜನಿಕ ಷೇರು ವಿತರಣೆ ಮಾಡಿದ ಎಸ್ ಬಿ ಐ ಲೈಫ್ ಇನ್ಶುರನ್ಸ್ ಕಂಪನಿ ಲಿಮಿಟೆಡ್ ಷೇರುಗಳು ಅಕ್ಟೊಬರ್ 3 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

* ಗಾದ್ರೇಜ್ ಅಗ್ರೋವೆಟ್ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ ₹450 ರಿಂದ ₹460 ರ ಅಂತರದಲ್ಲಿ ಅಕ್ಟೋಬರ್ 4 ರಿಂದ ಅಕ್ಟೋಬರ್ 6 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 32 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

* ಎಂ ಎ ಎಸ್ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಕಂಪನಿ ₹ 10 ರ ಮುಖಬೆಲೆಯ ಪ್ರತಿಷೇರಿಗೆ ₹456 ರಿಂದ ₹459 ರ ಅಂತರದಲ್ಲಿ ಅಕ್ಟೋಬರ್ 6 ರಿಂದ 10 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 32 ಷೇರುಗಳ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

* ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್ ಲಿಮಿಟೆಡ್ ಕಂಪನಿ ಅಕ್ಟೊಬರ್ 9 ರಿಂದ 11 ರವರೆಗೂ ₹10 ರ ಮುಖಬೆಲೆಯ ಷೇರುಗಳನ್ನು ಆರಂಭಿಕ ಷೇರು ವಿತರಣೆ ಮೂಲಕ ಪೇಟೆ ಪ್ರವೇಶಿಸಲಿದೆ.

* ಕೋಲ್ಕತ್ತ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ನೋಂದಾಯಿಸಿಕೊಂಡಿರುವ ಪೋಲೊ ಕ್ವೀನ್ ಇಂಡಸ್ಟ್ರಿಯಲ್ ಅಂಡ್ ಫಿನ್ ಟೆಕ್ ಲಿಮಿಟೆಡ್ 28 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಹಕ್ಕಿನ ಷೇರಿನ ವಿಚಾರ : ದಿ ಇಂಡಿಯನ್ ಹೋಟೆಲ್ಸ್ ಕಂಪನಿ 1:5 ರ ಅನುಪಾತದ, ಪ್ರತಿ ಷೇರಿಗೆ ₹ 75 ರಂತೆ ವಿತರಿಸಲಿರುವ ಹಕ್ಕಿನ ಷೇರಿಗೆ ಅಕ್ಟೋಬರ್ 5 ನಿಗದಿತ ದಿನವಾಗಿದೆ.

ಮುಖಬೆಲೆ ಸೀಳಿಕೆ ವಿಚಾರ:  ಕ್ಯಾನ್ ಫಿನ್ ಹೋಮ್ಸ್ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಅಕ್ಟೋಬರ್ 13 ನಿಗದಿತ ದಿನವಾಗಿದೆ.

* ಹೆರಿಟೇಜ್ ಫುಡ್ಸ್ ಲಿ ಕಂಪನಿಯ ಷೇರಿನ ಮುಖಬೆಲೆ ₹10 ರಿಂದ ₹5 ಕ್ಕೆ ಸೀಳಲು ಅಕ್ಟೊಬರ್ 11 ನಿಗದಿತ ದಿನವಾಗಿದೆ.

ವಾರದ ವಿಶೇಷ

ಪೇಟೆಗಳು ಉತ್ತುಂಗಮಟ್ಟದಲ್ಲಿ ಸಂಭ್ರಮಿಸುತ್ತಿರುವ ಅವಕಾಶವನ್ನು ಉಪಯೋಗಿಸಿಕೊಳ್ಳಲು ಅನೇಕ ಕಂಪನಿಗಳು ಆರಂಭಿಕ ಷೇರು ವಿತರಣೆಗೆ  ಮುಂದಾಗುತ್ತಿವೆ.  ಅನೇಕ ಕಂಪನಿಗಳು ಅತಿ ಹೆಚ್ಚಿನ ಪ್ರೀಮಿಯಂ ನಲ್ಲಿ  ವಿತರಣೆಮಾಡುತ್ತಿವೆ.  ಐಪಿಒ ನಲ್ಲಿ ಅರ್ಜಿ ಸಲ್ಲಿಸಬೇಕಾದಾಗ ಷೇರಿನ ಮುಖಬೆಲೆಯನ್ನು ಸಹ ಗಮನಿಸಬೇಕಾದುದು ಅತ್ಯಗತ್ಯ.

ಮ್ಯಾಟ್ರಿಮನಿ ಡಾಟ್‌ಕಾಮ್ ಕಂಪೆನಿಯು ₹5 ರ ಮುಖಬೆಲೆಯ  ಪ್ರತಿ ಷೇರಿಗೆ ₹985 ರಂತೆ ಇತ್ತೀಚಿಗೆ ಆರಂಭಿಕ ಷೇರು ವಿತರಿಸಿತು.  ಈ ಷೇರು ಲಿಸ್ಟಿಂಗ್ ಆದ ನಂತರದಲ್ಲಿ ಇಳಿಕೆಗೊಳಪಟ್ಟು ₹775 ರ ಸಮೀಪಕ್ಕೆ ಕುಸಿದು ಸ್ವಲ್ಪ ಚೇತರಿಸಿಕೊಂಡಿದೆ.  ಎಸ್ ಬಿ ಐ ಲೈಫ್ ಇಂಶೂರನ್ಸ್ ಕಂಪೆನಿ ವಿತರಿಸಿದ ಬೆಲೆ ₹700 ಆಗಿದ್ದು  ವಿತರಣೆ ಬೆಲೆಗಿಂತ ಕಡಿಮೆ ಬೆಲೆಗೆ ವಹಿವಾಟಾಗುತ್ತಿದೆ.  ಅದೇ ರೀತಿ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರನ್ಸ್‌ ಷೇರು ಸಹ ವಿತರಣೆ ಬೆಲೆ ಸಮೀಪ ವಹಿವಾಟಾಗುತ್ತಿದೆ.  ಜನರಲ್ ಇಂಶೂರನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ  ₹5ರ ಮುಖಬೆಲೆಯ ಷೇರು ₹855ರಿಂದ ₹910 ರ ಅಂತರದಲ್ಲಿ ವಿತರಣೆ ಮಾಡಲಿದೆ.  ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್ ಕಂಪನಿ ಪ್ರತಿ ಷೇರಿಗೆ ₹1,645 ರಿಂದ ₹1,650 ರಂತೆ ವಿತರಿಸಲು ಮುಂದಾಗಿದೆ. ಈ ದರಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ?  ಅರ್ಜಿ ಸಲ್ಲಿಸಿ ಪಡೆದ ಷೇರುಗಳಿಗೆ ಉತ್ತಮ ಲಾಭ ದೊರಕಬಲ್ಲದೆ ಎಂದು ನಿರ್ಧರಿಸುವುದು ಕಷ್ಟಕರವಾಗಿದೆ.  ಎಲ್ಲಾ ಐ ಪಿ ಒ ಗಳು ಲಾಭದಾಯಕ ಎಂಬ ಭಾವನೆ ತಪ್ಪು. ಕೇವಲ ಬ್ರ್ಯಾಂಡ್‌ ವ್ಯಾಲ್ಯೂ ಗೆ ಹೆಚ್ಚಿನ ಮಹತ್ವ ನೀಡುತ್ತಿರುವ ಪೇಟೆಯಲ್ಲಿ ಆಯ್ಕೆ ಮಾಡಿಕೊಳ್ಳುವಾಗ ತುಲನಾತ್ಮಕ ನಿರ್ಧಾರ ಅಗತ್ಯ.

(9886313380 ಸಂಜೆ 4.30 ರನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry