ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಪಿ ಸಂಸ್ಕೃತಿಗೆ ರೈಲ್ವೆ ವಿದಾಯ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ರೈಲ್ವೆ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ವಲಯ ಭೇಟಿಗೆ ಬಂದಾಗ ಅವರನ್ನು ಸ್ವಾಗತಿಸಲು ಮತ್ತು ಕಳುಹಿಸಿಕೊಡಲು ಅಲ್ಲಿನ ಪ್ರಧಾನ ವ್ಯವಸ್ಥಾಪಕರು ಹಾಜರಿರುವುದು ಕಡ್ಡಾಯ ಎಂಬ ನಿಯಮವನ್ನು ರೈಲ್ವೆ ಸಚಿವಾಲಯ ರದ್ದುಪಡಿಸಿದೆ. ಇಲಾಖೆಯಲ್ಲಿನ ವಿಐಪಿ ಸಂಸ್ಕೃತಿಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದೆ. 

ರೈಲ್ವೆಯ ಕೆಲಸದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಚಿವಾಲಯ ನಿರ್ಧರಿಸಿದೆ. ಅದರ ಭಾಗವಾಗಿ 1981ರಲ್ಲಿ ಜಾರಿಗೆ ಬಂದ ಈ ನಿಯಮವನ್ನು ಕೈಬಿಡಲಾಗಿದೆ. ರೈಲ್ವೆಯ ಯಾವುದೇ ಅಧಿಕಾರಿ ಯಾವುದೇ ಸಂದರ್ಭದಲ್ಲಿ ಹೂಗುಚ್ಛ ಮತ್ತು ಉಡುಗೊರೆ ನೀಡುವುದನ್ನು ಪ್ರೋತ್ಸಾಹಿಸಬಾರದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಹೇಳಿದ್ದಾರೆ.

ರೈಲ್ವೆ ಸಿಬ್ಬಂದಿಯು ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಇಲ್ಲ ಎಂದೂ ಸಚಿವಾಲಯ ಹೇಳಿದೆ. ಹಳಿ ನಿರ್ವಹಣೆಯ ಕೆಲಸಕ್ಕೆ ನೇಮಕವಾಗಿರುವ ಸುಮಾರು 30 ಸಾವಿರ ಸಿಬ್ಬಂದಿ ಹಿರಿಯ ಅಧಿಕಾರಿಗಳ ಮನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನೂ ಈ ಕೆಲಸಗಳಿಂದ ತಕ್ಷಣ ಬಿಡುಗಡೆ ಮಾಡಿ ಯಾವ ಕೆಲಸಕ್ಕೆ ಅವರ ನೇಮಕಾಗಿದೆಯೋ ಅದೇ ಕೆಲಸಕ್ಕೆ ನಿಯೋಜಿಸಲು ಸೂಚಿಸಲಾಗಿದೆ.

ಇಂತಹ ಆರರಿಂದ ಏಳು ಸಾವಿರ ಸಿಬ್ಬಂದಿ ಈಗಾಗಲೇ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅತ್ಯಂತ ವಿಶೇಷ ಸಂದರ್ಭವನ್ನು ಬಿಟ್ಟು ಯಾವುದೇ ಸಿಬ್ಬಂದಿಗೂ ಈ ನಿಯಮದಿಂದ ವಿನಾಯಿತಿ ಇಲ್ಲ. ಎಲ್ಲ ಸಿಬ್ಬಂದಿ ಸದ್ಯದಲ್ಲೇ ತಮ್ಮ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ ಎಂದು ರೈಲ್ವೆಯ ಮೂಲಗಳು ಹೇಳಿವೆ.

ಹಿರಿಯ ಅಧಿಕಾರಿಗಳು ಐಷಾರಾಮಿ ಬೋಗಿಗಳಲ್ಲಿ ಅಥವಾ ಎಕ್ಸಿಕ್ಯೂಟಿವ್‌ ದರ್ಜೆಯ ಬೋಗಿಗಳಲ್ಲಿ ಪ್ರಯಾಣಿಸಬಾರದು. ಸ್ಲೀಪರ್‌ ಅಥವಾ ಮೂರು ಟೈರ್‌ ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸಬೇಕು. ಹೀಗೆ ಮಾಡುವುದರಿಂದ ಸಾಮಾನ್ಯ ಪ್ರಯಾಣಿಕರ ಜತೆ ಅಧಿಕಾರಿಗಳು ಬೆರೆಯುವುದು ಸಾಧ್ಯವಾಗುತ್ತದೆ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಅವರು ಹೇಳಿದ್ದಾರೆ.

ರೈಲ್ವೆಗೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ರೂಪಿಸುವಾಗ ಅದರ ಹಿಂದೆ ಯಾವುದಾದರೂ ಕಾರಣ ಇದ್ದಿರಬಹುದು. ಯಾವ ಕಾರಣಕ್ಕಾಗಿ ಈ ನಿಯಮಗಳನ್ನು ರೂಪಿಸಲಾಗಿತ್ತು ಎಂದು ಈಗ ಹೇಳುವುದು ಕಷ್ಟ. ಆದರೆ ಈಗ ಈ ನಿಯಮಗಳಿಗೆ ಯಾವುದೇ ಅರ್ಥ ಇಲ್ಲ. ಶಿಷ್ಟಾಚಾರಗಳನ್ನು ಬದಲಾಯಿಸಬಾರದು ಎಂಬ ಮನೋಭಾವ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಇದೆ. ಶಿಷ್ಟಾಚಾರಗಳನ್ನು ಕಾಲಕಾಲಕ್ಕೆ ಬದಲಿಸುತ್ತಿರಬೇಕು ಎಂದು ರೈಲ್ವೆ ಮಂಡಳಿಯ ಮಾಜಿ ಸದಸ್ಯರೊಬ್ಬರು ಹೇಳಿದ್ದಾರೆ.

ನಿಯಮ ಬದಲು

* ರೈಲ್ವೆ ಮಂಡಳಿ ಅಧ್ಯಕ್ಷರ ಸ್ವಾಗತ, ವಿದಾಯಕ್ಕೆ ಪ್ರಧಾನ ವ್ಯವಸ್ಥಾಪಕರು ಹಾಜರಿರಬೇಕಿಲ್ಲ

* ಹಿರಿಯ ಅಧಿಕಾರಿಗಳು ಐಷಾರಾಮಿ ಬೋಗಿಗಳಲ್ಲಿ ಪ್ರಯಾಣಿಸಬಾರದು‌

* ರೈಲ್ವೆ ಸಿಬ್ಬಂದಿ ಅಧಿಕಾರಿಗಳ ಮನೆಕೆಲಸ ಮಾಡುವಂತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT