ಗುರುವಾರ , ಸೆಪ್ಟೆಂಬರ್ 19, 2019
26 °C

ಜೆಡಿಎಸ್‌ ಬಂಡಾಯ ಶಾಸಕರ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

Published:
Updated:

ಬೆಂಗಳೂರು: ಜೆಡಿಎಸ್‌ನಿಂದ ಅಮಾನತುಗೊಂಡಿರುವ ಏಳು ಬಂಡಾಯ ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಸ್ಥಳೀಯ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಎನ್‌. ಚೆಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಜಮೀರ್ ಅಹಮ್ಮದ್, ಇಕ್ಬಾಲ್ ಅನ್ಸಾರಿ, ಭೀಮಾನಾಯ್ಕ್ ಮತ್ತು ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್‌ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಏಳೂ ಶಾಸಕರು ಆಗಸ್ಟ್‌ನಲ್ಲಿ ದೆಹಲಿಗೆ ಹೋಗಿ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ್ದರು. ಅವರೆಲ್ಲರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳಲು ರಾಹುಲ್ ಒಪ್ಪಿಗೆ ನೀಡಿದ್ದರು.

‘ಏಳೂ ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿರಬಹುದು. ಆದರೆ, ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರಿಗೆ ಒಪ್ಪಿಗೆ ಇಲ್ಲ. ಹತ್ತಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಇದರಿಂದ ಅನ್ಯಾಯವಾಗುತ್ತದೆ’ ಎಂದು ಮುಖಂಡರೊಬ್ಬರು ಹೇಳಿದರು.

ಚೆಲುವರಾಯ ಸ್ವಾಮಿ ಪ್ರತಿನಿಧಿಸುವ ಮಂಡ್ಯ ಜಿಲ್ಲೆ ನಾಗಮಂಗಲ, ರಮೇಶ್ ಬಂಡಿಸಿದ್ದೇಗೌಡ ಪ್ರತಿನಿಧಿಸುವ ಶ್ರೀರಂಗ ಪಟ್ಟಣ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಮಂಡ್ಯ ಜಿಲ್ಲೆಯ ಪ್ರಮುಖರೂ ವಿರೋಧ ವ್ಯಕ್ತಪಡಿಸಿದ್ದಾರೆ.

ಜಮೀರ್ ಅಹಮದ್ ಪ್ರತಿನಿಧಿಸುವ ಚಾಮರಾಜಪೇಟೆ, ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುವ ಪುಲಿಕೇಶಿನಗರ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತವರು, ನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಲ್ಲೂ ವರಿಷ್ಠರ ತೀರ್ಮಾನಕ್ಕೆ ವಿರೋಧ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿ ಮೂಡಿದೆ.

Post Comments (+)