ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಆಟೊ ಇನ್ನು ಹೆಲಿಕಾಪ್ಟರ್ ಆಗಲಿದೆ!

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಸ್ತೆ ತುಂಬೆಲ್ಲ ಗುಂಡಿಗಳು ಬಿದ್ದಿರುವುದರಿಂದ, ಗುಂಡಿಮುಕ್ತ ಪ್ರಯಾಣಕ್ಕಾಗಿ ಹಾಗೂ ನಿಮ್ಮ ಕೈ, ಕಾಲು, ಮೈ ರಕ್ಷಣೆಗಾಗಿ ನನ್ನ ಆಟೊ ಇನ್ನು ಮುಂದೆ ಹೆಲಿಕಾ‌‌ಪ್ಟರ್‌ ಆಗಲಿದೆ’...

ಹೀಗೆ ವ್ಯಂಗ್ಯದ ಘೋಷಣೆ ಮೂಲಕ ಬಿಬಿಎಂಪಿ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಆಟೊ ಚಾಲಕ ವಿ.ನಾರಾಯಣ ವಿನೂತನ ಪ್ರತಿಭಟನೆ ಕೈಗೊಂಡಿದ್ದಾರೆ.

ರಾಜರಾಜೇಶ್ವರಿನಗರದ ಚನ್ನಸಂದ್ರದ ನಿವಾಸಿ ನಾರಾಯಣ, ಆಟೊದ ಚಾವಣಿಗೆ ಎರಡು ರೆಕ್ಕೆಗಳನ್ನು ಕಟ್ಟಿ ನಗರದಲ್ಲೆಲ್ಲ ಓಡಿಸುತ್ತಿದ್ದಾರೆ. ‘ಗುಂಡಿಗಳಿಂದ ಬೇಸತ್ತಿದ್ದೀರಾ. ನಿಮ್ಮ ಜೀವಕ್ಕೆ ಕುತ್ತು ಬರುವ ಭಯವಿದೆಯಾ. ಹಾಗಾದರೆ, ನನ್ನ ಹೆಲಿಕಾಪ್ಟರ್‌ನಲ್ಲಿ (ಆಟೊ) ಕುಳಿತುಕೊಳ್ಳಿ. ರಸ್ತೆಯಲ್ಲೇ ಹಾರಿಹೋಗೋಣ’ ಎಂಬ ಫಲಕಗಳನ್ನು ಆಟೊಗೆ ನೇತು ಹಾಕಿದ್ದಾರೆ.

ಚಾಮರಾಜಪೇಟೆ, ರಾಜಾಜಿನಗರ, ರಾಜರಾಜೇಶ್ವರಿನಗರ ಹಾಗೂ ಮೈಸೂರು ರಸ್ತೆಯಲ್ಲಿ ಭಾನುವಾರ ಸಂಚರಿಸಿದ ಈ ಆಟೊವು ಸಾರ್ವಜನಿಕರ ಗಮನಸೆಳೆಯಿತು.

‘ಪ್ರಜಾವಾಣಿ’ ಜತೆ ಮಾತನಾಡಿದ ನಾರಾಯಣ, ‘ನಗರವೇ ಗುಂಡಿಯಾಗುತ್ತಿದ್ದು, ಭೂತಕನ್ನಡಿ ಹಿಡಿದುಕೊಂಡು ರಸ್ತೆಗಳನ್ನು ಹುಡುಕುವ ಸ್ಥಿತಿ ಬರುತ್ತಿದೆ. ದ್ವಿಚಕ್ರ ವಾಹನಗಳ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಬಂದಿದೆ’ ಎಂದರು.

‘ರಸ್ತೆಯಲ್ಲಿ ದೊಡ್ಡ ಗುಂಡಿಗಳಿದ್ದರೆ, ಅವುಗಳನ್ನು ಗಮನಿಸಿ ಸವಾರರು ವಾಹನ ಓಡಿಸುತ್ತಾರೆ. ಚಿಕ್ಕ ಚಿಕ್ಕ ಗಾತ್ರದ ಗುಂಡಿಗಳಿದ್ದರೆ, ಅದನ್ನು ಗಮನಿಸಲು ಆಗುವುದಿಲ್ಲ. ಆಗ ಅಪಘಾತಗಳು ಸಂಭವಿಸುತ್ತವೆ.’

‘ಈಗ ಒಂದೆಡೆ ಕುಳಿತು ಪ್ರತಿಭಟನೆ ಮಾಡಿದರೆ, ಬಿಬಿಎಂಪಿಗೆ ಬಿಸಿ ಮುಟ್ಟುವುದಿಲ್ಲ. ಹೀಗಾಗಿ ಆಟೊಗೆ ರೆಕ್ಕೆ ಕಟ್ಟಿಕೊಂಡು ಸುತ್ತುತ್ತಿದ್ದೇನೆ. ಸರ್ಕಾರಕ್ಕೆ ಗುಂಡಿಗಳೇ ರಸ್ತೆಯಾಗಿರುವಾಗ, ನನ್ನ ಆಟೊ ಏಕೆ ಹೆಲಿಕಾಪ್ಟರ್‌ ಆಗಬಾರದು ಎಂದು ಜನರನ್ನು ಪ್ರಶ್ನಿಸುತ್ತಿದ್ದೇನೆ. ಇದನ್ನು ನೋಡಿ ಜನ ನಗುತ್ತಿದ್ದು, ಆ ನಗುವನ್ನು ಸರ್ಕಾರದ ನಿರ್ಲಕ್ಷ್ಯಕ್ಕೆ ಅರ್ಪಿಸುತ್ತೇನೆ’ ಎಂದು ವ್ಯಂಗ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT