ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ದ್ವೇಷ ಪ್ರಸಾರಕ್ಕೆ ತಡೆ ಕಾನೂನು ಬಲಪಡಿಸಲು ಸಲಹೆ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅಂತರ್ಜಾಲದ ಮೂಲಕ ದ್ವೇಷ ಪ್ರಸಾರವನ್ನು ನಿಯಂತ್ರಿಸುವುದು ಅನಿವಾರ್ಯ ಅಂಶವಾಗಿ ಹೊರಹೊಮ್ಮುತ್ತಿದೆ ಎಂದು ಮಾಜಿ ಕಾನೂನು ಕಾರ್ಯದರ್ಶಿ ಟಿ.ಕೆ. ವಿಶ್ವನಾಥನ್‌ ನೇತೃತ್ವದ ಸಮಿತಿ ಹೇಳಿದೆ. ಇದನ್ನು ನಿಯಂತ್ರಿಸಲು ಈಗ ಇರುವ ಕಾನೂನುಗಳನ್ನೇ ಗಟ್ಟಿಗೊಳಿಸಬೇಕು. ದ್ವೇಷ ಪ್ರಸಾರದಂತಹ ವಿಚಾರಗಳನ್ನು ನಿಯಂತ್ರಿಸಲು ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಸೆಕ್ಷನ್‌ ಮರು ಜಾರಿ ಅಗತ್ಯ ಇಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

66ಎ ಸೆಕ್ಷನ್‌ ಅಸಾಂವಿಧಾನಿಕ ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್‌ ಅದನ್ನು ರದ್ದು ಮಾಡಿತ್ತು. ಆದರೆ ಈ ಸೆಕ್ಷನ್‌ ಅನ್ನು ಮತ್ತೆ ಜಾರಿಗೆ ತರಬೇಕು ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ವಿಶ್ವನಾಥನ್‌ ಸಮಿತಿಯ ಮುಂದೆ ವಾದಿಸಿತ್ತು.

66ಎ ಸೆಕ್ಷನ್‌ ರದ್ದತಿಯಿಂದಾಗಿ ಅಂತರ್ಜಾಲ ಮಾಹಿತಿ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆ ಇಲ್ಲದಂತಾಗಿತ್ತು. ಇದನ್ನು ಯಾವ ರೀತಿ ನಿರ್ವಹಿಸಬಹುದು ಎಂಬುದನ್ನು ಸೂಚಿಸಲು ಗೃಹ ಸಚಿವಾಲಯವು ಈ ಸಮಿತಿಯನ್ನು ನೇಮಿಸಿತ್ತು. ಸಮಿತಿಯು ಈಗ ಮಧ್ಯಂತರ ವರದಿ ನೀಡಿದೆ.

ಶಿಫಾರಸುಗಳನ್ನು ಅಂತಿಮಗೊಳಿಸುವ ಮುನ್ನ ಅಮೆರಿಕ, ಜರ್ಮನಿ, ಐರೋಪ್ಯ ಒಕ್ಕೂಟ ಮತ್ತು ಆಸ್ಟ್ರೇಲಿಯಾ ದೇಶಗಳ ಕಾನೂನುಗಳನ್ನು ಸಮಿತಿಯು ಅಧ್ಯಯನ ಮಾಡಿದೆ. ದ್ವೇಷ, ನಿಂದೆ ಮತ್ತು ಉಗ್ರವಾದವನ್ನು ಪಸರಿಸುವುದಕ್ಕಾಗಿ ಅಂತರ್ಜಾಲದ ಬಳಕೆ ಆಗುತ್ತಿರುವುದು ನಿಜ ಎಂದು ಸಮಿತಿ ಹೇಳಿದೆ. ಈ ಪ್ರವೃತ್ತಿ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಆದರೆ ಇದನ್ನು ತಡೆಯುವ ಪ್ರಯತ್ನ ಆಗುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ, ವಿಶೇಷವಾಗಿ ಟ್ವಿಟರ್‌ನಲ್ಲಿ ಮಹಿಳೆಯರು ಹೆಚ್ಚು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

ಮುಖ್ಯಾಂಶಗಳು

* ಅಪರಾಧ ಪ್ರಕ್ರಿಯಾ ಸಂಹಿತೆಗೆ ತಿದ್ದುಪಡಿ ಅಗತ್ಯ

* ರಾಜ್ಯದಲ್ಲಿ ಸೈಬರ್‌ ಅಪರಾಧ (ತಡೆ) ಸಂಯೋಜಕರ ನೇಮಕ

* ಜಿಲ್ಲಾ ಮಟ್ಟದಲ್ಲಿ ಸೈಬರ್‌ ಅಪರಾಧ (ತಡೆ) ಘಟಕ ಸ್ಥಾಪನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT