ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎನ್‌ಜಿ ಬಸ್‌ಗಳ ಪ್ರಾಯೋಗಿಕ ಸಂಚಾರ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಬಸ್‌ಗಳ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸುವಂತೆ ಬಿಎಂಟಿಸಿಗೆ ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ. ಈ ಮೂಲಕ ನಿರ್ವಹಣಾ ವೆಚ್ಚವನ್ನು ಪರಿಶೀಲಿಸುವುದು ಇಲಾಖೆಯ ಉದ್ದೇಶ.

‘ಸಿಎನ್‌ಜಿ ಬಸ್‌ ವೆಚ್ಚದಾಯಕ ಎಂಬುದು ಬಿಎಂಟಿಸಿ ಅಧಿಕಾರಿಗಳ ವಾದ. ಈ ಬಗ್ಗೆ ಪರಿಶೀಲಿಸಲು ಪ್ರಾಯೋಗಿಕ ಸಂಚಾರಕ್ಕೆ ಸೂಚಿಸಲಾಗಿದೆ. ಇದರ ಫಲಿತಾಂಶದ ಆಧಾರದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ತಿಳಿಸಿದರು.

ಬೆಂಗಳೂರು ಸೇರಿದಂತೆ 9 ನಗರಗಳಲ್ಲಿ ಇರುವ ಬಸ್‌ಗಳನ್ನು ಎಲ್‌ಪಿಜಿ ಅಥವಾ ಸಿಎನ್‌ಜಿ ಬದಲಾಯಿಸಬೇಕು ಎಂದು ಸುಪ್ರೀಂ ಕೋರ್ಟ್‌ 2003ರಲ್ಲಿ ಆದೇಶಿಸಿತ್ತು.

ಬಿಎಂಟಿಸಿಗೆ 200 ಸಿಎನ್‌ಜಿ ಬಸ್‌ಗಳ ಖರೀದಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತಾಧಿಕಾರಿ ಸಮಿತಿ 2015ರ ನವೆಂಬರ್‌ನಲ್ಲಿ ಒಪ್ಪಿಗೆ ನೀಡಿತ್ತು. ಇದಕ್ಕಾಗುವ ಹೆಚ್ಚುವರಿ ಹೊರೆಯನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ತಿಳಿಸಲಾಗಿತ್ತು. ಪರಿಸರ ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸಿಎನ್‌ಜಿ ಬಸ್‌ ಸೇವೆ ಆರಂಭಿಸುತ್ತೇವೆ ಎಂದು ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ವರ್ಷದ ಹಿಂದೆ ಪ್ರಕಟಿಸಿದ್ದರು.

ಈ ಬಸ್‌ಗಳು ವೆಚ್ಚದಾಯಕ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಕೆಲವು ತಿಂಗಳ ಹಿಂದೆ ಸಾರಿಗೆ ಇಲಾಖೆಗೆ ವರದಿ ಸಲ್ಲಿಸಿದ್ದರು. ಹೈಸ್ಪೀಡ್‌ ಡೀಸೆಲ್‌ ಬಸ್‌ಗಳಿಗೆ ಹೋಲಿಸಿದರೆ ಸಿಎನ್‌ಜಿ ಬಸ್‌ಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚ ಜಾಸ್ತಿ ಎಂದು ವರದಿಯಲ್ಲಿ ತಿಳಿಸಿದ್ದರು.

ನಗರದಲ್ಲಿ ‌ಸಿಎನ್‌ಜಿ ಇಂಧನ ಈಗಾಗಲೇ ಲಭ್ಯವಿದೆ. ಗೇಲ್‌ ಸಂಸ್ಥೆ 4 ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸಿದೆ. ಇಲ್ಲಿ 240 ಬಸ್‌ಗಳಿಗೆ ಇಂಧನ ತುಂಬಿಸಬಹುದು.

ಸಿಎನ್‌ಜಿ ಬಳಕೆ ಲಾಭವೇನು?: ಡೀಸೆಲ್ ಮತ್ತು ಪೆಟ್ರೋಲ್‌ಗೆ ಸಿಎನ್‌ಜಿ ಪರ್ಯಾಯ ಇಂಧನವಾಗಿದೆ. ಇದು ಪರಿಸರ ಸಂರಕ್ಷಣೆಗೆ ಪೂರಕ ವಾಗಿದ್ದು, ಇತರ ಇಂಧನಗಳಿಗಿಂತ ಶುದ್ಧ ಮತ್ತು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಜತೆಗೆ ಕಡಿಮೆ ದರದಲ್ಲಿ ದೊರೆಯಲಿದೆ. ಹೆಚ್ಚಿನ ಒತ್ತಡ ಹಾಕುವ ಮೂಲಕ ನೈಸರ್ಗಿಕ ಅನಿಲವನ್ನು ಸಿಎನ್‌ಜಿಯಾಗಿ ಪರಿವರ್ತಿಸಲಾಗುತ್ತದೆ. ಸಿಎನ್‌ಜಿ ಬಳಸಿದರೆ ವಾಹನಗಳ ನಿರ್ವಹಣೆ ವೆಚ್ಚವೂ ಕಡಿಮೆಯಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT